Loading Events

« All Events

  • This event has passed.

ಗಂಗಾ ಪಾದೇಕಲ್

September 1, 2023

೦೧..೧೯೪೮ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಗಂಗಾರತ್ನ (ಗಂಗಾ ಪಾದೇಕಲ್) ರವರು ಹುಟ್ಟಿದ್ದು ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ೧೯೪೮ ರ ಸೆಪ್ಟಂಬರ್ ೧ ರಂದು. ತಂದೆ ಮುಳಲಿಯ ಕೇಶವಭಟ್‌ ರವರು ಚಿನ್ನ ಬೆಳ್ಳಿ ವ್ಯಾಪಾರಸ್ಥರಾದರೂ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಿರದ ಕುಟುಂಬ. ತಾಯಿ ಸರಸ್ವತಿ. ಓದಿದ್ದು ಏಳನೆಯ ತರಗತಿಯವರೆಗೆ ಪುತ್ತೂರಿನಲ್ಲಿ. ಕಾರಣಾಂತರದಿಂದ ಓದಿಗೆ ವಿಘ್ನ. ಅಜ್ಜಿ ಮೂಕಾಂಬಿಕರವರಿಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಹಾಡುಗಳನ್ನು ರಚಿಸುವ ಶಕ್ತಿಯಿದ್ದು ಧ್ರುವಚರಿತ್ರೆ, ಹರಿಲೀಲಾಮೃತ, ದ್ರೌಪದಿ ವಸ್ತ್ರಾಪಹರಣ ಮುಂತಾದವುಗಳನ್ನೂ ಹೇಳಿದಾಗ ಬರಹರೂಪಕ್ಕೆ ತಂದವರು ಇವರ ತಂದೆ. ಅಜ್ಜಿ ರಚಿಸುತ್ತಿದ್ದ ಕೃತಿಗಳಿಗೆ ರಾಗ ಹಚ್ಚಿ ಹಾಡುತ್ತಿದ್ದವರು ಇವರ ತಾಯಿ. ಜೊತೆಗೆ ಮನೆಗೆ ಆಗಾಗ್ಗೆ ಬರುತ್ತಿದ್ದ ಚಂದಮಾಮ, ಬಾಲಮಿತ್ರ, ನವಭಾರತ, ಕಸ್ತೂರಿ ಮುಂತಾದ ಪತ್ರಿಕೆಗಳನ್ನು ಓದುತ್ತಾ ರೂಢಿಸಿಕೊಂಡ ಸಾಹಿತ್ಯಾಸಕ್ತಿ. ಅಣ್ಣ ತರಿಸುತ್ತಿದ್ದ ಠಾಗೋರ್, ಶರತ್‌ಚಂದ್ರ ಚಟರ್ಜಿ, ಗಳಗನಾಥರ ಕಾದಂಬರಿಗಳನ್ನೂ ಓದಿ ನಡೆಸುತ್ತಿದ್ದ ಚರ್ಚೆ, ಇವು ಸಾಹಿತ್ಯಾಸಕ್ತಿಯನ್ನು ಉದ್ದೀಪನಗೊಳಿಸುವಲ್ಲಿ ಸಹಾಯಕವಾಗಿದ್ದವು. ಶಾಲೆಗೆ ಹೋಗಲಾಗದಿದ್ದರೂ ಮನೆಯಲ್ಲಿಯೇ ದೊರೆಯುತ್ತಿದ್ದ ಪುಸ್ತಕಗಳಿಂದ ತುಂಬಿಕೊಳ್ಳುತ್ತಿದ್ದ ಸಾಹಿತ್ಯಸಕ್ತಿಗೂ ತಡೆಬಿದ್ದುದು ಮದುವೆ ಎಂಬ ಕಟ್ಟಳೆಯಿಂದ. ಅವಿಭಕ್ತ ಕುಟುಂಬದ ಸೊಸೆಯಾಗಿ ಹೋದಾಗ ಮನೆಕೆಲಸವಲ್ಲದೆ ಮತ್ತೊಂದಕ್ಕೂ ಯೋಚಿಸಲಾಗದಷ್ಟು ಬಿಡುವಿಲ್ಲದ ಸತತ ದುಡಿತ. ಒಮ್ಮೆ ಪುತ್ತೂರಿನ ನರ್ಸಿಂಗ್‌ ಹೋಂನಲ್ಲಿ ಕಂಡ ದೃಶ್ಯವೇ ಇವರ ಕಥಾವಸ್ತುವಾಗಿ ಬರೆದ ಕಥೆ ‘ಜಾನಕಿಯ ಡೈರಿಯ ಕೆಲವು ಪುಟಗಳು’. ಶಿಶುಹತ್ಯೆಯ ನಂತರ ತಾಯಿಗೊದಗಿದ ದುರವಸ್ಥೆಯ ಯಥಾ ಚಿತ್ರಣದ ಕಥೆಯು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಾಗ ಬಾಳಿನಲ್ಲಿ ಕಂಡ ನೋವುಗಳಿಗೆ ಅಕ್ಷರ ರೂಪಕೊಟ್ಟು ಬರೆಯಬಹುದೆನ್ನುವ ಆತ್ಮವಿಶ್ವಾಸ ಬೆಳೆದದ್ದು, ನಂತರ ಮಂಗಳೂರು ಆಕಾಶವಾಣಿಯಲ್ಲಿದ ಜಯಶ್ರೀ ಯವರಿಗೆ ಮನೋರಮ ಎಂ.