ಚೆನ್ನವೀರ ಕಣವಿ

Home/Birthday/ಚೆನ್ನವೀರ ಕಣವಿ
Loading Events

೨೮-೬-೧೯೨೮ ಭಾವಜೀವಿ, ಸಮನ್ವಯ ಕವಿ, ಸೌಜನ್ಯದ ಕವಿ ಎಂದೇ ಹೆಸರಾದ ಚೆನ್ನವೀರ ಕಣವಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ. ತಂದೆ ಸಂಕ್ರಪ್ಪ, ತಾಯಿ ಪಾರ್ವತವ್ವ. ತಂದೆ ಶಾಲಾ ಮಾಸ್ತರಾಗಿದ್ದುದರಿಂದ ಪ್ರಾಥಮಿಕ ವಿದ್ಯಾಭ್ಯಾಸ ಹಲವೆಡೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ‍್ಯದರ್ಶಿಯಾಗಿ. ಹಂತಹಂತವಾಗಿ ಮೇಲೇರಿ ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಕಿಶೋರಾವಸ್ಥೆಯಲ್ಲಿಯೇ ಸೃಷ್ಟಿಯ ಸೊಬಗು ಎಂಬ ಕವನ ರಚನೆಯಿಂದ ಕಾವ್ಯಕಾಯಕ ಆರಂಭ. ಮಧುರ ಚೆನ್ನ, ಬೇಂದ್ರೆ, ಕುವೆಂಪುರವರಿಂದ ಪ್ರಭಾವಿತರು. ಧಾರವಾಡದ ಮಾಳಮಡ್ಡಿಯಲ್ಲಿ ಕೋಣೆ ಹಿಡಿದು ಸ್ನೇಹಿತರನ್ನು ಕಲೆ ಹಾಕಿ ಕಾವ್ಯಾನು ಮಂಟಪ ಆರಂಭ. ಇವರು ಓದಿದ ಕವಿತೆಗೆ ಕಿವಿ ಕೊಟ್ಟವರು ಕಟ್ಟೀಮನಿ, ಗೋಕಾಕ್, ಬೇಂದ್ರೆ, ಮುಗಳಿ ಮುಂತಾದವರು. ಕಾವ್ಯದ ಭಿನ್ನ ಸಂಪ್ರದಾಯವನ್ನು ಮೇಳೈಸಿ ರಚಿಸಿದ ಕವನಗಳು. ಮೊದಲ ಕವನ ಸಂಕಲನ ಕಾವ್ಯಾಕ್ಷಿ  (೧೯೪೯) ಪ್ರಕಟಿತ. ನಂತರ ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಕಾರ್ತೀಕದ ಮೋಡ, ಜೀವಧ್ವನಿ, ಜೀನಿಯಾ, ಎರಡು ದಡ, ಶಿಶಿರದಲ್ಲಿ ಬಂದ ಸ್ನೇಹಿತ ಸಂಕಲನಗಳು ಪ್ರಕಟಿತ. ಸಾನೆಟ್ ಬಂಧ ಕಣವಿಯವರಿಗೆ ಪ್ರಿಯವಾದ ಕಾವ್ಯಭಾಗ. ಕಾವ್ಯ ರಚನೆಯ ‘ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ್ದು ಸಾನೆಟ್‌ಗಳು’ ಎಂದು ಹೇಳುವ ಕಣವಿಯವರ ಸಾನೆಟ್ ರಚನೆಯೇ ೧೫೦ಕ್ಕೂ ಹೆಚ್ಚು . ಹಕ್ಕಿ ಪುಚ್ಚ-ಶಿಶುಗೀತೆಗಳ ಸಂಕಲನ. ಚಿರಂತನದಾಹ, ಹೂವು ಹೊರಳುವವು ಸೂರ‍್ಯನೆಡೆಗೆ, ಆಯ್ದ ಕವನ ಸಂಕಲನಗಳು. ಸಮಗ್ರ ಕಾವ್ಯ ಚೆಂಬೆಳಕು ಪ್ರಕಟಿತ. ವಿಮರ್ಶೆ-ಕಾವ್ಯಾನುಸಂಧಾನ, ಸಾಹಿತ್ಯಚಿಂತನ, ಸವೂಹಿತ, ಸಮತೋಲನ ಮುಂತಾದುವು. ಇವಲ್ಲದೆ ನವಿಲೂರ ಮನೆಯಿಂದ, ನವ್ಯಧ್ವನಿ, ನೈವೇದ್ಯ, ನಮ್ಮೆಲ್ಲರ ನೆಹರು, ಸಿದ್ಧವಿನಾಯಕ ಮೋದಕ, ಜೀವನ ಸಿದ್ಧಿ, ಆಧುನಿಕ ಕನ್ನಡ ಕಾವ್ಯ, ಸಾಹಿತ್ಯ ಅಕೆಡಮಿಗಾಗಿ ಕವಿತೆಗಳು-೧೯೮೦ ಸಂಪಾದಿತ ಕೃತಿಗಳು. ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಎಸ್.ಆರ್. ಪಾಟೀಲ ಪ್ರತಿಷ್ಠಾನ ಪ್ರಶಸ್ತಿ, ಪಂಪ ಪ್ರಶಸ್ತಿ, ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದುವು. ಹಿತೈಷಿಗಳು, ಸಾಹಿತ್ಯಪ್ರಿಯರು ಪ್ರೀತಿಯಿಂದ ೧೯೮೦ರಲ್ಲಿ ಅರ್ಪಿಸಿದ ಗೌರವಗ್ರಂಥ ‘ಚೆಂಬೆಳಕು.’   ಇದೇ ದಿನ ಹುಟ್ಟಿದ ಸಾಹಿತಿಗಳು : ರಾಜಾಮಣಿ ನಾಗರಾಜರಾವ್ – ೧೯೨೧ ಬಿ.ಕೆ. ರೇಣುಕಾ – ೧೯೫೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top