ಜಯಂತ ಕಾಯ್ಕಿಣಿ

Home/Birthday/ಜಯಂತ ಕಾಯ್ಕಿಣಿ
Loading Events
This event has passed.

೨೪.೦೧.೧೯೫೫ ಸಾಹಿತ್ಯಿಕ ಗುಣಗಳನ್ನು ತಂದೆಯಿಂದ ಬಳುವಳಿಯಾಗಿ ಪಡೆದಿದ್ದರೂ ತಮ್ಮದೇ ಆದ ಬರವಣಿಗೆಯ ಶೈಲಿಯನ್ನು ರೂಢಿಸಿಕೊಂಡಿರುವ ಬಹುಮುಖ ಪ್ರತಿಭೆಯ ಜಯಂತ ಕಾಯ್ಕಿಣಿಯವರು ಹುಟ್ಟಿದ್ದು ಕಡಲ ತೀರದ ಪ್ರಸಿದ್ಧ ಕ್ಷೇತ್ರವಾದ ಗೋಕರ್ಣದಲ್ಲಿ ೧೯೫೫ರ ಜನವರಿ ೨೪ರಂದು. ತಂದೆ ಸಾಹಿತ್ಯದಲ್ಲಿ ಪ್ರಖ್ಯಾತ ವಿದ್ವಾಂಸರಾಗಿದ್ದ ಗೌರೀಶ ಕಾಯ್ಕಿಣಿಯವರು, ತಾಯಿ ಶಾಂತಾದೇವಿ. ಪ್ರಾರಂಭಿಕ ಶಿಕ್ಷಣ ಗೋಕರ್ಣದಲ್ಲಿ. ಕುಮಟಾದ ಡಾ. ಬಾಳಿಗಾ ಕಾಲೇಜಿನಿಂದ ಬಿ.ಎಸ್ಸಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ ಪದವಿ. ಉದ್ಯೋಗಕ್ಕಾಗಿ ಹೊರಟಿದ್ದು ಮುಂಬಯಿಗೆ, ಪ್ರೊಕ್ಟರ್ ಅಂಡ್‌ ಗ್ಯಾಂಬಲ್‌, ಹೆಕ್ಸ್ಟ್ ಮುಂತಾದ ಪ್ರಸಿದ್ಧ ಕಂಪನಿಗಳಲ್ಲಿ ಬಯೋ ಕೆಮಿಸ್ಟ್‌ ಆಗಿ ನಂತರ ಒಂದು ವರುಷ ಜಾಹೀರಾತು ಕ್ಷೇತ್ರದಲ್ಲಿ, ಈ ಟಿವಿ ಕನ್ನಡ ವಾಹಿನಿಯ ಪ್ರಾರಂಭಿಕ ಸಲಹಾ ಮಂಡಲಿಯ ಸದಸ್ಯರಾಗಿ ೨ ವರ್ಷ ಕಾಲ ಸಲ್ಲಿಸಿದ ಸೇವೆ. ೨೦೦೦ದಲ್ಲಿ ಮುಂಬೈ ಉದ್ಯೋಗ ತೊರೆದು ಬಂದದ್ದು ಬೆಂಗಳೂರಿಗೆ. ೨೦೦೧ ರಲ್ಲಿ ‘ಭಾವನ’ ಎಂಬ ವಿಶಿಷ್ಟ ಮಾಸ ಪತ್ರಿಕೆ ಪ್ರಾರಂಭವಾದಾಗ ವಹಿಸಿಕೊಂಡ ಸಂಪಾದಕರ ಜವಾಬ್ದಾರಿ ಕೆಲಕಾಲ. ನಂತರ ಪೂರ್ಣಾವಧಿ ಬರಹಗಾರರಾಗಿ ತೊಡಗಿಕೊಂಡರು. ಕವಿತೆಗಳ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಜಯಂತ ಕಾಯ್ಕಿಣಿಯವರು ಬರೆದ ಕವನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡ ನಂತರ ‘ರಂಗದಿಂದೊಂದಿಷ್ಟು ದೂರ’ ಎಂಬ ಕವನ ಸಂಕಲನವೂ ಪ್ರಕಟಗೊಂಡಿತು. ಈ ಕವನ ಸಂಕಲನಕ್ಕೆ ೧೯೭೪ರಲ್ಲಿಯೇ ಅಂದರೆ ೧೯ ರ ಹರೆಯಲ್ಲಿಯೇ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿಗೆ ಪಾತ್ರರಾದರು. ಜಯಂತ ಕಾಯ್ಕಿಣಿಯವರು ಕಾವ್ಯಕ್ಷೇತ್ರದಷ್ಟೇ ಪ್ರೀತಿಸುವ ಕಥಾಕ್ಷೇತ್ರಕ್ಕೂ ವಿಶಿಷ್ಟವಾದ ಕಥೆಗಳನ್ನು ನೀಡಿದ್ದಾರೆ. ಕಥೆಗಳು ಸುಧಾ, ಪ್ರಜಾವಾಣಿ’, ಉದಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದರ ಜೊತೆಗೆ ದೀಪಾವಳಿ ಕಥಾಸ್ಪರ್ಧೆಯಲ್ಲಿಯೂ ಕೆಲವು ಬಾರಿ ಬಹುಮಾನವನ್ನೂ ಪಡೆದಿವೆ. ಈ ವರೆಗೆ ಅವರು ಏಳು ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ‘ತೆರೆದಷ್ಟೇ ಬಾಗಿಲು’ (೧೯೮೨), ಗಾಳ (೧೯೮೨), ದಗಡೂ ಪರಬನ ಅಶ್ವಮೇಧ (೧೯೮೯), ಅಮೃತ ಬಳ್ಳಿಯ ಕಷಾಯ (೧೯೯೬), ಬಣ್ಣದ ಕಾಲು (೧೯೯೯), ಜಯಂತ ಕಾಯ್ಕಿಣಿ ಕಥೆಗಳು (೨೦೦೩), ತೂಫಾನ್‌ ಮೇಲ್ (೨೦೦೫) ಮುಂತಾದವು. ಕೆಲವು ಕಥೆಗಳು ಅನುವಾದಿತಗೊಂಡು ಮರಾಠಿ ದೀಪಾವಳಿ ವಿಶೇಷಾಂಕ, ಕೇಂದ್ರ ಸಾಹಿತ್ಯ ಅಕಾಡಮಿಯ `INDIAN LITERATURE’ (ENGLISH), ಹಿಂದಿ ಭಾಷೆಯ ‘ಸಮಕಾಲೀನ ಸಾಹಿತ್ಯ’ ವಿಶೇಷಾಂಕಗಳಲ್ಲೂ ಮತ್ತು ವಿವಿಧ ರಾಷ್ಟ್ರೀಯ ಯಾಂಥಾಲಜಿಗಳಲ್ಲಿ ಸೇರ್ಪಡೆಯಾಗಿವೆ. ಬರೆದ ಕವನಗಳು ರಂಗದಿಂದೊಂದಿಷ್ಟು ದೂರ (೧೯೭೪), ಕೋಟಿ ತೀರ್ಥ (೧೯೮೨), ಶ್ರಾವಣ ಮಧ್ಯಾಹ್ನ (೧೯೮೭), ನೀಲಿ ಮಳೆ (೧೯೯೭), ಒಂದು ಜಿಲೇಬಿ (೨೦೦೮) ಮುಂತಾದ ಸಂಕಲನಗಳಲ್ಲಿ ಸೇರಿವೆ. ಸಮಕಾಲೀನ ಸಮಾಜದ ಗಂಭೀರ ವಿಷಯಗಳು, ಚಲನಚಿತ್ರ ವ್ಯಾಖ್ಯಾನ, ಸಾಹಿತ್ಯ ವಿಮರ್ಶೆ ಮುಂತಾದ ವಿಷಯಗಳನ್ನೊಳಗೊಂಡ ಗದ್ಯ ಬರಹಗಳು, ‘ಹಾಯ್‌ ಬೆಂಗಳೂರು’ ಪತ್ರಿಕೆಗೆ ಬರೆದ ಅಂಕಣಗಳ ಜೊತೆಗೆ ಕೆಲ ದೀರ್ಘ ಲೇಖನಕಗಳೂ ಸೇರಿ ‘ಬೊಗಸೆಯಲ್ಲಿ ಮಳೆ’ (೨೦೦೧), ಶಬ್ದತೀರ (೨೦೦೬) ಎಂಬ ಎರಡು ಸಂಕಲನಗಳಲ್ಲಿ ಸೇರಿವೆ. ಇದರ ಜೊತೆಗೆ ಬರೆದದ್ದು ಮೂರು ಅನುವಾದ ನಾಟಕಗಳು. ‘ಸೇವಂತಿ ಪ್ರಸಂಗ’ (೧೯೯೫) -(MY FAIR LADY ಎಂಬ ಹೆಸರಿನ ಚಲನ ಚಿತ್ರವಾದ ಬರ್ನಾರ್ಡ್‌ ಶಾ ರವರ PYGMALLION  ನಾಟಕದ ಯಶಸ್ವಿ (ಪ್ರಯೋಗ). ‘ಜತೆಗಿರುವನು ಚಂದಿರ’ (೨೦೦೧) ಎಂಬ ನಾಟಕ ಜೋಸೆಫ್‌ ಸ್ಟೀನ್‌ ರಚಿಸಿದ FIDDLER ON THE ROOF  