೨೬.೦೧.೧೯೨೦ ಗುಡಿಕಾರ ಕಲೆಯಲ್ಲಿ ಅದ್ವಿತೀಯ ಸಾಧನೆಗೈದ ಮಂಜುನಾಥಪ್ಪನವರು ಹುಟ್ಟಿದ್ದು ಸೊರಬ ತಾಲ್ಲೂಕಿನ ಜಡೆಗ್ರಾಮ. ತಂದೆ ಪಾಂಡಪ್ಪ, ತಾಯಿ ವರದಮ್ಮ. ಜಡೆ ಗ್ರಾಮದಲ್ಲೇ ಸಾಮಾನ್ಯ ಪ್ರಾರಂಭಿಕ ಶಿಕ್ಷಣ. ಮಾಧ್ಯಮಿಕ ಶಾಲೆ ಸೊರಬ. ಓದಿಗಿಂತ ಕಲಾಭ್ಯಾಸದ ಕಡೆ ಎಳೆದ ಮನಸ್ಸು. ಶಾಲೆಯಲ್ಲಿದ್ದಾಗಲೇ ಮಣ್ಣಿನಿಂದ ಬೊಂಬೆ ರಚಿಸಿ ವಸ್ತುಪ್ರದರ್ಶನದಲ್ಲಿ ಪಡೆದ ಬೆಳ್ಳಿಯ ಪದಕ. ಕಲೆಯ ಬಗ್ಗೆ ಆಸ್ಥೆ ತಳೆದು ಸೇರಿದ್ದು ಮೈಸೂರಿನ ಜಯಚಾಮರಾಜೇಂದ್ರ ಕಲಾಶಾಲೆ, ಶಿಲ್ಪಿ ಸಿದ್ಧಲಿಂಗಾಚಾರ್ಯರಿಂದ ಪಡೆದ ಮಾರ್ಗದರ್ಶನ. ಜೀವನೋಪಾಯಕ್ಕೆ ಆಯ್ದುಕೊಂಡದ್ದು ಗಂಧದ ಮರದ ಕೆತ್ತನೆ ಕೆಲಸ. ಶಿವಮೊಗ್ಗದ ದುರ್ಗಿ ಗುಡಿ ಬಡಾವಣೆಯಲ್ಲಿ ತೆರೆದ ಕಾರ್ಯಾಗಾರ. ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಪ್ರಚೋದಿತರಾಗಿ ತಯಾರಿಸಿದ್ದು ಗಾಂಧೀಜಿಯವರ ಗಂಧದ ಪ್ರತಿಮೆ. ರಾಷ್ಟ್ರಮಟ್ಟದ ನಾಯಕರಿಂದ ಬಂದ ಪ್ರಶಂಸೆ. ಹಲವಾರು ಶ್ರೀಗಂಧದ ಕೃತಿ ನಿರ್ಮಾಣ ಮಾಡಿಸಿ ವಿದೇಶಿ ರಾಯಭಾರಿಗಳಿಗೆ ನೀಡಿದ ಉಡುಗೊರೆ ವಿದೇಶಿಯರಿಂದಲೂ ಪಡೆದ ಮೆಚ್ಚುಗೆ. ಸಾಗರ, ಸೊರಬ, ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಕೆತ್ತನೆ ಕೆಲಸದ ಕಮ್ಯೂನಿಟಿ ಪ್ರಾಜೆಕ್ಟ್ ಡಿಸೈನರ್ ಆಗಿ ನೇಮಕ. ಹಲವಾರು ಶ್ರೀಗಂಧದ ಕೃತಿ ನಿರ್ಮಾಣ. ೧೯೪೯ರಲ್ಲಿ ಗೀತೋಪದೇಶದ ಕೃತಿ ರಚನೆ. ಪಡೆದ ಅಂತಾರಾಷ್ಟ್ರೀಯ ಮನ್ನಣೆ. ವಿಶ್ವಸಂಸ್ಥೆ ಸಭಾಭವನದಲ್ಲಿ ಪಡೆದ ಸ್ಥಾಪನೆಯ ಭಾಗ್ಯ. ಕಲ್ಲಿನ ವಿಗ್ರಹಗಳ ರಚನೆಯಲ್ಲೂ ಸಾಧಿಸಿದ ವಿಕ್ರಮ. ದೇವಸ್ಥಾನಗಳಿಗಾಗಿ ಚಾಮುಂಡೇಶ್ವರಿ, ಶಕ್ತಿಗಣಪತಿ, ಮುರಳೀಧರ, ಲಕ್ಷ್ಮೀನಾರಾಯಣ, ಕನ್ನಿಕಾ ಪರಮೇಶ್ವರಿ ವಿಗ್ರಹ ನಿರ್ಮಿಸಿದ ದಾಖಲೆ. ಪಡೆದ ಪದಕ ಗೌರವಗಳು ಹಲವಾರು, ಅಖಿಲ ಭಾರತ ಲಲಿತ ಕಲಾ ಅಕಾಡಮಿಯಿಂದ ಚಿನ್ನದ ಪದಕ, ಧರ್ಮಸ್ಥಳದ ವಸ್ತು ಪ್ರದರ್ಶನದಿಂದ ಚಿನ್ನದ ಪದಕ, ರ್ಯಾಮ್ಸೆ ಕಲಾ ಪ್ರತಿಷ್ಠಾನದಿಂದ ಶಿಲ್ಪಶ್ರೀ, ರಾಜ್ಯ ಶಿಲ್ಪಕಲಾ ಅಕಾಡಮಿ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಕಲಾವಿದರು : ಎಲ್. ನಾಗೇಶರಾಯರು – ೧೯೧೨ ಶ್ರೀನಿವಾಸ ಕೆ.ಆರ್. – ೧೯೪೪
* * *