
- This event has passed.
ಜಿ.ಎಸ್. ಅವಧಾನಿ
August 11
೧೧-೮-೧೯೪೪ ೨೦-೮-೨೦೦೦ ಗಣಪತಿ ಶಿವರಾಮ ಅವಧಾನಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೂಡಗೇರಿ. ತಂದೆ ಶಿವರಾಮ ಅವಧಾನಿ, ತಾಯಿ ಸಾವಿತ್ರಿ. ಪ್ರಾರಂಭಿಕ ಶಿಕ್ಷಣ ಮೂಡಗೇರಿ ಮತ್ತು ಹೊನ್ನಾವರ. ದೂರದ ಶಿವಾಜಿ ವಿಶ್ವವಿದ್ಯಾಲಯ (ಮಹಾರಾಷ್ಟ್ರ)ದಲ್ಲಿ ಎಂ.ಎ. ಪದವಿಗಾಗಿ ಕನ್ನಡವನ್ನು ಮುಖ್ಯ ವಿಷಯವಾಗಿ ಆಯ್ದುಕೊಂಡು ತೇರ್ಗಡೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕವಿತೆ ಕಟ್ಟುವ ಹುಚ್ಚು, ಸೃಜನಶೀಲ ಪ್ರವೃತ್ತಿಯ ವಿದ್ಯಾರ್ಥಿ. ಉದ್ಯೋಗಕ್ಕಾಗಿ ಸೇರಿದ್ದು ಕುಮಟಾ ತಾಲ್ಲೂಕಿನ ಕತ್ಗಾಲದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ, ಅಲ್ಲಿಂದ ದಾಂಡೇಲಿಗೆ ವರ್ಗ. ಆರೋಗ್ಯ ಕೆಟ್ಟು ಹೊನ್ನಾವರಕ್ಕೆ ಬಂದು ಶ್ರೀಧರ‍್ಮಸ್ಥಳ ಮಂಜುನಾಥೇಶ್ವರ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರ ಹುದ್ದೆ. ನಂತರ ಅದೇ ಆರಂಭವಾಗಿದ್ದ ಹೊನ್ನಾವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನೇಮಕ- ವಿ.ಸೀತಾರಾಮಯ್ಯನವರು ಪ್ರಿನ್ಸಿಪಾಲರಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಕಾಲ. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯ ಕೃಷಿ ಪ್ರಾರಂಭ. ಸಾಹಿತ್ಯ ರಚನೆಗಳು ಇವರ ಪಾಲಿಗೆ ಸಹಜಕ್ರಿಯೆ. ಹಲವಾರು ಕವಿ ಸಮ್ಮೇಳನಗಳು, ಮೈಸೂರು ದಸರ ಕವಿ ಸಮ್ಮೇಳನದಲ್ಲಿ ಕವನವಾಚನ, ಪ್ರಶಂಸೆ. ಹಲವಾರು ಕೃತಿ ರಚನೆ. ಕವನ ಸಂಕಲನ-‘ಬೆಂಕಿಬಳ್ಳಿ’ಗೆ ಅಡಿಗರಿಂದ ಬರೆಸಿಕೊಂಡ ಮುನ್ನುಡಿ. ಹಲವಾರು ಕವಿಗಳಿಗೆ ಆಶ್ಚರ‍್ಯ. ಬೆಳೆಯುತ್ತಿರುವ ಈ ಕವಿಯ ಬಗ್ಗೆ ಕುತೂಹಲ. ಕಿರುಗವಿತೆಗಳ ಸಂಕಲನ ‘ಹೊಕ್ಕಳು’-ಮಿನಿಪೊಯಮ್ಸ್ ಎಂದು ಕರೆಸಿಕೊಂಡ ಪದ್ಯಗಳು. ಮೂರನೆಯ ಕವನ ಸಂಕಲನ ‘ಹೊತ್ತು ಮುಳುಗುವ ಮುನ್ನ.’ ಅದರಲ್ಲಿ ಕಾವ್ಯಧೋರಣೆಯ ನಿಶ್ಚಿತರೂಪ ಪ್ರಕಟ. ಬಂಡಾಯದ ದನಿಯಿಂದ ಕೂಡಿದ ಕವನಗಳು. ಬಂಡಾಯ ಚಳವಳಿಗೆ ಉತ್ತರ ಕನ್ನಡದಿಂದ ಪ್ರತಿನಿಸಿದವರಲ್ಲಿ ಅವಧಾನಿ ಪ್ರಮುಖರು. ನಾಲ್ಕನೆಯ ಕವನ ಸಂಕಲನ ಗಂಗೋತ್ರಿಯ ಹಕ್ಕಿಗಳು. ಕಿರುಕಾದಂಬರಿ-ಕ್ವಾಸಾರ. ಸಾಹಿತ್ಯ ವಿಮರ್ಶೆಯ ಲೇಖನ ಸಂಗ್ರಹ ‘ಪರಸ್ಪರ.’ ಇದರಲ್ಲಿ ಬಂಡಾಯ ಸಾಹಿತ್ಯ ಕುರಿತ ಲೇಖನಗಳು. ಮಾಸ್ತಿ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಕಣವಿ, ಜಿ.ಎಸ್.ಎಸ್. ಮುಂತಾದವರ ಕೃತಿಯ ಬಗ್ಗೆ ಚರ್ಚೆ-ಚಿಂತನ ಪ್ರಕಟಿತ. ಮತ್ತೊಂದು ಕಾದಂಬರಿ ‘ಕಣಗಿಲೆ’ ಪ್ರಕಟಿತ. ತೀರಿಕೊಂಡದ್ದು ಅತಿ ಕಿರಿಯ ವಯಸ್ಸಿನಲ್ಲಿ. ಕೇವಲ ೫೬ ಹರೆಯ. ಶನಿವಾರ ತರಗತಿ ಮುಗಿಸಿಕೊಂಡು ಬಂದು, ನೆಗಡಿ ಎಂದು ಆಸ್ಪತ್ರೆಗೆ ಹೋಗಿ ಬಂದು ಮಲಗಿದವರು ಜರೂರು ಕೆಲಸವಿದ್ದವರಂತೆ ಈ ಲೋಕವನ್ನು ತ್ಯಜಿಸಿದ್ದು ೨೦.೮.೨೦೦೦ದಂದು. ಇದೇ ದಿನ ಹುಟ್ಟಿದ ಸಾಹಿತಿ : ವಿ.ಜಿ. ಕೃಷ್ಣಮೂರ್ತಿ – ೧೯೧೪