ಚಂದ್ರಕಾಂತ ಕುಸನೂರ

Home/Birthday/ಚಂದ್ರಕಾಂತ ಕುಸನೂರ
Loading Events

೨೧.೧೦.೧೯೩೧ ಚಿತ್ರಕಲೆ, ಸಂಗೀತ, ಸಾಹಿತ್ಯ – ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಆಸಕ್ತರಾಗಿದ್ದು ಕೃತಿ ರಚಿಸುತ್ತಾ ಬಂದಿರುವ ಚಂದ್ರಕಾಂತರು ಹುಟ್ಟಿದ್ದು ಗುಲಬರ್ಗ ಜಿಲ್ಲೆಯ ಕಲುಬುರ್ಗ ತಾಲ್ಲೂಕಿನ ಕುಸನೂರಿನಲ್ಲಿ. ತಂದೆ ಮಾಸ್ತರಿಕೆ ಉದ್ಯೋಗದಲ್ಲಿದ್ದ ಗುಂಡೇರಾವ್, ತಾಯಿ ರಂಗೂಬಾಯಿ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಬಿ.ಎ. ಪದವಿಯವರೆಗೆ ಓದಿದ್ದು ಉರ್ದುಮಾಧ್ಯಮದ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ. ನಂತರ ಹಿಂದಿ ಸಾಹಿತ್ಯದಲ್ಲಿ ಎಂ.ಎ. ಪದವಿಗಳಿಸಿದರೆ ಬಿ.ಎಡ್. ಪದವಿಗಳಿಸಿದ್ದು ಇಂಗ್ಲಿಷ್‌ನಲ್ಲಿ. ಪ್ರಾಥಮಿಕ ಶಾಲಾ ಅಧ್ಯಾಪಕರಾಗಿ ಉದ್ಯೋಗವನ್ನಾರಂಭಿಸಿದ ಕುಸನೂರರು ಮಾಧ್ಯಮಿಕ, ಪ್ರೌಢಶಾಲಾ ಶಿಕ್ಷಕರಾಗಿ ಮೈಸೂರು ಮತ್ತು ರಾಯಚೂರಿನ ಹಿಂದಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ, ನಂತರ ಗುಲಬರ್ಗಾ ಜೂನಿಯರ್ ಕಾಲೇಜಿನಲ್ಲಿ, ಬಿ.ಎಡ್. ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಸಿದರು. ಹತ್ತು ವರ್ಷಗಳಕಾಲ ಬೆಳಗಾವಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿಯೂ ಕಾರ‍್ಯ ನಿರ್ವಹಿಸಿ ನಿವೃತ್ತರಾದರು. ಹಿಂದಿ, ಉರ್ದು, ಇಂಗ್ಲಿಷ್ ಮಾಧ್ಯಮಗಳಲ್ಲಿ ಓದಿದ ಕುಸನೂರರನ್ನು ಕನ್ನಡ ಸಾಹಿತ್ಯ ರಚನೆಗೆ ಎಳೆದು ತಂದದ್ದು ಒಂದು ವಿಶಿಷ್ಟ ಸಂದರ್ಭದಲ್ಲಿ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಗೋಲ್ಡನ್ ಜ್ಯೂಬಿಲಿ ಆಚರಣೆಯ ಕಾರ‍್ಯಕ್ರಮದ ಸಂದರ್ಭದಲ್ಲಿ ಬಹು ಭಾಷಾ ಕವಿ ಸಮ್ಮೇಳನವೊಂದನ್ನು ಏರ‍್ಪಡಿಸಿದ್ದು ಬೇಂದ್ರೆಯವರು ಅಂದು ಅಧ್ಯಕ್ಷತೆ ವಹಿಸಿದ್ದರು. ಕುಸನೂರರ ಹಿಂದಿ ಕವಿತೆಯನ್ನು ಮೆಚ್ಚಿದ ಬೇಂದ್ರೆಯವರು ಗುಲಬರ್ಗಾದಲ್ಲಿ ಹುಟ್ಟಿರುವ ನೀನು ಕ್ನಡದಲ್ಲಿ ಏಕೆ ಬರೆಯಬಾರದು? ಎಂದರು. ನಂತರ ಇವರ ಕನ್ನಡ ಸಾಹಿತ್ಯ ಸೃಷ್ಟಿಗೆ ಸಹಾಯ ಮಾಡಿದವರು ಸಿದ್ಧಲಿಂಗ ಪಟ್ಟಣಶೆಟ್ಟರವರಾದರೆ, ಬರೆದುದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಪ್ರಿಯರ ಗಮನಕ್ಕೆ ತಂದವರು ಶಾಂತರಸ ರವರು. ಕುಸನೂರರ ‘ನಂದಿಕೋಲು’ (ಕವನ ಸಂಕಲನ), ಚರ್ಚ್‌ಗೇಟ್ (ಕಾದಂಬರಿ) ಮತ್ತು ಹಳ್ಳ ಕೊಳ್ಳ ನೀರು (ನಾಟಕ), ಇವು ಮೂರು ಶಾಂತರಸರವರ ಸತ್ಯಸ್ನೇಹ ಪ್ರಕಾಶನದಿಂದಲೇ ಪ್ರಕಟಗೊಂಡವು. ಕುಸನೂರರ ಬರಹ ಹಾಗೂ ವ್ಯಕ್ತಿತ್ವದ ವಿಶೇಷವೆಂದರೆ ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಕನ್ನಡ ಭಾಷೆಗಳ ಮೇಲೆ ಸಮಾನ ಪ್ರಭುತ್ವ ಪಡೆದಿರುವುದರಿಂದ ಸಾಹಿತ್ಯ ರಚನೆಗೆ ಸಹಾಯಕವಾದವು. ಕನ್ನಡದಲ್ಲಿ ಅಸಂಗತ ನಾಟಕಗಳ ಅಲೆ ಎದ್ದಿರದ ಸಂದರ್ಭದಲ್ಲಿ ಅಬ್ಸರ್ಡ್ ಎಂಬ ಪದಕ್ಕೆ ‘ಅಸಂಗತ’ ಎಂದು ಹೆಸರಿಟ್ಟು ‘ಮೂರು ಅಸಂಗತ ನಾಟಕಗಳು’ ಎಂಬುದನ್ನು ಅಕ್ಷರ ಪ್ರಕಾಶನದಿಂದ ಪ್ರಕಟಿಸಿದರು. ನಂತರ ಸುರುಚಿ ಪ್ರಕಾಶನದಿಂದ ಪ್ರಕಟಗೊಂಡ ನಾಟಕಗಳು ‘ನಾಲ್ಕು ಅಸಂಗತ ನಾಟಕಗಳು’. ಈ ಸಂಕಲನಕ್ಕೆ ೧೯೭೨ರಲ್ಲಿಯೇ ನಾಟಕ ಅಕಾಡಮಿಯ ಬಹುಮಾನವನ್ನು ಗಳಿಸಿದರು. ನಮ್ಮ ಜನರ ಸಂಸ್ಕೃತಿ, ಕಲೆ, ಪ್ರೀತಿ – ವಿಶ್ವಾಸ, ಜೀವನ ವೈವಿಧ್ಯ ಮುಂತಾದ ಸತ್ವಗಳನ್ನುಪಯೋಗಿಸಿಕೊಂಡೆ ರಚಿತವಾದ ನಾಟಕಗಳಾದ ವಿದೂಷಕ, ಮನೆ, ಆನಿಬಂತಾನಿ, ರಿಹರ್ಸಲ್, ದಿಂಡಿ ಮುಂತಾದ ನಾಟಕಗಳು ಯಶಸ್ವಿ ಪ್ರಯೋಗವೆನಿಸಿ ನೂರಾರು ಪ್ರಯೋಗಗಳನ್ನು ಕಂಡಿವೆ. ಹೀಗೆ ಅಸಂಗತ ನಾಟಕಗಳನ್ನು ಕನ್ನಡಕ್ಕೆ ಕೊಟ್ಟವರಲ್ಲಿ ಮೊದಲಿಗರಾದಂತೆ ಜಪಾನಿನ ‘ಹೈಕು’ಗಳ ರೀತಿ ಕನ್ನಡದಲ್ಲಿ ರಚಿಸಿದ ಕೀರ್ತಿಯೂ ಕುಸನೂರರಿಗೆ ಸಲ್ಲುತ್ತದೆ. ಯಾವುದೇ ಭಾಷೆಯಲ್ಲಿ ಭಾಷಾತರಿಸಿದರೂ ಮೂಲದಲ್ಲಿರುವಂತೆ ಶಿಸ್ತನ್ನು ಕಾಯ್ದುಕೊಳ್ಳುವುದು ಅಸಾಧ್ಯದ ಸಂಗತಿ. ಜಪಾನಿನ ಹೈಕುಗಳಂತೆ ಕೂಡ ಶಿಸ್ತನ್ನು ಕಾಯ್ದುಕೊಳ್ಳಲಾಗದು ಎಂದು ಹೇಳುತ್ತಾ ಬಂದಿದ್ದರೂ ಮೂಲ ‘ಹೈಕು‘ವಿಗಿಂತ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಯಶಸ್ಸು ಕಂಡಿದ್ದಾರೆ. ‘ಕತ್ತಲೆಯಲ್ಲಿ ಬತ್ತಲೆಯಾಗಿ ತಿರುಗುತ್ತಿರುವ ನಮ್ಮ ಶೀಲ ಕನ್ನಿಕೆಗೆ ಬೆಳಕಿನ ಸೀರೆ ತರುವುದಿದೆ ಬರುವಿರಾ’ ಇಂತಹ ಹಲವಾರು ಹೈಕುಗಳನ್ನು ರಚಿಸಿದ್ದಾರೆ. ಅನುವಾದ ಕಲೆಯಲ್ಲಿಯೂ ಹಿಡಿತ ಸಾಧಿಸಿರುವ ಕುಸನೂರರು ಯು.ಆರ್. ಅನಂತಮೂರ್ತಿಯವರ ‘ಸಂಸ್ಕಾರ’ ಮತ್ತು ಕೃಷ್ಣ ಆಲನಹಳ್ಳಿಯವರ ‘ಕಾಡು’ ಕಾದಂಬರಿಗಳನ್ನು ಹಿಂದಿಗೆ ಸಮರ್ಥವಾಗಿ ಅನುವಾದಿಸಿದ್ದು, ಸಂಸ್ಕಾರ ಅನುವಾದಕ್ಕಾಗಿ ಭಾರತ ಸರಕಾರದ ಮತ್ತು ಉತ್ತರ ಪ್ರದೇಶದ ಹಿಂದಿ ಪ್ರತಿಷ್ಠಾನದ ಬಹುಮಾನ ಪಡೆದಿದ್ದಾರೆ. ಹಿಂದಿ ಭಾಷೆಯಲ್ಲಿ ಪ್ರಕಟವಾಗಿರುವ ಇವರ ಕಥಾಸಂಕಲನ ರೇಷಮ್ ಕಿ  ಗುಡಿಯಾ’ ಸಂಕಲನಕ್ಕೆ ಭಾರತ ಸರಕಾರದ ಬಹುಮಾನ ಲಭಿಸಿದೆ. ಕಲಾ ಕ್ಷೇತ್ರದಲ್ಲಿಯೂ ಸಮಾನ ಆಸಕ್ತರಾಗಿದ್ದು ಅನೇಕ ಕಲಾಕೃತಿಗಳನ್ನು ರಚಿಸಿದ್ದರೂ ಅದರ ಪ್ರದರ್ಶನವೆಂದರೆ ಹಿಂಜರಿಕೆಯೆ. ಕಲಾವಿದ ಸ್ನೇಹಿತನೊಬ್ಬನ ಒತ್ತಾಯಕ್ಕೆ ಕಟ್ಟುಬಿದ್ದು  ಮುಂಬಯಿ, ಕೋಲ್ಕತ್ತಾ ನಗರಗಳಲ್ಲಿ ಕಲಾ ಪ್ರದರ್ಶನವನ್ನು ಏರ‍್ಪಡಿಸಿದ್ದರು. ಚಿತ್ರಕಲೆಯ ಬಗ್ಗೆ ರಚಿಸಿದ ಅಪರೂಪದ ಕೃತಿ ಎಂದರೆ ‘ಕಲೆ ಅನುಭವ ಮತ್ತು ಅನುಭಾವ’. ವಿಮರ್ಶಕರು ಈ ಗ್ರಂಥವನ್ನು ಚಿತ್ರಕಲೆಯ ಸೌಂದರ್ಯ ಮೀಮಾಂಸೆ’ ಎಂದೆ ಹೊಗಳಿದ್ದಾರೆ. ಗುಲಬರ್ಗಾದ ಭೌಗೋಳಿಕ ಪರಿಸರ, ಆಡುಭಾಷೆ, ಮಧ್ಯಮವರ್ಗದ ಜನಜೀವನ, ಸಂಸ್ಕೃತಿಗಳನ್ನೊಳಗೊಂಡು ರಚಿಸಿದ ಕಾದಂಬರಿಗಳೆಂದರೆ ‘ಗೋಹರ್ ಜಾನ್’, ‘ಮಾಲತಿ ಮತ್ತು ನಾನು’, ‘ಕೆರೂರು ನಾಮ’ ಮುಂತಾದವುಗಳು. ಹೈದರಾಬಾದ್ ಕರ್ನಾಟಕದ ಆಡುಭಾಷೆಯ ಸೊಗಸಿನಿಂದ ಕೂಡಿದ ವಿಶಿಷ್ಟ ಕಾದಂಬರಿಗಳೆನಿಸಿವೆ. ವೇದ ಉಪನಿಷತ್ತುಗಳ ಬಗ್ಗೆ ತಿಳಿದಿರುವಂತೆ ಕುರಾನ್, ಬೈಬಲ್ ಬಗ್ಗೆಯೂ ವಿಶೇಷ ಕಾಳಜಿಯಿಂದ ಅಧ್ಯಯನ ನಡೆಸಿರುವ ಇವರ ಮಾತುಕಥೆಗಳ ಮಧ್ಯೆ ಗೋರಖನಾಥ, ಸಂತ ಜ್ಞಾನೇಶ್ವರ, ಕಬೀರ, ತುಳಸೀದಾಸರಂತೆ ಅನುಭಾವಿಗಳಾಧ ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ ಮುಂತಾದವರುಗಳಲ್ಲದೆ ಕಾಮು, ಕಾಫ್ಕ, ಓಶೋ ಬಗ್ಗೆಯೂ ನಿರರ್ಗಳವಾಗಿ ಮಾತನಾಡಬಲ್ಲರು. ಇವರ ಪ್ರತಿಭೆಗೆ ಒಂದೇವರ್ಷದಲ್ಲಿ ಲಲಿತಕಲಾ ಅಕಾಡಮಿ, ನಾಟಕ ಅಕಾಡಮಿ, ಸಾಹಿತ್ಯ ಅಕಾಡಮಿಗಳಿಂದ ಪುರಸ್ಕೃತಗೊಂಡಿರುವುದಲ್ಲದೆ ಕಾಯಕ ಸನ್ಮಾನ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top