ಟಿ.ಆರ್. ಮಹಾದೇವಯ್ಯ

Home/Birthday/ಟಿ.ಆರ್. ಮಹಾದೇವಯ್ಯ
Loading Events

೬-೧೨-೧೯೩೪ ಪ್ರಾಧ್ಯಾಪಕ, ಜಾನಪದ ತಜ್ಞ ಮಹಾದೇವಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮ. ತಂದೆ ರುದ್ರಯ್ಯ, ತಾಯಿ ಹೊನ್ನಮ್ಮ. ಪ್ರೌಢಶಾಲೆಯವರೆಗೆ ಗುಬ್ಬಿಯಲ್ಲಿ. ತುಮಕೂರಿನಲ್ಲಿ ಬಿ.ಎ. ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ ಮತ್ತು ಇಂಗ್ಲಿಷ್) ಪದವಿಗಳು. ಉದ್ಯೋಗಕ್ಕಾಗಿ ಸೇರಿದ್ದು ಬೆಂಗಳೂರಿನ ರೇಣುಕಾಚಾರ‍್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ. ನಂತರ ಕೆ.ಎಲ್.ಇ. ಸಂಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರ ಹುದ್ದೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಉಪಸಂಪಾದಕರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಕೋಶದ ಸಂಪಾದಕರಾಗಿ, ಕರ್ನಾಟಕ ಸರಕಾರದ ರಾಜ್ಯಭಾಷಾ ಆಯೋಗದ ಸದಸ್ಯರಾಗಿ ನಿರ್ವಹಿಸಿದ ಜವಾಬ್ದಾರಿಗಳು. ರಚಿಸಿದ ಸಾಹಿತ್ಯ ಕೃತಿಗಳು ಹಲವಾರು. ಜೀವನಚರಿತ್ರೆ-ಶಾಂತಿನಾಥಕವಿ, ಗುಬ್ಬಿಯ ಮಲ್ಲಣಾರ್ಯ, ಸಿದ್ಧರಾಮಣ್ಣ, ಬಾಲಮಹಂತ, ಬಸವಣ್ಣ, ಮಲ್ಲಿಕಾರ್ಜುನ ಶಿವಯೋಗಿಗಳು, ಡಿ.ಎಂ. ಚಂದ್ರಶೇಖರ್ ಮೊದಲಾದುವು. ಚಿಂತನ ಸಾಹಿತ್ಯ-ಚಿಂತನ ಚಿಲಮೆ, ಚಿಂತನ ಲಹರಿ, ಚಿಂತನ ಬಾಗಿನ, ಚಿಂತನ ತಾಂಬೂಲ, ಚಿಂತನ ಸೌಭಾಗ್ಯ, ಚಿಂತನಮಾಲೆ, ಚಿಂತನ ಕಿರಣ. ಸಂಪಾದಿತ-ನಾಂದಿ, ದಲಿತೋದಯ, ಶರಣ ತತ್ತ್ವಚಿಂತನ, ಉಪನ್ಯಾಸಮಾಲೆ, ಸಮರ್ಪಣೆ, ಸಿದ್ಧರಾಮ ಶ್ರೀವಾಣಿ, ನಿರ್ವಾಣಶ್ರೀ. ಕನ್ನಡ-ಕನ್ನಡ ನಿಘಂಟು, ಕನ್ನಡ ಜಾನಪದ ಕೋಶ, ಕನ್ನಡ ಸಂಕ್ಷಿಪ್ತ ಪದಕೋಶ, ಕಾನೂನು ಪದಕೋಶ, ಸಚಿತ್ರ ಶಾಲಾ ನಿಘಂಟಿನ ಸಂಪಾದಕರು. ಇತರೆ-ಬುದ್ಧ-ಬಸವ, ಸರ್ವಾಚಾರ ಸಂಪದ, ಪ್ರೌಢದೇವರಾಯ, ಗುಬ್ಬಿ ತಾಲ್ಲೂಕು ದರ್ಶನ ಮೊದಲಾದ ೩೫ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಪ್ರಶಸ್ತಿ ಗೌರವಗಳು. ಶರಣ ಸೌರಭ ಕೃತಿಗೆ ಕಾವ್ಯಾನಂದ ಪುರಸ್ಕಾರ, ಸಾಹಿತ್ಯ ಶ್ರೀ ಪ್ರಶಸ್ತಿ, ಕಿಟ್ಟಲ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗುಬ್ಬಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ಸಾತ್ವಿಕ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಡಾ. ಡಿ.ಎಸ್. ಜಯಪ್ಪಗೌಡರು – ೧೯೪೭ ಶಿವಳ್ಳಿ ಕೆಂಪೇಗೌಡ – ೧೯೪೯ ಪೂರ್ಣಿಮಾ ರಾಮಣ್ಣ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top