Loading Events

« All Events

  • This event has passed.

ಜೀ.ಶಂ. ಪರಮಶಿವಯ್ಯ

November 12, 2023

೧೨.೧೧.೧೯೩೩ ೧೭..೧೯೯೫ ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ವಿದ್ವಾಂಸ, ಜಾನಪದ ಭೀಷ್ಮ, ಜಾನಪದ ಗಣಿ ಮುಂತಾದ ಹಲವಾರು ವಿಶೇಷಣಗಳಿಗೆ ಪಾತ್ರರಾಗಿದ್ದ ಜೀಶಂಪ ಎಂದೇ ಖ್ಯಾತರಾದ ಜೀ.ಶಂ. ಪರಮಶಿವಯ್ಯನವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಬಲ ಜೀರಹಳ್ಳಿಯಲ್ಲಿ ೧೯೩೩ರ ನವಂಬರ್‌‌೧೨ ರಂದು. ಹೈಸ್ಕೂಲುವರೆಗೆ ಓದಿದ್ದು ಬೆಂಗಳೂರಿನಲ್ಲಿ. ಅಧ್ಯಾಪಕರಾದ ಹೊಯ್ಸಳ ಹಾಗೂ ಪಕ್ಕದ ಮನೆಯಲ್ಲಿದ್ದ ಪು.ತಿ.ನ. ರ ಸಹವಾಸದಿಂದ ಹಿಡಿದ ಸಾಹಿತ್ಯದ ಗೀಳು. ವಿದ್ಯಾರ್ಥಿ ದೆಸೆಯಲ್ಲಿಯೇ ಬರೆದ ಕೆಲ ಕವನಗಳು ತಾಯಿ ನಾಡು ಪತ್ರಿಕೆಯಲ್ಲಿ ಪ್ರಕಟ. ಇಂಟರ್‌ಗೆ ಸೇರಿದ್ದು ಮೈಸೂರಿನ ಯುವರಾಜ ಕಾಲೇಜು. ನಾಪಾಸಾದಾಗ ಉದ್ಯೋಗ ಹುಡುಕಿಕೊಂಡಿದ್ದು ಕನಕಪುರದ ಎಸ್. ಕರಿಯಪ್ಪನವರ ವಿದ್ಯಾಶಾಲೆಯಲ್ಲಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿ. ಇಂಟರ್ ಪಾಸಾದ ನಂತರ ಸೇರಿದ್ದು ಮಹಾರಾಜ ಕಾಲೇಜಿನಲ್ಲಿ ಕನ್ನಡ ಆನರ್ಸ್ ಓದಲು, ನಂತರ ಎಂ.ಎ. ಪದವಿ ಪಡೆದರು. ‘ಜಾನಪದ’ ಮಹಾಪ್ರಬಂಧ ಮಂಡಿಸಿ ಪಡೆದ ಡಾಕ್ಟರೇಟ್. ಕಾಲೇಜು ಅಧ್ಯಾಪಕರಾಗಿ ಮೈಸೂರು ವಿಶ್ವವಿದ್ಯಾಲಯ ಸೇರಿ ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿಂದಲೂ ದುಡಿದು ಕೊನೆಗೆ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಉಪಕುಲಪತಿಗಳ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದರು. ಮಾನಸಗಂಗೋತ್ರಿಯಲ್ಲಿ ದೇ.ಜ.ಗೌ. ರವರು ಜಾನಪದ ವಿಭಾಗವನ್ನು ಪ್ರಾರಂಭಿಸಿದಾಗ ಜೀಶಂಪರವರು ಅದರ ಮುಖ್ಯಸ್ಥರಾದರು. ಪಿ.ಆರ್. ತಿಪ್ಪೇಸ್ವಾಮಿಯವರೊಡನೆ ಸೇರಿ ಜಾನಪದ ವಸ್ತು ಸಂಗ್ರಹಾಯವೊಂದನ್ನು ರೂಪಿಸಿದರು. ಕನ್ನಡ ನಾಡಿನ ಮೂಲೆಮೂಲೆಯಲ್ಲೆಲ್ಲಾ ಸಂಚರಿಸಿ ಅಪಾರ ವಸ್ತುಗಳನ್ನು ಸಂಗ್ರಹಿಸಿದರು. ವಸ್ತು ಸಂಗ್ರಹಾಲಯವನ್ನು ಬೆಳೆಸಲು ಹಗಲಿರುಳು ದುಡಿದರು. ಜಾನಪದ ಉಳಿವಿಗೆ ಅದರ ಶಾಸ್ತ್ರೀಯ ಅಧ್ಯಯನಕ್ಕೆ ವಿದ್ವಾಂಸರ ತಂಡವೊಂದನ್ನು ಜಾಗೃತಗೊಳಿಸಿ, ಚೇತನ ಚಿಲುಮೆಯಾಗಿ ದುಡಿದರು. ಜಾನಪದ ವಿದ್ವಾಂಸರಾಗಿದಷ್ಟೇ ಅಲ್ಲದೆ ಸೃಜನಶೀಲ ಬರಹಗಾರರೂ ಆಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರ ‘ಜೀವನಗೀತೆ’ ಎಂಬ ಕವನ ಸಂಕಲನ, ಮೇದರ ಕಲ್ಲು ಮೊದಲಾದ ಪ್ರಬಂಧಗಳು ಅನೇಕ ಸಣ್ಣ ಕಥೆಗಳು; ಜನಪ್ರಗತಿ, ಸುಧಾ ವಾರ ಪತ್ರಿಕೆಗಳಲ್ಲಿ ಜಾನಪದ ಕುರಿತ ಪರಿಚಯಾತ್ಮಕ ಲೇಖನಗಳು ಪ್ರಕಟಗೊಂಡವು. ೧೯೬೭ ರಲ್ಲಿ ತರೀಕೆರೆಯಲ್ಲಿ ನಡೆದ ಪ್ರಥಮ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಜೀಶಂಪರವರ ಸಂಪಾದಕತ್ವದಲ್ಲಿ ಪ್ರಕಟವಾದ ‘ಹೊನ್ನಬಿತ್ತೇವು ಹೊಲಕೆಲ್ಲ’ ಕರತಿಯು ಜಾನಪದ ಕ್ಷೇತ್ರದಲ್ಲೊಂದು ಅಪರೂಪಕ ಕೃತಿ. ಜಾನಪದದ ಬಗೆಗೆ ವಿಶೇಷ ಪರಿಶ್ರಮಗಳಿಸಲು ೧೯೭೯ ರಲ್ಲಿ ಭೇಟಿ ನೀಡಿದ್ದು ಇಂಗ್ಲೆಂಡ್, ಸ್ಕಾಟ್‌ಲೆಂಡ್, ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಸ್ವೀಡನ್, ಫಿನ್‌ಲೆಂಡ್ ಮತ್ತು ಜೆಕೋಸ್ಲೋವಾಕಿಯಾ ದೇಶಗಳಾದರೆ ೧೯೮೨ ರಲ್ಲಿ ಅಮೆರಿಕಾದ ಪ್ರವಾಸ. ೧೯೮೯ ರಲ್ಲಿ ಪ್ರವಾಸ ಮಾಡಿದ್ದು ಟರ್ಕಿ, ಟ್ಯುನೀಷಿಯಾ, ಸೈಪ್ರೆಸ್, ಮುಂತಾದ ದೇಶಗಳು. ಜಾನಪದ ಲೇಖಕರಾಗಿ ಇವರು ಜಾನಪದ ಸಾಹಿತ್ಯ ಸಮೀಕ್ಷೆ, ಮಂಟೇಸ್ವಾಮಿ ನೀಲಗಾರರು, ಮೈಲಾರ ಗೊರವರು, ದೊಂಬಿದಾಸರು, ಕಿನ್ನರಿ ಜೋಗಿಗಳು. ಜಾನಪದ ಅಡುಗೆಗಳು, ಮೂಡಲಪಾಯ, ಜಾನಪದ ಕಲಾವಿದರು ಮುಂತಾದ ೫೦ ಕೃತಿ ರಚಿಸಿದ್ದಲ್ಲದೆ ದಿಬ್ಬದಾಚೆ, ಕಾವಲುಗಾರ, ಜೀವನಗೀತೆ, ಸೋಲು ತಂದ ಸ್ವಯಂವರ, ನಾಡಿನಕರೆ ಮುಂತಾದ ೧೬ ಸಾಹಿತ್ಯಕೃತಿಗಳು; ದಾರಿದೀಪ, ಹೊನ್ನಬಿತ್ತೇವು ಹೊಲ ಕೆಲ್ಲ, ಕುವೆಂಪು ಗದ್ಯ ಪರಿಚಯ ಮುಂತಾದ ೫ ಸಂಪಾದಿತ ಕೃತಿಗಳು; ತೀ.ನಂ.ಶ್ರೀ. ಡಿ.ಎಲ್.ಎನ್., ಕುವೆಂಪು, ದೇಜಗೌ, ಎಚ್.ಎಲ್.ನಾಗೇಗೌಡ, ಕೆ.ವಿ.ಶಂಕರಗೌಡ, ಗುಜ್ಜೇಗೌಡ ಮುಂತಾದವರ ಬಗ್ಗೆ ಗೌರವ ಗ್ರಂಥಗಳು ಹೊರಬರಲು ಕಾರಣರು. ಸಂದ ಗೌರವ ಪ್ರಶಸ್ತಿಗಳು ಹಲವಾರು. ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ (೧೯೭೭). ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವ, ರಾಜ್ಯಪ್ರಶಸ್ತಿ (೧೯೮೭). ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಹದಿಮೂರನೆಯ ಅಧಿವೇಶನದ ಅಧ್ಯಕ್ಷತೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ (೧೯೯೧) ಅಧ್ಯಕ್ಷ ಪದವಿ ಮುಂತಾದವು. ಅದೇ ವರ್ಷ ‘ಜಾನಪದ ಸಂಭಾವನೆ’ ಎಂಬ ಅಭಿನಂದನ ಗ್ರಂಥವೂ ಅರ್ಪಿತ. ಜಾನಪದ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕೆಂಬ ಯೋಜನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದ ಜೀಶಂಪ ರವರನ್ನು ನಿವೃತ್ತಿಯ ನಂತರ ಕಾಡಿದ ಕ್ಯಾನ್ಸರ್‌ನಿಂದ ೧೯೯೫ ರ ಜೂನ್ ೧೭ ರಂದು ನಿಧನರಾದರು.

Details

Date:
November 12, 2023
Event Category: