Loading Events

« All Events

  • This event has passed.

ಕ.ಗಿ. ಕುಂದಣಗಾರ

August 14, 2023

೧೪-೮-೧೮೯೨ ೨೨-೮-೧೯೬೫ ಸಂಶೋಧಕ, ಗ್ರಂಥ ಸಂಪಾದಕ, ಪತ್ರಕರ್ತ ಕುಂದಣಗಾರರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ. ತಂದೆ ಗಿರಿಯಪ್ಪ, ತಾಯಿ ಶಾಕಾಂಬರಿ. ಮೂರು ವರ್ಷದ ಹುಡುಗನಾಗಿದ್ದಾಗಲೇ ತಂದೆ ತಾಯಿಯ ಪ್ರೀತಿಯಿಂದ ವಂಚಿತರು. ಬಡತನದಲ್ಲಿ ಬೆಳೆದರೂ ಕುಶಾಗ್ರಮತಿ. ಜಾಣ ಹುಡುಗ ಎನ್ನಿಸಿಕೊಂಡು ಅಧ್ಯಾಪಕರಿಂದ ಪಡೆದ ಮೆಚ್ಚುಗೆ. ಪ್ರಾರಂಭಿಕ ಶಿಕ್ಷಣ ಬೆಳಗಾವಿ. ಹೈಸ್ಕೂಲಿಗೆ ಸೇರಿದ್ದು ಧಾರವಾಡದ ವಿಕ್ಟೋರಿಯ ಪ್ರೌಢಶಾಲೆ. ಹೆಚ್ಚಿದ ಶಿಕ್ಷಣದಾಹ. ಪುಣೆಗೆ ಹೋಗಿ ೧೯೧೩ರಲ್ಲಿ ಇಂಟರ್ ಮುಗಿಸಿದರು. ಕೊಲ್ಲಾಪುರದ ರಾಜಾರಾಮ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರ ಹುದ್ದೆ. ಪದವೀಧರನಾಗಬೇಕೆಂಬ ತೀವ್ರ ಆಸೆ. ಸ್ವಂತ ಸ್ಥಳ ಗೋಕಾಕದ ಮುನಿಸಿಪಲ್ ಹೈಸ್ಕೂಲಿನವರು ಕರೆದು ಕೊಟ್ಟ ಅಧ್ಯಾಪಕರ ಹುದ್ದೆ. ಹುದ್ದೆಯ ಮಧ್ಯೆ ವಿದ್ಯೆ. ೧೯೧೯ರಲ್ಲಿ ಪಡೆದ ಬಿ.ಎ. ಪದವಿ. ಕನ್ನಡದಲ್ಲಿ ಏನಾದರೂ ಸಾಸಬೇಕೆಂದು ಕನ್ನಡ, ಸಂಸ್ಕೃತ ಅಧ್ಯಯನ. ಜೊತೆಗೆ ಜೈನಶಾಸ್ತ್ರದ ವಿಸ್ತೃತ ಅಧ್ಯಯನ. ೧೯೨೫ರಲ್ಲಿ ಎಂ.ಎ. ಪದವಿ. ಉತ್ತರ ಕರ್ನಾಟಕದಲ್ಲಿ ಎಂ.ಎ. ಪಾಸುಮಾಡಿದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆ. ೧೯೧೭ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ಕಾಲೇಜಿನಲ್ಲಿ ಗಿಟ್ಟಿಸಿಕೊಂಡ ಅಧ್ಯಾಪಕರ ಹುದ್ದೆ ಕೆಲಕಾಲ. ಕೊಲ್ಲಾಪುರದ ದಿವಾನರಿಂದ ರಾಜಾರಾಮ್ ಕಾಲೇಜಿಗೆ ಬರಲು ಕರೆ. ಕನ್ನಡ ವಿಭಾಗ ಇಲ್ಲದ ಕಡೆ ಪ್ರಾಧ್ಯಾಪಕರ ಹುದ್ದೆ. ಜೊತೆಗೆ ಪ್ರಾಚ್ಯವಸ್ತು ವಿಭಾಗದ ಹೊಣೆಗಾರಿಕೆ. ಸಂಶೋಧನಾ ಕಾರ‍್ಯಕ್ರಮಗಳು. ಕೊಲ್ಲಾಫುರದ ಮಹಾಲಕ್ಷ್ಮಿ ದೇವಸ್ಥಾನ ಕುರಿತು ಸಂಶೋಧನಾತ್ಮಕ ಕೃತಿ “ನೋಟ್ಸ್ ಆನ್ ಮಹಾಲಕ್ಷ್ಮಿ ಟೆಂಪಲ್ ಆಫ್ ಕೊಲ್ಲಾಪುರ” ಪ್ರಕಟ. ಬೆಳಗಾಗುವುದರೊಳಗೆ ಸಿಕ್ಕ ಪ್ರಸಿದ್ಧಿ. ಮತ್ತೊಂದು ಸಂಶೋಧನಾ ಕೃತಿ “ಇನ್‌ಸ್ಕ್ರಿಪ್ಷನ್ಸ್ ಆಫ್ ನಾರ್ದರನ್ ಕರ್ನಾಟಕ ಅಂಡ್ ಕೊಲ್ಲಾಪುರ.” ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ, ನಾಣ್ಯ ಮುಂತಾದುವುಗಳ ಬಗ್ಗೆ ಬರೆದ ಸಂಶೋಧನಾತ್ಮಕ ಲೇಖನಗಳು. ಧಾರವಾಡದ ಸಂಶೋಧನಾ ಸಂಸ್ಥೆ, ಉತ್ತರ ಕರ್ನಾಟಕಕ್ಕೊಂದು ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಹಿರಿದಾದ ಪಾತ್ರ. ನಾಲ್ಕು ವರ್ಷಗಳ ಸತತ ಸಂಶೋಧನೆ. ಹಲವಾರು ವಿದ್ವಾಂಸರ ನೆರವಿನಿಂದ ಹರಿಹರನ ಕಾಲ, ಧರ್ಮ, ಕಾವ್ಯ ಪ್ರತಿಭೆಯ ಸಮಗ್ರ ಪರಿಚಯದ ‘ಹರಿಹರದೇವ ಪ್ರಶಸ್ತಿ’ ಪ್ರಕಟಿತ. ಅಚ್ಚು ಮೊಳೆಗಳಿಲ್ಲದ ಕಾಲದಲ್ಲಿ ಅಚ್ಚು ಮೊಳೆ ತರಿಸಿ ಮಹಾರಾಷ್ಟ್ರದ ಮುದ್ರಣಾಲಯದವರಿಗೆ ತರಬೇತು ನೀಡಿ ಪ್ರಕಟಿಸಿದ ಗ್ರಂಥ. ಮತ್ತೊಂದು ಗ್ರಂಥ ‘ಮಹಾದೇವಿಯಕ್ಕ’ ಸಂಶೋಧನಾ ಕೃತಿ. ಮಹಾದೇವಿಯಕ್ಕನಿಗೆ ಮದುವೆಯಾಗಿತ್ತೆಂಬ ಮಹತ್ವದ ನಿರ್ಣಯ ಗ್ರಂಥದಲ್ಲಿ ಮಂಡನೆ. ಕನ್ನಡ ಐತಿಹಾಸಿಕ ಅಸ್ತಿಭಾರ ಹಾಕಿದ ಕುಂದಣಗಾರರಿಗೆ ೧೯೬೧ರಲ್ಲಿ ಗದಗಿನಲ್ಲಿ ನಡೆದ ೪೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ನಾಡು ತೋರಿದ ಗೌರವ. ಇವರ ಲೇಖನಗಳನ್ನು ಎಂ.ಜಿ. ಬಿರಾದಾರರವರು “ಕುಂದಣಗಾರರ ಲೇಖನ ಸಾಹಿತ್ಯ” ಎಂಬ ಕೃತಿ ಸಂಪಾದಿಸಿ ಕ.ಸಾ.ಪ.ದಿಂದ ಪ್ರಕಟಿಸಿದ್ದಾರೆ. ೧೯೬೧ರಲ್ಲಿ ಅರ್ಪಿಸಿದ ಸಂಭಾವನ ಗ್ರಂಥ ‘ಕುಂದಣ.’.   ಇದೇ ದಿನ ಹುಟ್ಟಿದ ಸಾಹಿತಿಗಳು : ಪಳಕಳ ಸೀತಾರಾಮಭಟ್ಟ – ೧೯೩೧ ಸರಜು ಕಾಟಕರ – ೧೯೫೩

Details

Date:
August 14, 2023
Event Category: