೨೧.೧.೧೯೨೧ ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಬರೆದು, ವೈಜ್ಞಾನಿಕ ಮನೋಭಾವವನ್ನು ಜನರಲ್ಲಿ ಮೂಡುವಂತೆ ಮಾಡುವಲ್ಲಿ ಶ್ರಮಿಸುತ್ತಿರುವ ಲಕ್ಷ್ಮಣರಾವ್ರವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ೧೯೨೧ರ ಜನವರಿ ೨೧ರಂದು. ತಂದೆ ರಾಘವೇಂದ್ರರಾವ್, ತಾಯಿ ನಾಗಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಹೈಸ್ಕೂಲಿಗೆ ಸೇರಿದ್ದು ದಾವಣಗೆರೆ ಶಾಲೆಗೆ. ಮೈಸೂರಿನ ಇಂಟರ್ ಮೀಡಿಯೆಟ್ ಕಾಲೇಜ್ (ಇಂದಿನ ಯುವರಾಜ ಕಾಲೇಜ್)ನಿಂದ ಇಂಟರ್ ಮೀಡಿಯೆಟ್ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಎಂ.ಎಸ್ಸಿ ಪದವಿಗಳು. ತುಮಕೂರಿನ ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮತ್ತು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಹೊರತಂದ ಇಂಗ್ಲಿಷ್ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿಯೂ ಸಲ್ಲಿಸಿದ ಸೇವೆ. ವಿಜ್ಞಾನದ ಬೋಧನೆಯ ಜೊತೆಗೆ ವೈಜ್ಞಾನಿಕ ಲೇಖನಗಳನ್ನು ಬರೆಯುವ ಹವ್ಯಾಸವನ್ನು ರೂಢಿಸಿಕೊಂಡ ಲಕ್ಷ್ಮಣರಾವ್ರವರು ಬರೆದ ಮೊದಲ ಪುಸ್ತಕ ‘ಆಹಾರ’ (೧೯೪೪), ಎರಡನೆಯದು ಪರಮಾಣು ಚರಿತ್ರೆ (೧೯೪೯). ಹೀಗೆ ಬರವಣಿಗೆಯನ್ನು ಪ್ರಾರಂಬಿಸಿದ ಲಕ್ಷ್ಮಣರಾಯರು ರೂಢಿಸಿಕೊಂಡದ್ದು ಜನಸಾಮಾನ್ಯರಿಗೂ ಅರ್ಥವಾಗುವಂತಹ ಭಾಷೆ ಮತ್ತು ಶೈಲಿ. ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂಬ ದೃಷ್ಟಿಯಿಂದ ಪ್ರಾರಂಭವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾಗಿ ಎಂಟುವರ್ಷಕಾಲ (೧೯೮೦-೮೮) ಉಪಾಧ್ಯಕ್ಷರಾಗಿ, ಎರಡು ವರ್ಷಕಾಲ (೧೯೮೯-೯೦) ಅಧ್ಯಕ್ಷರಾಗಿ ಮತ್ತು ವಿಜ್ಞಾನ ಪರಿಷತ್ತು ನಡೆಸುವ ವಾರ್ಷಿಕ ಜನಪ್ರಿಯ ವಿಜ್ಞಾನ ಲೇಖಕರ ಕಾರ್ಯ ಶಿಬಿರಗಳ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯದ ಪ್ರಬುದ್ಧ ಕರ್ನಾಟಕದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ (೧೯೬೯) ಹೊರತಂದ ವಿಜ್ಞಾನಾಂಕ ವಿಶೇಷ ಸಂಚಿಕೆಯ ಸಂಪಾದಕರಾಗಿ, ವಿಜ್ಞಾನ ಕರ್ನಾಟಕದ ತ್ರೈಮಾಸಿಕದ ಸಂಪಾದಕರಾಗಿ (೧೯೬೭-೭೭), ವಿಜ್ಞಾನ ಪರಿಷತ್ತು ನಡೆಸುತ್ತಿದ್ದ ಬಾಲವಿಜ್ಞಾನ ಮಾಸಪತ್ರಿಕೆಯ ಸಂಪಾದಕರಾಗಿ ಹತ್ತು ವರ್ಷಕಾಲ (೧೯೭೮-೮೮), ವಿಜ್ಞಾನ ಪರಿಷತ್ತು ಹೊರತಂದ ‘ಇಪ್ಪತ್ತು ವಿಜ್ಞಾನಿಗಳು’ ಸಂಕಲನಗಳ ಸಂಪಾದಕರಾಗಿ, ಇಂಗ್ಲಿಷ್ ಕನ್ನಡ ವಿಜ್ಞಾನ ಶಬ್ದಕೋಶದ ಸಂಪಾದಕರಲ್ಲೊಬ್ಬರಾಗಿ (ಕೃಷ್ಣಭಟ್ಟರೊಡನೆ), ಮೈಸೂರು ವಿಶ್ವವಿದ್ಯಾಲಯದ ನಿಘಂಟು ಪರಿಷ್ಕರಣಾ ಯೋಜನೆಯಲ್ಲೂ ಪ್ರಮುಖ ಪಾತ್ರ ವಹಿಸಿದವರು. ‘ಆಹಾರ’, ‘ಪರಮಾಣು ಚರಿತ್ರೆ’, ಗಳನ್ನೊಳಗೊಂಡಂತೆ ‘ಗೆಲಿಲಿಯೋ’, ‘ವಿಜ್ಞಾನವಿಚಾರ’, ‘ಲೂಯಿಪಾಸ್ತರ್’, ರಸಾಯನ ಶಾಸ್ತ್ರ ಪರಿಚಯ (ಮೈಸೂರು ವಿಶ್ವವಿದ್ಯಾಲಯದ ಪದವಿ ಪೂರ್ವ ತರಗತಿಗಳಿಗೆ ಪಠ್ಯಪುಸ್ತಕ) , ‘ಆರ್ಕಿಮಿಡೇಸ್’, ‘ವಿಜ್ಞಾನಿಗಳೊಡನೆ ರಸನಿಮಿಷಗಳು’ ಮುಂತಾದ ೨೦ ಸ್ವತಂತ್ರ ಕೃತಿಗಳು; ‘ಇಂದಿನ ವಿಜ್ಞಾನ ಮತ್ತು ನೀವು’, ‘ನಮ್ಮ ರೈಲ್ವೆಗಳು’, ‘ಜಗತ್ತನ್ನು ಬದಲಾಯಿಸಿದ ವೈಜ್ಞಾನಿಕ ಸಾಧನೆಗಳು’, ‘ಎತ್ತಿನ ಗಾಡಿಗಳು ಮತ್ತು ಉಪಗ್ರಹಗಳು’, ‘ಮೇಘನಾದಸಹಾ’ ‘ಪರಮಾಣುಗಳು’, ‘ಭಾರತದ ಪರಮಾಣು ಯೋಜನೆ’ ಮೊದಲಾದ ೯ ಅನುವಾದಿತ ಕೃತಿಗಳು; ಆರು ಸಂಪಾದಿತ ಕೃತಿಗಳು ಸೇರಿ ಒಟ್ಟು ೩೫ ಕೃತಿಗಳು ಪ್ರಕಟಿತ. ಇವರ ಕೃತಿಗಳನ್ನು ವಿಶ್ವವಿದ್ಯಾಲಯ, ನ್ಯಾಷನಲ್ ಬುಕ್ ಟ್ರಸ್ಟ್, ನವಕರ್ನಾಟಕ, ಸಾಹಿತ್ಯಭಂಡಾರ, ಸುರಚಿಪ್ರಕಾಶನ ಕರ್ನಾಟಕ ಪುಸ್ತಕ ಪ್ರಾಧಿಕಾರ, ಅಪರ್ಣ ಪ್ರಕಾಶನ, ಇಂಡಿಯಾ ಬುಕ್ ಹೌಸ್, ಅತ್ರಿ ಬುಕ್ ಸೆಂಟರ್, ನಿರ್ಮಲ ಪ್ರಕಾಶನ, ಮುಂತಾದ ಸಂಸ್ಥೆಗಳು ಹೊರತಂದಿವೆ. ಇವರು ರಚಿಸಿದ ಕೃತಿಗಳು ಮರುಮುದ್ರಣಗೊಂಡಿರುವುದೇ ಜಾಸ್ತಿ. ಅದರಲ್ಲಿ ‘ಆಹಾರ’ (ಮೂರುಮುದ್ರಣ), ‘ಲೂಯಿ ಪಾಸ್ತರ್’ (ಎರಡು ಮುದ್ರಣ), ‘ವಿಜ್ಞಾನಿಗಳೊಡನೆ ರಸ ನಿಮಿಷಗಳು’ ಒಂಬತ್ತು ಮುದ್ರಣ ಕಂಡಿವೆ ಎಂದರೆ ವಿಜ್ಞಾನ ಬರಹದಲ್ಲಿನ ಅವರ ಜನಪ್ರಿಯತೆ ಅರಿವಾದೀತು. ಹೀಗೆ ವೈಜ್ಞಾನಿಕ ಬರಹಗಳ ಮೂಲಕ ವಿಜ್ಞಾನ ಸಾಹಿತ್ಯವನ್ನೂ ಬೆಳೆಸಿದ ಲಕ್ಷ್ಮಣರಾಯರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು.ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಸಂದರ್ಭದಲ್ಲಿ ಸನ್ಮಾನ, ದಿಲ್ಲಿ ಹಿಂದಿ ಸಮ್ಮೇಳನದಿಂದ ವಿಜ್ಞಾನ ಸರಸ್ವತಿ ಪ್ರಶಸ್ತಿ, ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದಿಂದ ಶಿವರಾಮ ಕಾರಂತ ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿಯ ರಾಷ್ಟ್ರೀಯ ಪುರಸ್ಕಾರ ಮತ್ತು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯಿಂದ ೪ ಬಾರಿ (೧೯೭೧, ೭೬, ೭೬, ೯೪) ಪ್ರಶಸ್ತಿ, ಎನ್.ಸಿ.ಇ.ಆರ್.ಟಿ ಮತ್ತು ಮದರಾಸು ವಿಶ್ವವಿದ್ಯಾಲಯದಿಂದ ಪುರಸ್ಕಾರ ಇವು ಲಕ್ಷ್ಮಣರಾಯರಿಗೆ ಸಂದಿರುವ ಪ್ರಮುಖ ಪ್ರಶಸ್ತಿ ಗೌರವಗಳು.

