೧೬-೩-೧೯೩೫ ೨೫-೩-೨೦೦೨ ಪ್ರಖ್ಯಾತ ರಂಗಕರ್ಮಿ ಶಿವಾನಂದರವರು ಹುಟ್ಟಿದ್ದು ಬೆಂಗಳೂರು. ತಂದೆ ವೃತ್ತಿ ರಂಗಭೂಮಿಯ ನಾಟಕ ರತ್ನ ಡಾ. ಗುಬ್ಬಿವೀರಣ್ಣನವರು, ತಾಯಿ ಜಿ. ಸುಂದರಮ್ಮ. ಓದಿದ್ದು ಬಿ.ಎಸ್ಸಿ. ನಾಟಕದ ವಾತಾವರಣದಲ್ಲೆ ಬೆಳೆದದ್ದರಿಂದ ಸ್ವಾಭಾವಿಕವಾಗಿ ನಾಟಕದ ಕಡೆ ಆಕರ್ಷಿತರಾದರು. ಬಾಲ್ಯದಲ್ಲಿ ಕೃಷ್ಣ, ಪ್ರಹ್ಲಾದ ಮುಂತಾದ ಬಾಲ ಪಾತ್ರಗಳ ನಿರ್ವಹಣೆ. ಬೇಸಿಗೆ ರಜೆಯಲ್ಲಿ ಕಂಪನಿ ನಾಟಕಗಳು ನಡೆಯುತ್ತಿದ್ದೆಡೆಗೆ ಹೋಗಿ ಬಾಲ ನಟರ ಪಾತ್ರಾಭಿನಯ. ಬ.ಎಸ್ಸಿ. ಮುಗಿಸಿದ ನಂತರ ಸೇರಿದ್ದು ದೆಹಲಿಯ ಏಷಿಯನ್ ಥಿಯೇಟರ್ ಇನ್ಸ್ಟಿಟ್ಯೂಟ್ನಲ್ಲಿ ಮಕ್ಕಳ ರಂಗಭೂಮಿಯ ಬಗ್ಗೆ ಪಡೆದ ವಿಶೇಷ ತರಬೇತಿ. ಮೈಲ್ಸ್ ಲೀ ರವರಿಂದ ಕಲಿತ ಮೂಕಾಭಿನಯ, ಅಂಗಾಂಗಗಳ ಮೇಲೆ ಸಾಧಿಸಿದ ಹಿಡಿತ, ಧ್ವನಿ ಏರಿಳಿತದಲ್ಲಿ ಮಾಡಿದ ಸಾಧನೆ. ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಾಟಕದ ಬಗ್ಗೆ ಕೈಗೊಂಡ ಆಳವಾದ ಅಧ್ಯಯನ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಓದುತ್ತಿದ್ದಾಗಲೇ ರಂಗದ ಮೇಲೆ ತಂದ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರ. ಅಭಿನಯ, ನಿರ್ದೇಶನ, ರಂಗಸಜ್ಜಿಕೆ, ಪ್ರಸಾಧನ ಕಲೆಯ ಬಗ್ಗೆ ಆಳವಾದ ಅಧ್ಯಯನ. ಬೆಂಗಳೂರಿಗೆ ಬಂದನಂತರ ಕಟ್ಟಿದ ಕಲಾಕುಂಜ ನಾಟಕ ಸಂಸ್ಥೆ, ವಿಶಿಷ್ಟ ರೀತಿಯ ರಂಗಸಜ್ಜಿಕೆಯ ಅಳವಡಿಕೆ. ಹಲವಾರು ನಾಟಕಗಳ ರಚನೆ. ಆಂಗ್ಲ ಕವಿ ಎರಿಕ್ ಹ್ಯಾರಿ ಜೋನ್ಸ್ ರವರು ಬರೆದ ನಾಟಕ Death of the line ಅನುವಾದ ‘ಭ್ರಮೆ’. ಬೆಂಬಿಡದ ಭೂತ, ಯಾರ ಸಾಕ್ಷಿ?, ಸರ್ವೇಜನಾ ಸುಖಿನೋ ಭವಂತು, ಲಕ್ಷ್ಮೀ ಕಟಾಕ್ಷ, ಮಂತ್ರದ ಅವರೇಕಾಳು, ಕುಳ್ಳನ ಸಾಹಸ ಇತರೆ ನಾಟಕಗಳು. ನಿರ್ದೇಶಿಸಿದ ನಾಟಕಗಳು-ದಹನ ಚಿತ್ರ, ಯಯಾತಿ, ಸೋಕ್ರಟೀಸ್, ಬಹಿಷ್ಕಾರ, ವ್ಯೂಹ, ಯಾರಿಗೆ ಮಾಡ್ತಿ ಮ್ಯಾಂವ್, ದೇವರಿಗೇ ದಿಕ್ಕು, ಬಲಿದಾನ, ಬಾಕಿ ಇತಿಹಾಸ ಮೊದಲಾದವು. ಅಭಿನಯಿಸಿದ ನಾಟಕದಲ್ಲಿ ಕುರುಡು ಕಾಂಚಾಣ,ಸದ್ದು! ವಿಚಾರಣೆ ನಡೆಯುತ್ತಿದೆ, ಕಾಡಾನೆ, ಕತ್ತಲೆ ಬೆಳಕು, ಜೋಕುಮಾರಸ್ವಾಮಿ, ತುಘಲಕ್, ಗಿಳಿಯು ಪಂಜರದೊಳಿಲ್ಲ, ಈಡಿಪಸ್ ಪ್ರಮುಖವಾದುವು. ಅಭಿನಯಿಸಿದ ಚಲನಚಿತ್ರಗಳು-ಸುಬ್ಬಾಶಾಸ್ತ್ರಿ, ಮಾಡಿಮಡಿದವರು, ಸಂಸ್ಕಾರ, ನಂಜುಂಡಿ ಕಲ್ಯಾಣ, ಆಸ್ಫೋಟ, ಓಂ, ಯಾರ ಸಾಕ್ಷಿ, ಹಲವಾರು ಚಿತ್ರಗಳಿಗೆ ಸಂಭಾಷಣೆ ಮತ್ತು ಸಹನಿರ್ದೇಶನ, ಕಿರುತೆರೆಯ ಹಲವಾರು ಧಾರವಾಹಿಯ ನಟ. ಸರಳ ಸಜ್ಜನ, ಸಂಭಾವಿತ ನಟ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ. ಇದೇ ದಿನ ಹುಟ್ಟಿದ ಕಲಾವಿದರು : ಎಂ.ಎಸ್. ಶೀಲಾ – ೧೯೫೨
* * *