ಕೈವಾರ ರಾಜಾರಾವ್‌

Home/Birthday/ಕೈವಾರ ರಾಜಾರಾವ್‌
Loading Events
This event has passed.

೨೯..೧೯೧೨ ೦೩..೧೯೯೩ ಮೂಕಿ-ಟಾಕಿ ಸಿನಿಮಾಗಳ ಪ್ರಭಾವದಿಂದ ವೃತ್ತಿ ರಂಗಭೂಮಿಯ ನಾಟಕಗಳು ನಿಚ್ಛ್ರಾಯ ಸ್ಥಿತಿ ತಲುಪಿದಾಗ, ಕ್ರಾಂತಿಕಾರಕ ಬದಲಾವಣೆಗಳಾಗಿ ನಾಟಕ ರಂಗದಲ್ಲಿ ಸಾಮಾಜಿಕ ನಾಟಕಗಳಿಗೆ ಒತ್ತು ನೀಡತೊಡಗಿದರು. ಗಂಟೆಗಟ್ಟಳೆ ಕುಳಿತು ನೋಡಬೇಕಾದ ಸ್ಥಳದಲ್ಲಿ ಒಂದು-ಒಂದುವರೆ ಗಂಟೆಯ ಸಾಮಾಜಿಕ ನಾಟಕಗಳು ಆಕ್ರಮಿಸತೊಡಗಿದಾಗ ೧೯೪೦-೫೦ ರ ದಶಕದಲ್ಲಿ ಕೈಲಾಸಂ, ಕೆ. ಗುಂಡಣ್ಣ ಮುಂತಾದವರುಗಳು ಸಾಮಾಜಿಕ ನಾಟಕಗಳ ರಚನೆಗೆ ಕೈಹಾಕಿದರು. ಅವರಲ್ಲಿ ಕೈವಾರ ರಾಜಾರಾಯರು ಪ್ರಮುಖರಾದವರು. ರಾಜಾರಾಯರು ಹುಟ್ಟಿದ್ದು ೧೯೧೨ ರ ಫೆಬ್ರವರಿ ೨೯ರಂದು. ತಂದೆ ಕೈವಾರ ರಾಮಚಂದ್ರರಾವ್‌, ತಾಯಿ ಸುಂದರಾಬಾಯಿ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪಡೆದ ಬಿ.ಎ. ಪದವಿ ಮತ್ತು ಶೀಘ್ರಲಿಪಿಯಲ್ಲಿ ಕರ್ನಾಟಕಕ್ಕೆ ಎರಡನೆಯವರಾಗಿ (ಮೊದಲನೆಯವರು ಕಾದಂಬರಿಕಾರ ಮ.ನ. ಮೂರ್ತಿ). ಉದ್ಯೋಗ ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ೧೯೩೪ ರಲ್ಲಿ. ಆಗ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದವರು ಡಿ.ವಿ.ಜಿ. ಯವರು. ಡಿ.ವಿ.ಜಿ., ಎ.ಆರ್‌.ಕೃ., ವಿ.ಸೀ., ಸಿ.ಕೆ. ವೆಂಕಟರಾಮಯ್ಯ, ಎಸ್‌.ವಿ. ರಂಗಣ್ನ, ಎಂ.ವಿ. ಸೀತಾರಾಮಯ್ಯ ಇವರುಗಳ ಮಧ್ಯೆ ವ್ಯವಹರಿಸಬೇಕಾಗಿ ಬಂದಾಗ ರಾಜಾರಾಯರಿಗೂ ಸಾಹಿತ್ಯದಲ್ಲಿ ಆಸ್ಥೆ ಬೆಳೆಯಿತು. ನಂತರ ಇವರಿಗೆ ಖಾಯಂ ಉದ್ಯೋಗ ಮೈಸೂರು ರಾಜ್ಯ ವಿದ್ಯುತ್‌ ಇಲಾಖೆಯಲ್ಲಿ ದೊರೆತಾಗ, ಇಲಾಖಾ ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣರಾಗಿ ಭಡ್ತಿ ಪಡೆದು ಲೆಕ್ಕಪತ್ರಾಧಿಕಾರಿಯಾಗಿ ೧೯೬೭ ರಲ್ಲಿ ನಿವೃತ್ತರಾದರು. ಪ್ರೊ. ಜಿ. ವೆಂಕಟಸುಬ್ಬಯ್ಯನವರು (೧೯೬೪-೬೭) ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜಾರಾಯರನ್ನು ವ್ಯವಸ್ಥಾಪಕರನ್ನಾಗಿ ನೇಮಿಸಿಕೊಂಡರು. ವೆಂಕಟಸುಬ್ಬಯ್ಯನವರ ನಂತರ ಅಧ್ಯಕ್ಷರಾಗಿ ಬಂದ ಜಿ. ನಾರಾಯಣ, ಹಂಪನಾಗರಾಜಯ್ಯರವರ ಅಧ್ಯಕ್ಷರ ಅವಧಿಯಲ್ಲೂ ಕಾರ್ಯನಿರ್ವಹಿಸಿ (೧೯೮೦) ರಾಜೀನಾಮೆ ನೀಡಿದರು. ನಿಟ್ಟೂರು ಶ್ರೀನಿವಾಸರಾಯರ ನೇತೃತ್ವದಲ್ಲಿ ನಡೆಯುತ್ತಿದ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಗೌರವ ಸಹಾಯಕರಾಗಿ ಜೀವನದ ಕೊನೆಯವರೆಗೂ ದುಡಿದರು. ಸಣ್ಣಕತೆ, ಹಾಸ್ಯಲೇಖನಗಳು, ವಿಮರ್ಶೆ, ನಾಟಕ ಮುಂತಾದವುಗಳನ್ನು ಬರೆದು ಬಹುಮಾನಗಳನ್ನೂ ಪಡೆದಿದ್ದರೂ ಇವರ ಹೆಚ್ಚಿನ ಒಲವು ಮೂಡಿದ್ದು ನಾಟಕ ರಚನೆಯತ್ತ. ಸಮಾಜದ ಓರೆಕೋರೆಗಳನ್ನು ತಿದ್ದುವ, ಮೂಢನಂಬಿಕೆಗಳಿಗೆ ಬಲಿಬೀಳದಂತೆ ಎಚ್ಚರಿಸುವ, ಸಂಸಾರದಲ್ಲಿ ಬಿರುಕು ಮೂಡಿದಾಗ ಸಾಮರಸ್ಯ ಮೂಡಿಸಲು ಬೆಸೆಯುವ, ಅರ್ಪಾರ್ಥಕ್ಕೆಡೆಕೊಟ್ಟಾಗ ನಿಜಗತಿಯಲ್ಲಿ ಸಾಗುವ, ಮೋಸಮಾಡಲು ಬಂದವನಿಗೆ ಸರಿಯಾಗಿ ಬುದ್ಧಿಕಲಿಸುವ, ಸಂಸಾರದಲ್ಲಿ ಪ್ರಮಾದವಾದಾಗ ಅತಿ ಚಾಣಾಕ್ಷತನದಿಂದ ನಿಭಾಯಿಸುವ ವಸ್ತುಗಳನ್ನೊಳಗೊಂಡಂತೆ ಬುಡುಬುಡಿಕೆ, ಪತ್ರಪ್ರಮಾದ, ವಧುಪರೀಕ್ಷೆ, ಗಂಡನ ಜುಲ್ಮಾನೆ, ಪ್ರೇಮ ಪರೀಕ್ಷೆ, ಯಾರ ಪ್ರೀತಿ ಹೆಚ್ಚು?, ಹಸ್ಬೆಂಡ್‌ ಸಪ್ಲೈಡ್‌ ಅಥವಾ ಗಂಡನಿಗಾಗಿ ಗುದ್ದಾಟ, ಅಪ್‌.ಟು-ಡೇಟ್‌ ಅಮ್ಮಯ್ಯ ಮುಂತಾದ ೬೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ರಾಜಕೀಯ ವ್ಯಕ್ತಿಗಳ ಮನೆಯವರ ಧೋರಣೆಗಳನ್ನು ಎತ್ತಿ ತೋರಿಸುವ ‘ಮಂತ್ರಿ ಹೆಂಡತಿ ಲೆಕ್ಕ’, ಮಹಿಳೆಯರಿಗೆ ನಲವತ್ತು ವರುಷಗಳಾದ ನಂತರ ತಮ್ಮ ದೇಹವಿನ್ಯಾಸದ ಬಗ್ಗೆ ಉಂಟಾಗುವ ಚಿಂತೆಯ ಬಗ್ಗೆ ಬರೆದ ‘ನಲವತ್ತರ ನಾಡಿ’, ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮಧ್ಯಮವರ್ಗದ ಕುಟುಂಬ ಪಡುವ ಪಡಿಪಾಟಲಿನ ‘ತಿಂಗಳ ಕೊನೆ’, ಮುದವೆಗಿರುವ ಗಂಡು ತನ್ನ ಪತ್ನಿಯನ್ನು ಆರಿಸಿಕೊಳ್ಳುವ ವಿಚಾರ ಬಂದಾಗ ವಿಚಾರ ವಿನಿಮಯದ ಅಗತ್ಯತೆಯನ್ನು ಸಾರುವ ‘ಯಾರಿವನು? ವಾಚಾಳಿ ಹೆಂಡತಿಯ ಕೈಗೆ ಸಿಕ್ಕಿದ ಸ್ಥಿತಪ್ರಜ್ಞ ಗಂಡನ ಬಗ್ಗೆ ಕರುಣೆ ಉಕ್ಕಿಸುವ ‘ಬುಡುಬುಡಿಕೆ’ ಅಹಂಕಾರದಿಂದ ಮೆರೆಯುವ ಹುಡುಗಿಗೆ, ಹುಡುಗ ಹೇಗೆ ಬುದ್ಧಿಕಲಿಸಬಹುದೆಂಬುದನ್ನು ತೋರಿಸುವ ‘ಅಪ್‌-ಟು-ಡೇಟ್‌ ಅಮ್ಮಯ್ಯ’, ವರಪೂಜೆಯ ಸಮಯದಲ್ಲಿ ವೃಥಾಗೊಂದಲಕ್ಕಿಡಾಗಿ, ಹುಡುಗಿಯ ಬಗ್ಗೆ ತಿಳಿದುಕೊಳ್ಳಲೆತ್ನಿಸುವ ‘ವಧು ಪರೀಕ್ಷೆ’- ಹೀಗೆ ವಿಡಂಬನೆ, ನವಿರಾದ ಹಾಸ್ಯದಿಂದ ಕೂಡಿದ ಅರ್ಧ-ಮುಕ್ಕಾಲು ಗಂಟೆಯ ಅವಧಿಯಲ್ಲಿ ಸಾದರಪಡಿಸಬಹುದಾದ ೬೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದ ನಾಟಕಕಾರ ಕೈವಾರ ರಾಜಾರಾಯರು ನಾಟಕ ರಂಗದಿಂದ ನಿರ್ಗಮಿಸಿದ್ದು ೧೯೯೩ ರ ಜನವರಿ ೩ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top