ಜಿ.ಕೆ. ಐತಾಳ್ (ಗೋಪಾಲಕೃಷ್ಣ ಐತಾಳ್)

Home/Birthday/ಜಿ.ಕೆ. ಐತಾಳ್ (ಗೋಪಾಲಕೃಷ್ಣ ಐತಾಳ್)
Loading Events

೨೫..೧೯೫೧ ಸಾಹಿತ್ಯ, ಜಾನಪದ, ರಂಗಭೂಮಿ-ಹೀಗೆ ಹಲವಾರು ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ, ಅ.ನ.ಕೃ. ಪ್ರತಿಷ್ಠಾನದ ಮೊಟ್ಟಮೊದಲ ಕಾದಂಬರಿ ಪ್ರಶಸ್ತಿ ಪುರಸ್ಕೃತರಾದ ಐತಾಳರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ. ೧೯೫೧ ರ ಜೂನ್‌ ೨೫ ರಂದು. ತಾಯಿ ಲಕ್ಷ್ಮೀದೇವಿ. ತಂದೆ ರಂಗ ಪ್ರೇಮಿ ಸೂರ್ಯನಾರಾಯಣ ಐತಾಳರು ವೃತ್ತಿ ನಿರತ ನಾಟಕ ಕಂಪನಿಗಳನ್ನೂ ಆಹ್ವಾನಿಸಿ ಕುಂದಾಪುರದ ಸುತ್ತಮುತ್ತ ನಾಟಕಾಭಿರುಚಿ ಬೆಳೆಯುವಂತೆ ಮಾಡಿದ್ದಲ್ಲದೆ ಕೋಟೇಶ್ವರದಲ್ಲಿ ‘ಶ್ರೀಲಲಿತಾ ಕಲಾಪ್ರೇಮಿ ನಾಟಕ ಮಂಡಲಿ’ ಮತ್ತು ಕುಂದಾಪುರದಲ್ಲಿ ‘ರೂಪರಂಗ’ ಸಂಸ್ಥೆಯನ್ನು ಸ್ಥಾಪಿಸಿದ್ದು ಇಂದಿಗೂ ರಂಗ ಕಲಾವಿದರಿಗೆ ಮಾನ್ಯತೆ ತಂದು ಕೊಟ್ಟ ಸಂಸ್ಥೆಗಳು. ಪ್ರಾರಂಭಿಕ ಶಿಕ್ಷಣ ಕೋಟೇಶ್ವರ. ಕುಂದಾಪುರದ ಭಂಡಾರ್ಕರ್ ಕಾಲೇಜಿನಿಂದ ಪಡೆದ ವಿಜ್ಞಾನ ಪದವಿ. ಉದ್ಯೋಗಿಯಾಗಿ ಸೇರಿದ್ದು ಕರ್ನಾಟಕ ಬ್ಯಾಂಕಿನಲ್ಲಿ ಅಧಿಕಾರಿಯಾಗಿ. ಕಲೆ ಹಾಗೂ ಸಾಹಿತ್ಯ ಪ್ರಕಾರದ ಅಭಿರುಚಿ ತಂದೆಯ ಬಳುವಳಿ. ಬ್ಯಾಂಕಿಂಗ್‌ ದುಡಿಮೆಯೊಂದಿಗೆ ಹವ್ಯಾಸಿ ಬರಹಗಾರರಾಗಿ ಮಂಗಳೂರಿನ ಅಂದಿನ ನವಭಾರತ ಪತ್ರಿಕೆಗೆ ಬರೆದ ಲೇಖನಮಾಲೆ ‘ಕಡಲ ತಡಿಯ ಕಲಾವಿದರು’. ಅಲಕ್ಷ್ಯಕ್ಕೆ ಒಳಗಾಗಿದ್ದ ಗುಡಿಕಾರ, ಪಾಣಾರ, ಕುಶಲ ಕರ್ಮಿಗಳ ಕಾಷ್ಠ ಶಿಲ್ಪ ಕಲೆಗೆ ಮಾನ್ಯತೆ ದೊರೆಯುವಂತೆ ಮಾಡಿದ. ನೆನೆಗುದಿಗೆ ಬಿದ್ದಿದ ‘ನಂದಳಿಕೆ ಮುದ್ದಣ ಸ್ಮಾರಕಕ್ಕೆ ಮುಕ್ತಿ ಎಂದು?’ ಎಂದು ಲೇಖನ ಬರೆದು ಸ್ಮಾರಕ ನಿರ್ಮಾಣಕ್ಕೆ ಜೀವಬರಿಸಿದ್ದು-ನಿರ್ಲಕ್ಷಿತ ದೇವಸ್ಥಾನವಾದ ಕೋಟೇಶ್ವರದ ಶಿಥಿಲ ‘ನಿರೇಶ್ವಾಲ್ಯ ಶ್ರೀ ಮಹಾಲಿಂಗೇಶ್ವರ ದೇವಾಲಯ’ ಎಂದು ಉದಯವಾಣಿಗೆ ಲೇಖನ ಬರೆದಾಗ ಜನರ ನಾಡಿ ಮಿಡಿದು ಸಾರ್ವಜನಿಕರು ಭಾಗಿಯಾಗಿ ಜೀರ್ಣೋದ್ಧಾರ ಕಂಡದ್ದು- ಹೀಗೆ ಸಾರ್ವಜನಿಕರನ್ನು ಎಚ್ಚರಿಸುವ ಹಲವಾರು ಲೇಖನಗಳನ್ನೂ ಬರೆದು ಜಾಗೃತಿ ಉಂಟುಮಾಡಿ ಲೇಖಕನೊಬ್ಬನ ಸಾಮಾಜಿಕ ಜವಾಬ್ದಾರಿ ಏನೆಂದು ತೋರಿಸಿಕೊಟ್ಟರು. ಇದಲ್ಲದೆ ಲೇಖಕರ ಬರಹಗಳೇ ಕಲಾವಿದರ ಬಾಳಿಗೆ ಹೇಗೆ ಬೆಳಕಾಗಬಲ್ಲವು ಎಂಬುದಕ್ಕೆ – ಯಕ್ಷಗಾನ ಕಲಾವಿದ ಐರೋಡಿ ರಾಮಗಾಣಿಗ, ಉದ್ಯಾವರ ಮಾಧವ ಆಚಾರ್ಯರ ಬಗ್ಗೆ ಲೇಖನ ಬರೆದಾಗ ಅವರಿಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿ, ನಾಟಕ ನಿರ್ದೇಶಕರಾದ ನಕ್ಕತ್ತಾಯ, ಆನಂದ ಬಸ್ರೂರು, ರಾಮದಾಸ್‌, ರಾಮಕೃಷ್ಣಕಲ್ಯಾಣಿ, ವಸಂತ ಬನ್ನಾಡಿ ಇವರುಗಳ ಬಗ್ಗೆ ಬರೆದಾಗ ನಾಟಕ ಅಕಾಡಮಿ ಪ್ರಶಸ್ತಿ ದೊರೆತದ್ದು, ಗೊಂಬೆಯಾಟದವರ ಬಗ್ಗೆ ಬರೆದಾಗ ಉಪ್ಪಿನ ಕುದ್ರು, ದೇವಣ್ಣಕಾಮತ್‌ ಬಳಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತದ್ದು ಕಾಕತಾಳೀಯವಲ್ಲ. ಹೀಗೆ ಹಲವಾರು ಪ್ರಕಾರದ ಕಲಾವಿದರ ಬಗ್ಗೆ ಪತ್ರಿಕೆಗೆ ಬರೆದಾಗ ಪ್ರಚಾರ, ಪ್ರೋತ್ಸಾಹ ಸಿಕ್ಕಿ, ಕಲಾವಿದರಿಗೆ ಮಾನ್ಯತೆ ದೊರೆಯಲು ಸಹಕಾರಿಯಾಗಿತ್ತು. ಕಥೆಗಾರರಾಗಿ ಇವರು ಬರೆದ ಹಲವಾರು ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟವಾಗಿದ್ದು, ಆಯ್ದ ಕಥಾ ಸಂಕಲನ ‘ಕಡಲ ತಡಿಯ ಕಥೆಗಳು’ ಪ್ರಕಟವಾಗಿದೆ. ಸಣ್ಣ ಕತೆಗಳ ಸ್ಪರ್ಧೆಯಲ್ಲಿ ಹಲವಾರು ಬಹುಮಾನಗಳನ್ನೂ ಗಳಿಸಿದ್ದಾರೆ. ‘ಸಮರ್ಪಣ,’ ‘ಕಾಟುಮೂಲೆ ಎಸ್ಟೇಟ್‌’ ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಅನುವಾದಿತ ಕಾದಂಬರಿ ‘ಮಿನುಗು ಮಿನುಗೆಲೆ ನಕ್ಷತ್ರ’ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ‘ಮೇರೆ ಭಾರತ್‌ ಮಹಾನ್‌’ ಕಾದಂಬರಿಯು ಉದಯವಾಣಿ ಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕುಜ ಕಾದಂಬರಿಯು ತುಷಾರ ಮಾಸ ಪತ್ರಿಕೆಯ ವಿಂಶತಿ ಕಾದಂಬರಿ ಸ್ಪರ್ಧೆಯಲ್ಲಿ (೧೯೯೩) ಬಹುಮಾನಗಳಿಸಿದ್ದಲ್ಲದೆ, ಕಾದಂಬರಿ ಕ್ಷೇತ್ರಕ್ಕಾಗಿ ಅ.ನ.ಕೃ. ರವರು ನೀಡಿದ ಶ್ರೇಷ್ಠ ಕೊಡುಗೆಯ ಕುರುಹಾಗಿ ಕಾದಂಬರಿಕಾರರನ್ನೂ ಪ್ರೋತ್ಸಾಹಿಸುವ ಸಲುವಾಗಿ ಸ್ಥಾಪಿಸಿದ ಮೊಟ್ಟ ಮೊದಲ ಪ್ರಶಸ್ತಿಯನ್ನೂ (೧೯೯೬ ) ಗಳಿಸಿದರು. ತಂದೆಯಿಂದ ಬಂದ ಬಳುವಳಿಯಾಗಿ ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದು ಹೊಸನಗರದಲ್ಲಿ ನಡೆದ ಅಖಿಲ ಕರ್ನಾಟಕ ನಾಟಕ ಸ್ಪರ್ಧೆ (೧೯೭೮) ಯಲ್ಲಿ ‘ನಾವಿಲ್ಲದಾಗ’ ನಾಟಕಕ್ಕೆ ೯ ಪ್ರಶಸ್ತಿಗಳು, ‘೧೯೭೯ ರಲ್ಲಿ ‘ಗುಡ್‌ ಬೈ ಡಾಕ್ಟರ್ ಗೆ’ ಮೂರು ಪ್ರಶಸ್ತಿಗಳು, ೧೯೮೯೦ ರಲ್ಲಿ ‘ಥ್ಯಾಂಕ್ಯೂ ಮಿ. ಗ್ಲಾಡ್‌’ ನಾಟಕಕ್ಕೆ ೬ ಪ್ರಶಸ್ತಿಗಳು ದೊರೆತಿವೆ. ಹೀಗೆ ನಾಟಕದ ಪ್ರತಿಯೊಂದು ಅಂಗೋಪಾಂಗಗಳ ಜವಾಬ್ದಾರಿಯನ್ನು ಹೊತ್ತು ನಾಟಕಗಳಲ್ಲಿ ತೊಡಗಿಸಿಕೊಂಡವರು. ಇದಲ್ಲದೆ ಇವರು ಸಂಪಾದಿಸಿರುವ ಕೃತಿಗಳೆಂದರೆ ಕುಂದಾಪುರ ತಾಲ್ಲೂಕು ೨ ನೆಯ ಸಾಹಿತ್ಯ ಸಮ್ಮೇಳನದ ಸಂಚಿಕೆ – ‘ಕೊಡಿ’, ಮುದ್ದಣ ಸ್ಮಾರಕ ಮಿತ್ರಮಂಡಲಿಗಾಗಿ ‘ಮನೋರಮಾ’, ಚೇತನ ಕಲಾರಂಗದ ರಜತೋತ್ಸವಕ್ಕಾಗಿ ‘ಸಂಕೇತ; ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಸಂದರ್ಭದ ‘ಅಮೃತ’, ಕರ್ನಾಟಕ ಬ್ಯಾಂಕಿನ ಅಮೃತಮಹೋತ್ಸವದ ಸ್ಮರಣ ಸಂಚಿಕೆ ಮುಂತಾದವುಗಳನ್ನೂ ಸಂಪಾದಿಸಿದ್ದಾರೆ. ೧೯೭೩ರಲ್ಲಿ ಚೇತನ ಕಲಾರಂಗದ ಸ್ಥಾಪಕ ಕಾರ್ಯದರ್ಶಿಯಾಗಿ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದು, ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು, ಉಚಿತ ದಂತ ಚಿಕಿತ್ಸಾ ಶಿಬಿರಗಳು, ಉಚಿತ ಗ್ರಂಥಾಲಯ ವ್ಯವಸ್ಥೆ, ಶಾಲಾ ಕಾಲೇಜುಗಳಿಗೆ ಗ್ರಂಥಾಲಯಗಳಿಗೆ ಪುಸ್ತಕಗಳ ಕೊಡುಗೆ, ಶಾಲಾ ಕಾಲೇಜುಗಳಿಗೆ ಪೀಠೋಪಕರಣಗಳು ಹಾಗೂ ಸಭಾಭವನ ನಿರ್ಮಾಣ, ತಮ್ಮ ಮಾತೋಶ್ರೀಯವರ ನೆನಪಿಗಾಗಿ ಕೋಟೇಶ್ವರ ಜ್ಯೂನಿಯರ್ ಕಾಲೇಜಿನಲ್ಲಿ ಪ್ರತಿವರ್ಷ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹೀಗೆ ಹಲವು ಹತ್ತು ಕಾರ್ಯಕ್ರಮಗಳನ್ನೂ ರೂಪಿಸಿಕೊಂಡು ಕ್ರಿಯಾಶೀಲರಾಗಿರುವ ಐತಾಳರಿಗೆ ೨೦೦೨ ರಲ್ಲಿ ಜೀವಮಾನದ ಸಾಧನೆಗಾಗಿ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ (ಬೆಂಗಳೂರು) ಪ್ರಶಸ್ತಿ,  ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಧರ್ಮಸ್ಥಳದ ಸಾಹಿತ್ಯೋತ್ಸವ ಸಂದರ್ಭದಲ್ಲಿ ವೀರೇಂದ್ರ ಹೆಗಡೆಯವರಿಂದ ಸನ್ಮಾನ, ಉದಯ, ಚಂದನ ಟಿ.ವಿ. ವಾಹಿನಿಗಳಲ್ಲಿ ಇವರ ಸಂದರ್ಶನ, ಕೇರಳ-ಕರ್ನಾಟಕ ಸ್ನೇಹಸೇತು ಸುಹೃದ್ವೇದಿ ಸಂಘಟನೆಯಿಂದ (೨೦೦೬) ಶಿವರಾಮಕಾರಂತ ಪ್ರಶಸ್ತಿ, ಮಣಿಪಾಲ್‌ ಜೇಸೀಸ್‌, ಕುಂದಾಪುರ ಜೇಸಿಸ್‌ ಸಂಸ್ಥೆಗಳಿಂದ ಜಿಲ್ಲೆಯ ಪ್ರತಿಭಾನ್ವಿತ ತರುಣನೆಂಬ ಗೌರವ, ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ದೊರೆತ ಗೌರವ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top