ಗೊ.ರು. ಚನ್ನಬಸಪ್ಪ

Home/Birthday/ಗೊ.ರು. ಚನ್ನಬಸಪ್ಪ
Loading Events

೧೮-೫-೧೯೩೦ ಜಾನಪದ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗೊ.ರು.ಚ.ರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಗೊಂಡೇದಹಳ್ಳಿ. ತಂದೆ ರುದ್ರಪ್ಪ ಗಿರಿಗೌಡರು, ತಾಯಿ ಅಕ್ಕಮ್ಮ. ವಿದ್ಯಾರ್ಥಿ ಜೀವನದಿಂದಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿ. ೧೯೪೮ರಲ್ಲಿ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭ. ಹಲವಾರು ಸರಕಾರಿ ಇಲಾಖೆಗಳಲ್ಲಿ ಸೇವೆ. ಶಿಕ್ಷಣ ಇಲಾಖೆ, ಅಭಿವೃದ್ದಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಾರ್ತಾ ಮತ್ತು ಪ್ರಚಾರ ಇಲಾಖೆ…ಹೀಗೆ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ. ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯ ಪ್ರಕಟಣಾ ವಿಭಾಗದಲ್ಲಿ ಉಪನಿರ್ದೇಶಕರಾಗಿ ೧೯೮೮ರಲ್ಲಿ ನಿವೃತ್ತಿ. ಸರ್ಕಾರಿ ಸೇವೆಯಲ್ಲಿದ್ದರೂ ಸಾಹಿತ್ಯದೆಡೆಗೆ ಹರಿದ ಒಲವು. ಗ್ರಾಮೀಣ ಬದುಕಿನೆಡೆಗೆ ವಿಶೇಷ ಒಲವು. ಜಾನಪದ ಆಸಕ್ತಿಯ ಕ್ಷೇತ್ರ. ಜಾನಪದ ಸಂಪತ್ತನ್ನು ಸಂಗ್ರಹಿಸಿ ಕಾಪಾಡುವಲ್ಲಿ ಅಪಾರ ಶ್ರಮ. ಕರ್ನಾಟಕ ಜಾನಪದ ಸಮ್ಮೇಳನವನ್ನು ಸಂಘಟಿಸಿದ ರೂವಾರಿ. ೧೯೬೭ರಲ್ಲಿ ತರೀಕೆರೆಯಲ್ಲಿ ನಡೆದ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಕೃತಿ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಗ್ರಂಥದ ಸಂಪಾದಕರು. ಕೆ.ಆರ್. ಲಿಂಗಪ್ಪ ಅಭಿನಂದನಾ ಸಮಿತಿ ಪ್ರಕಟಿಸಿದ ‘ಗ್ರಾಮಜ್ಯೋತಿ’ ಇವೆರಡೂ ಕೃತಿಗಳೂ ಗೊ.ರು.ಚ.ರವರು ಸಂಪಾದಿಸಿ ವಿಶಿಷ್ಟ ಆಕರಗ್ರಂಥಗಳು. ಜಾನಪದ ವಸ್ತುವನ್ನಾಧರಿಸಿ ಬರೆದ ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ‍್ಯಾವೋ ರಂಗಭೂಮಿಯ ಮೇಲೆ ಅಪೂರ್ವ ಯಶಸ್ಸು ಕಂಡ ನಾಟಕಗಳು. ವಿಭೂತಿ, ದಾಸೋಹ, ಸೇವಾ ಸಂಪದ ಮೊದಲಾದ ವಿಶಿಷ್ಟ ಕೃತಿರಚನೆ. ಅನುವಾದ-ಚೆಗೆವಾರ ಇವರಿಗೆ ಖ್ಯಾತಿ ತಂದ ಕೃತಿ. ವಾರ್ತಾ ಇಲಾಖೆಯ ‘ಪಂಚಾಯತ್ ರಾಜ್ಯ’, ‘ಜನಪದ’ ಮಾಸಪತ್ರಿಕೆಗಳ ಸಹಾಯಕ ಸಂಪಾದಕರಾಗಿ ಪರಿಷತ್ ಪತ್ರಿಕೆ, ಜಾನಪದ ಜಗತ್ತು ಪತ್ರಿಕೆಗಳ ಸಂಪಾದಕರ ಜವಾಬ್ದಾರಿ. ಚಿತ್ರರಂಗದಲ್ಲೂ ಗಮನಾರ್ಹ ಸಾಧನೆ. ಕನ್ನಡ ಸಾಹಿತ್ಯ ಪರಿಷತ್ತು, ವಜ್ರಮಹೋತ್ಸವ, ಕರ್ನಾಟಕ ಜಾನಪದ ಕಲೆ, ಕನ್ನಡ ಪತ್ರಿಕೋದ್ಯಮ, ಸುತ್ತೂರ ಸಿರಿ, ಮೊದಲಾದ ೪೦ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾಡಿನಾದ್ಯಂತ ಪ್ರವಾಸ. ಸಾಹಿತ್ಯಾಭಿಮಾನಿಗಳಿಂದ ಏಳೆಂಟು ಲಕ್ಷರೂ ಸಂಗ್ರಹಣೆ. ಪರಿಷತ್ತಿನ ಸಿಬ್ಬಂದಿಯನ್ನು ಅನುದಾನದ ವ್ಯಾಪ್ತಿಗೆ ತಂದ ಕೀರ್ತಿ ಸಾಂಸ್ಕೃತಿಕ ಕಾರ‍್ಯಕ್ರಮ ಗೀತ-ಸಂಗೀತ, ಕಾವ್ಯ-ಕಾವೇರಿ ಪ್ರಾರಂಭಿಸಿದ ಹೆಗ್ಗಳಿಕೆ. ವಿದೇಶಿ ಕನ್ನಡಿಗರ ಆಹ್ವಾನದ ಮೇರೆಗೆ ಅಮೆರಿಕಾ ಭೇಟಿ. ಪರಿಷತ್ತಿಗಾಗಿ ನಿ ಸಂಗ್ರಹಣೆ. ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ‍್ಯನಿರ್ವಹಣೆ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು. ೬೦ನೇ ಹುಟ್ಟುಹಬ್ಬದಂದು ಅರ್ಪಿಸಿದ ಹಣವನ್ನು ಗೊರುಚ ಗ್ರಾಮ ವಿಕಾಸನ ಪ್ರತಿಷ್ಠಾನಕ್ಕೆ ಕೊಡುಗೆ. ಗೊಂಡೇದಹಳ್ಳಿ ಪ್ರಗತಿಗಾಗಿ ಕಾರ‍್ಯಕ್ರಮ.   ಇದೇ ದಿನ ಹುಟ್ಟಿದ ಸಾಹಿತಿಗಳು : ಡಾ. ಶ್ರೀ. ವೆಂಕಟರಮಣ – ೧೯೪೫ ಶಾಮಸುಂದರ ಬಿದರ ಕುಂದಿ – ೧೯೪೭ ಚಂದ್ರಶೇಖರ ತಾಳ್ಯ – ೧೯೪೯ ತುರವೇಕೆರೆ ಪ್ರಸಾದ್ – ೧೯೬೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top