ಗಂಗಾಧರ ಚಿತ್ತಾಲ

Home/Birthday/ಗಂಗಾಧರ ಚಿತ್ತಾಲ
Loading Events

೧೨.೧೦.೧೯೨೩ ೨೮..೧೯೮೭ ಮೂರು ದಶಕಕ್ಕೂ ಹೆಚ್ಚುಕಾಲ ಕಾವ್ಯಸೃಷ್ಟಿಯಲ್ಲಿ ತೊಡಗಿಸಿಕೊಂಡಿದ್ದ ಚಿತ್ತಾಲರು ಹುಟ್ಟಿದ್ದು ಗೋಕರ್ಣದ ಬಳಿಯ ಹನೇಹಳ್ಳಿಯಲ್ಲಿ ೧೯೨೩ರ ಅಕ್ಟೋಬರ್ ೧೨ ರಂದು. ತಂದೆ ವಿಠೋಬ, ತಾಯಿ ರುಕ್ಮಿಣಿ. ಇವರ ಕಿರಿಯ ತಮ್ಮ ಯಶವಂತ ಚಿತ್ತಾಲರು ಪ್ರಖ್ಯಾತ ಕಥೆಗಾರರು. ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಹನೇಹಳ್ಳಿಯಲ್ಲಿ. ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಾಲೆ ಪೂರೈಸಿ, ಮ್ಯಾಟ್ರಿಕ್‌ ಪರೀಕ್ಷೆಯಲ್ಲಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದದ್ದೇ ಅಲ್ಲದೆ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿದ ಕೀರ್ತಿಯನ್ನು ಪಡೆದರು. ದೇಶದ ತುಂಬ ಸ್ವಾತಂತ್ರ್ಯ ಚಳವಳಿ ನಡೆಯುತ್ತಿದ್ದ ಕಾಲ. ಶಾಲಾ, ಕಾಲೇಜು ವಿದ್ಯಾರ್ಥಿಗಳೂ ಚಳವಳಿಯಲ್ಲಿ ಭಾಗಿಯಾಗತೊಡಗಿದ್ದಾಗ ಇವರೂ ಚಳವಳಿ ಸೇರಿದ್ದಾರೆಂದು ಕಾಲೇಜಿನಿಂದ ಹೊರ ಹಾಕಿದರು. ಆದರೂ ಮುಂಬಯಿ ವಿಶ್ವವಿದ್ಯಾಲಯದಿಂದ ೧೯೪೫ರಲ್ಲಿ ಬಿ.ಎ. ಪದವಿ, ೧೯೪೮ರಲ್ಲಿ ಐಎ ಮತ್ತು ಎಎಸ್‌(ಐಎಎಸ್‌) ಪದವಿ ಗಳಿಸಿ ಅಸಿಸ್ಟೆಂಟ್‌ ಅಕೌಂಟೆಂಟ್ ಜನರಲ್‌ ಆಗಿ ನೇಮಕಗೊಂಡರು. ೧೯೫೫ ರಿಂದ ೫೮ ರವರೆಗೆ ವಾಷಿಂಗ್‌ಟನ್‌ನಲ್ಲಿ ಡೆಪ್ಯೂಟಿ ಡೈರೆಕ್ಟರ್ ಆಫ್‌ ಆಡಿಟ್ಸ್‌ ಹುದ್ದೆಯಲ್ಲಿ, ಡೈರೆಕ್ಟರ್ ಆಫ್‌ ಆಡಿಟ್ಸ್‌ ಆಗಿ ಲಂಡನ್ನಿನಲ್ಲಿ ಒಂದು ವರ್ಷವಿದ್ದು ನಿವೃತ್ತರಾದರು. ಅಂತರಂಗದ ಒಳ ಪುಟಗಳಲ್ಲಿ ನಡೆಯುವ ಕಾವ್ಯಕ್ರಿಯೆಯನ್ನು ಸಂಪೂರ್ಣವಾಗಿ ಮನಸ್ಸಿನ ಮೇಲೆ ಅಚ್ಚಾದ ನಂತರವೇ ಅದನ್ನು ಕಾಗದದ ಮೇಲೆ ಬರೆದಿಡುತ್ತಿದ್ದರು. ಕವಿಗೋಷ್ಠಿಗಳಲ್ಲಿ ಅವರು ಎಂದೂ ಕಾಗದ ಹಿಡಿದು ಕವಿತೆ ಓದಿದವರಲ್ಲ. ಮನಸ್ಸಿನ ಮೇಲೆ ಮೂಡಿದ ಕವಿತೆಯನ್ನು ಸ್ಮೃತಿಪಟಲದ ಮೇಲೆ ತಂದುಕೊಂಡು ಪಟಪಟನೆ ಹೇಳಲಾರಂಭಿಸುತ್ತಿದ್ದರು. ವಿ.ಕೃ. ಗೋಕಾಕರು ಪ್ರಾರಂಭಿಸಿದ್ದ ವರುಣಕುಂಜದ ಸದಸ್ಯರಾಗಿದ್ದರು. ಈ ಸಾಹಿತ್ಯ ಬಳಗದಲ್ಲಿದ್ದ ಇತರ ಕವಿಗಳೆಂದರೆ ಹೇಮಂತ ಕುಲಕರ್ಣಿ, ಎನ್‌.ಡಿ. ಕುಲಕರ್ಣಿ, ಸು.ರಂ. ಎಕ್ಕುಂಡಿ, ವಿ.ಜಿ. ಭಟ್ಟ ಮುಂತಾದವರುಗಳು. ಪ್ರಕಟಗೊಂಡಿದ್ದು ನಾಲ್ಕೇನಾಲ್ಕು ಕವನ ಸಂಕಲನಗಳಾದರೂ ಕಾವ್ಯಕ್ಷೇತ್ರದ ಮೈಲುಗಲ್ಲುಗಳೇ. ಕವಿ ಹೃದಯದಲ್ಲೇಳುವ ಆಸೆ, ನಿರಾಸೆ, ತವಕ – ತಲ್ಲಣಗಳು, ಜೀವನದ ಹಂಬಲ – ಹಾರೈಕೆಗಳಿಗೆ ಅಕ್ಷರ ರೂಪ ನೀಡಿದಾಗ ಕಾವ್ಯವಾಗಿ ಹರಿದು ಬರುತ್ತಿದ್ದಿತು. ೧೯೪೮ರಲ್ಲಿ ಪ್ರಕಟಗೊಂಡದ್ದು ಪ್ರಥಮ ಕವನ ಸಂಕಲನ ‘ಕಾಲದ ಕರೆ’. ೧೯೬೧ರಲ್ಲಿ ಪ್ರಕಟಗೊಂಡ ಎರಡನೆಯ ಕವನ ಸಂಕಲನ ‘ಮನುಕುಲದ ಹಾಡು’. ಇದರಲ್ಲಿ ಪ್ರಕೃತಿ, ಸೌಂದರ್ಯ, ಪ್ರೀತಿ, ರಾಜಕೀಯ ಮುಂತಾದ ನಿತ್ಯದ ವಿಷಯಗಳೇ ಕಾವ್ಯದ ವಸ್ತುವಾಗಿದೆ. ೧೯೭೦ರಲ್ಲಿ ಪ್ರಕಟಗೊಂಡಿದ್ದು ಮೂರನೆಯ ಕವನ ಸಂಕಲನ ‘ಹರಿವ ನೀರಿದು’. ‘ಸಂಪರ್ಕ’ ಇವರ ಕೊನೆಯ ಕಾವ್ಯಕೃತಿ. ಇದರಲ್ಲಿ ಅವರು ಅನುಭವಿಸಿದ ಪಾರ್ಕಿನ್‌ ಸನ್‌ ರೋಗದ ನೋವನ್ನು ಹೊರಹಾಕಿದ್ದಾರೆ. ಪಾರ್ಕಿನಸನ್‌ ರೋಗದ ಬಾಧೆಗೊಳಗಾಗಿ ಸಾಹಿತ್ಯಲೋಕವನ್ನು ತ್ಯಜಿಸಿದ್ದು ೧೯೮೭ ರ ಜನವರಿ ೨೮ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top