೨೨.೫.೧೯೧೬ ೨೮.೫.೧೯೭೦ ಕೀರ್ತನರತ್ನ, ಕೀರ್ತನ ಕೇಸರಿ ಮುಂತಾದ ಬಿರುದುಗಳನ್ನ ಪಡೆದಿದ್ದ ಸೀತಾರಾಮಶಾಸ್ತ್ರಿಗಳು ಹುಟ್ಟಿದ್ದು ಕೊಣನೂರು. ತಂದೆ ಶ್ರೀಕಂಠ ಶಾಸ್ತ್ರಿ, ಹರಿಕಥಾ ವಿದ್ವಾಂಸರು, ಕೃಷ್ಣರಾಜ ಒಡೆಯರಿಂದ ಕೀರ್ತನ ಕೇಸರಿ ಬಿರುದು, ಕಿಲ್ಲತ್ತು, ಜೋಡಿಶಾಲುಗಳ ಸನ್ಮಾನ ಪಡೆದವರು. ಸೀತಾರಾಮ ಶಾಸ್ತ್ರಿಗಳು ಐದನೆಯ ವಯಸ್ಸಿಗೆ ಶಾಲೆಗೆ ಸೇರಿದರೂ ಹೈಯರ್ ಸೆಕೆಂಡರಿವರೆಗೆ ವಿದ್ಯಾಭ್ಯಾಸ. ಲೌಕಿಕ ವಿದ್ಯೆಯಲ್ಲಿ ಮನಸ್ಸಾಗದೆ ಪ್ರತಿನಿತ್ಯ ಮನೆಯಲ್ಲಿ ನಡೆಯುತ್ತಿದ್ದ ಸಂಗೀತ, ಹರಿಕಥೆಗಳಿಂದ ಪ್ರಭಾವಿತರಾಗಿ ಕಲಿತದ್ದು ಸಂಗೀತ ಮತ್ತು ಹರಿಕಥೆ. ಗಣೇಶೋತ್ಸವ ಸಂದರ್ಭದಲ್ಲಿ ತಂದೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನನುಕೂಲವಾದಾಗ ಇವರೇ ಕಾರ್ಯಕ್ರಮ ನಡೆಸಿಕೊಡುವುದಾಗಿ ಒಪ್ಪಿ ನಡೆಸಿಕೊಟ್ಟ ಹರಿಕಥಾ ಕಾರ್ಯಕ್ರಮ. ನೆರೆದಿದ್ದ ಪ್ರೇಕ್ಷಕರಿಂದ ಬಾಲಕನಿಗೆ ದೊರೆತ ಪ್ರಶಂಸೆ. ತಂದೆಯವರ ಮಾರ್ಗದರ್ಶನದಂತೆ ಅನೇಕ ಹರಿಕಥಾ ಭಾಗಗಳ ಮನನ. ಸಂದರ್ಭಕ್ಕೆ ತಕ್ಕಂತೆ ಭಾಮಿನಿಷಟ್ಪದಿ ಕಂದ ಪದ್ಯ. ನವ್ಯಗೀತೆ, ಉರುಟಣೆ ಹಾಡು, ಉಯ್ಯಾಲೆ, ಬಾಗಿಲು ತೆಗೆಯುವ ಹಾಡು, ಜನಪದ ಗೀತೆ, ರಂಗ ಗೀತೆ, ಇಂಗ್ಲಿಷ್ ಹಾಡುಗಳು, ರಾಮಾಯಣ, ಮಹಾಭಾರತ ಕಥಾ ಪ್ರಸಂಗಗಳನ್ನುಪಯೋಗಿಸಿಕೊಂಡು ನಡೆಸುತ್ತಿದ್ದ ಕಾರ್ಯಕ್ರಮಗಳು. ಶೃಂಗೇರಿ ಜಗದ್ಗುರುಗಳ ಅಪೇಕ್ಷೆಯ ಮೇರೆಗೆ ಶ್ರೀಮದ್ ಶಂಕರ ವಿಜಯ ಎಂಬ ಕಥಾ ಭಾಗವನ್ನು ಕೀರ್ತನ ಶೈಲಿಗೆ ಅಳವಡಿಸಿ ರೂಢಿಗೆ ತಂದರು. ಗಿರಿಜಾ ಕಲ್ಯಾಣ, ರುಕ್ಮಿಣಿ ಕಲ್ಯಾಣ, ಸೀತಾ ಕಲ್ಯಾಣ, ಶಶಿರೇಖಾ ಪರಿಣಯ, ಶಮಂತಕಪೋ ಖ್ಯಾನ, ದೂರ್ವಾಸಾತಿಥ್ಯ, ಕಿರಾತಾರ್ಜುನೀಯ ಮುಂತಾದುವುಗಳು ಶಾಸ್ತ್ರಿಯವರ ಮೆಚ್ಚಿನ, ಜನಮೆಚ್ಚಿದ ಕೀರ್ತನಗಳು. ಗಿರಿಜಾಕಲ್ಯಾಣದಲ್ಲಿ ಗಾಂಭೀರ್ಯ, ಶಶಿರೇಖಾ ಪರಿಣಯದಲ್ಲಿ ಹಾಸ್ಯ, ಹರಿಶ್ಚಂದ್ರದಲ್ಲಿ ಶೋಕ, ಚಂದ್ರಹಾಸ, ರುಕ್ಮಿಣಿ ಕಲ್ಯಾಣದಲ್ಲಿ ಭಕ್ತಿ, ಹೀಗೆ ನವರಸಭರಿತ ಕಥೆಗಳಿಂದ ಪಂಡಿತ ಪಾಮರರಿಗೆ ನೀಡಿದ ರಂಜನೆ. ಪಕ್ಕವಾದ್ಯ ಕಲಾವಿದರಿಗೂ ಅವಕಾಶ ನೀಡಿ ಪಾಂಡಿತ್ಯ ಪ್ರದರ್ಶಿಸಲು ಹುರಿದುಂಬಿಸಿ ಸಭಿಕರಿಂದ ಪ್ರಶಂಸಿಸುವಂತೆ ಮಾಡುತ್ತಿದ್ದ ರೀತಿ. ಮಠಾಧಿಪತಿಗಳಿಂದ, ರಾಷ್ಟ್ರಪತಿಗಳಾಗಿದ್ದ ವಿ.ವಿ. ಗಿರಿಯವರಿಂದ ದೊರೆತ ಪ್ರಶಂಸೆ. ಕೀರ್ತನ ರತ್ನ, ಕೀರ್ತನ ಭೂಷಣ, ಅಧ್ಯಾತ್ಮ ರತ್ನ, ಕೀರ್ತನ ಕಲಾ ಕೇಸರಿ, ಕೀರ್ತನ ಕೇಸರಿ ಮುಂತಾದ ಸನ್ಮಾನಗಳೊಡನೆ ದೊರೆತ ಚಿನ್ನದ ತೋಡಾ, ಚಿನ್ನದ ಸರ, ಚಿನ್ನದ ಪದಕ, ಚಿನ್ನದ ಉಂಗುರ ಮುಂತಾದುವುಗಳು. ಇದೇ ದಿನ ಹುಟ್ಟಿದ ಕಲಾವಿದರು ತಾತಾಚಾರ್. ಟಿ.ಎಸ್. – ೧೯೧೭ ರುದ್ರಮೂರ್ತಿ.ಎಸ್.ಕೆ. – ೧೯೪೯ ವಿಶ್ವನಾಥ್ ನಾಕೋಡ್ – ೧೯೬೧ ಸೋಮಶೇಖರ ಬಿಸಲ್ವಾಡಿ – ೧೯೬೭ ಪ್ರಕಾಶ್ ಪಿ.ಶೆಟ್ಟಿ – ೧೯೬೯.
* * *