೧೧.೦೨.೧೯೬೩ ಶಿಲ್ಪಕಲೆಗೆ ಹೊಸ ಆಯಾಮ ನೀಡಿ ಹೊಸ ಹೊಸ ಸಂಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಗಣೇಶ್ ಎಲ್. ಭಟ್ರವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೇಲಿನ ಇಡಗುಂಜಿ. ತಂದೆ ಲಕ್ಷ್ಮೀನಾರಾಯಣ ಭಟ್ಟ, ತಾಯಿ ಮಂಗಳಾ ಭಟ್. ಸಾಮಾನ್ಯ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ವರೆಗೆ. ಆದರೂ ಕಲೆಯಲ್ಲಿ ಹೈಯರ್ ಡ್ರಾಯಿಂಗ್ ಮತ್ತು ಸಾಗರದಲ್ಲಿ ಪಡೆದ ಕರಕುಶಲ ತರಬೇತಿ. ರಾಷ್ಟ್ರಪ್ರಶಸ್ತಿ ವಿಜೇತ ದೇವಲಕುಂದ ವಾದಿರಾಜ್ ರವರಲ್ಲಿ ಸುಮಾರು ೧೦ ವರ್ಷಗಳ ತರಬೇತಿ. ರಾಜ್ಯಪ್ರಶಸ್ತಿ ವಿಜೇತ ಕೆ.ಜಿ. ಶಾಂತಪ್ಪ ಗುಡಿಕಾರ್ ರವರಲ್ಲಿ ಕಲಿತದ್ದು ಶಿಲ್ಪಕಲೆ. ಪ್ರೊ. ಎಸ್.ಕೆ. ರಾಮಚಂದ್ರರಾಯರ ಬಳಿ ಶಿಲ್ಪಶಾಸ್ತ್ರದ ಅಧ್ಯಯನ. ಹಲವಾರು ವರ್ಷಗಳ ಅನುಭವವಿರುವ ಇವರು ಮರ ಮತ್ತು ಕಲ್ಲು ಕೆತ್ತನೆಯಲ್ಲಿ ಸಾಧಿಸಿದ್ದು ಅಪಾರ. ಭಾರತೀಯ ಸಾಂಪ್ರದಾಯಿಕ ಶಿಲ್ಪಕಲಾ ಪ್ರಕಾರದಲ್ಲಿ ಸುಮಾರು ೪೫೦ ವಿದ್ಯಾರ್ಥಿಗಳಿಗೆ ನೀಡಿದ ತರಬೇತಿ. ಸುಮಾರು ೫೦ಕ್ಕೂ ಹೆಚ್ಚು ವಿದೇಶಿ ವಿದ್ಯಾರ್ಥಿಗಳಿಗೆ ಭಾರತೀಯ ಶಿಲ್ಪಕಲಾ ಪ್ರಕಾರದಲ್ಲಿ ನೀಡಿದ ಶಿಕ್ಷಣ. ಮರಳು ಮಿಶ್ರಿತ ಕೆಂಪುಕಲ್ಲು, ಶೆಲ್ಸ್ಟೋನ್, ಫ್ರೆಂಚ್ಸ್ಟೋನ್, ಲಿಂಪ್ಲಿಸ್ಟೋನ್, ಬಾತ್ಸ್ಟೋನ್, ಅಲ್ಬಷ್ಟರ್ ಸ್ಟೋನ್ ಮುಂತಾದುವುಗಳನ್ನುಪಯೋಗಿಸಿ ರಚಿಸಿದ ಶಿಲ್ಪಗಳು, ಒಡಮೂಡಿದ ಕೆತ್ತನೆಯ ತಂತ್ರಗಳು. ಹಟ್ಟಿಯಂಗಡಿ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ೩೨, ಮುದ್ಗಲಪುರಾಣದ ಗಣಪತಿಗಳು, ಇಂಗ್ಲೆಂಡಿನ ಶೂಟ್ ಫಾರ್ಮ ಕಲಾಶಾಲೆಗೆ ೯ ಅಡಿ ಉದ್ದ ೫ ಅಡಿ ಎತ್ತರದ ಕಾಮಧೇನುವಿನ ಸಂಯೋಜನೆ, ಆಂಗ್ಲೋ ಇಂಡಿಯನ್ ಶೈಲಿಯ ಸಂಗೀತಗಾರ, ಜಾನಪದ ಶೈಲಿಯಲ್ಲಿ ನಿರ್ಮಿಸಿದ ಮಾರಮ್ಮನ ಆರಾಧಕ ಸಮೂಹಶಿಲ್ಪ ಮುಂತಾದುವುಗಳ ಸಂಯೋಜನೆ ಮತ್ತು ಕೆತ್ತನೆ. ಸಂದ ಪ್ರಶಸ್ತಿಗಳು ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರ, ಇದುವರೆಗೂ ಸುಮಾರು ೬೦೦ ಶಿಲ್ಪ ಕಲಾಕೃತಿಗಳ ರಚನೆ, ಭಾರತ ಮತ್ತು ಇಂಗ್ಲೆಂಡಿನಲ್ಲಿ ನಲವತ್ತು ಕಲಾ ಪ್ರದರ್ಶನಗಳು, ಹಲವಾರು ಪ್ರಾತ್ಯಕ್ಷಿಕೆ ಮತ್ತು ಕಲಾಶಿಬಿರದಲ್ಲಿ ಭಾಗಿ, ಇದೀಗ ಕೆನರಾ ಬ್ಯಾಂಕ್ ಪ್ರಾಯೋಜಿತ ಬಿಡದಿಯ ಬಳಿಯ ಜೋಗರದೊಡ್ಡಿ ಕರಕುಶಲ ತರಬೇತಿ ಕೇಂದ್ರದಲ್ಲಿ ಶಿಲ್ಪಿ ಹಾಗೂ ಶಿಲ್ಪ ಕಲಾ ಶಿಕ್ಷಕರಾಗಿ ಸಲ್ಲಿಸುತ್ತಿರುವ ಸೇವೆ.
* * *