ಎಂಬ ಸಂಗೀತ ನಾಟಕದ ಅನುವಾದದ ಜೊತೆಗೆ ಜಾವೇದ್‌ ಸಿದ್ಧಿಕಿಯವರ ‘ತುಮ್ಹಾರೀ ಅಮೃತಾ’ ಎಂಬ ಹಿಂದಿ ನಾಟಕವು ‘ನಿನ್ನ ಅಮೃತಾ’ (೨೦೦೩) ಎಂಬ ಹೆಸರಿನಿಂದ ಅನುವಾದ ಗೊಂಡು ರಂಗದ ಮೇಲೂ ಪ್ರದರ್ಶನಗೊಂಡ ಯಶಸ್ವಿ ನಾಟಕಗಳೆನಿಸಿವೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಮೇಲೂ ತಮ್ಮ ಛಾಪುಮೂಡಿಸಿರುವ ಜಯಂತ್‌ರವರು ಈಟಿವಿಗಾಗಿ ‘ನಮಸ್ಕಾರ’ ಕಾರ್ಯಕ್ರಮದ ಸಂದರ್ಶಕರಾಗಿ ‘ರಸ ಋಷಿಗೆ ನಮಸ್ಕಾರ’ (ಕುವೆಂಪು), ‘ಕಡಲಭಾರ್ಗವನಿಗೆ ನಮಸ್ಕಾರ’ (ಶಿವರಾಮಕಾರಂತ), ‘ಬೇಂದ್ರೆ ಮಾಸ್ತರ್ಗೆ ನಮಸ್ಕಾರ’ (ದ.ರಾ. ಬೇಂದ್ರೆ), ‘ನಟಸಾರ್ವಭೌಮನಿಗೆ ನಮಸ್ಕಾರ’ (ರಾಜ ಕುಮಾರ್), ಮುಂತಾದವರ ಬಗ್ಗೆ ಅವರ ಸಂಬಂಧಿಕರು, ನಿಕಟ ವರ್ತಿಗಳು, ವಿದ್ವಾಂಸರು, ವಿದ್ಯಾರ್ಥಿಗಳು ಮುಂತಾದವರುಗಳನ್ನು ಸಂದರ್ಶಿಸಿ ನಡೆಸಿಕೊಟ್ಟ ವಿಶಿಷ್ಟ ಕಾರ್ಯಕ್ರಮ. ಇದೀಗ ಈಟಿವಿ ವಾಹಿನಿಯ ‘ವಾಯ್ಸ್‌ ಆಫ್‌ ಕರ್ನಾಟಕ’ ಮತ್ತು ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಗಳಲ್ಲಿ ಪ್ರತಿಭಾಶೋಧದ ಸರಣಿಯಲ್ಲಿ ತೀರ್ಪುಗಾರರಾಗಿದ್ದಾರೆ. ಇವರ ಪ್ರತಿಭೆಗೆ ಒರೆ ಹಚ್ಚಿದ ಮತ್ತೊಂದು ಕ್ಷೇತ್ರವೆಂದರೆ ಚಲನಚಿತ್ರ. ‘ಮೂರು ದಾರಿಗಳು’ ಚಲನಚಿತ್ರಕ್ಕೆ ಕಲಾನಿರ್ದೇಶಕನಾಗಿ, ದ್ವೀಪ, ಪೂರ್ವಾಪರ, ಚಿಗುರಿದ ಕನಸು, ರಮ್ಯಾ ಚೈತ್ರಕಾಲ ಎಂಬ ನಾಲ್ಕು ಚಿತ್ರಗಳಿಗಾಗಿ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆಗಿಂತ ಜಯಂತ್‌ ರವರಿಗೆ ಪ್ರಖ್ಯಾತಿ ತಂದು ಕೊಟ್ಟಿದ್ದೆಂದರೆ ಚಲನಚಿತ್ರಗೀತೆಗಳು. ಹದಿಹರೆಯದ ಹೃದಯಕ್ಕೆ ಲಗ್ಗೆಯಿಟ್ಟ ಅವರ ಹಾಡುಗಳಂತೂ ಮೆಲುಕುಹಾಕುವಂತಹವು. ‘ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೇ ಸುಮ್ಮನೆ —-’ ಎನ್ನದ ಹದಿಹರೆಯದ ಬಾಯಿಗಳೇ ಇಲ್ಲ. ಇದುವರೆವಿಗೂ ಅವರು ‘ಮುಂಗಾರುಮಳೆ’, ‘ಮಿಲನ’, ‘ಗೆಳೆಯ’, ‘ಈ ಬಂಧನ’, ‘ಅರಮನೆ’, ‘ಗಾಳಿಪಟ’, ‘ಪರಿಚಯ’, ‘ಹಾಗೇ ಸುಮ್ಮನೆ’, ‘ಮೊಗ್ಗಿನ ಕನಸು’, ‘ಇತಿ ನಿನ್ನ ಪ್ರೀತಿಯ’, ‘ಮನಸಾರೆ’, ‘ಜಂಗ್ಲಿ’, ‘ಬಿರುಗಾಳಿ’ ‘ಕೃಷ್ಣನ್‌ ಲವ್‌ ಸ್ಟೋರಿ’, ‘ಪಂಚರಂಗಿ’, ‘ಪೃಥ್ವಿ’ ‘ಪರಮಾತ್ಮ’, ‘ರಾಜಧಾನಿ’, ‘ಮಿಸ್ಟರ್ ಡೂಪ್ಲಿಕೇಟ್‌’, ‘ಸೂರ್ಯಕಾಂತಿ’,. ‘ಲೈಫ್‌ ಇಷ್ಟೇನೇ’, ‘ಪಾರಿಜಾತ’, ‘ಹುಡುಗರು’, ‘ಮದುವೆ ಮನೆ’ ಮುಂತಾದ ಚಲನಚಿತ್ರಗಳಿಗೆ ಬರೆದ ಹಾಡುಗಳು. ಹಾಡುಗಳ ಮುಖಾಂತರ ಸಿನಿಮಾ ಸಾಹಿತ್ಯಕ್ಕೊಂದು ವಿಶಿಷ್ಟ ತಿರುವು ನೀಡಿದ ಜಯಂತ್‌ ಕಾಯ್ಕಿಣಿಯವರಿಗೆ ಚಲನಚಿತ್ರ ವಿಭಾಗದಿಂದಲೂ ಹಲವಾರು ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಸರಕಾರದ ಚಲನಚಿತ್ರ ಪ್ರಶಸ್ತಿ, ಗೀತ ರಚನೆಗಾಗಿ ಈ ಟಿವಿ ಪ್ರಶಸ್ತಿ, ಕಸ್ತೂರಿ ಸಿನಿಗಂಧ ಪ್ರಶಸ್ತಿ, ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಚಾಣಕ್ಯ ಮಾಧ್ಯಮ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಸೌತ್‌ ಸ್ಕೋಪ್‌ ಪ್ರಶಸ್ತಿ, ವಿಜಯ ನೆಕ್ಸ್ಟ್‌ ಪತ್ರಿಕೆಯ ಓದುಗರ ಆಯ್ಕೆಯ ‘ರಾಜ್ಯೋತ್ಸವ ವರ್ಷದ ವ್ಯಕ್ತಿ’ (ಸಿನಿಮಾ ಕ್ಷೇತ್ರ ೨೦೧೦) ಮುಂತಾದ ಪ್ರಶಸ್ತಿ ಗೌರವಗಳ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ನಾಲ್ಕು ಬಾರಿ (೧೯೭೫, ೮೨, ೮೯, ೯೬), ‘ಕಥಾ ರಾಷ್ಟ್ರೀಯ ಪ್ರಶಸ್ತಿ’ (೧೯೯೬), ‘ಬಿ.ಎಚ್‌. ಶ್ರೀಧರ ಪ್ರಶಸ್ತಿ’ (೧೯೯೭), ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ (೧೯೯೮), ‘ರುಜುವಾತು ಟ್ರಸ್ಟ್‌ ಫೆಲೊಷಿಪ್‌ (೨೦೦೧), ನಾಸಿಕ್‌ ಮುಕ್ತ ವಿದ್ಯಾಪೀಠದಿಂದ ‘ಕುಸುಮಾಗ್ರಜ ಪುರಸ್ಕಾರ’ (೨೦೧೦) ಪಡೆದ ಮೊದಲ ಭಾರತೀಯ ಲೇಖಕ ಎಂಬ ಹೆಗ್ಗಳಿಕೆ ಮತ್ತು ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಮುಂತಾದ ಪ್ರಶಸ್ತಿ, ಗೌರವಗಳು ಸಂದಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top