೪-೩-೧೯೩೮ ಯಶಸ್ವಿ ಕೃಷಿಕ, ಹವ್ಯಾಸಿ ಬರಹಗಾರರಾದ ಟಿ.ಎಲ್. ಸುಬ್ರಹ್ಮಣ್ಯ ಅಡಿಗರು ಹುಟ್ಟಿದ್ದು ಉಡುಪಿ ತಾಲ್ಲೂಕಿನ ವಂಡಾರು ಎಂಬಲ್ಲಿ. ತಂದೆ ಲಕ್ಷ್ಮೀನಾರಾಯಣ ಅಡಿಗ, ತಾಯಿ ರತ್ನಾವತಿ. ಪ್ರಾಥಮಿಕ ವಿದ್ಯಾಭ್ಯಾಸ ಅರಳ ಸುರಳಿ. ಮಿಡ್ಲ್ ಸ್ಕೂಲ್, ಹೈಸ್ಕೂಲು ಓದಿದ್ದು ತೀರ್ಥಹಳ್ಳಿ ಶಾಲೆಯಲ್ಲಿ. ಕಾಲೇಜಿಗೆ ಸೇರಿದ್ದು ಇಂಟರ್ ಮೀಡಿಯೆಟ್ ಕಾಲೇಜು ಶಿವಮೊಗ್ಗ. ಬಿ.ಎ.ನಲ್ಲಿ ಓದಿದ್ದು ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮೇಜರ್ ವಿಷಯಗಳಾದರೆ ಇಂಗ್ಲಿಷ್ ಸಾಹಿತ್ಯ ಮೈನರ್ ವಿಷಯ. ಅಂದಿನ ಕಾಲೇಜಿನ ಗುರುಗಳು ಶ್ರೀ ಅನಂತರಂಗಾಚಾರ್, ಸಾ.ಶಿ. ಮರುಳಯ್ಯ, ಉಮಾಪತಿ, ಯು.ಆರ್. ಅನಂತಮೂರ್ತಿ, ಡಿ.ಟಿ. ರಂಗಸ್ವಾಮಿ, ಪಿ.ವಿ. ಚಂದ್ರಶೇಖರ್, ಜಿ.ಬ್ರಹ್ಮಪ್ಪ ಮುಂತಾದವರು. ಸಾಹಿತ್ಯಕ್ಕೆ ಪ್ರೇರಣೆ ನೀಡಿದವರು ಶ್ರೀ ದ.ರಾ.ಬೇಂದ್ರೆ ಮತ್ತು ಗೋಪಾಲಕೃಷ್ಣ ಅಡಿಗರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಗೀಳು ಹತ್ತಿ ರಚಿಸಿದ ಕವನಗಳು ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಪ್ರಕಟ. ಶ್ರೀ ಕೆ.ವಿ. ಪುಟ್ಟಪ್ಪನವರು ವೈಸ್ ಛಾನ್ಸಲರ್ ಆಗಿದ್ದಾಗ ಹದಿನೈದು ದಿನಕ್ಕೊಮ್ಮೆ ಕಾಲೇಜುಗಳಿಗೆ ಭೇಟಿ ಕೊಡುವ ಕಾರ್ಯಕ್ರಮ. ಅಂದು ಇಂಟರ್ ಮೀಡಿಯೆಟ್ ಕಾಲೇಜಿಗೆ ಬಂದು ವೀಕ್ಷಣೆ ನಡೆಸಿ ಕಾಲೇಜಿಗೊಂದು ಸುಂದರ ಹೆಸರು ಸೂಚಿಸಲು ತಿಳಿಸಿದಾಗ ತರಗತಿಯಲ್ಲಿ ಸುಬ್ರಹ್ಮಣ್ಯ ಅಡಿಗರು ಮತ್ತವರ ಸ್ನೇಹಿತರು ಸೂಚಿಸಿದ ಹೆಸರೇ ‘ಸಹ್ಯಾದ್ರಿ ಕಾಲೇಜು’ ಬೋರ್ಡಿನ ಮೇಲೆ ಬರೆದು ಮೇಣದ ಬತ್ತಿ ಹಚ್ಚಿ ಶಾಶ್ವತಗೊಳಿಸಿದರಂತೆ. ಪದವಿಯ ನಂತರ ಕೆಲವರ್ಷ ಹೈಸ್ಕೂಲು ಉಪಾಧ್ಯಾಯ ವೃತ್ತಿ, ಕೆಲವರ್ಷ ಟ್ಯುಟೋರಿಯಲ್ಸ್ ಇದೀಗ ಆಧುನಿಕ ಬೇಸಾಯ ಪದ್ಧತಿಯನ್ನಳವಡಿಸಿಕೊಂಡ ಯಶಸ್ವಿ ಕೃಷಿಕ. ಹೀಗೆ ಪ್ರಾರಂಭವಾದ ಸಾಹಿತ್ಯದ ನಂಟಿನಿಂದ ರಚಿಸಿದ್ದು ಹಲವಾರು ಕೃತಿಗಳು. ಕವನ ಸಂಕಲನ-ಪರಾಗ. ಪ್ರೇಮಗೀತೆಗಳು-ಮಧುರ ಜೇನು, ದೇವಗಂಗೆ, ಆರದ ಪ್ರೀತಿ, ಸುಖರಾತ್ರಿ. ಭಾವಗೀತೆಗಳು-ಹೃದಯಾಕ್ಷಿ, ಅರ್ಧಾಂಗಿ. ಶೃಂಗಾರ ಕವನಗಳು-ಪ್ರೇಮ ಪೂರ್ಣಿಮೆ, ಒಲಿದ ಹೆಣ್ಣು. ಕೌಟುಂಬಿಕ ರಮ್ಯಗೀತೆ-ಹೂವಿನ ತೇರು. ಪ್ರಣಯಗೀತೆಗಳು-ಪ್ರೇಮ ಸಂಕೇತ, ಗುಟ್ಟಿನ ಹಾಡು. ಭಕ್ತಿಗೀತೆಗಳು-ಚಿನ್ನದ ರಥ, ಆಹ್ವಾನ. ಶ್ರೀ ರಾಘವೇಂದ್ರ ಭಕ್ತಿಗೀತೆಗಳು-ಶ್ರೀ ಗುರು ಶಕ್ತಿ, ಆರಾಧನಾ, ಶ್ರೀಗುರು ಆರಾಧನಾ. ಕಿರುನಾಟಕ-ಕಾಣೆಯಾದ ಹುಡುಗಿಯರು. ಕಿರುಕಾದಂಬರಿ-ಮರುದನಿ. ಕಥಾಸಂಕಲನ-ಕಪ್ಪು ನೀರು, ಹಾರುವ ಕುದುರೆ. ಕಾದಂಬರಿ-ಬಣ್ಣದ ಮುಗಿಲು ಮುಂತಾದ ಪ್ರಮುಖ ಕೃತಿಗಳು. ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಸಣ್ಣ ಕಥೆಗಳು, ಕವನಗಳು ಪ್ರಕಟಿತ. ಕನ್ನಡದಲ್ಲಿ ಬರೆದರೂ ಇಂಗ್ಲಿಷ್ ಕಾವ್ಯದತ್ತ ವಿಶೇಷ ಒಲವು. ಇಂಗ್ಲಿಷ್, ಕನ್ನಡ ಎರಡು ಭಾಷೆಯಲ್ಲಿಯೂ ಪ್ರಾವೀಣ್ಯತೆ. ಆಕಾಶವಾಣಿ ಕೇಂದ್ರಗಳಲ್ಲಿ ಭಾಷಣ, ಕವಿತೆಗಳ ಪ್ರಸಾರ. ಸಂದ ಪ್ರಶಸ್ತಿ ಗೌರವಗಳು-ಭದ್ರಾವತಿ ಕವಿ ಸಮ್ಮೇಳನದಲ್ಲಿ . ಬೆಂಗಳೂರಿನ ಯುವಜನ ಮೇಳದಲ್ಲಿ ಪ್ರಶಸ್ತಿ. ರಿಪ್ಪನ್ಪೇಟೆ ಕನ್ನಡ ಸಂಘ, ತೀರ್ಥಹಳ್ಳಿ ಬ್ರಾಹ್ಮಣ ಸಂಘ, ಅರಳಿ ಸುರಳಿ ಕಾರ್ಪೋರೇಷನ್ ಬ್ಯಾಂಕ್, ಯುವಕ ರೈತ ಸಂಘ ಮುಂತಾದುವುಗಳಿಂದ ಸನ್ಮಾನ. ಯಶಸ್ವಿ ಕೃಷಿಕರಾಗಿಯೂ ಗಳಿಸಿದ ಹಲವಾರು ಬಹುಮಾನಗಳು. ಬಿಡುವಿನ ವೇಳೆಯಲ್ಲಿ ಬರೆದ ಹಲವಾರು ಕಥೆ, ಕವನ ಭಕ್ತಿಗೀತೆಗಳು ಪುಸ್ತಕರೂಪದಲ್ಲಿ ಬರಲು ಕಾದಿವೆ.

