೦೫.೦೩.೧೯೧೩ ೨೧.೦೭.೨೦೦೯ ಕಿರಾಣ ಘರಾಣ ಸಂಗೀತ ಪದ್ಧತಿಗೆ ದೊಡ್ಡ ಹೆಸರು ತಂದ ಗಂಗೂಬಾಯಿ ಹಾನಗಲ್ ರವರು ಹುಟ್ಟಿದ್ದು ಧಾರವಾಡದ ಶುಕ್ರವಾರ ಪೇಟೆಯಲ್ಲಿ. ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. ತಾಯಿಯೇ ಸಂಗೀತದ ಪ್ರೇರಕ ಶಕ್ತಿ ಮತ್ತು ಪ್ರಥಮ ಗುರು. ಕರ್ನಾಟಕ ಸಂಗೀತ ಪಾಠ, ನಂತರ ಒಲಿದದ್ದು ಹಿಂದೂಸ್ತಾನಿ ಸಂಗೀತ, ಕೃಷ್ಣಾಚಾರ್ಯ ಹುಲಗೂರು, ಸವಾಯಿ ಗಂಧರ್ವ, ಕುಂದಗೋಳದ ಪಂಡಿತ ರಾಮಬಾಹು ಕುಂದಗೋಳ್ಕರ್ ರವರ ಶಿಷ್ಯೆಯಾಗಿ ಕಲಿತದ್ದು ಅಪಾರ. ೧೯೨೦ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಯಕಿಯಾಗಿ ಹಾಡಿದಾಗ ಗಾಂಧೀಜಿಯವರ ಮತ್ತು ಸಭಿಕರ ಮೆಚ್ಚುಗೆ. ೧೯೫೨ರಲ್ಲಿ ಆಕಾಶವಾಣಿಯಲ್ಲಿ ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ. ಮಗಳು ಕೃಷ್ಣ ಹಾನಗಲ್ (ಈಗಿಲ್ಲ) ತಮ್ಮನಾದ ಶೇಷಗಿರಿ ಹಾನಗಲ್ ತಬಲ ಇವರ ಸಾಥಿ ಎಂದರೆ ಕಾರ್ಯಕ್ರಮಕ್ಕೆ ಮತ್ತೊಂದು ವೈಶಿಷ್ಟ್ಯ. ಬಾಲ್ಯದಲ್ಲಿಯೇ ಗಂಟಲಿಗಾದ ತೊಂದರೆಯಿಂದ ಸಣ್ಣ ಶಸ್ತ್ರಕ್ರಿಯೆಯ ಪರಿಣಾಮವಾಗಿ ಧ್ವನಿ ಕೊಂಚ ಗಂಡಸಿನ ಕಂಠದಂತಾಗಿದ್ದರೂ ಅತ್ಯಂತ ಪರಿಶ್ರಮದಿಂದ ತಮ್ಮ ಕಂಠಶ್ರೀಯನ್ನು ಆಕರ್ಷಕ ಸ್ವರವನ್ನಾಗಿ ಪರಿವರ್ತಿಸಿಕೊಂಡ ಸಾಹಸಿ. ನಾಡು ನುಡಿಯ ಬಗ್ಗೆ ಅಪಾರ ಕಾಳಜಿ, ಗೋಕಾಕ್ ಚಳವಳಿ ಸಮಯದಲ್ಲಿ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಚಳವಳಿಯಲ್ಲಿ ವಹಿಸಿದ ಪ್ರಮುಖ ಪಾತ್ರ. ಗುರುಗಳಾದ ಸವಾಯಿ ಗಂಧರ್ವರ ಹೆಸರಿನಲ್ಲಿ ಕುಂದಗೋಳದಲ್ಲಿ ಪ್ರತಿ ವರ್ಷ ನಡೆಸುತ್ತಿರುವ ಸಂಗೀತೋತ್ಸವ. ‘ಸವಾಯಿ ಗಂಧರ್ವ ಕಲಾಮಂದಿರ’ ನಿರ್ಮಾಣ ಕಾರ್ಯದಲ್ಲಿ ಪಟ್ಟ ಶ್ರಮ. ದೇಶ ವಿದೇಶಗಳಲ್ಲಿ ಹಾಡಿ ನಾಡಿಗೆ ತಂದ ಕೀರ್ತಿ. ದಿಲ್ಲಿ ಆಗ್ರಾ, ಲಖನೋ, ಬರೋಡ, ಹೈದರಾಬಾದ್, ಗ್ವಾಲಿಯರ್, ಪ್ರಯಾಗ, ಅಮೃತಸರ, ಕರಾಚಿ, ಗಯಾ, ಸಾಗರದಾಚೆಯೂ ಹಾಡಿ ವಿದೇಶಿಯರನ್ನು ರಂಜಿಸಿದ ಖ್ಯಾತಿ. ಸಂದ ಪ್ರಶಸ್ತಿ ಗೌರವಗಳಿಗೆ ಲೆಕ್ಕವಿಲ್ಲ. ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಭೂಷಣ, ಪದ್ಮವಿಭೂಷಣ, ರೂ-ಇ-ಗಜಲ್, ಬೇಗಂ ಅಖ್ತರ್ ಪ್ರಶಸ್ತಿ, ಆಕಾಶವಾಣಿ ಸ್ವರ್ಣ ಮಹೋತ್ಸವ ಪ್ರಶಸ್ತಿ, ತಾನಸೇನ್ ಪ್ರಶಸ್ತಿ, ಕನಕ-ಪುರಂದರ ಪ್ರಶಸ್ತಿ, ಕರ್ನಾಟಕ, ಕನ್ನಡ ವಿ.ವಿ. ಗುಲಬರ್ಗಾ, ದೆಹಲಿ, ವಿಶ್ವವಿದ್ಯಾಲಯಗಳಿಂದ ದೊರೆತ ಗೌರವ ಡಾಕ್ಟರೇಟ್, ಭಾರತೀಕಂಠ, ಸ್ವರಶಿರೋಮಣಿ ಬಿರುದು ಮುಂತಾದುವುಗಳನ್ನು ಪಡೆದಿದ್ದ ಗಂಗೂಬಾಯಿಯವರು ಸಂಗೀತ ಲೋಕದಿಂದ ದೂರವಾದದ್ದು ೨೦೦೯ರ ಜುಲೈ ೨೧ರಂದು. ಇದೇ ದಿನ ಹುಟ್ಟಿದ ಕಲಾವಿದರು : ಸರ್ವೋತ್ತಮ ಕಾಮತ್ ಡಿ. – ೧೯೫೧ ಅಪರ್ಣಾ ವೈದ್ಯನಾಥನ್ – ೧೯೭೯
* * *