೨೧.೫.೧೯೬೪ ೩೦.೪.೨೦೦೦ ಅತಿಕಿರಿಯ ವಯಸ್ಸಿನಲ್ಲೇ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಗ. ವಿಜಯಕುಮಾರ ಅತ್ರಿಯವರು ಹುಟ್ಟಿದ್ದು ಕನಕಪುರದಲ್ಲಿ. ತಂದೆ ಎಸ್. ಗಣೇಶ ಅತ್ರಿ, ತಾಯಿ ಬಿ.ಎನ್. ನಾಗರತ್ನಮ್ಮ. ಓದಿದ್ದು ವಿಜ್ಞಾನ ಪದವಿ- ಬೆಂಗಳೂರಿನ ಪಿ.ಇ.ಎಸ್. ಕಾಲೇಜಿನಲ್ಲಿ. ಸ್ಕೂಲು ಕಾಲೇಜು ದಿನಗಳಿಂದಲೂ ಸಿನಿಮಾ ಹಾಡಿನ ಪುಸ್ತಕಗಳನ್ನು ಸಂಗ್ರಹಿಸಿ ಹಾಡುವ ಹುಚ್ಚು. ತಾಯಿಯೂ ಒಳ್ಳೆಯ ಹಾಡುಗಾರ್ತಿ. ಸಂಪ್ರದಾಯದ ಹಾಡುಗಳ ಸುಶ್ರಾವ್ಯ ಗಾಯಕಿ, ಸಂಜೆ ವೇಳೆ ಮಕ್ಕಳನ್ನೆಲ್ಲಾ ಕೊಡಿಸಿಕೊಂಡು ಮಾಡುತ್ತಿದ್ದ ಭಜನಾಕಾರ್ಯಕ್ರಮ. ೧೯೮೩ ರಲ್ಲಿ ವಿದ್ವಾನ್ ಎಲ್. ನರಸಿಂಗರಾವ್ ಬಳಿ ಕರ್ನಾಟಕ ಸಂಗೀತ ಮತ್ತು ಹಾರ್ಮೋನಿಯಂ ಕಲಿಕೆ. ನಂತರ ಹಿಂದೂಸ್ತಾನಿ ಸಂಗೀತದಲ್ಲಿ ಆಸಕ್ತಿ ಮಾಡಿ ಪಂ. ಶೇಷಾದ್ರಿ ಗವಾಯಿಗಳ ಬಳಿ ಕಲಿತ ಹಿಂದೂಸ್ತಾನಿ ಸಂಗೀತ. ಉದ್ಯೋಗಕ್ಕೆ ಸೇರಿದ್ದು ಇ.ಸಿ.ಇ. ರೆಕಾರ್ಡಿಂಗ್ ಕಂಪನಿ. ನಂತರ ಎಚ್.ಎಂ.ವಿ. ಮತ್ತು ಸಿ.ಬಿ.ಎಸ್. ಕಂಪನಿಗಳಲ್ಲಿ ಕೆಲಕಾಲ. ರಾಮಕೃಷ್ಣಾಶ್ರಮದ ಕಾರ್ಯಕ್ರಮದಿಂದ ಹಾಡುಗಾರಿಕೆ ಕಾರ್ಯಕ್ರಮ ಪ್ರಾರಂಭ. ಇವರ ಹಾಡುಗಾರಿಕೆಗೆ ಶೇಷಾದ್ರಿಗವಾಯಿಗಳೇ ನೀಡುತ್ತಿದ್ದ ಹಾರ್ಮೋನಿಯಂ ಸಾಥಿ. ಇವರ ಧ್ವನಿ ಪಿ.ಬಿ. ಶ್ರೀನಿವಾಸ್ರವರ ಧ್ವನಿಯನ್ನು ಹೋಲುತ್ತಿದ್ದುದರಿಂದ ಕೇಳುಗರು ಜ್ಯೂನಿಯರ್ ಪಿ.ಬಿ. ಎಂದೇ ಮಾಡಿದ ನಾಮಕರಣ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕಾಗಿ ಮಕ್ಕಳಿಗಾಗಿ ಅಕ್ಕ ಹೇಮಾರೊಡನೆ ಮಾಡಿದ ಮೊದಲ ರಾಗ ಸಂಯೋಜನೆಯ ಗೀತೆ. ಮೊದಲ ಕ್ಯಾಸೆಟ್ ಲಲಿತಾ ಸಹಸ್ರನಾಮದಲ್ಲಿ ಶಾಮಲಾ ದಂಡಕಾಷ್ಟಕಕ್ಕೆ ಹಾಡಿದ್ದು. ನಂತರ ಸುಮಾರು ೩೦೦ ಕ್ಯಾಸೆಟ್ಗಳಿಗೆ ಹಾಡುಗಾರಿಕೆ. ಮಧುರ ಸಂಗೀತ ಸಂಸ್ಥೆ ಸ್ಥಾಪಿಸಿ ಸ್ನೇಹಿತರೊಡನೆ ನೀಡುತ್ತಿದ್ದ ಕಾರ್ಯಕ್ರಮ. ಮಂಜುಳಾ ಗುರುರಾಜ್ ಜೊತೆ ’ಸಾಧನಾ ಸಂಗೀತ ಶಾಲೆ’ ಸ್ಥಾಪಿಸಿ ಪ್ರಾಂಶುಪಾಲರಾಗಿ ಎರಡು ವರ್ಷ. ೧೯೯೩ರ ಆಗಸ್ಟ್ ೨೭ ರಂದು ಸ್ಥಾಪಿಸಿದ್ದು ’ಸಂಗೀತ ಗಂಗಾ’ ಸಂಗೀತ ಪಾಠಶಾಲೆ. ಸಂಗೀತ ಗಂಗಾ ವಾದ್ಯಗೋಷ್ಠಿಯ ಮುಖಾಂತರ ಕರ್ನಾಟಕದಾದ್ಯಂತ ನೀಡಿದ ನೂರಾರು ಕಾರ್ಯಕ್ರಮಗಳು. ಪ್ರತಿವರ್ಷ ರಾಜ್ಯದ ವಿವಿಧೆಡೆ ನಡೆಸಿದ ಆರು ಸಂಗೀತ ಸಮ್ಮೇಳನಗಳು. ಕಿರಿಯ ವಯಸ್ಸಿಗೆ ಸಂದ ಗೌರವಗಳು ಹಲವಾರು. ಗೌರಿ ಗಣೇಶ ಚಿತ್ರದ ಹಾಡಿಗೆ ಚಿತ್ರ ರಸಿಕರ ಸಂಘದಿಂದ ಉತ್ತಮ ಗಾಯಕ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ. ಹಾಡಿನ ಕೋಗಿಲೆ, ಇನಿದನಿಯ ಗಾಯಕ, ಗಾನ ಗಂಧರ್ವ, ಗಾನ ಸಾರ್ವಭೌಮ ಮುಂತಾದ ಬಿರುದುಗಳು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಎರಡು ಬಾರಿ ನೇಮಕ. ಹೆಂಡತಿಯ ಊರಾದ ಶೃಂಗೇರಿಯ ಬಳಿ ‘ಉಳುವೆ ಬೈಲು’ ಜೈ ಶಂಕರ್ ಯುವಕ ಸಂಘದಲ್ಲಿ ಹಾಡಿದ ಮಾರನೆಯ ದಿನ ತುಂಗಾ ನದಿಯಲ್ಲಿ ಆಕಸ್ಮಿಕಕ್ಕೊಳಗಾಗಿ ಕುಟುಂಬದ ಐವರು ಮಂದಿಯೊಡನೆ ನೀರುಪಾಲು. ಸುಗಮ ಸಂಗೀತ ಕ್ಷೇತ್ರದ ಏರು ನಕ್ಷತ್ರವಾಗಿದ್ದ ಅತ್ರಿಯವರು ಸಾವಿನ ಮಡಿಲಿಗೆ ಜಾರಿದ್ದು ಸಂಗೀತ ಕ್ಷೇತ್ರಕ್ಕಾದ ನಷ್ಟ. ಇದೇ ದಿನ ಹುಟ್ಟಿದ ಕಲಾವಿದರು ಶ್ರೀನಿವಾಸಯ್ಯ ಕೆ.ಟಿ. – ೧೯೨೮ ವಿ.ಎಂ. ನಾಗರಾಜ್ – ೧೯೪೩ ಚಂದ್ರಕಾಂತ್.ಎಂ – ೧೯೫೪ ಶೇಖನಗೌಡ. ಕೆ.ಪಿ. – ೧೯೬೩.
* * *