ಗುರುರಾಜ ಹೊಸಕೋಟೆ

Home/Birthday/ಗುರುರಾಜ ಹೊಸಕೋಟೆ
Loading Events

೨೬.೦೫.೧೯೪೮ ಜಾನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಹುಟ್ಟಿದ್ದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ. ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮ ಜಾನಪದ ಹಾಡುಗಾರ್ತಿ. ಓದಿದ್ದು ಪಿ.ಯು.ವರೆಗೆ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಆಸಕ್ತರಾದದ್ದು ಜಾನಪದ ಹಾಡುಗಾರಿಕೆಯ ಕಡೆಗೆ. ಶಾಲೆಯಲ್ಲಿದ್ದಾಗೇ ಜಾನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯ ಚಟ ಪ್ರಾರಂಭ. ಇತರ ಶಾಲೆಗಳಿಗೂ ಹೋಗಿ ಜಾನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜಾನಪದ ಹಾಡುಗಳ ರಚನೆ, ಹಾಡುಗಾರಿಕೆಯಿಂದ ಪಡೆದ ಪ್ರಸಿದ್ಧಿ. ಕರ್ನಾಟಕದ ಹೆಸರಾಂತ ಧ್ವನಿಸುರುಳಿ ಕಂಪನಿಗಳಿಗೆ ಬರೆದ ೬೦೦ ಕ್ಕು ಹೆಚ್ಚು ಗೀತೆಗಳು. ೧೯೬೯ ರಲ್ಲಿ ರಬಕವಿಯಲ್ಲಿ ನಡೆದ ಗಣೇಶೋತ್ಸವದಲ್ಲಿ ನೀಡಿದ ಪ್ರಥಮ ಕಾರ್ಯಕ್ರಮ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಸಿಕೊಟ್ಟ ಕಾರ್ಯಕ್ರಮಗಳು. ಹೊರರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ತಮಿಳುನಾಡು, ಆಂಧ್ರದಲ್ಲೂ ನಡೆಸಿಕೊಟ್ಟ ಕಾರ್ಯಕ್ರಮಗಳು. ಸ್ನೇಹಜೀವಿ, ಕೈಬೀಸಿ ಕರೆವಾ, ಉತ್ತರ ಕರ್ನಾಟಕದ ಜನಪ್ರಿಯ ಹಾಡುಗಳು ಕವನ ಸಂಕಲನಗಳ ಪ್ರಕಟಣೆ. ಸೊಕ್ಕುತಂದ ಸೋಲು, ಸುಮ್‌ಸುಮ್ನೆ, ಅದೇನ್ ಹೇಳ್ರೀ, ಹೇಳಕಾಗಲ್ಲ ಎಂಬ ನಾಟಕಗಳನ್ನು ಬರೆದು ನೂರಾರು ಬಾರಿ ಕಂಡ ರಂಗ ಪ್ರಯೋಗ. ಸಿನಿಮಾದ ಹುಚ್ಚಿನಿಂದ ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’. ಇವರ ಜಾಯಮಾನಕ್ಕೆ ಒಗ್ಗದೆ, ಸಂಗ್ಯಾಬಾಳ್ಯ,  ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ೩೫ ಚಲನಚಿತ್ರಗಳಿಗೆ ದೊರೆತ ಹಾಡುವ ಅವಕಾಶ. ಓ ಗುಲಾಬಿ, ಒಡ ಹುಟ್ಟಿದವರು, ಅಗ್ರಹಾರ ಮುಂತಾದ ೮ ಚಿತ್ರಗಳಿಗೆ ಗೀತೆ ರಚನೆಯ ಅವಕಾಶ. ಕೆಲವು ಚಿತ್ರಗಳಲ್ಲಿ ನಟರಾಗಿಯೂ ಪಡೆದ ಪ್ರಸಿದ್ಧಿ. ೧೯೮೩-೮೫ ರವರೆಗೆ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯ. ಜಾನಪದ ಗಾನ ಸರಿ, ಜಾನಪದ ಕಲಾನಿಧಿ, ಜಾನಪದ ಕಲಾಕೌಸ್ತುಭ, ಜಾನಪದ ಕೋಗಿಲೆ, ಜಾನಪದ ಸಾರ್ವಭೌಮ, ಜಾನಪದ ನಿಧಿ ಮುಂತಾದ ಬಿರುದು ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಚನ್ನವೀರೇಶ ಸಂಪಗಿ – ೨೯೪೦ ವೇಣುಗೋಪಾಲ್, ನಿಜ – ೧೯೭೬.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top