Loading Events

« All Events

  • This event has passed.

ಜನಾರ್ಧನ ಗುರ್ಕಾರ್

November 26, 2023

೨೬.೧೧.೧೯೩೨ ೧೯೫೦ ರಿಂದ ಮೂರ್ನಾಲ್ಕು ದಶಕಗಳು ಕಾದಂಬರಿ ಪ್ರಧಾನ ಯುಗ. ಅ.ನ.ಕೃ. ರವರಂತಹವರ ಸಂಭಾಷಣಾ ಪ್ರಧಾನ ಕಾದಂಬರಿ ಒಂದೆಡೆಯಾದರೆ, ಶಿವರಾಮ ಕಾರಂತರವರಂತಹವರ ಪ್ರಾದೇಶಿಕ ಸಾಂಸ್ಕೃತಿಕ ಚಿತ್ರಣದ ಕಾದಂಬರಿಗಳು ಮತ್ತೊಂದೆಡೆ ವಿಜೃಂಭಿಸುತ್ತಿದ್ದ ಸಮಯ. ಎರಡನೆಯ ರೀತಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಕಾದಂಬರಿ ಬರೆದು ಜನಪ್ರಿಯರಾದ ಜನಾರ್ಧನ ಗುರ್ಕಾರರು ಹುಟ್ಟಿದ್ದು ಮೂಡಬಿದಿರೆಯ ಸಮೀಪದ ಅಶ್ವತ್ಥಪುರದ ಬಳಿಯ ಮುದ್ರಬೆಟ್ಟುವಿನಲ್ಲಿ ತಾ. ೨೬.೧೧.೧೯೩೨ ರಲ್ಲಿ. ಅಶ್ವತ್ಥ ಪುರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲಿಗೆ ಸೇರಿದ್ದು ಧಾರವಾಡದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ೧೯೫೮ ರಲ್ಲಿ ರೈಲ್ವೆ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಉದ್ಯೋಗ ದೊರಕಿಸಿಕೊಂಡರು. ಬಾಲಕನಾಗಿದ್ದಾಗಲೇ ಸಾಹಿತ್ಯದ ಗೀಳು ಹತ್ತಿ ೧೮ನೆಯ ವಯಸ್ಸಿನಲ್ಲಿಯೇ ಬರೆದ ‘ಪರಾವಲಂಬಿ’ ಕಾದಂಬರಿಯು ೨೦ನೆಯ ವಯಸ್ಸಿನಲ್ಲಿ ಪ್ರಕಟಗೊಂಡಿತು. ಧಾರವಾಡದ ಪ್ರಸಿದ್ಧ ಲೇಖಕ, ಪ್ರಕಾಶಕರಾದ ಭಾಲಚಂದ್ರ ಘಾಣೀಕರರು ತಮ್ಮ ಪ್ರತಿಭಾಗ್ರಂಥ ಮಾಲೆಯಡಿ ೧೯೫೨ ರಲ್ಲಿ ಪ್ರಕಟಿಸಿದರು. ಹೈಸ್ಕೂಲು ಉಪಾಧ್ಯಾಯರ ಪ್ರೋತ್ಸಾಹ, ಶಂಕರ ಮೊಕಾಶಿ ಪುಣೀಕರ, ಕೀರ್ತಿನಾಥ ಕುರ್ತಕೋಟಿ ಇವರೊಂದಿಗೆ ‘ಗಾನ ಕೇಳಿ’ ಎಂಬ ಕವನ ಸಂಕಲನವನ್ನು ಹೊರತಂದಿದ್ದರು. ಧಾರವಾಡದ ಸಾಹಿತ್ಯಕ ವಾತಾವರಣದಲ್ಲಿ ಬಹಳಷ್ಟು ಮಂದಿ ವಿದ್ಯಾವಂತರು ಸಾಹಿತ್ಯದ ಗೀಳು ಹಿಡಿಸಿಕೊಂಡು, ಬರಹದಲ್ಲಿ ತೊಡಗಿದ್ದು ಗುರ್ಕಾರರಿಗೂ ಪ್ರೇರಣೆ ನೀಡಿ, ತಾನೂ ಬರೆಯ ಬಲ್ಲೆನೆಂಬ ಆತ್ಮವಿಶ್ವಾಸದಿಂದ ಬರೆಯತೊಡಗಿದರು. ಮರು ವರ್ಷ ೧೯೫೩ ರಲ್ಲಿ ಪ್ರಕಟಗೊಂಡ ಎರಡನೆಯ ಕಾದಂಬರಿ ‘ಹಳ್ಳದಿಂದ ಹಾದಿಗೆ’. ಇದೂ ಕೂಡ ಜನಮೆಚ್ಚಿದ ಕಾದಂಬರಿ. ನಂತರ ಕೈಮಾಂಸ, ಕಾಂತೆಯರ ಕನಸು, ರಾಯರ ಚಾಳು ಮುಂತಾದ ೧೮ ಕಾದಂಬರಿಗಳನ್ನು ರಚಿಸಿದರು. ಇದಲ್ಲದೆ ಇವರು ಬರೆದ ಸಣ್ಣಕಥೆಗಳು ‘ಕಂಬದ ಹುಚ್ಚು’ ಮತ್ತು ‘ಬೆಳ್ಳಿಯ ಬಟ್ಟಲು’ ಎಂಬ ಸಂಕಲನಗಳಲ್ಲಿ ಸೇರಿವೆ. ‘ಅಲಗು ಗಲಗು’ ಮತ್ತು ವಿಜಯ ಭಾರತ ಸ್ತೋತ್ರ ಎಂಬ ಎರಡು ಲಘು ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ. ‘ಜಾತಿ ಮತ್ತು ಭಾರತ’ ಇವರ ವಿಚಾರ ಧಾರೆಯ ಕೃತಿ. ಇವುಗಳ ಜೊತೆಗೆ ‘ಎವರೆಸ್ಟ್ ವೀರ’ ಮತ್ತು ‘ಬೆಂಜಮಿನ್ ಫ್ರಾಂಕ್ಲಿನ್’ ಎಂಬ ಎರಡು ಕೃತಿಗಳನ್ನು ಅನುವಾದಿಸಿದ್ದಾರೆ. ಇವರ ಕಾದಂಬರಿ ಸಾಹಿತ್ಯವನ್ನು ಅಭ್ಯಸಿಸಿದ ಎಸ್. ಗೋವಿಂದದಾಸ್ ಜಗಳೂರು ಎಂಬುವವರು ‘ಜನಾರ್ಧನ ಗುರ್ಕಾರ್‌ಅವರ ಕಾದಂಬರಿಗಳ ಅಧ್ಯಯನ’ ಎಂಬ ಮಹಾ ಪ್ರಬಂಧವನ್ನು ಮಂಡಿಸಿ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಕಳ ತಾಲ್ಲೂಕು ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಶ್ವಥ್ಥ ಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಜೊತೆಗೆ ಮೈಸೂರು ರೈಲ್ವೆ ನೌಕರರ ಸಂಘ, ಕಾಂತವರ ಕನ್ನಡ ಸಂಘ, ದಕ್ಷಿಣ ಕನ್ನಡ ಜಿಲ್ಲಾ ೮ನೆಯ ಸಾಹಿತ್ಯ ಸಮ್ಮೇಳನ-ಉಡುಪಿ, ಬೇಲಾಡಿ ಮಾರಣ್ಣ ಮಾಡ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ. ಹುಬ್ಬಳ್ಳಿ, ಗುಂತಕಲ್, ಮದರಾಸು, ತಿರುಚಿರಾಪಳ್ಳಿ, ಪೆರಂಬೂರು ಮತ್ತು ಮೈಸೂರು ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ಮೈಸೂರಿನಲ್ಲಿ ತೃಪ್ತ ನಿವೃತ್ತ ಜೀವನ.

Details

Date:
November 26, 2023
Event Category: