Loading Events

« All Events

ಜಿ.ಬಿ. ಜೋಶಿ

July 29

೨೯..೧೯೦೪ ೨೬.೧೨.೧೯೯೩ ಉತ್ತಮ ನಾಟಕಕಾರ, ಸೃಜನಶೀಲ ಪ್ರಕಾಶಕ, ಸಾಹಿತ್ಯ ಸಂವರ್ಧಕ, ಸ್ನೇಹರಸಿಕ, ಸಹೃದಯಿ ಹರಟೆಗಾರರೆನಿಸಿದ್ದ ಗೋವಿಂದಚಾರ್ಯ, ಭೀಮಾಚಾರ್ಯ ಜೋಶಿ (ಜಿ.ಬಿ. ಜೋಶಿ)ಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳ (ಈಗ ಗದಗ ಜಿಲ್ಲೆ)ದಲ್ಲಿ ೧೯೦೪ರ ಜುಲೈ ೨೯ರಂದು. ತಂದೆ ಭೀಮಾಚಾರ್ಯಜೋಶಿ, ತಾಯಿ ಭಾರತೀಬಾಯಿ. ಪ್ರಾರಂಭಿಕ ಶಿಕ್ಷಣ ಗದಗದಲ್ಲಿ. ಪ್ರೌಢಶಾಲೆ ಮತ್ತು ಇಂಟರ್‌ಮೀಡಿಯೆಟ್‌ವರೆಗೆ ಓದಿದ್ದು ಧಾರವಾಡದಲ್ಲಿ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆದಂತೆ ನಾಟಕಗಳನ್ನೂ ನೋಡುವ ಹುಚ್ಚಿಗೂ ಒಳಗಾಗಿದ್ದರು. ಶಿರಹಟ್ಟಿ ವೆಂಕೋಬರಾಯರ ‘ಶಿರಹಟ್ಟಿ ಮಹಾಲಕ್ಷ್ಮೀ ಪ್ರಸಾದಿತ ನಾಟಕ ಮಂಡಲಿ’, ವಾಮನರಾವ್‌ ಮಾಸ್ತರರ’ ವಿಶ್ವಗುಣದರ್ಶ ನಾಟಕ ಮಂಡಲಿ’ ಮತ್ತು ಗರೂಡ ಸದಾಶಿವರಾಯರ ‘ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಲಿ’ಯ ನಾಟಕಗಳೆಂದರೆ ಪ್ರಾಣ. ಜೊತೆಗೆ ಇವರು ಹುಟ್ಟಿದ  ಹೊಂಬಳವೂ ಕಂಪನಿ ನಾಟಕಗಳಿಗೆ ಜನ್ಮಸ್ಥಾನವಾಗಿದ್ದುದರಿಂದ ಇದರ ಪ್ರಭಾವವೂ ಇವರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದವು. ಶಾಲೆಯಲ್ಲಿದ್ದಾಗಲೇ ಇವರಿಗೆ ಲೇಖನ ಬರೆಯಲು ಬರುತ್ತದೋ ಇಲ್ಲವೊ ಎಂಬುದನ್ನು ಪರೀಕ್ಷಿಸಲು ಗುಪ್ತನಾಮದಿಂದ ಒಂದು ಹರಟೆಯನ್ನೂ ಬರೆದು ಸ್ಪರ್ಧೆಗೆ ಕಳುಹಿಸಿದಾಗ ಅದಕ್ಕೆ ಬಹುಮಾನವೂ ಬಂತು. ಅಣ್ಣನೇ ತೀರ್ಪುಗಾರನಾಗಿದ್ದು ‘ಹರಟೆ ಚಲೋ ಇದೆ’ ಎಂದು ಹೊಗಳಿದಾಗ ಇವರಿಗೆ ಬರವಣಿಗೆಯಲ್ಲಿ ಆಸಕ್ತಿ ಮೂಡಿತು. ಮುಂದೆ ಗೆಳೆಯರ ಗುಂಪು ಸೇರಿದಾಗ ಬರೆದ ಮೊದಲ ಹರಟೆ ‘ನನ್ನ ಅಳಿಯತನ’ ಬರೆದು ಅತ್ತೆಯ ಮನೆಯವರೊಡನೆ ವಾಗ್ಯುದ್ಧವೂ ನಡೆಯಿತು. ಪಾತ್ರಗಳಿಗೆಲ್ಲಾ ಅವರವರದೇ ಹೆಸರು ಹಚ್ಚಿದ್ದೇ ಕಾರಣವಾಗಿತ್ತು. ಜೀವನದ ಅನುಭವವನ್ನು ಬರವಣಿಗೆಗೆ ತರಬೇಕೆಂದರೆ ಅದೇ ಹೆಸರಿನಿಂದ ಬರೆಯಬಾರದೆಂದು ನಿರ್ಧರಿಸಿದರು. ಸಾಹಿತಿಯಾಗುವುದಕ್ಕಿಂತ ಹೆಚ್ಚಿಗೆ ಸಾಹಿತ್ಯ ಪೋಷಿಸುವ ಸಲುವಾಗಿ ಪ್ರಕಾಶನ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತರು. ಪ್ರಕಾಶನ ಸಂಸ್ಥೆಯನ್ನೂ ಕಟ್ಟಿ, ಸಾಹಿತ್ಯ ಪರಿಚಾರಿಕೆ ನಡೆಸಿ, ನಾಡಿನ ಪ್ರಖ್ಯಾತ ಸಾಹಿತಿಗಳ, ಉದಯೋನ್ಮುಖ ಲೇಖಕರ ಅನೇಕ ಗ್ರಂಥಗಳನ್ನು ಪ್ರಕಟಿಸಿದರು. ಜಿ.ಬಿ. ಜೋಶಿ, ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ (ಆನಂದಕಂದ) ವಿ.ಕೃ. ಗೋಕಾಕ್‌, ಶಂಬಾ ಜೋಶಿ, ಪ್ರಹ್ಲಾದ ನರೇಗಲ್ಲ ಮುಂತಾದ ಗೆಳೆಯರೆಲ್ಲ ಸೇರಿ ಪ್ರಾರಂಭಿಸಿದ್ದೇ ಧಾರವಾಡದಲ್ಲಿ ಗೆಳೆಯರ ಗುಂಪು. ಈ ಗುಂಪು ಪ್ರಾರಂಭಿಸಿದ್ದು ಜಯಕರ್ನಾಟಕ ಪತ್ರಿಕೆ ಹಾಗೂ ಜಯ ಕರ್ನಾಟಕ ಗ್ರಂಥ ಪ್ರಕಟಣಾಮಾಲೆ. ಗೆಳೆಯರ ಗುಂಪಿನಲ್ಲಿ ವ್ಯಕ್ತಿಗತ ಬೆಳವಣಿಗೆಗಿಂತ ಸಾಮೂಹಿಕ ಬೆಳವಣಿಗೆಯೇ ಪ್ರಮುಖವಾಗಿತ್ತು. ಬರವಣಿಗೆ ಮಾಧ್ಯಮದಿಂದ ಜನ ಜಾಗೃತಿ ಉಂಟು ಮಾಡುವ, ಕನ್ನಡ ಸಾಹಿತ್ಯ ಪ್ರಜ್ಞೆ ಬೆಳೆಸುವ ಸಾಹಸ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ವಲ್ಪ ಕಾಲದಲ್ಲಿಯೇ ಪ್ರತಿಷ್ಠೆಯನ್ನೂ ಗಳಿಸಿದಂತೆ ಒಳಗೊಳಗೆ ಬಿರುಕು ಮೂಡತೊಡಗಿತು. ಗೆಳೆಯರ ಗುಂಪು ಎರಡಾಯಿತು. ಶಂಬಾ ಜೋಶಿಯವರ ಮಾರ್ಗದರ್ಶನದಲ್ಲಿ ಗೆಳೆಯರು ಪುಸ್ತಕ ಪ್ರಕಾಶನವನ್ನೂ ಕೈಗೆತ್ತಿ ಕೊಂಡಾಗ ಜಿ.ಬಿ. ಜೋಶಿ, ಗೋವಿಂದರಾವ್‌ ಚುಳಕಿ, ಬೆಟಗೇರಿ ಕೃಷ್ಣ ಶರ್ಮರು ಹೊರ ಬಂದಾಗ, ಬೆಟಗೇರಿಯವರು ಮನೋಹರ ಗ್ರಂಥಮಾಲೆ ಎಂಬ ಹೆಸರನ್ನೂ ಸೂಚಿಸಿ ತಮ್ಮ ಕಾದಂಬರಿ ‘ಸುದರ್ಶನ’ವನ್ನು ಪ್ರಕಟಣೆಗೂ ನೀಡಿದರು. ಅರವಿಂದ ಮಹರ್ಷಿಗಳ ಜನ್ಮದಿನವಾದ ಆಗಸ್ಟ್‌ ೧೫ ರಂದೇ ಧಾರವಾಡದಲ್ಲಿ ಮನೋಹರ ಗ್ರಂಥಮಾಲೆಯನ್ನು ೧೯೩೩ ರಲ್ಲಿ ಪ್ರಾರಂಭಿಸಿದರು. ಮೊದಲು ದ.ರಾ. ಬೇಂದ್ರೆ, ವಿ.ಕೃ. ಗೋಕಾಕ್‌, ರಂ.ಶ್ರೀ. ಮುಗಳಿಯವರು ಈ ಮಾಲೆಯ ಸಲಹೆಗಾರರಾದರು. ಮುಂಬಯಿಯ ಜಯಂತಿಲಾಲ್‌ ಪೇಪರ್ ಕಂಪನಿಯವರು ಕೊಟ್ಟ ಉದ್ದರಿ ಕಾಗದ, ಮೋಹನ ಪ್ರೆಸ್ಸಿನ ಮೋಹನ ಕೆ.ಜಿ. ರಾಯದುರ್ಗ ರವರು ಮಾಡಿಕೊಟ್ಟ ಉದ್ದರಿ ಮುದ್ರಣದಿಂದ ಗ್ರಂಥಮಾಲೆಯು ತನ್ನ ಪ್ರಕಾಶನವನ್ನು ಪ್ರಾರಂಭಿಸಿತು. ಇದಕ್ಕಾಗಿ ಚಂದಾದಾರರನ್ನು ಕೂಡಿಸುವ ಹೊಣೆ ಹೊತ್ತು ಹಲವಾರು ಮಂದಿ ಚಂದಾದಾರರನ್ನಾಗಿ ಮಾಡಿಕೊಂಡರು. ೧೯೩೩-೩೪ ರಲ್ಲಿ ಆರು ಪುಸ್ತಕಗಳು ಹೊರಬಂದವು. ಆನಂದಕಂದರ ಸುದರ್ಶನ (ಕಾದಂಬರಿ), ವಿವಿಧ ಲೇಖಕರ ಕಥಾ ಸಂಕಲನ ‘ನವಿಲು ಗರಿ’, ದೊರೆಸ್ವಾಮಿಯವರ ತ್ರಿಪುರದಹನ (ವಿಚಾರಾತ್ಮಕ ನಾಟಕ), ರಂ.ಶ್ರೀ.ಮುಗಳಿಯವರ ಬಾಳುರಿ (ಕಾದಂಬರಿ), ಆರ್. ವ್ಯಾಸರಾವ್‌ ರವರ ಬ್ರಾಹ್ಮಣರ ಹುಡುಗಿ (ಕಾದಂಬರಿ), ಶ್ರೀರಂಗರ ವಿಶ್ವಾಮಿತ್ರನ ಸೃಷ್ಟಿ (ಕಾದಂಬರಿ ಭಾಗ-೧) ಮುಂತಾದವುಗಳು ಪ್ರಕಟವಾದವು. ಆದರೆ ಮೂರು ಜನರ ಪಾಲುದಾರರ ಹೊಟ್ಟೆ ಹೊರೆಯುವಷ್ಟು ಆದಾಯವಿಲ್ಲದೆ ನಿಲ್ಲಿಸುವ ಯೋಚನೆ ಬಂದಾಗ ಜಿ.ಬಿ. ಜೋಶಿಯವರು ತಾವೊಬ್ಬರೇ ಜವಾಬ್ದಾರಿ ಹೊತ್ತು ನಡೆಸಲು ಮುಂದೆ ಬಂದರು. ಚಂದಾದಾರರನ್ನೂ ಕೂಡಿಸಲು ಸಾಕಷ್ಟು ಹೆಣಗಿದರು. ಆದರೆ ಇದರ ಸದಸ್ಯರಲ್ಲಿ ಬರೇ ಬುದ್ಧಿ ಜೀವಿಗಳಷ್ಟೇ ಅಲ್ಲದೆ ಸಾಮಾನ್ಯವರ್ಗದವರೂ ಸೇರಿದ್ದರು. ಒಮ್ಮೆ ಚಂದಾದಾರರೊಬ್ಬರ ಮನೆಗೆ ಪುಸ್ತಕ ಮುಟ್ಟಿಸಲು ಜೋಶಿಯವರು ಹೋದಾಗ, ಆ ಸದಸ್ಯ ತೀರಿಕೊಂಡಿದ್ದು ಕೇಳಿ ಇವರಿಗೆ ಆಘಾತವಾಯಿತು. ಆದರೆ ಆತನ ಶ್ರೀಮತಿ ಹೊರಬಂದು, ‘ನಮ್ಮ ಯಜಮಾನರು ಮನೋಹರ ಗ್ರಂಥ ಮಾಲದ ಚಂದಾ ನಿಲ್ಲಿಸ ಬ್ಯಾಡ್ರಿ ಎಂದು ಬರೆದಿಟ್ಟು ಹೋಗ್ಯಾರ್ರಿ‍…’ ಎಂದು ಪುಸ್ತಕ ಪಡೆದು ಹಣ ಸಲ್ಲಿಸಿದಳಂತೆ. ಈ ದೃಶ್ಯ ನೋಡಿ ಇವರಿಗೆ ಮಾತೇ ಹೊರಡದಾಯಿತಂತೆ. ಹೀಗೆ ಏಕೈಕ ವೀರರಾಗಿ ಖಡ್ಗ (ಲೇಖನಿ) ಹಿಡಿದ ಜಿ.ಬಿ. ಯವರು ಹಲವಾರು ಅಡೆತಡೆಗಳನ್ನು ದಾಟುತ್ತಾ, ಪ್ರಕಟಣೆಯನ್ನು ಮುಂದುವರೆಸಿದರು. ಶಿವರಾಮಕಾರಂತ, ಮಾಸ್ತಿ, ರಂ.ಶ್ರೀ., ಆನಂದಕಂದ, ವಿ.ಕೃ. ಗೋಕಾಕ್‌, ಶ್ರೀರಂಗ, ಅ.ನ.ಕೃ., ರಾವಬಹದ್ದೂರ್ ಮುಂತಾದ ಹಳೆ ತಲೆಮಾರಿನ ಅನೇಕರ ಪ್ರಸಿದ್ಧ ಕೃತಿಗಳನ್ನೂ ಪ್ರಕಟಿಸಿದಂತೆ ಯು.ಆರ್. ಅನಂತಮೂರ್ತಿ, ಗಿರೀಶ್‌ ಕಾರ್ನಾಡ್‌, ಶಾಂತಿನಾಥ ದೇಸಾಯಿ, ಎ.ಕೆ. ರಾಮಾನುಜನ್‌, ಯಶವಂತ ಚಿತ್ತಾಲ, ಚಂದ್ರಶೇಖರ ಕಂಬಾರ ಮೊದಲಾದವರ ಚೊಚ್ಚಲ ಕೃತಿಗಳು ಬೆಳಕು ಕಂಡಿದ್ದು ಇದೇ ಮಾಲೆಯಿಂದಲೇ. ಪುಸ್ತಕದ ಮಾಳಿಗೆಯ ಅಟ್ಟವೇ ಸಾಹಿತಿಗಳ ಸಂಘಮ ಸ್ಥಳ. ಕವನ ವಾಚನ, ಸಾಹಿತ್ಯ ಚರ್ಚೆಯ ನಂತರ ಚಹಾ ಸತ್ಕಾರ. ಊಟದ ವೇಳೆಯವರೆಗೆ ಇದ್ದವರು ಮನೆಯ ಅತಿಥಿಗಳು. ಹೀಗೆ ಪ್ರತಿದಿನವೂ ಸಾಹಿತ್ಯಿಕ ಚರ್ಚೆಯ ತಾಣವಾಗಿತ್ತು. ಬೇಂದ್ರೆ, ರಂ.ಶ್ರೀ, ಮುಗಳಿ, ಆನಂದಕಂದರ ನಂತರ ಸಲಹಾ ಸಮಿತಿಯಲ್ಲಿ ಕೀರ್ತಿನಾಥ್‌ ಕುರ್ತಕೋಟಿ, ಗಿರೀಶ್‌ ಕಾರ್ನಾಡ್‌, ಯಶವಂತ ಚಿತ್ತಾಲ ಸಂಸ್ಥೆಯ ಪ್ರಗತಿಗಾಗಿ ಶ್ರಮಿಸಿದವರು. ಅಂದು ಉತ್ತರ ಕರ್ನಾಟಕದಲ್ಲಿ ಜಿ.ಬಿ. ಜೋಶಿಯವರು, ದಕ್ಷಿಣದಲ್ಲಿ (ಮೈಸೂರಿನಲ್ಲಿ) ಕೂಡ್ಲಿ ಚಿದಂಬರಂ ರವರು ಕನ್ನಡ ಸಾಹಿತ್ಯ ಪ್ರಕಾರಕ್ಕೆ ಕೊಟ್ಟ ಕೊಡುಗೆಯು ಬಹುದೊಡ್ಡದೇ ಆಗಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಿಸುವಂತಾಯಿತು. ಪುಸ್ತಕ ಪ್ರಕಟಣೆಯೊಂದರಲ್ಲೇ ತೃಪ್ತರಾಗದ ಜೋಶಿಯವರು ಪ್ರಯೋಗಶೀಲತೆಗೆ ಹೆಸರಾದರು. ಬಿಡಿಮುತ್ತು ಎಂಬ ಹೆಸರಿನಿಂದ ಹಲವಾರು ಕೃತಿಗಳನ್ನೂ ಪ್ರಕಟಿಸಿದರು. ಮನ್ವಂತರ ಎಂಬ ಅರ್ಧವಾರ್ಷಿಕ ಸಾಹಿತ್ಯ ಸಂಚಿಕೆಯನ್ನೂ ಕೆಲವರ್ಷ ನಡೆಸಿದರು. ಗ್ರಂಥಮಾಲೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ (೧೯೫೮)’ ನಡೆದು ಬಂದ ದಾರಿ’ಯನ್ನೂ ಅವಲೋಕಿಸಲು ಮೂರು ಸಂಪುಟಗಳಲ್ಲಿ ಇತಿಹಾಸ, ಕಾವ್ಯ, ನಾಟಕ, ಸಣ್ಣಕಥಾ ಸಂಕಲನಗಳು, ಪ್ರಬಂಧದ ಇತಿಹಾಸ ಕೃತಿಗಳು, ಪೌರಾಣಿಕ ಕಾದಂಬರಿ, ಪ್ರವಾಸ ಕಥನ,ಸಾಹಿತ್ಯ ವಿಮರ್ಶೆ, ಲಲಿತ ಪ್ರಬಂಧಗಳು, ಜೀವನ ಚರಿತ್ರೆಗಳು ಮುಂತಾದ ಸುಮಾರು ೧೫೦ ಕೃತಿಗಳನ್ನು ಪ್ರಕಟಿಸಿದರು. ಸುವರ್ಣ ಮಹೋತ್ಸವ ಸಂದರ್ಭದಲ್ಲಿ (೧೯೮೪) ‘ಪುಟ ಬಂಗಾರ’ ಎಂಬ ಐದು ಸಂಪುಟಗಳಲ್ಲಿ ಸಣ್ಣ ಕಥಾ ಸಂಕಲನಗಳು, ಹರಟೆ, ವ್ಯಕ್ತಿ ಪರಿಚಯ, ಏಕಾಂಕ ನಾಟಕಗಳು, ಕಾದಂಬರಿಗಳು, ಮುನ್ನುಡಿಗಳು, ವಿಮರ್ಶೆಗಳ ಜೊತೆಗೆ ದ.ರಾ. ಬೇಂದ್ರೆಯವರ ಆಯ್ದ ನೂರು ಕವಿತೆಗಳನ್ನು ಐದನೆಯ ಸಂಪುಟದಲ್ಲಿ ಪ್ರಕಟಿಸಿದರು. ಅನೇಕ ಲೇಖಕರು ಒಬ್ಬೊಬ್ಬರು ಒಂದೊಂದು ಅಧ್ಯಾಯವನ್ನೂ ಬರೆಯುವ ಪ್ರಾಯೋಗಿಕ ಕಾದಂಬರಿ ‘ಖೋ’ ೧೯೫೬ ರಲ್ಲಿ ಪ್ರಕಟಿಸಿದರು. ಪುಸ್ತಕಗಳನಷ್ಟೇ ಹೊರತರದೆ ಜೋಶಿಯವರು ಅದೆಷ್ಟೋ ಲೇಖಕರು ಪ್ರಕಾಶಿಸುವಂತೆ ಮಾಡಿದರು. ಜೋಶಿಯವರ ಮಗ ರಮಾಕಾಂತ ಜೋಶಿಯವರು ಧಾರವಾಡದ ಕಿಟೆಲ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿದ್ದು ಸಾಹಿತ್ಯ ಪ್ರಕಾಶನದಲ್ಲಿ ತಂದೆಗೆ ನೆರವಾದರು. ಎರಡನೆಯ ಮಗ ಗೋಪಾಲ ಜೋಶಿ ಪುಸ್ತಕ ವಿತರಣೆ ಕೆಲಸ ನೋಡಿಕೊಂಡರೆ ಮೂರನೆಯ ಮಗ ರಾಘವೇಂದ್ರ ಜೋಶಿ ಸಹ ಪರೋಕ್ಷವಾಗಿ ಸಹಕರಿಸತೊಡಗಿದರು. ಪ್ರಕಾಶರಾಗಿದ್ದಷ್ಟೇ ಅಲ್ಲದೆ ಸೃಜನ ಶೀಲ ಲೇಖಕರಾಗಿದ್ದ ಜೋಶಿಯವರ ಲೇಖನಿಯಿಂದ ಹಲವಾರು ಮೌಲಿಕ ಕೃತಿಗಳು ಹೊರ ಬಂದಿವೆ. ‘ಜಡಭರತ’, ‘ಅನಾಮಧೇಯ’ ಕಾವ್ಯನಾಮದಲ್ಲಿ ಹಲವಾರು ನಾಟಕಗಳನ್ನೂ ರಚಿಸಿದರು. ಆ ಊರು ಈ ಊರು, ಸತ್ತವನ ನೆರಳು, ಕದಡಿದ ನೀರು, ಪರಿಮಳದವರು ನಾನೇ ಬಿಜ್ಜಳ, ಜರ್ಮನ ಬಂಗ್ಲೆ ಮುಂತಾದ ನಾಟಕಗಳು; ಜಡಭರತನ ಕನಸುಗಳು (ಪ್ರಬಂಧ); ಜೀವಫಲ (ಕವನ ಸಂಕಲನ), ಧರ್ಮಸೆರೆ (ಕಾದಂಬರಿ) ಮುಂತಾದವುಗಳನ್ನೂ ರಚಿಸಿದರು. ಗಿರೀಶ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಚಲನಚಿತ್ರಕ್ಕೆ (೧೯೭೮) ಸಂಭಾಷಣೆ ಬರೆದುದಲ್ಲದೆ ಒಂದು ಪಾತ್ರವನ್ನೂ ವಹಿಸಿದರು. ‘ಧರ್ಮಸೆರೆ’ ಕಾದಂಬರಿಯನ್ನು ಕಣಗಾಲ್‌ ಪುಟ್ಟಣ್ಣನವರು ಇದೇ ಹೆಸರಿನಿಂದ ಚಲನಚಿತ್ರವಾಗಿಸಿದರು (೧೯೭೯). ಹೀಗೆ ಸಾಹಿತ್ಯದ ಸೆಲೆ, ಸ್ಫೂರ್ತಿಯ ನೆಲೆಯಾಗಿದ್ದ ಜಿ.ಬಿ. ಯವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ನಾಟಕ ಅಕಾಡಮಿ ಪ್ರಶಸ್ತಿ, ಫೆಡರೇಷನ್‌ ಆಫ್‌ ಇಂಡಿಯನ್‌ ಪಬ್ಲಿಷ್‌ರವರ ಪ್ರತಿಷ್ಠಿತ ‘ಪ್ರಕಾಶಕ ಪ್ರಶಸ್ತಿ’, ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಗೌರವ ಪ್ರಶಸ್ತಿಗಳು ದೊರೆತಿವೆ. ಕನ್ನಡ ಪ್ರಕಾಶನದ ಭೀಷ್ಮರೆನಿಸಿದ್ದ ಜಿ.ಬಿ. ಯವರು ಸಾಹಿತ್ಯ ಲೋಕದಿಂದ ಕಣ್ಮರೆಯಾದರೂ (೨೬.೧೨.೧೯೯೩) ಮಗ ರಮಾಕಾಂತ ಜೋಶಿ ಮತ್ತು ಮೊಮ್ಮಗ ಸಮೀರ ಜೋಶಿಯವರ ನೇತೃತ್ವದಲ್ಲಿ ಸಹಸ್ರ ಚಂದ್ರ ದರ್ಶನದ (೮೦ ವರ್ಷಗಳು) ಭಾಗ್ಯವನ್ನೂ ಎದುರು ನೋಡುತ್ತಿರುವ ಮನೋಹರ ಗ್ರಂಥಮಾಲೆಯು ಓದುಗರಿಗೆ ಹೊಸ ಹೊಸ ಅವಕಾಶಗಳನ್ನು ಕಲ್ಪಿಸುವಲ್ಲಿ ಆಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಾ ಬೆಳೆಯುತ್ತಿದೆ.

Details

Date:
July 29
Event Category: