ಕೈವಾರ ಗೋಪಿನಾಥ್‌

Home/Birthday/ಕೈವಾರ ಗೋಪಿನಾಥ್‌
Loading Events
This event has passed.

೨೩..೧೯೪೩ ವೈಜ್ಞಾನಿಕ ಕಾದಂಬರಿ, ಹಾಸ್ಯಬರಹಗಳು, ಲೇಖನಗಳು ಮುಂತಾದವುಗಳಿಂದ ವೈಜ್ಞಾನಿಕ ಜನಪ್ರಿಯ ಲೇಖಕರೆನಿಸಿರುವ ಕೈವಾರ ಗೋಪಿನಾಥ್‌ರವರು ಹುಟ್ಟಿದ್ದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಗೆ ಸೇರಿದ ದೇವನಹಳ್ಳಿಯಲ್ಲಿ ೧೯೪೩ರ ಏಪ್ರಿಲ್‌ ೨೩ರಂದು. ತಂದೆ ನಾಟಕಕಾರರಾದ ಕೈವಾರ ರಾಜಾರಾಯರು, ತಾಯಿ ಕಮಲಾಬಾಯಿ. ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೆಂಗಳೂರಿನಲ್ಲಿ. ಇಂಟರ್ ಮೀಡಿಯಟ್‌ ಓದಿದ್ದು ನ್ಯಾಷನಲ್‌ ಕಾಲೇಜು. ಡಿಫ್ಲೊಮ ಪಡೆದದ್ದು ಆಚಾರ್ಯ ಪಾಠಶಾಲಾ ತಾಂತ್ರಿಕ ವಿದ್ಯಾಲಯದಿಂದ. ಉದ್ಯೋಗಕ್ಕೆ ಸೇರಿದ್ದು ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ಕೆಲಕಾಲ. ನಂತರ ಸೇರಿದ್ದೂ ಭಾರತೀಯ ಅರ್ಥ್ ಮೂವರ್ಸ್ ಲಿಮಿಟೆಡ್‌ನಲ್ಲಿ ನಿವೃತ್ತಿಯವರೆಗೂ ಕಾರ್ಯನಿರ್ವಹಣೆ. ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಬಂದದ್ದು ತಂದೆಯಿಂದಲೇ. ಕೈವಾರ ರಾಜಾರಾಯರು ಸಾಮಾಜಿಕ ನಾಟಕಗಳ ಕರ್ತೃ. ರಾಜಾರಾಯರು ನಿತ್ಯ ಜೀವನದಲ್ಲಿ ನಡೆಯುವ ಪ್ರಸಂಗಗಳನ್ನೇ ನಾಟಕಕ್ಕೆ ಅಳವಡಿಸಿ ಸುಮಾರು ೬೦ ಕ್ಕೂ ಹೆಚ್ಚು ನಾಟಕಗಳನ್ನೂ ರಚಿಸಿದ್ದು, ಒಂದು ಕಾಲದಲ್ಲಿ ಶಾಲಾ, ಕಾಲೇಜುಗಳ ವಾರ್ಷಿಕೋತ್ಸವ, ಸ್ಪರ್ಧೆಗಳಿಗೆ ಬಹು ಬೇಡಿಕೆಯ ನಾಟಕಗಳಾಗಿದ್ದವು. ಈ ವಾತಾವರಣದಲ್ಲಿ ಬೆಳೆದುಬಂದ ಗೋಪಿನಾಥ್ ರವರಿಗೂ ಸಾಹಿತ್ಯದಲ್ಲಿ ಒಲವು ಬೆಳೆದು, ಆಯ್ದುಕೊಂಡದ್ದು ವಿಜ್ಞಾನಕ್ಷೇತ್ರದ ಬರವಣಿಗೆ. ಸಾಮಾಜಿಕ ಕತೆ,ಕವನ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಹಲವಾರು ಬರಹಗಾರರನ್ನು ಕಾಣಬಹುದಾದರೂ ವೈಜ್ಞಾನಿಕ ಬರಹಗಾರರು ಕಡಿಮೆಯೆ. ಈ ಪರಿಸ್ಥಿತಿಯಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಬರೆಯುವ ಕ್ಲಿಷ್ಟ ಪ್ರಕಾರವನ್ನೇ ಆಯ್ದು ಕೊಂಡು ಬರೆಯುತ್ತಿರುವ ಕೆಲವೇ ಲೇಖಕರಲ್ಲಿ ಅತಿ ಪ್ರಮುಖರೆನಿಸಿರುವವರು ಗೋಪಿನಾಥ್‌ರವರು. ಇವರು ಬರೆದ ವೈಜ್ಞಾನಿಕ ಬಿಡಿ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಕೋಲಾರ ಪತ್ರಿಕೆ ಮುಂತಾದ ದಿನ ಪತ್ರಿಕೆಗಳಲ್ಲದೆ ಸುಧಾ, ತರಂಗ, ಕರ್ಮವೀರ, ಪ್ರಜಾಮತ ಹೊಸತು, ತುಷಾರ, ಉತ್ಥಾನ, ಮಲ್ಲಿಗೆ ಮುಂತಾದ ವಾರಪತ್ರಿಕೆ, ಮಾಸ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಇದಲ್ಲದೆ ‘ಉದಯವಾಣಿ’, ‘ಶ್ರೀಸತ್ಯ’, ‘ಮಯೂರ’, ‘ಚಂದನ’, ‘ಕರ್ಮವೀರ’ ಮುಂತಾದ ದಿನಪತ್ರಿಕೆ ಹಾಗೂ ಮಾಸ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ ಲೇಖನಗಳನ್ನೂ ಬರೆಯುತ್ತಿದ್ದಾರೆ. ಚಾರ್ಲ್ಸ್ ಡಾರ್ವಿನ್‌, ಜಾರ್ಜ್‌ಸ್ಟೀವನ್‌ಸನ್‌, ಮಾರ್ಕೊನಿ, ಎಚ್‌.ಜಿ.ವೆಲ್ಸ್‌, ಜಗದೀಶ್‌ ಚಂದ್ರ ಬೋಸ್‌, ರೈಟ್‌ ಬ್ರದರ್ಸ್, ಸುಬ್ರಹ್ಮಣ್ಯನ್‌ ಚಂದ್ರಶೇಖರ್ ಮುಂತಾದವರ ಜೀವನ ಚರಿತ್ರೆಗಳನ್ನು ಕನ್ನಡಕ್ಕೆ ತಂದಿದ್ದಾರೆ. ಹಲವಾರು ಸಾಮಾಜಿಕ ಕತೆ-ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳಲ್ಲಿ ಅನ್ನ ಕರೇನಿನಾ (ಸಂಗ್ರಹಾನುವಾದ-ಲಿಯೋ ಟಾಲ್‌ಸ್ಟಾಯ್‌), ವೈಜ್ಞಾನಿಕ ಕತೆಗಳ ಸಂಗ್ರಹಾನುವಾದ ಫ್ರಾಂಕೆನ್‌ಸ್ಟೈನ್‌ ( ಲೇಖಕಿ- ಮೇರಿ ಶೆಲ್ಲಿ), ವಿಶ್ವಗಳ ಸಮರ (THE WAR OF THE WORLDS-H.G. WELLS)  ಮುಂತಾದವುಗಳ ಜೊತೆಗೆ ‘ಯಂತ್ರಮಾನವರ ಬಲೆಯಲ್ಲಿ’ ಎಂಬ ವೈಜ್ಞಾನಿಕ ಕಾದಂಬರಿಯನ್ನೂ ರಚಿಸಿದ್ದಾರೆ. ಆಕಾಶವಾಣಿ ಬೆಂಗಳೂರು ಮತ್ತು ಜ್ಞಾನವಾಣಿ (ಎಫ್‌.ಎಂ.ಕೇಂದ್ರ) ಸುಮಾರು ಮೂವತ್ತಕ್ಕೂ ಹೆಚ್ಚು ಭಾಷಣಗಳು ಪ್ರಸಾರವಾಗಿರುವುದರ ಜೊತೆಗೆ ಶಾಲಾ-ಕಾಲೇಜುಗಳ ವೇದಿಕೆಗಳಲ್ಲಿಯೂ ತಮ್ಮ ವೈಜ್ಞಾನಿಕ ಭಾಷಣಗಳಿಂದ ವಿಜ್ಞಾನವನ್ನು ಜನಪ್ರಿಯಗೊಳಿಸಿದ್ದಾರೆ. ಹಲವಾರು ಕವನಗಳು, ದ್ವಿಪದಿ, ಚೌಪದಿಗಳನ್ನೂ ರಚಿಸಿದ್ದಾರೆ. ಸಂಘ-ಸಂಸ್ಥೆಗಳು ನಡೆಸುವ ಸಾಮಾಜಿಕ, ವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನೂ ಪಡೆದಿದ್ದಾರೆ. ಇತ್ತೀಚಿನದೆಂದರೆ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ, ವಿಷನ್‌ ಗ್ರೂಪ್‌ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಯವರಿಂದ ೨೦೧೧-೧೨ ರ ಸಾಲಿನ ವಿಜ್ಞಾನ ಸಂವಹನಕಾರ ಪ್ರಶಸ್ತಿ (ಸೈನ್ಸ್‌ ಕಮ್ಯೂನಿಕೇಟರ್ ಅವಾರ್ಡ್) ಪಡೆದಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top