ಚದುರಂಗ

Home/Birthday/ಚದುರಂಗ
Loading Events
This event has passed.

೧-೧-೧೯೧೬ ಚದುರಂಗ ಕಾವ್ಯನಾಮದ ಎಂ. ಸುಬ್ರಹ್ಮಣ್ಯರಾಜ ಅರಸುರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಕಲ್ಲಹಳ್ಳಿ. ತಂದೆ ಮುದ್ದುರಾಜ ಅರಸು, ತಾಯಿ ಗೌರಮ್ಮಣ್ಣಿ. ಮೈಸೂರು ಅರಸು ಮನೆತನದ ಸಂಬಂಧ. ಜಯಚಾಮರಾಜ ಒಡೆಯರ ಓರಗೆಯವರು. ಮೈಸೂರು ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ. ಕಾಲೇಜು ಕಲಿತದ್ದು, ಬೆಂಗಳೂರು ಇಂಟರ್ ಮೀಡಿಯಟ್ ಕಾಲೇಜು ಮತ್ತು ಮೈಸೂರು ಮಹಾರಾಜ ಕಾಲೇಜು. ವೈದ್ಯರಾಗಬೇಕೆಂಬ ಆಸೆ. ಸೇರಿದ್ದು ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು. ವಿದ್ಯಾಭ್ಯಾಸ ಸ್ಥಗಿತ. ಬಾಲ್ಯದಲ್ಲಿ ಕಥೆ ಕೇಳುವ, ಸೃಷ್ಟಿಸಿ ಹೇಳುವ ಚತುರತೆ. ಒಳಗೊಬ್ಬ ಕಥೆಗಾರನ ಉದಯ. ಯೌವನದಲ್ಲಿ ಸ್ವಾತಂತ್ರ್ಯ ಚಳವಳಿ, ಗಾಂಧಿ ವಿಚಾರಧಾರೆಗೆ ಮರುಳು. ಸಾಂಪ್ರದಾಯಿಕ ಕಟ್ಟುಪಾಡು ವಿರೋಧಿಸಿ ಮದುವೆ. ಕುಟುಂಬದಲ್ಲಿ ಕೋಲಾಹಲ. ಮೈಸೂರು ತೊರೆದು ಹುಟ್ಟಿದ ಹಳ್ಳಿಯ ಕಡೆ ಪಯಣ. ಕೃಷಿ ವೃತ್ತಿ, ಬರವಣಿಗೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ರೂಢಿಗತ. ಮೊದಲ ಕತೆ ಛಾಯಾಪತ್ರಿಕೆಯಲ್ಲಿ ಪ್ರಕಟ. ಇವರ ಸಾಹಿತ್ಯ ಪ್ರೇರಕರು ಮಾಸ್ತಿ ಮತ್ತು ಗೊರೂರರು. ಜೀವನದಲ್ಲಿ ನರಳದಿದ್ದರೆ ದೊಡ್ಡ ಸಾಧನೆ ಅಸಾಧ್ಯವೆಂಬ ನಂಬಿಕೆ. ೧೯೪೪ರಲ್ಲಿ ಮೊದಲ ಕಥಾಸಂಕಲನ ‘ಸ್ವಪ್ನಸುಂದರಿ’ ಪ್ರಕಟ. ಇಣುಕು ನೋಟ, ಶವದ ಮನೆ, ಬಂಗಾರದ ಗೆಜ್ಜೆ, ಮೀನಿನ ಹೆಜ್ಜೆ, ಬಣ್ಣದ ಬೊಂಬೆ ಕಥಾ ಸಂಕಲನಗಳು. ನಗರ ಮತ್ತು ಗ್ರಾಮ್ಯಬದುಕಿನ ಲೋಭ, ಅನ್ಯಾಯಗಳ ಚಿತ್ರಣ-ಕಥೆಗಳ ಜೀವಾಳ, ೧೯೫೦ರಲ್ಲಿ ಮೊದಲ ಕಾದಂಬರಿ ‘ಸರ್ವ ಮಂಗಳ’ ಕಾದಂಬರಿ ಲೋಕದಲ್ಲಿ ಹೊಸ ಅಲೆಗೆ ಹಾಡಿದ ನಾಂದಿ. ಮಾನವೀಯ ಸಂಬಂಧಗಳ ಅನಾವರಣ. ಎರಡನೆಯ ಕಾದಂಬರಿ ಉಯ್ಯಾಲೆ. ಹೆಣ್ಣುಗಂಡಿನ ಸೂಕ್ಷ್ಮ ಮನಸ್ಸಿನ ಚಿತ್ರಣ. ಮೂರನೆಯ ಮಹಾತ್ವಾಕಾಂಕ್ಷೆಯ ಕೃತಿ ವೈಶಾಖ. ರಚಿಸಿದ ನಾಟಕ-ಇಲಿಬೋನು ಮತ್ತು ಕುಮಾರರಾಮ. ಕಾವ್ಯರಚನೆ-ನಂಜುಂಡ ಕವಿಯ ರಾಮನಾಥಚರಿತೆ. ಒಲಿದು ಬಂದ ಪುರಸ್ಕಾರಗಳು. ಮಂಡ್ಯದ ೬೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚಲನಚಿತ್ರವಾದ ಸರ್ವಮಂಗಳ, ಉಯ್ಯಾಲೆಗೆ ಚಲನಚಿತ್ರ ಪ್ರಶಸ್ತಿ. ನಿಧನರಾದದ್ದು ೧೯.೧೦.೧೯೯೮ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ವಸುದೇವ ಭೂಪಾಳಂ – ೧೯೨೬ ಅರವಿಂದ ನಾಡಕರ್ಣಿ – ೧೯೩೧ ವಸುಂಧರ ಫಿಲಿಯೋಜ – ೧೯೪೦ ಲಕ್ಷ್ಮಣ ತೆಲಗಾವಿ – ೧೯೪೭ ತನುಜಾ – ೧೯೫೦ ಶ್ರೀನಿವಾಸ ಕಳಾವರ – ೧೯೭೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top