ಭಟ್‌ರವರು ಪರಿಚಯಿಸಿದಾಗ, ಹಲವಾರು ಕಥೆಗಳು ಪ್ರಸಾರಗೊಂಡು ಕತೆಗಾರ್ತಿಯೊಬ್ಬರ ಉದಯವಾಗಿತ್ತು. ಹೀಗೆ ಬರೆದ ಕಥೆಗಳ ಪ್ರಥಮ ಕಥಾ ಸಂಕಲನ ‘ಪುಲಪೇಡಿ ಮತ್ತು ಇತರ ಕಥೆಗಳು’ ಸಂಕಲನವು ೧೯೮೨ರಲ್ಲಿ ಪ್ರಕಟಗೊಂಡಿತು. ನಂತರ ಬರೆದ ಕಾದಂಬರಿ ‘ಹೊನ್ನಳ್ಳಿಯಲ್ಲೊಮ್ಮೆ’ ಐ.ಬಿ.ಎಚ್‌. ಪ್ರಕಾಶನದವರು ಪ್ರಕಟಿಸಿದರು. ಕಥೆಕಾರ್ತಿಯಾಗಿ, ಕಾದಂಬರಿಕಾರ್ತಿಯಾಗಿ ಗುರುತಿಸಿಕೊಂಡ ನಂತರ ಹಲವಾರು ಲೇಖಕಿಯರ ಸ್ನೇಹಭಾವದಿಂದ ಮಂಗಳೂರಿನಲ್ಲಿ ಕಟ್ಟಿದ್ದು ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ’. ಶೋಷಣೆಗೆ ಗುರಿಯಾಗುವವಳು ಸಾಮಾನ್ಯವಾಗಿ ಹೆಣ್ಣು ಎಂಬುದು ಪ್ರಚಲಿತವಿರುವ ಸಂಗತಿಯಾದರೂ ಗಂಡಸು ಕೂಡಾ ಹೇಗೆ ಶೋಷಣೆಯ ಬಲೆಗೆ ಸಿಕ್ಕಿ ಬೀಳುತ್ತಾನೆನ್ನುವುದನ್ನು ತೋರಿಸಲು ಬರೆದ ಕತೆ ‘ಹೆಜ್ಜೆಮೂಡದ ಹಾದಿಯಲ್ಲಿ’. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿದ್ದ ‘ಪ್ರೇತಕ್ಕೆ ಕೂರುವ ಪದ್ಧತಿ’. ಯಾರಾದರು ಸತ್ತರೆ ಸೂತಕಶುದ್ಧಿಯ ೧೧ ಮತ್ತು ೧೨ ನೆಯ ದಿನ ಸತ್ತವನ ಪ್ರೇತವನ್ನೂ ಬದುಕಿರುವವನೊಬ್ಬನ ಮೇಲೆ ಆಹ್ವಾನಿಸಿ, ಷೋಡಶೋಪಚಾರಗಳಿಂದ ತೃಪ್ತಿಪಡಿಸಿ ದಾನ, ದಕ್ಷಿಣೆ ನೀಡಿ, ಅವನ ಬಾಯಿಂದ ತೃಪ್ತಿಯಾಯಿತೆಂದು ಹೇಳಿಸುವ ಕ್ರಿಯೆಯ ಕಥೆ. ಈ ರೀತಿ ಪ್ರೇತಕ್ಕೆ ಕೂರುವವರೂ ದಟ್ಟ ದರಿದ್ರರೇ! ಸಂಪ್ರದಾಯದ ಹೆಸರಿನಲ್ಲಿ ಶೋಷಿಸುವ ಪರಿ. ಇದನ್ನೂ ನೋಡಿ ಬರೆದ ಕಥೆ ‘ಹೆಜ್ಜೆ ಮೂಡದ ಹಾದಿಯಲ್ಲಿ’ ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದು ಚರ್ಚೆಗೆ ಹಾದಿಮಾಡಿಕೊಟ್ಟಿತು. ಇವರು ಬರೆದದ್ದು ಕಡಿಮೆ ಎನಿಸಿದರೂ ವೈಚಾರಿಕ ನೆಲೆಯಿಂದ ಮೂಡಿ ಬಂದದ್ದೇ ಜಾಸ್ತಿ. ಹೊನ್ನಳ್ಳಿಯಲ್ಲೊಮ್ಮೆ, ಸೆರೆಯಿಂದ ಹೊರಗೆ, ಪಯಣದ ಹಾದಿಯಲ್ಲಿ, ಮೌನರಾಗಗಳು, ಬಂಗಾರದ ಜಿಂಕೆಯ ಹಿಂದೆ, ಇನ್ನೊಂದು ಅಧ್ಯಾಯ, ಕನಕಾಂಬರಿ, ಮೂರು ಕಿರು ಕಾದಂಬರಿಗಳು, ಅದೃಷ್ಟರೇಖೆ ಮುಂತಾದ ಕಾದಂಬರಿಗಳು; ಪುಲಪೇಡಿ ಮತ್ತು ಇತರ ಕಥೆಗಳು, ಹೆಜ್ಜೆಮೂಡದ ಹಾದಿಯಲ್ಲಿ, ಹೊಸಹೆಜ್ಜೆ, ಚಿನ್ನದ ಸೂಜಿ, ವಾಸ್ತವ, ಕ್ಷಮಯಾಧರಿತ್ರಿ ಮೊದಲಾದ ಕಥಾ ಸಂಕಲನಗಳಲ್ಲದೆ ಸಮಗ್ರ ಕಥೆಗಳ ಭಾಗ ೧,೨, ಮತ್ತು ೩ ಕೂಡಾ ಪ್ರಕಟವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ಸಂಪಾದಿಸಿದ್ದು ‘ಆಯ್ದ ಸಣ್ಣ ಕಥೆಗಳು’ (ಕಥಾಸಂಕಲನ) ಮತ್ತು ಚಂದ್ರ ಭಾಗಿ ರೈ ಬದುಕು-ಬರೆಹ, ಮಕುಳಿಯ ಮೂಕಾಂಬಿಕ ಹಾಗೂ ಮುಳಿಯ ಕೃಷ್ಣಭಟ್ಟರ ಬದುಕು-ಬರೆಹ (ಪ್ರತಿಬಿಂಬ-ವ್ಯಕ್ತಿಚಿತ್ರ) ಪ್ರಕಟವಾಗಿವೆ. ಸೆರೆಯಿಂದ ಹೊರಗೆ ಕಾದಂಬರಿಗೆ ಮಲ್ಲಿಕಾ ಪ್ರಶಸ್ತಿ, ಇನ್ನೊಂದು ಅಧ್ಯಾಯ ಕಾದಂಬರಿಗೆ ವನಿತಾ ಕಾದಂಬರಿ ಸ್ಪರ್ಧಾ ಬಹುಮಾನ ಮತ್ತು ಬೇಲಾಡಿ ಮಾರಣ್ಣ ಮಾಡ ಸ್ಮಾರಕ ಪ್ರಶಸ್ತಿ ಮುಂತಾದವು ಬಂದಿರುವುದಲ್ಲದೆ ಹಲವಾರು ಸಣ್ಣ ಕಥೆಗಳು ಇಂಗ್ಲಿಷ್‌, ತೆಲುಗು, ಹಿಂದಿ ಭಾಷೆಗೂ ಅನುವಾದಗೊಂಡಿವೆ. ‘ಪುಲಪೇಡಿ’ ಕಥೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ, ಹಲವಾರು ಬಾರಿ ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ, ತಾಲ್ಲೂಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ, ‘ಹೊಸಹೆಜ್ಜೆ’ ಕಥಾಸಂಕಲನವು ಮಂಗಳೂರು ವಿ.ವಿ.ದ. ಬಿ.ಕಾಂ ತರಗತಿಗಳಿಗೆ ಉಪಪಠ್ಯ ಪುಸ್ತಕವಾಗಿರುವುದಲ್ಲದೆ ಕಾಸರಗೋಡಿನ ಶಿಲಾ ಕುಮಾರಿ ಎಂಬ ವಿದ್ಯಾರ್ಥಿನಿ ಗಂಗಾಪದೇಕಲ್‌ರವರ ಸಮಗ್ರ ಸಾಹಿತ್ಯವನ್ನಾಧರಿಸಿ ರಚಿಸಿದ ಪ್ರೌಢ ಪ್ರಬಂಧಕ್ಕೆ ಕೇರಳದ ಕಣ್ಣಾನೂರಿನ ವಿಶ್ವವಿದ್ಯಾಲಯದಿಂದ ಎಂ.ಫಿಲ್‌ ಪಡೆದಿರುವುದು ಕೋಲಾರದ ಮಂಜುಳಾರವರು ‘೯೦ರ ದಶಕದ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ’ ಮತ್ತು ಮೂಡಬಿದಿರೆಯ ಸುಲತಾ ವಿದ್ಯಾಧರ್‌ರವರ ‘ಕರಾವಳಿ ಲೇಖಕಿಯರ ಕಥೆಗಳಲ್ಲಿ ಅಭಿವ್ಯಕ್ತಗೊಂಡ ಸ್ತ್ರೀ ಸಂಸ್ಕೃತಿಯ ಆಯಾಮಗಳು’ ಪ್ರಬಂಧ ಮಂಡಿಸಿದ್ದಾರೆ. ಇವು ಗಂಗಾಪಾದೇಕಲ್‌ ರವರಿಗೆ ಸಂದ ಗೌರವಗಳಾಗಿವೆ.

Details

Date:
September 1, 2023
Event Category: