Loading Events

« All Events

  • This event has passed.

ಗೌರೀಶ ಕಾಯ್ಕಿಣಿ

September 2

೧೨..೧೯೧೨ ೧೪.೧೧.೨೦೦೨ ಕನ್ನಡನಾಡಿನ ಹಿರಿಯ ಚಿಂತಕ, ವಿಚಾರವಾದಿ, ಬರೆಹಗಾರ, ಕಡಲತೀರದ ಜ್ಞಾನಜ್ಯೋತಿ ಎನಿಸಿದ್ದ ಗೌರೀಶ ಕಾಯ್ಕಿಣಿಯವರು ಹುಟ್ಟಿದ್ದು ಗೋಕರ್ಣದಲ್ಲಿ ೧೯೧೨ರ  ಸೆಪ್ಟಂಬರ್ ೧೨ರಂದು. ತಂದೆ ವಿಜಾಪುರದಲ್ಲಿ ತಹಸೀಲ್‌ದಾರರಾಗಿದ್ದ ವಿಠಲರಾವ್‌ ಕಾಯ್ಕಿಣಿ,  ತಾಯಿ ಸೀತಾಬಾಯಿ. ಹುಟ್ಟಿದ ಮೂರು ತಿಂಗಳಲ್ಲೆ ತಂದೆಯ ಪ್ರೀತಿಯಿಂದ ವಂಚಿತರಾದ ಗೌರೀಶರು ಬೆಳೆದದ್ದು ತಾಯಿಯ ತಾಯಿ (ಸಾವಿತ್ರಿಬಾಯಿ) ಪ್ರೀತಿಯ ಮಡಿಲಲ್ಲಿ. ಮನೆಗೆ ಬಂದು ಹೋಗುತ್ತಿದ್ದ ಆಧ್ಯಾತ್ಮಿಕ ವಲಯದ ಸಜ್ಜನರ ಸಹವಾಸದಲ್ಲಿ ಬೆಳೆದ ಬದುಕು. ಪ್ರೌಢಶಾಲೆ ಓದಿದ್ದು ಕುಮಟಾದಲ್ಲಿ. ಕಾಲೇಜಿಗೆ ಸೇರಿದರಾದರೂ ಅನಾರೋಗ್ಯದಿಂದ ಓದುಮುಂದುವರೆಸಲಾಗದೆ ಬಂಕಿಕೊಡ್ಲದ ಆನಂದಾಶ್ರಮ, ಗೋಕರ್ಣದ ಭದ್ರಕಾಳಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ೧೯೭೬ ರಲ್ಲಿ ನಿವೃತ್ತಿ, ಕವಿ ಸು.ರಂ. ಎಕ್ಕುಂಡಿ ಇವರ ಸಹೋದ್ಯೋಗಿಗಳು. ಕನ್ನಡದ ಹಿರಿಯ ಬರಹಗಾರರಾದ ಶಂಬಾ ಜೋಶಿ, ಶಿವರಾಮ ಕಾರಂತ, ಬೇಂದ್ರೆ, ಮಾಸ್ತಿ, ಶ್ರೀರಂಗ ಮುಂತಾದವರುಗಳ ಪ್ರಭಾವಕ್ಕೊಳಗಾಗಿ ವ್ಯಕ್ತಿತ್ವವನ್ನೂ ರೂಪಿಸಿಕೊಂಡಿದ್ದರೆ, ಇವರಿಂದ ಪ್ರೇರಿತರಾದ ಬರಹಗಾರರೆಂದರೆ ಗಂಗಾಧರ ಚಿತ್ತಾಲ, ಯಶವಂತ ಚಿತ್ತಾಲ, ಶಾಂತಿನಾಥದೇಸಾಯಿ, ಅರವಿಂದನಾಡಕರ್ಣಿ, ಪಿ.ವಿ.ಶಾಸ್ತ್ರಿ ಕಿಬ್ಬಳ್ಳಿ ಮುಂತಾದವರುಗಳು. ಇವರ ಸಾಹಿತ್ಯ ರಚನೆಗೆ ಇಂಬು ಕೊಟ್ಟವರೆಂದರೆ-ಮನೆಯಲ್ಲಿ ಸದಾ ನಡೆಯುತ್ತಿದ್ದ ಪುರಾಣ ಪುಣ್ಯಕಥೆಗಳು, ರಾಮಾಯಣ-ಮಹಾಭಾರತಾದಿ ಪುಣ್ಯ ಶ್ರವಣಗಳು, ಅಖಂಡ ಸತ್ಸಂಗ, ಅಧ್ಯಾತ್ಮಿಕ ವ್ಯಾಸಂಗದಿಂದ ಭಜನೆಯಲ್ಲಿ ಪಾಲ್ಗೊಂಡಾಗ ಸಂಗೀತದ ಅಭಿರುಚಿಯೂ ಬೆಳೆಯತೊಡಗಿತು. ಸಾವಿತ್ರಿಬಾಯಿಯವರು ಹೇಳಿಕೊಳ್ಳುತ್ತಿದ್ದ ದೇವರ ಸ್ತೋತ್ರಗಳಿಂದ ಪ್ರಭಾವಿತರಾದರು. ಮರಾಠಿಭಾಷೆಯು ತಿಳಿದಿದ್ದು ಭಜನೆಗಳನ್ನೂ ರಚಿಸುವಷ್ಟು ಜ್ಞಾನ ಸಂಪಾದಿಸಿದ್ದರು. ಅವರು ಲೇಖನಿ ಹಿಡಿದಿದ್ದು ಕವಿಯಾಗಿ, ಇಪ್ಪತ್ತು ಮರಾಠಿ ಗೀತೆಗಳು, ಮೂರು ಕನ್ನಡ ಗೀತೆಗಳ ಸಂಗ್ರಹ ‘ಶಾಂಡಿಲ್ಯ ಪ್ರೇಮಸುಧಾ’ಸಂಗ್ರಹವನ್ನೂ ಪ್ರೌಢಶಾಲೆಯಲ್ಲಿದ್ದಾಗಲೇ ಪ್ರಕಟಿಸಿದ್ದರು . ಗೋಕರ್ಣದಂತಹ ಸಣ್ಣ ಗ್ರಾಮದಲ್ಲಿದ್ದರೂ ಅಧ್ಯಯನದ ಹರವು ಬಹುದೊಡ್ಡದೆ. ಸಾಗರದಾಚೆಯ ವಿಚಾರಗಳನ್ನು ತಮ್ಮದಾಗಿಸಿಕೊಂಡು ಶಿಕ್ಷಣದಿಂದ ವಿಜ್ಞಾನದವರೆಗೆ, ಕಾವ್ಯದಿಂದ ವೈಚಾರಿಕದವರೆಗೆ ಬರೆಯದ ವಿಷಯಗಳೇ ಇಲ್ಲ. ಮರಾಠಿಯಲ್ಲಿ ಬರೆಯಲು ಪ್ರಾರಂಭಿಸಿದ ಗೌರೀಶರು ಕನ್ನಡದಲ್ಲಿ ಬರೆಯತೊಡಗಿದ್ದು ಸಿರಸಿಯ ‘ನಂದಿನಿ’ ವಾರಪತ್ರಿಕೆಗೆ ಬರೆದ ‘ಜಾಗತಿಕ ಯುದ್ಧಗಳು ಏಕೆ ಜರುಗುವುವು’. ಇದು ಅವರ ಪ್ರಥಮ ಕನ್ನಡ ಬರಹ . ನಂತರ ಧಾರವಾಡದಿಂದ ಪ್ರಕಟವಾಗುತ್ತಿದ್ದ ಜಯಂತಿ ಮಾಸಪತ್ರಿಕೆ (ಸಂ.ಬೆಟಗೇರಿ ಕೃಷ್ಣಶರ್ಮ) ಯಲ್ಲಿ ‘ಕಲೆಯ  ನೆಲೆ ಮತ್ತು ಬೆಲೆ’ ಎಂಬ ಲೇಖನ ಬರೆದರು. ಹರಿತ ವಿಚಾರವಾದವನ್ನೂ ರೂಪಿಸಿಕೊಂಡಿದ್ದ ಗೌರೀಶರು ಗಾಂಧಿವಾದದಿಂದ ಪ್ರಭಾವಿತರಾದವರು. ಅಸಹಕಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮುಂದೆ ಮಾರ್ಕ್ಸಿಸ್ಟ್‌ ಪ್ರಭಾವಕ್ಕೆ ಒಳಗಾದರು. ದಿನಕರ ದೇಸಾಯಿಯವರ ಸಂಪರ್ಕಕ್ಕೆ ಬಂದ ನಂತರ ಸಮಾಜವಾದದ ನಿಲುವನ್ನೂ ಬೆಂಬಲಿಸಿದರು. ನಲವತ್ತರ ದಶಕದಲ್ಲಿ ಮಾನವತಾವಾದಕ್ಕೆ ಒಲಿಕಿದು,  ಎಂ.ಎನ್‌.ರಾಯ್‌ ರವರಿಂದ ಪ್ರಭಾವಿತರಾಗಿ ದಾಮೋದರ ಚಿತ್ತಾಲರು, ಎಸ್‌.ಆರ್. ದೊಮ್ಮಾಯಿಯವರು ಕೂಡಿ ನಡೆಸುತ್ತಿದ್ದ ರಾಯಿಸ್ಟ್‌ ಪತ್ರಿಕೆಯ ಕನ್ನಡದ ‘ಬೆಳಕು’ ಸಂಪಾದಕರಾಗಿಯೂ ಕೆಲಕಾಲ ಕಾರ್ಯನಿರ್ವಹಿಸಿದರು. ಅಡುಗೆಭಟ್ಟ, ವೈಶ್ಯಾನರ ಮುಂತಾದ ಗುಪ್ತನಾಮಗಳಿಂದ ‘ಜನಸೇವಕ’ (ದಿನಕರದೇಸಾಯಿಯವರ ವಾರಪತ್ರಿಕೆ), ‘ನಾಗರಿಕ’ (ಹೊನ್ನಾವರದಲ್ಲಿ ನಡೆಸುತ್ತಿದ್ದ ಜಿ.ಆರ್ ಪಾಂಡೇಶ್ವರರ ಪತ್ರಿಕೆ) ಮುಂತಾದ ಪತ್ರಿಕೆಗಳಿಗೆ ಪ್ರಧಾನ ಅಂಕಣ ಬರಹಗಾರರಾಗಿದ್ದರು. ಜನಸೇವಕ ಪತ್ರಿಕೆಗಂತೂ ಎರಡು ಮೂರು ಅಂಕಣಗಳನ್ನೂ ಇವರೇ ಬರೆದು ತುಂಬುತ್ತಿದ್ದರು. ಕನ್ನಡದಲ್ಲಿ ಸಾಹಿತ್ಯದ ಕೊರತೆಯನ್ನು ತುಂಬಲು ಸಾಹಿತ್ಯ ಸೃಷ್ಟಿಗೆ ತೊಡಗಿದ ಗೌರೀಶರು ಬರೆದಿದ್ದು ಹಲವಾರು ಕೃತಿಗಳು. ವಿಚಾರ ಸಾಹಿತ್ಯ ಬೆಳೆದರೆ ಕನ್ನಡ ಸಾಹಿತ್ಯ ಬೆಳೆದಂತೆ ಎಂದು ಯೋಚಿಸಿ ವಿಚಾರ ಜಾಗೃತಿಗೆ ಪುಸ್ತಕಗಳನ್ನು ಪ್ರಕಟಿಸಲು ಬುರ್ಲಿ ಬಿಂದುಮಾಧವರಾಯರು ಧಾರವಾಡದಲ್ಲಿ ಮಿಂಚಿನಬಳ್ಳಿ ಪ್ರಕಾಶನ ಸಂಸ್ಥೆಯನ್ನು ತೆರೆದಿದ್ದು ಗೌರೀಶರ ಮನೋವಿಜ್ಞಾನದ ರೂಪರೇಷೆ , ಮಾರ್ಕ್ಸ್‌ವಾದ, ಪ್ರಶ್ಚಿಮದ ಪ್ರತಿಬೆ ಭಾಗ ೧, ೨; ಸತ್ಯಾರ್ಥಿ, ಭಾರತೀಯ ವಿಜ್ಞಾನಿಗಳು ಭಾಗ-೧, ಮುಂತಾದ ಏಳು ಪುಸ್ತಕಗಳನ್ನೂ ಪ್ರಕಟಿಸಿದರು. ತಮ್ಮ ಜೀವನ ದೃಷ್ಟಿಯನ್ನು ವಿವರಿಸುತ್ತ “ಸುಖಕ್ಕೆ ಮೂಲ ಮನಶ್ಶಾಂತಿ, ಆತ್ಮ ವಿರೋಧಿಯಾಗದಂತಹ ಬದುಕಿನಿಂದ ಮನಶ್ಶಾಂತಿಯನ್ನೂ ಕಾಣಬಹುದು. ಜೀವನದಲ್ಲಿ ಹೀನವೆನಿಸದ ಹದವಾದ ಬಾಳಿನಿಂದ ಸಮ್ಯಕ್‌ ದೃಷ್ಟಿಯನ್ನು ಬೆಳೆಸಿಕೊಳ್ಳಬಹುದು” ಎಂಬುದು ಗೌರೀಶರ ವಿಚಾರವಾದದ ಸಾರಾಂಶ. ವಿಚಾರವಾದದ ಬಗ್ಗೆ ಬರೆದಂತೆ ನಾಟಕ, ರೇಡಿಯೋ, ನಾಟಕಗಳ ಬಗ್ಗೆಯೂ ಹಲವಾರು ಕೃತಿ ರಚಿಸಿದ್ದಾರೆ. ಕರುಣಾಮೃತ (ರೇಡಿಯೋ ನಾಟಕ), ದೇವಿಕೊಟ್ಟಬೆಳಕು  (ದಲಿತನಾಟಕ), ಒಲುವೆಯ ಒಗಟು, ಮತ್ತು ಅತ್ತೆಗೆಲತ್ತೆ (ಪೂರ್ಣಪ್ರಮಾಣದ ರಂಗ ನಾಟಕಗಳು) ಉತ್ತಮನಾಟಕಗಳೆನಿಸಿವೆ. ಮಾರ್ಕ್ಸ್‌ವಾದದ ಮೇಲೆ ಬರೆದಷ್ಟೇ ಪ್ರೌಢವಾಗಿ ವೇದ, ಉಪನಿಷತ್ತುಗಳ ಮೇಲೆ, ನಾಸ್ತಿಕ ವಾದದ ಬಗ್ಗೆ ಬರೆದಂತೆ ಶಿವರಾತ್ರಿ-ನವರಾತ್ರಿ ಹಬ್ಬಗಳ ಬಗ್ಗೆಯೂ ಬರೆಯಬಲ್ಲ ಧೀಮಂತ ಸಾಹಿತಿ. ಕೊಂಕಣಿ ತಾಯಿನುಡಿಯಾದರೂ ಅಗತ್ಯಭಾಷೆಯಾಗಿ ಇಂಗ್ಲಿಷ್‌, ಕಲಿತರೆ, ಹಿಂದಿ ಭಾಷೆ ಆಸಕ್ತ ವಿಷಯ, ಮರಾಠಿ ಸಹಜವಾಗಿ ಲಭಿಸಿದ್ದು, ಕನ್ನಡದ ಬಗ್ಗೆ ಹೇಳಬೇಕಾಗಿಲಯೇ ಇಲ್ಲ- ಹೀಗೆ ಐದಾರು ಭಾಷಾ ಪಾಂಡಿತ್ಯದಿಂದ ತತ್ತ್ವಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮಾನವಿಕ ಶಾಸ್ತ್ರಗಳ ಬಗ್ಗೆ ಪ್ರೌಢಲೇಖನಗಳನ್ನು ಬರೆಯಬಲ್ಲವರಾಗಿದ್ದರು. ಸಾಹಿತ್ಯದ ಭಾಷಾ ಬೆಸುಗೆಗಾಗಿ ಕೆಲಸಮಾಡಿರುವ ಗೌರೀಶರು ಮರಾಠಿಯಿಂದ ದುರ್ಗಾಭಾಗವತರ ವ್ಯಾಸಪರ್ವವನ್ನೂ ಕನ್ನಡಕ್ಕೆ ತಂದಂತೆ, ಕನ್ನಡದಿಂದ ಮರಾಠಿ ಭಾಷೆಗೂ ಹಲವಾರು ಕೃತಿಗಳನ್ನೂ ಅನುವಾದಿಸಿದ್ದು ಅವುಗಳಲ್ಲಿ ಡಾ.ರಂ.ಶ್ರೀ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯು ಬಹು ಮುಖ್ಯವಾದುದು. ಅವರ ಬರಹಗಳಲ್ಲಿ, ಭಾಷಣಗಳಲ್ಲಿ ಹಾಸ್ಯಪ್ರಜ್ಞೆಯನ್ನು ಧಾರಾಳವಾಗಿ ಕಾಣಬಹುದಾಗಿತ್ತು. ಒಮ್ಮೆ ಯಾರೋ ಒಬ್ಬರು ‘ನೀವು ಸ್ವಾತಂತ್ರ್ಯ ಹೋರಾಟಗಾರರೇ?’ ಎಂದಾಗ, ‘ಮದುವೆಯಾದ ಮೂವತ್ತು ವರ್ಷಗಳಿಂದಲೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇನೆ’ ಎಂದರಂತೆ. ಮತ್ತೊಮ್ಮೆ ಪಾಟೀಲ ಪುಟ್ಟಪ್ಪನವರು ಸಭೆಯ ಅಧ್ಯಕ್ಷತೆ ವಹಿಸಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬರಲಾಗಲ್ಲಿಲ್ಲ. ಗೌರೀಶರನ್ನೂ ಆ ಸ್ಥಾನಕ್ಕೆ ಆಹ್ವಾನಿಸಿದಾಗ “ಇನ್‌ ಪ್ಲೇಸ್‌ ಆಫ್‌ ಪುಟ್ಟಪ್ಪ, ಐ ಯಾಮ್‌ ಪುಟಪ್‌” ಎಂದು ಸಭೆಯಲ್ಲಿದ್ದವರನ್ನೂ ನಗಿಸಿದರಂತೆ. ವಿಚಾರವಾದ, ನವಮಾನವತಾವಾದ, ನಾಸ್ತಿಕನು ಮತ್ತು ದೇವರು, ಪ್ರೀತಿ, ಬಾಳಿನಗುಟ್ಟು, ಮನೋವಿಜ್ಞಾನದ ರೂಪರೇಷೆಗಳು ಮುಂತಾದ ವಿಚಾರವಾದ ಮತ್ತು ಮಾನವಿಕ ಗ್ರಂಥಗಳಲ್ಲದೆ ಬೇಂದ್ರೆ, ಕಣವಿ, ದಿನಕರ ದೇಸಾಯಿ ಮುಂತಾದವರ ಕಾವ್ಯ ಸಮೀಕ್ಷೆಯನ್ನು ನಡೆಸಿದ್ದು ಅವರು ರಚಿಸಿರುವ ಗ್ರಂಥಗಳ ಒಟ್ಟು ಸಂಖ್ಯೆಯೇ ೬೦ ಕ್ಕೂ ಮಿಕ್ಕಿದೆ. ಗೌರೀಶರ ಸಮಗ್ರ ಸಾಹಿತ್ಯವನ್ನೂ ಅಂಕೋಲದ ವಿಷ್ಣುನಾಯ್ಕರು ತಮ್ಮ ರಾಘವೇಂದ್ರ ಪ್ರಕಾಶನದಲ್ಲಿ ೧೦ ಸಂಪುಟಗಳಲ್ಲಿ ಹೊರತಂದಿದ್ದಾರೆ. ೬೭ ವರ್ಷ ತುಂಬಿದ ಸಂದರ್ಭದಲ್ಲಿ ೧೯೭೯ ರಲ್ಲಿ ಅಭಿಮಾನಿಗಳು ಗೌರೀಶರಿಗೆ ಅರ್ಪಿಸಿದ ಗೌರವ ಗ್ರಂಥಗಳು ನೀಲಾಂಜನ ಹಾಗೂ ಗುಣಗೌರವ. ಪ್ರಖರ ವೈಚಾರಿಕತೆ, ಬಹುಮುಖ ಸಂವೇದನೆ, ಸಾಂಸ್ಕೃತಿಕ ಚಿಂತಕರಾಗಿದ್ದ ಗೌರೀಶರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಹೊನ್ನಾವರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಶಂಬಾವಿಚಾರ ವೇದಿಕೆ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳ ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ಗಳಿಸಿದ್ದ ಗೌರೀಶರು ಸಾಹಿತ್ಯ ಲೋಕದಿಂದ ನಿರ್ಗಮಿಸಿದ್ದು ೨೦೦೨ರ ನವಂಬರ್ ೧೪ರಂದು.

Details

Date:
September 2
Event Category: