Loading Events

« All Events

  • This event has passed.

ಚಿ. ಶ್ರೀನಿವಾಸರಾಜು

November 28, 2023

೨೮.೧೧.೧೯೪೨ ೨೮.೧೨.೨೦೦೭ ಕನ್ನಡಕ್ಕಾಗಿ ಸಮರ್ಪಣಾ ಮನೋಭಾವ, ಕನ್ನಡದ ಕೈಂಕರ್ಯ, ಕನ್ನಡದ ಸೇವೆ, ಪರಿಚಾರಿಕೆ ಈ ಎಲ್ಲವನ್ನು ರಕ್ತದಲ್ಲಿ ತುಂಬಿಕೊಂಡಿದ್ದ ಶ್ರೀನಿವಾಸ ರಾಜುರವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ ೧೯೪೨ರ ನವಂಬರ್ ೨೮ ರಂದು. ತಂದೆ ಚಿಕ್ಕರಾಜು, ತಾಯಿ ಸಾವಿತ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರ. ಹೈಸ್ಕೂಲಿನಲ್ಲಿದ್ದಾಗಲೇ ಹಿಡಿದ ಕನ್ನಡ ಸಾಹಿತ್ಯದ ಗೀಳು, ರಚಿಸಿದ ನಾಟಕ ‘ಶಾಲು ಜೋಡಿಗಳು’. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ. ಓದಿದ ನಂತರ ಕೆಲವರ್ಷ ಲೋಹ ವಿಕಾಸ ಮಂಡಲಿಯ ಸಾರಿಗೆ ಅಧಿಕಾರಿಯಾಗಿ ಉದ್ಯೋಗ ಪ್ರಾರಂಭ. ಈ ಸಂದರ್ಭದಲ್ಲಿ ತಮ್ಮ ಅನುಭವಗಳನ್ನು ಅಭಿವ್ಯಕ್ತಿಸಲು ಆಯ್ದುಕೊಂಡ ಮಾಧ್ಯಮ ಕಾವ್ಯಕ್ಷೇತ್ರ. ‘ಛಸನಾಲ ಬಂಧು’ ಕವನ ಸಂಕಲನ ಪ್ರಕಟಿತ. ಮತ್ತೆ ಕನ್ನಡ ಓದುವ ಹಂಬಲದಿಂದ ಪಡೆದ ಬಿ.ಎ., ಎಂ.ಎ. ಪದವಿ. ಇಂಡಾಲಜಿಯಲ್ಲಿ ಡಿಪ್ಲೊಮ. ಎಂ.ಎ. ತರಗತಿಯಲ್ಲಿದ್ದಾಗ ಜಿ.ಎಸ್. ಶಿವರುದ್ರಪ್ಪ, ಜಿ.ಪಿ.ರಾಜರತ್ನಂ. ಎಂ. ಚಿದಾನಂದ ಮೂರ್ತಿ ಇವರ ಗುರುಗಳು. ಸೆಂಟ್ರಲ್ ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ ಭಾಗಿ. ಜಿ.ಪಿ.ರಾಜರತ್ನಂ ರವರಂತೆ ಕನ್ನಡದ ಪರಿಚಾರಕರಾಗಿ ದುಡಿಯಲು ಮಾಡಿದ ನಿರ್ಧಾರ. ಕಾಲೇಜು ಹೊರಗೆ ಪಿ. ಪಿ. ಕಟ್ಟಿ (ಪೋಲಿಪಟಾಲಂ ಅಲ್ಲ – ಪೀಪಲ್ಸ್ ಪ್ರೋಗ್ರೇಸಿವ್ ಪೀಪಲ್ಸ್ ಬಳಗ) ಸಭೆ ಸೇರಿದಾಗ ‘ಅಂಕಣ’, ‘ಶೂದ್ರ’ ಪತ್ರಿಕೆಗಳ ಹುಟ್ಟಿಗೆ ಕಾರಣ. ಎಂ. ಎ. ಪದವಿಯ ಫಲಿತಾಂಶದ ನಿರೀಕ್ಷೆಯಲ್ಲಿರುವಾಗಲೇ ಕ್ರೈಸ್ಟ್ ಕಾಲೇಜಿನಲ್ಲಿ ದೊರೆತ ಅಧ್ಯಾಪಕರ ಹುದ್ದೆ. ಕನ್ನಡದ ವಾತಾವರಣವೇ ಇಲ್ಲದ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಹರಡಲು ಪ್ರಾರಂಭಿಸಿದ ಹಲವು ಹತ್ತು ಯೋಜನೆಗಳು. ‘ವಿಮೋಚನ’ ಪಾಕ್ಷಿಕ. ‘ಅಂಕಣ’ ಪತ್ರಿಕೆ ಮತ್ತು ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಹುಟ್ಟಿಗೆ ಕಾರಣರು. ವಿದ್ಯಾರ್ಥಿಗಳಲ್ಲಿ ಕನ್ನಡದ ಆಸಕ್ತಿಯನ್ನು ಬೆಳೆಸಲು ಪ್ರಾರಂಭಿಸಿದ್ದು ಬೇಂದ್ರೆ ಸ್ಮೃತಿ ಕವನ ಸ್ಪರ್ಧೆ. ಬೇಂದ್ರೆಯವರು ಹುಟ್ಟಿದ ದಿನ ಜನವರಿ ೩೧ ರಂದು ಪ್ರತಿವರ್ಷ ಬಹುಮಾನ ವಿತರಣೆಯ ಕಾರ್ಯಕ್ರಮ. ಮತ್ತೊಂದು ಅ.ನ.ಕೃ. ಸ್ಮಾರಕ ಲೇಖನ ಸ್ಪರ್ಧೆ. ಶ್ರೀನಿವಾಸರಾಜು ರವರು ಸ್ವತಃ ಲೇಖಕರಾಗಿದ್ದರೂ ಹೆಚ್ಚು ಬರೆಯ ಹೋಗಲಿಲ್ಲ. ಸೃಜನಶೀಲತೆಯನ್ನು ಪೋಷಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು. ಇತರರಿಂದ ಪುಸ್ತಕಗಳನ್ನು ಬರೆಸಿ, ಪ್ರಕಟಿಸಿ, ಮಾರಾಟ ಮಾಡುವುದರಲ್ಲೇ ಆತ್ಮಸಂತೋಷವನ್ನು ಕಂಡುಕೊಂಡವರು. ೧೯೭೩ ರಲ್ಲಿ ಸಿ.ಕೆ. ಲಕ್ಷ್ಮಣಗೌಡ ಎಂಬ ವಿದ್ಯಾರ್ಥಿ ಸಾವಿನ ನಂತರ ಅವರ ಸಹೋದರಿ ನೀಡಿದ ೫೦೦ ರೂ ಕೊಡುಗೆಯಿಂದ ಪುಸ್ತಕ ಪ್ರಕಟಣೆಗಳು ಪ್ರಾರಂಭ. ಮೊದಲ ಕವನ ಸಂಕಲನ ಕ.ವೆಂ.ರಾಜಗೋಪಾಲರ ‘ನದಿಯ ಮೇಲಿನ ಗಾಳಿ’ ಕವನ ಸಂಕಲನದಿಂದ ಪ್ರಾರಂಭವಾಗಿ ನಿವೃತ್ತರಾಗುವ ಮುನ್ನ (೨೦೦೦ ದಲ್ಲಿ) ಬೆಳಕು ಕಂಡದ್ದು ಬೇಂದ್ರೆ ಸಾಹಿತ್ಯ. ಸುಮಾರು ೨೭ ವರ್ಷಗಳಲ್ಲಿ ಹೊರತಂದ ೧೬೫ ಕೃತಿಗಳಲ್ಲಿ ಬಿ.ಸಿ.ರಾಮಚಂದ್ರ ಶರ್ಮ ‘ಸಪ್ತಪದಿ’ ಮತ್ತು ಸು.ರಂ. ಎಕ್ಕುಂಡಿ ಯವರ ‘ಬಕುಳದ ಹೂಗಳು’ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸುಮಾರು ೫೦ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಒಳ್ಳೆಯ ಪುಸ್ತಕ ಪ್ರಕಾಶನಕ್ಕಾಗಿ ಪುಸ್ತಕ ಪ್ರಾಧಿಕಾರದ ಪ್ರಥಮ ವರ್ಷದ ಬಹುಮಾನ ದೊರೆತಿದೆ ಎಂದರೆ ಇವರ ಮುಂದಾಳತ್ವದಲ್ಲಿ ಪ್ರಕಟಗೊಂಡ ಕೃತಿಗಳ ಮೌಲ್ಯ ಅರ್ಥವಾದೀತು. ಇವರು ರಚಿಸಿದ ಗಮನಾರ್ಹ ಕೃತಿಗಳೆಂದರೆ ಐದು ಏಕಾಂಕ ನಾಟಕಗಳು, ಮೂರು ಏಕಾಂಕಗಳು, ಎರಡು ಏಕಾಂಕಗಳು, ಹಳಿಯ ಮೇಲಿನ ಸದ್ದು, ನಿಷ್ಕ್ರಮಣ ಮುಂತಾದ ನಾಟಕಗಳು; ‘ಛಸನಾಲ ಬಂಧು’ ಮತ್ತು ಕನ್ನಡ ಕನ್ನಡ ಹಾ! ಸವಿಗನ್ನಡ – ಕಾವ್ಯಕೃತಿಗಳು ; ರಾಜರತ್ನಂ ಮತ್ತು ಕರ್ನಾಟಕ ಸಂಘ ; ಆಗಾಗ -ವಿಮರ್ಶಾಕೃತಿ. ಮಿತಭಾಷಿ, ಮೃದುಮಾತಿನ, ಶುಭ್ರವಸ್ತ್ರ (ಜುಬ್ಬ)ಧಾರಿ, ಆಕಾಶದಷ್ಟು ನಿರ್ಮಲ ಮನಸ್ಸಿನ ರಾಜು ರವರಿಗೆ ಸಂದ ಗೌರವ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ (೧೯೮೪); ಸಮತೆಂತೋ ಬೆಳ್ಳಿ ಹಬ್ಬದ ಬಹುಮಾನ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ (೧೯೯೭); ಸಂಸ ಪ್ರಶಸ್ತಿ (೧೯೯೯); ಸಂದೇಶ ಪ್ರಶಸ್ತಿ (೨೦೦೮); ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ; ಶಿವಮೊಗ್ಗ ಕರ್ನಾಟಕ ಸಂಘದ ಕೆ.ವಿ. ಸುಬ್ಬಣ್ಣ ಪ್ರಶಸ್ತಿ (೨೦೦೦) ಮತ್ತು ಕಿಟಲ್ ಪ್ರಶಸ್ತಿ (೨೦೦೪). ಇಂತಹ ನಿಗರ್ವಿ, ಸ್ನೇಹಪ್ರಿಯ ವ್ಯಕ್ತಿಗೆ ಅರ್ಪಿತವಾದ ಅಭಿನಂದನ ಗ್ರಂಥ ಅಂತರ್ಜಲ (೨೦೦೭). ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಮತ್ತು ಕನ್ನಡ ವಿಶ್ವವಿದ್ಯಾಲಯ ಕುವೆಂಪು ಅಧ್ಯಯನ ಕೇಂದ್ರ ಆಯೋಜಿಸಿದ್ದ ಕುವೆಂಪು – ಬೇಂದ್ರೆ ಸಾಹಿತ್ಯ ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳಲು ಡಿಸೆಂಬರ್ ೨೮ ರಂದು ತೀರ್ಥಹಳ್ಳಿ ತಲುಪಿ, ಸ್ನೇಹಿತ ಲಕ್ಷ್ಮೀ ನಾರಾಯಣರನ್ನು ಕಾಣಲು ಹೊರಟವರು ಬಸ್ ನಿಲ್ದಾಣದ ಬಳಿಯೇ ಕುಸಿದು ಬಿದ್ದರು. ಡಿಸೆಂಬರ್ ೩೦ ರಂದು ‘ಕುವೆಂಪು – ಬೇಂದ್ರೆ ನಾಡುನುಡಿ ಚಿಂತನ’ ಕಾರ್ಯಕ್ರಮ ಗೋಷ್ಠಿಯ ಅಧ್ಯಕ್ಷತೆ ವಹಿಸಬೇಕಿತ್ತು ಆದರೆ ಅದಕ್ಕೆ ಮುನ್ನವೇ ಸಾಹಿತ್ಯ ಪರಿಚಾರಕನನ್ನು ವಿಧಿ ಎಳೆದೊಯ್ದು, ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಉಂಟು ಮಾಡಿತ್ತು.

Details

Date:
November 28, 2023
Event Category: