೨೮.೦೬.೧೯೪೮ ಸಂಗೀತ, ಪತ್ರಿಕೋದ್ಯಮ, ಜಾಹೀರಾತು, ಸಾರ್ವಜನಿಕ ಸಂಪರ್ಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಹುಮುಖ ಪ್ರತಿಭೆ ಹೊಂದಿರುವ ಗಾಯತ್ರಿಯವರು ಹುಟ್ಟಿದ್ದು ಮೈಸೂರು. ಸಂಗೀತ ಶಾಸ್ತ್ರಜ್ಞರ ಮನೆತನ. ತಂದೆ ನೇತ್ರ ಶಸ್ತ್ರ ಚಿಕಿತ್ಸಕರಾದ ಎಸ್.ಕೃಷ್ಣಮೂರ್ತಿ, ತಾಯಿ ರುಕ್ಮಿಣಿ, ಮದರಾಸು ವಿಶ್ವವಿದ್ಯಾಲಯದಿಂದ ಪಡೆದ ಬಿ.ಎಸ್ಸಿ. ಪದವಿ. ನಂತರ ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಡಿಪ್ಲೊಮ. ಟಿ.ವಿ.ಕಾರ್ಯಕ್ರಮ ನಿರ್ಮಾಣ, ಟಿ.ವಿ.ಸುದ್ದಿ ಸಂಪಾದನೆಯಲ್ಲಿ ಮುಂದುವರೆದ ಶಿಕ್ಷಣ. ಎಂಟನೆಯ ವರ್ಷದಲ್ಲೇ ಕಚೇರಿ ನಡೆಸಿದ ಅನುಭವ. ಪಿಟೀಲು ವಿದ್ವಾಂಸರಾದ ನೆಲ್ಲೈಮಣಿಯವರಲ್ಲಿ ಸಂಗೀತ ಪಾಠ, ಉನ್ನತ ಶಿಕ್ಷಣ ಪಡೆದದ್ದು ರಾಮಲಿಂಗ ಭಾಗವತರ್ ಮತ್ತು ಸಂಗೀತ ಕಳಾನಿಧಿ ವೇದಾಂತ ಭಾಗವತರಲ್ಲಿ. ಜೇನಿನಂತ ಸಿಹಿ ಕಂಠದ ಗಾಯಕಿ, ಹಲವಾರು ಸಂಗೀತೋತ್ಸವಗಳು, ಸಂಗೀತ ಸಭೆಗಳಲ್ಲಿ ದೇಶ ವಿದೇಶಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಆಕಾಶವಾಣಿ ’ಎ’ ಗ್ರೇಡ್ ಕಲಾವಿದೆಯಾಗಿ ನೇಮಕ. ೨೦ ವರ್ಷಕ್ಕೂ ಹೆಚ್ಚು ಕಾಲ ಆಕಾಶವಾಣಿ ಒಡನಾಟ. ಬೆಂಗಳೂರು ಆಕಾಶವಾಣಿಯ ಆಡಿಷನ್ ಬೋರ್ಡಿನ ತೀರ್ಪುಗಾರರಾಗಿಯೂ ಸಲ್ಲಿಸಿದ ಸೇವೆ. ಚೆನ್ನೈ ಮ್ಯೂಸಿಕ್ ಅಕಾಡಮಿ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್, ಹಿಂದೂ ಕಲ್ಚರಲ್ ಅಸೋಸಿಯೇಷನ್, ದೂರದರ್ಶನದ ರಾಷ್ಟ್ರೀಯ ಕಾರ್ಯಕ್ರಮ, ದಕ್ಷಿಣ ವಲಯ ಸಂಗೀತೋತ್ಸವ ಹೀಗೆ ನಾಲ್ಕು ದಶಕಗಳಿಗೂ ಮಿಕ್ಕು ಸಂಗೀತ ಕಾರ್ಯಕ್ರಮಗಳು. ಲಂಡನ್ನಿನ ಭಾರತೀಯ ವಿಧ್ಯಾಭವನದ ಸಂಗೀತೋತ್ಸವದಲ್ಲೂ ಭಾಗಿ. ಸಂಗೀತ ಪ್ರಚಾರಕ್ಕಾಗಿ ಪ್ರಾರಂಭಿಸಿದ ಪತ್ರಿಕೆ ‘ಶ್ರುತಿ’ ಪತ್ರಿಕೆಗಾಗಿ ೧೯೮೩-೮೮ ರವರೆಗೆ ಸಂಪಾದಕೀಯ ವಿಭಾಗದಲ್ಲಿ, ಸುದ್ದಿ ಸಂಗ್ರಹ ವಿಭಾಗದಲ್ಲಿ ನಿರ್ವಹಿಸಿದ ಕಾರ್ಯ. ಹವ್ಯಾಸಿ ಬರಹಗಾರ್ತಿಯಾಗಿ ಹಲವಾರು ಮಂದಿ ಕಲಾವಿದರ ಪರಿಚಯ, ವಿಮರ್ಶೆ ಲೇಖನಗಳು ಪ್ರಕಟಿತ. ಇವರ ಪ್ರಕಟಿತ ಲೇಖನಗಳ ಆಧಾರದಿಂದ ಹಲವಾರು ಮಂದಿ ಸಂಗೀತಗಾರರು. ನೃತ್ಯ ಕಲಾವಿದರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆತ ಮನ್ನಣೆ. ಇದೀಗ ಬೆಂಗಳೂರು ದೂರದರ್ಶನದಲ್ಲಿ ಸುದ್ದಿ ಸಂಪಾದಕಿಯಾಗಿ ನಿರ್ವಹಿಸುತ್ತಿರುವ ಜವಾಬ್ದಾರಿಯ ಜೊತೆಗೆ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸುದ್ದಿ ಸಂಗ್ರಾಹಕಿಯ ಹೊಣೆಗಾರಿಕೆ, ವಿವಿಧ ಚಟುವಟಿಕೆ, ಜವಾಬ್ದಾರಿಗಳ ನಡುವೆಯೂ ಮುಕ್ತ ವಿಶ್ವವಿದ್ಯಾಲಯದ ಎಂ.ಬಿ.ಎ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿನಿ. ಇದೇ ದಿನ ಹುಟ್ಟಿದ ಕಲಾವಿದರು ಲೀಲಾ.ಎಲ್ – ೧೯೪೧ ಸತ್ಯನಾರಾಯಣರಾವ್ .ಜಿ. – ೧೯೪೫ ಶೇಷಪ್ಪ ಗಬ್ಬೂರು – ೧೯೪೭ ಶಾಂತಾ ನಾಯಕ್ – ೧೯೬೫.
* * *