೫.೩.೧೯೧೨ ೧೩.೪.೧೯೩೯ ಗೌರಮ್ಮನ ಪೂರ್ವಜರು ಮೂಲತಃ ವಿಟ್ಲ ಸೀಮೆಯವರಾಗಿದ್ದು ನಂತರ ಕುಕ್ಕೆ ಸುಬ್ರಹ್ಮಣ್ಯ ಭಾಗದಿಂದ ಘಟ್ಟದ ಮೇಲಿನ ಮಲೆನಾಡು ಸೀಮೆಯಾದ ಕೊಡಗಿಗೆ ಬಂದು ನೆಲೆಸಿದ ಹವ್ಯಕ ಬ್ರಾಹ್ಮಣ ಸಂಪ್ರದಾಯದ ಕುಟುಂಬ. ತಂದೆ ವಕೀಲರು ಮತ್ತು ಪ್ಲಾಂಟರ್ ಆಗಿದ್ದ ಎನ್.ಎಸ್.ರಾಮಯ್ಯ ನವರು, ತಾಯಿ ನಂಜಕ್ಕ. ಇವರ ವಿದ್ಯಾಭ್ಯಾಸ ನಡೆದುದು ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ. ಓದಿದ್ದು ಎಸ್.ಎಸ್.ಎಲ್.ಸಿ.ಯವರೆಗೆ. ಸುಂದರ ವಾತಾವರಣದಲ್ಲಿ ಬೆಳೆದ ಗೌರಮ್ಮನವರಿಗೆ ಹಲವಾರು ಸಾಹಿತ್ಯಿಕ ವ್ಯಕ್ತಿಗಳ ನಿಕಟ ಪರಿಚಯ, ‘ಕೊಡಗಿನ ಹುಡುಗಿ ಮುತ್ತಮ್ಮ’ ಕೃತಿ ಬರೆದ ಹಿಂದಿ, ಇಂಗ್ಲಿಷ್, ಕನ್ನಡದಲ್ಲಿ ಕೃತಿ ರಚಿಸುತ್ತಿದ್ದ ಪದ್ಮಾವತಿ ರಸ್ತೋಗಿ ಇವರ ಆತ್ಮೀಯ ಗೆಳತಿ. ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ, ಲೇಖಕಿ, ಆರ್. ಕಲ್ಯಾಣಮ್ಮನವರೊಡನೆ ಸತತ ಸಂಪರ್ಕ. ಮಾಸ್ತಿ, ಬೇಂದ್ರೆಯವರು ಅಪರೂಪಕ್ಕೆ ಇವರ ಮನೆಗೆ ಬಂದು ಹೋಗುತ್ತಿದ್ದ ಸಾಹಿತ್ಯ ದಿಗ್ಗಜರು. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚೆ, ಬದಲಾವಣೆಗಳು ಮತ್ತು ಹೊಸ ಬಗೆಯ ಸಂಪರ್ಕ ಈ ಲೇಖಕಿಯ ಬರವಣಿಗೆಗೆ ಪೂರಕ ಅಂಶಗಳು. ಯಕ್ಷಗಾನ, ತಾಳಮದ್ದಲೆಯ ಜೊತೆಗೆ ಕುಮಾರವ್ಯಾಸ ಮತ್ತು ಉಮರ್ ಖಯಾಂ ಕಾವ್ಯದ ಬಗ್ಗೆ ಅತೀವ ಆಸಕ್ತಿ. ಮತ್ತೊಂದು ಪ್ರಮುಖ ಹವ್ಯಾಸ ಜನಪದ ಗೀತೆಗಳ ಸಂಗ್ರಹ. ಇವರು ಬರೆದ ಕಥೆಗಳ ಮೂಲದ್ರವ್ಯ, ಅಂದಿನ ಕಾಲಘಟ್ಟದ ಸುಶಿಕ್ಷಿತ, ಸಂಪ್ರದಾಯಸ್ಥ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳು. ವಿಧವಾ ಸಮಸ್ಯೆ, ಹದಿಹರೆಯದ ಪ್ರೇಮ, ಕೌಟುಂಬಿಕ ಪ್ರೀತಿ, ಮಾನವೀಯ ಸಂಬಂಧಗಳು, ಶಿಕ್ಷಣ, ವರದಕ್ಷಿಣೆ, ಸೌಂದರ್ಯಪ್ರಜ್ಞೆ, ಜಾತಿ ಸಂಘರ್ಷ ಮುಂತಾದ ವಿಷಯಗಳ ನವುರು ಚಿತ್ರಣ. ೧೯೩೧ರಿಂದ ೧೯೩೯ರ ಅವಯಲ್ಲಿ ಇವರು ಬರೆದದ್ದು ಕೇವಲ ಇಪ್ಪತ್ತೊಂದು ಕಥೆಗಳು. ಸದಭಿರುಚಿಯ, ಮನದಾಳದ, ಅನ್ನಿಸಿಕೆಯ ಚಿತ್ರಣ ಕೊಡುವ ಗಟ್ಟಿ ಅನುಭವಗಳೇ ಜಾಸ್ತಿ. ವರಕವಿ ಬೇಂದ್ರೆಯವರು ಬರೆಯುತ್ತಾ, ಗೌರವಸ್ತ್ರ ಗೌರವಸ್ಮಿತ ಗೌರವದಿ ಗೌರಿ| ಮಿಂಚಿದಳೊ ಬಾನಂಚಿಗೆ ಕಾವೇರಿಯ ಕುವರಿ || ಎಂದು ‘ತಂಗಿ ಗೌರಮ್ಮ’ ಎಂಬ ಪದ್ಯದಲ್ಲಿ ಹೊಗಳಿದ್ದಲ್ಲದೆ ಗೌರಮ್ಮನವರ ‘ಕಂಬನಿ’, ‘ಚಿಗುರು’ ಕಥಾ ಸಂಕಲನಗಳಿಗೆ ಮುನ್ನುಡಿ ಬರೆದು ಅದರ ಚೆಲುವು, ಸರಳತೆಯ ವಿಶ್ಲೇಷಣೆ ನಡೆಸಿದ್ದಾರೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಶೇಷಾದ್ರಿ. ಎಸ್. – ೧೯೩೩ ಲಲಿತಾಶಾಸ್ತ್ರೀ – ೧೯೪೧ ರಾಜಶೇಖರ ಮಾನ್ವಿ – ೧೯೪೨ ಅಬ್ಬಾಸ ಮೇಲಿನ ಮನಿ – ೧೯೫೪ ಕೆ.ಎಂ. ನಾಗಲಕ್ಷ್ಮೀ – ೧೯೬೫

