ಗಿರೀಶ್ ಕಾರ್ನಾಡ್

Home/Birthday/ಗಿರೀಶ್ ಕಾರ್ನಾಡ್
Loading Events

೧೯-೫-೧೯೩೮ ನಾಟಕಕಾರ, ನಟ, ನಿರ್ದೇಶಕ ಗಿರೀಶ ಕಾರ್ನಾಡರು ಹುಟ್ಟಿದ್ದು ಮಹಾರಾಷ್ಟ್ರದ ಮಾಥೆರಾನ್‌ನಲ್ಲಿ. ತಂದೆ ವೈದ್ಯ ವೃತ್ತಿಯಲ್ಲಿದ್ದ ರಘುನಾಥ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಉತ್ತರ ಕನ್ನಡ ಜಿಲ್ಲೆಗೆ ಸೇರಿದವರು. ಮನೆಮಾತು ಕೊಂಕಣಿಯಾದರೂ ಮರಾಠಿ, ಇಂಗ್ಲಿಷ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ಸಿರಸಿಯಲ್ಲಿ. ಧಾರವಾಡದಲ್ಲಿ ಕಾಲೇಜು ವ್ಯಾಸಂಗ. ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಬಿ.ಎ. ಪದವಿ. ಮುಂಬಯಿಯಲ್ಲಿ ಎಂ.ಎ. ವಿದ್ಯಾರ್ಥಿಯಾಗಿದ್ದಾಗ ರೋಡ್ಸ್ ವಿದ್ಯಾರ್ಥಿ ವೇತನದಿಂದ ಇಂಗ್ಲೆಂಡ್‌ಗೆ ಪ್ರಯಾಣ. ಆಕ್ಸ್‌ಫರ್ಡ್‌ನಲ್ಲಿ ಆಕ್ಸ್‌ಫರ್ಡ್ ಯೂನಿಯನ್ನಿನ ಅಧ್ಯಕ್ಷ ಪದವಿ. ಇವರ ಕಾಲದಲ್ಲಿ ಮಹಿಳೆಯರಿಗೂ ಯೂನಿಯನ್ನಿನಲ್ಲಿ ದೊರೆತ ಪ್ರವೇಶ. ಭಾರತಕ್ಕೆ ಹಿಂದಿರುಗಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಮದರಾಸು ಶಾಖೆಯ ಉಪವ್ಯವಸ್ಥಾಪಕ, ವ್ಯವಸ್ಥಾಪಕರ ಹುದ್ದೆ. ನಡುವೆ ‘ಮದ್ರಾಸ್ ಪ್ಲೇಯರ್ಸ್‌’ ನಾಟಕ ಸಂಸ್ಥೆಯ ಸಂಪರ್ಕ. ಪುರಾಣದ ಯಯಾತಿಯನ್ನು ಆಧುನಿಕ ದೃಷ್ಟಿಕೋನದಿಂದ ಬರೆದ ಯಯಾತಿ, ವಾದಗ್ರಸ್ತ ಸುಲ್ತಾನನ ಸುತ್ತ ಹೆಣೆದ ತುಘಲಕ್, ಹೋಮಿಬಾಬಾ ಸ್ಕಾಲರ್‌ಶಿಪ್ ಪಡೆದ ಅವಯಲ್ಲಿ ರಚಿಸಿದ ಹಯವದನ, ಜಾನಪದ ಕಥೆಯಾಧಾರಿತ ನಾಗಮಂಡಲ ಮತ್ತು ಹಿಟ್ಟಿನ ಹುಂಜ, ಅಂಜುಮಲ್ಲಿಗೆ, ತಲೆದಂಡ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳನ್ನು ಬರೆದು ನಿರ್ದೇಶಿಸಿದ ಖ್ಯಾತಿ. ತುಘಲಕ್ ನಾಟಕವು ಮರಾಠಿ ಮತ್ತು ಹಿಂದಿಯಲ್ಲೂ, ನಾಗಮಂಡಲ ಇಂಗ್ಲಿಷ್‌ಗೆ ಅನುವಾದವಾಗಿ ಅಮೆರಿಕದ ಖ್ಯಾತ ಗತ್ರಿ ಥಿಯೇಟರ್ಸ್‌ನಿಂದ ಪ್ರದರ್ಶನ. ಹೀಗೆ ಗಿರೀಶರ ನಾಟಕಗಳು ಬೇರೆ ಬೇರೆ ಭಾಷೆಗಳ ರಂಗಭೂಮಿಯಲ್ಲೂ  ಪ್ರಯೋಗಗೊಂಡು ವಿಮರ್ಶಕರ ಗಮನ ಸೆಳೆದಿದೆ. ನಾಟಕಕಾರರಷ್ಟೇ ಅಲ್ಲದೆ ಚಲನಚಿತ್ರ ರಂಗದಲ್ಲೂ ಪಡೆದ ಖ್ಯಾತಿ. ಸಂಸ್ಕಾರ ಚಲನಚಿತ್ರದ ಚಿತ್ರಕಥೆ ಸಂಭಾಷಣೆ, ಮುಖ್ಯನಟ. ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಚಿತ್ರವನ್ನು ಬಿ.ವಿ.ಕಾರಂತರೊಡನೆ ನಿರ್ದೇಶನ. ಕಾಡು, ಒಂದಾನೊಂದು ಕಾಲದಲ್ಲಿ  ಹಿಂದಿಯಲ್ಲಿ ಉತ್ಸವ್, ಗೋಧೂಳಿ ನಿರ್ದೇಶನ. ಹಿಂದಿ ಚಿತ್ರ ನಿಶಾಂತ್, ಕನ್ನಡದ ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ್ ಮುಂತಾದುವುಗಳಲ್ಲಿ ಅಭಿನಯ. ಕನಕ-ಪುರಂದರ, ದ.ರಾ.ಬೇಂದ್ರೆ, ಸೂಫಿಪಂಥ ಸಾಕ್ಷ್ಯಚಿತ್ರ. ‘ಚೆಲುವಿ’ ಪರಿಸರ ವಿನಾಶ ಕುರಿತ ಕಿರುಚಿತ್ರ. ಹಲವಾರು ಹುದ್ದೆಗಳಲ್ಲಿ ಕಾರ‍್ಯ ನಿರ್ವಹಣೆ-ಪುಣೆಯ ಫಿಲ್ಸ್ ಇನ್ಸ್‌ಸ್ಟಿಟ್ಯೂಟ್ ನಿರ್ದೇಶಕರಾಗಿ, ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾಗಿ, ಶಿಕಾಗೊ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ, ಕೇಂದ್ರ ನಾಟಕ ಅಕಾಡಮಿ ಅಧ್ಯಕ್ಷರಾಗಿ ಕಾರ‍್ಯನಿರ್ವಹಣೆ. ಅರಸಿ ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಗ್ರಂಥಲೋಕದ ವರ್ಷದ ವ್ಯಕ್ತಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಯಸೂರ‍್ಯ ನಾರಾಯಣಪ್ಪ – ೧೯೩೩ ಯಲಗುರೇಶ ಸಂಕನಾಳ – ೧೯೫೬

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top