ಟಿ.ಎಸ್‌. ರುಕ್ಮಾಯಿ. (ಮಿಸ್‌. ಸಂಪತ್‌)

Home/Birthday/ಟಿ.ಎಸ್‌. ರುಕ್ಮಾಯಿ. (ಮಿಸ್‌. ಸಂಪತ್‌)
Loading Events
This event has passed.

೦೭..೧೯೨೮ ೨೬..೨೦೧೦ ಮಹಿಳೆಯರ ಉದ್ಯೋಗಕ್ಕಾಗಿ ಗೃಹಕೈಗಾರಿಕೆಗಳು, ಸಹಕಾರಿ ಸಂಸ್ಥೆಗಳು, ಸಂತ್ರಸ್ತ ಉದ್ಯೋಗಿಗಳ ಕುಟುಂಬಕ್ಕಾಗಿ ಸಾಮಾಜಿಕ ಸಂಸ್ಥೆಗಳು-ಇವೇ ಮುಂತಾದ ಹಲವಾರು ಯೋಜನೆಗಳ ರೂವಾರಿಯಾಗಿ, ಸ್ಥಾಪಕಿಯಾಗಿ, ಸಾಹಿತಿಯಾಗಿ ಕಾರ್ಯನಿರತರಾಗಿದ್ದ ರುಕ್ಮಾಯಿಯವರು ಹುಟ್ಟಿದ್ದು ೧೯೨೮ ರ ಮೇ ೭ ರಂದು ಚಿಕ್ಕಬಳ್ಳಾಪುರದಲ್ಲಿ. ತಂದೆ ಟಿ.ಎಸ್‌ ಸಂಪತ್‌ಕುಮಾರ್ ಸ್ವಾತಂತ್ರ್ಯ ಹೋರಾಟಗಾರರು, ತಾಯಿ ಶೃಂಗಾರಮ್ಮ. ಸ್ತ್ರೀಯರಿಗೆ ವಿದ್ಯಾಭ್ಯಾಸದ ಅವಶ್ಯಕತೆಯೇ ಇಲ್ಲವೆಂಬ ಕಾಲದಲ್ಲಿ ವಿಚಾರವಂತರಾದ ತಂದೆಯವರು ಹುಡುಗಿಯನ್ನು ಸೇರಿಸಿದ್ದು ಹುಡುಗರ ಶಾಲೆಗೆ, ಧೈರ್ಯ, ಸಹಕಾರ, ಸ್ಪರ್ಧಾಮನೋಭಾವ ರೂಢಿಸಿಕೊಳ್ಳಲು ಸಹಕರಿಯಾಗಲೆಂದು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರ ಪರಿಣಾಮ ಒಂದು ವರ್ಷದ ಓದಿಗೆ ಅಡೆತಡೆ. ತಂದೆ ಅಸಹಕಾರ ಚಳುವಳಿಯಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದವರು. ಕಾಲೇಜಿಗೆ ಸೇರಿದ್ದು ಬೆಂಗಳೂರಿನ ಮಹಾರಾಣಿ ಕಾಲೇಜು. ಪದವಿ ತರಗತಿಗೆ ಬಂದಾಗ ಸ್ವಾತಂತ್ರ್ಯ ಬಂದು, ಮೈಸೂರು ರಾಜ್ಯಕ್ಕೆ ಸ್ವಾತಂತ್ರ್ಯ ನೀಡಲು ಅಂದಿನ ಮಹಾರಾಜರು ನಿರಾಕರಿಸಿದ್ದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಲ್ಲರೂ ಕಾಲೇಜು ತೊರೆದು ‘ಮೈಸೂರು ಚಲೋ’ ಚಳುವಳಿಯಲ್ಲಿ ಭಾಗಿಯಾದರು. ಮತ್ತೆ ಒಂದು ವರುಷ ಇವರ ಓದಿಗೆ ವಿಘ್ನ. ಆದರೆ ಆದ ಉಪಯೋಗ ಹಲವಾರು ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳ ಪರಿಚಯ. ಬಿ.ಎಸ್ಸಿ., ಪದವಿ ಪಡೆದ ನಂತರ ಸೇರಿದ್ದು ಎಲ್‌.ಎಲ್‌.ಬಿ. ಓದಲು ಕಾನೂನು ಕಾಲೇಜು. ದೇಶದ ಅಭ್ಯುದಯ, ಪಾರದರ್ಶಕ-ಆದರ್ಶ ಆಡಳಿತ, ಸೇವಾ ಮನೋಭಾವದಲ್ಲಿ ನಂಬಿಕೆ ಇಟ್ಟಿದ್ದ ತಂದೆ, ಮಗಳನ್ನು ಅದೇ ರೀತಿ ಬೆಳೆಸಿ ರಾಜಕೀಯ ಸೇರಲು ಪ್ರೇರೇಪಿಸಿದರು. ಬೆಂಗಳೂರು ನಗರಪಾಲಿಕೆ ಚುನಾವಣೆಗೆ ಮಲ್ಲೇಶ್ವರಂ ನಿಂದ ಸ್ಪರ್ಧಿಸಿ ವಿಜೇತರಾಗಿ ೧೯೫೪-೫೮ ರವರೆಗೆ ಸಲ್ಲಿಸಿದ ಸೇವೆ. ಸೇವಾ ಮನೋಭಾವವನ್ನು ಹೊಂದಿದ್ದು ರುಕ್ಮಾಯಿಯವರನ್ನು ಆಕರ್ಷಿಸಿದ್ದು ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರಿಯಲ್ಲಿನ ಕಾರ್ಮಿಕ ಕ್ಷೇಮಾಭಿವೃದ್ಧಿ ವಿಭಾಗದ ಅಧಿಕಾರಿ ಹುದ್ದೆ. ೧೯೫೯ ರಿಂದ ೧೯೮೫ ರವರೆವಿಗೂ ವಿವಿಧ ಹಂತಗಳಲ್ಲಿ ದುಡಿದರು. ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾಲೋನಿಯಲ್ಲಿ ಪ್ರಾಥಮಿಕ ಶಾಲೆ ಸ್ಥಾಪನೆ (ಈಗ ಎಸ್‌.ಎಸ್‌.ಎಲ್‌.ಸಿ. ವರೆಗೂ ಇದೆ). ಕಾರ್ಮಿಕರು ಮೃತ ಪಟ್ಟಾಗ ತಕ್ಷಣಕ್ಕೆ ಆರ್ಥಿಕ ನೆರವು ಒದಗಿಸಲು ಪ್ರಾರಂಭಿಸಿದ್ದು ‘ಡೆತ್‌ ರಿಲೀಫ್‌ ಫಂಡ್‌’ ಮತ್ತು ಮೃತ ಕಾರ್ಮಿಕರ ಪತ್ನಿಯರಿಗೆ ಉದ್ಯೋಗಾವಕಾಶ ಒದಗಿಸಲು ಪ್ರಾರಂಭಿಸಿದ ಗೃಹ ಕೈಗಾರಿಕೆಗಳು. ಕಾರ್ಮಿಕರು ಮತ್ತು ಕುಟುಂಬದವರು ಹೊರಜಗತ್ತಿನೊಂದಿಗೆ ಸ್ಪಂದಿಸ ಸಂಗೀತ, ನೃತ್ಯ, ನಾಟಕ ಮುಂತಾದ ಪ್ರಕಾರಗಳಿಂದ ಮನರಂಜನೆ ಪಡೆಯಲು ಸ್ಥಾಪಿಸಿದ್ದು ‘ಫೈನ್‌ ಆರ್ಟ್ಸ್ ಸೊಸೈಟಿ’-ಹೀಗೆ ಹಲವಾರು ಕಾರ್ಯರಂಗಗಳ ಹುಟ್ಟಿಗೆ ಕಾರಣರಾದರು. ಇವರ ಸೇವಾವೃತ್ತಿಯು ದೂರವಾಣಿ ಕಾರ್ಖಾನೆಗಷ್ಟೇ ಸೀಮಿತವಗದೆ ಶೇಷಾದ್ರಿಪುರಂನಲ್ಲಿ ಸ್ಥಾಪಿಸಿದ ‘ಸೋದರಿ’ ಗ್ರಾಹಕ ಸಹಕರ ಸಂಘ, ರಾಜ್ಯಮಟ್ಟದ ಸಹಕರ ಮಂಡಲ, ಬೆಂಗಳೂರು ಜಿಲ್ಲಾ ಮಹಿಳಾ ವಿವಿದ್ದೋದೇಶ ಸಹಕರ ಸಂಘ, ಮಹಿಳೆಯರ ಆರ್ಥಿಕ ನೆರವಿಗಾಗಿ ಬೆಂಗಳೂರು ಜಿಲ್ಲಾ ಮಹಿಳಾ ಸಹಕಾರ ಸಂಘ, ದೂರವಾಣಿ ಕಾರ್ಖಾನೆಗೆ ಪೂರಕ ವಸ್ತುಗಳ ಪೂರೈಕೆಗಾಗಿ ಸ್ಥಾಪಿಸಿದ ಮಹಿಳಾ ಘಟಕಗಳು ಮುಂತಾದವುಗಳ ಸ್ಥಾಪನೆಗೂ ಮುಂಚೂಣಿಯಲ್ಲಿ ದುಡಿದರು. ವಿಚಾರವಾದಿ ತಂದೆಯವರಿಂದ ಪ್ರೇರಿತರಾಗಿ ರೂಢಿಸಿಕೊಂಡದ್ದು ಸಾಹಿತ್ಯಾಭ್ಯಾಸ. ವಿದ್ಯಾರ್ಥಿದೆಸೆಯಲ್ಲಿಯೇ ಬರೆದ ಹಲವಾರು ಲೇಖನಗಳು ಆರ್. ಲಕ್ಷ್ಮಮ್ಮನವರ ‘ಸೋದರಿ’ ವಾರಪತ್ರಿಕೆಯಲ್ಲಿ ಪ್ರಕಟಿತ. ತಾಯಿ ಆಂಧ್ರ ಪ್ರದೇಶಕ್ಕೆ ಸೇರಿದವರಾಗಿದ್ದರಿಂದ ತೆಲುಗು ಭಾಷೆಯ ಮೇಲೂ ವ್ಯಾಮೋಹದಿಂದ ಕಲಿತ ತೆಲುಗುಭಾಷೆ. ಸ್ನೇಹಿತೆಯರ ಒತ್ತಾಯಕ್ಕೆ ಮಣಿದು ತೆಲುಗಿನಿಂದ ಅನುವಾದಿಸಿದ್ದು ಹಲವಾರು ಕಾದಂಬರಿ, ಸಣ್ಣ ಕಥೆಗಳು. ಶ್ರೀಮತಿ ಮಾಲತಿ ಚೆಂಡೂರ್, ಡಾ. ವಾಸಿರೆಡ್ಡಿ ಸೀತಾದೇವಿ, ಕಾಮಿಪಾಟಿ ವಿಜಯಲಕ್ಷ್ಮೀ, ಕರ್ನಾಟಕದ ರಾಜ್ಯಪಾಲರಾಗಿದ್ದ ಎಸ್‌.ವಿ. ರಮಾದೇವಿ, ರಾಮಲಕ್ಷ್ಮೀ ಅರುದ್ರ, ಡಾ. ಕೊಮ್ಮೂರಿ ವೇಣುಗೋಪಾಲರಾವ್‌, ಯುದ್ಧನ ಪೂಡಿ ಸುಲೋಚನಾದೇವಿ ಮುಂತಾದ ಆಂಧ್ರದ ಕಾದಂಬರಿಕಾರರ ಹಲವಾರು ಕಾದಂಬರಿಗಳನ್ನು ಅನುವಾದಿಸಿದರು. ಕಾವಿಲಿಪಾಟಿ ವಿಜಯಲಕ್ಷ್ಮೀಯವರ ‘ವಿಧಿವಿಲಾಸ’ ಕಾದಂಬರಿಯು ‘ಗಂಡ-ಹೆಂಡತಿ’ ಎಂಬ ಹೆಸರಿನಿಂದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ, ಡಾ. ವಾಸಿರೆಡ್ಡಿ ಸೀತಾದೇವಿಯವ ‘ಮೂರು ವಜ್ರಗಳು’ ಮಯೂರ ಮಾಸಪತ್ರಿಕೆಯಲ್ಲಿ, ಶ್ರೀಮತಿ ಗೋವಿಂದರಾಜು ಸೀತಾದೇವಿಯವರ ‘ಅಪರ್ಣಾ’ ಕಾದಂಬರಿಯು ಹಂಸರಾಗ ಮಾಸಪತ್ರಿಕೆಯಲ್ಲಿ, ಸುಧಾವಾರ ಪತ್ರಿಕೆಯಲ್ಲಿ ಎರಡು ಕಾದಂಬರಿಗಳು, ‘ಭಾರತಿ’ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ, ‘ಮೋಡ ಸರಿಯಿತು’ ಕಾದಂಬರಿಯು ಮಲ್ಲಿಗೆ ಮಾಸಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಪ್ರಕಟಗೊಂಡವು. ಇವುಗಳಲ್ಲದೆ ಎಸ್‌.ವಿ. ರಮಾದೇವಿಯವರ ‘ಪಂಕಜಾ’, ‘ತಾಯಿಮಕ್ಕಳು’, ‘ರಾಜಿ’, ‘ತಿರುವುಗಳು’ ಮತ್ತು ‘ಕಾಲಚಕ್ರ’ ಎಂಬ ಐದು ಕಾದಂಬರಿಗಳನ್ನೂ ಅನುವಾದಿಸಿದ್ದಾರೆ. ‘ಪಂಕಜ’ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲೂ, ‘ತಾಯಿ ಮಕ್ಕಳು’ ಕಾದಂಬರಿಯು ಕನ್ನಡ ಪ್ರಭ ದಿನಪತ್ರಿಕೆಯಲ್ಲಿಯೂ ಧಾರಾವಾಹಿಯಾಗಿ ಪ್ರಕಟಗೊಂಡವು. ಬಹುತೇಕ ಇವರ ಕಾದಂಬರಿಗಳೆಲ್ಲವೂ ತೆಲುಗು ಮೂಲದಿಂದಲೇ ಅನುವಾದಗೊಂಡಿರುವುದಕ್ಕೆ ತಾಯಿಯ ಮಾತೃಭಾಷೆಯೇ ಕಾರಣವಾಗಿದ್ದರೂ, ತಮಿಳು ಭಾಷೆ ಕಲಿತು ಶ್ರೀಮತಿ ಶಿವಶಂಕರಿಯವರ ತಮಿಳು ಕಾದಂಬರಿ ‘ಒರುಮನಿದನ್‌ ಕಥಾ’ ಎಂಬುದನ್ನು ‘ಒಬ್ಬ ಮನುಷ್ಯನ ಕಥೆ’ ಎಂಬುದಾಗಿ ಅನುವಾದಿಸಿದ್ದಾರೆ. ಹಲವಾರು ಸಣ್ಣ ಕಥೆಗಳನ್ನೂ ಅನುವಾದಿಸಿದ್ದು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಅತ್ತೆ-ಸೊಸೆಯರ ಕಥೆಗಳು (ಭಾಗ ೧-೨), ಅಂಗಳದಲ್ಲಿ ಮುತ್ತುಗಳು, ಎಂಥಾ ಸ್ವಾರ್ಥ, ಭದ್ರತೆ ಮತ್ತಿತರ ಕಥೆಗಳು ಎಂದು ಐದು ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಹೀಗೆ ಇವರು ೪೫ ಕಾದಂಬರಿಗಳು ೫ ಕಥಾ ಸಂಕಲನಗಳನ್ನೂ ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಹಲವಾರು ವಿಚಾರ ಸಂಕಿರಣ, ಗೋಷ್ಠಿಗಳಲ್ಲಿ ಪ್ರಬಂಧಗಳನ್ನು ಮಂಡಿಸಿದಂತೆ, ಸಹಕಾರಿ ಕ್ಷೇತ್ರದಲ್ಲಿ ದೊರೆತ ಅನುಭವವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗಿಯಾಗಿ ಸಹಕಾರಿ ಕ್ಷೇತ್ರದ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ಅಂತಾರಾಷ್ಟ್ರೀಯ ಸಹಕಾರಿ ಸಂಘಗಳ ಕಾರ್ಯವೈಖರಿಯನ್ನು ಅರಿಯಲು ಜಪಾನ್‌ ಮತ್ತು ಶ್ರೀಲಂಕಾ ದೇಶಗಳಿಗೆ ಭೇಟಿಕೊಟ್ಟಿದ್ದಾರೆ. ಇವರ ಸಾಹಿತ್ಯ, ಸಹಕಾರ ಕ್ಷೇತ್ರಗಳೆರಡರ ಅದ್ವಿತೀಯ ಸೇವೆಗಾಗಿ ಮಲ್ಲೇಶ್ವರಂ ಲಯನ್ಸ್‌ ಕ್ಲಬ್‌, ಕರ್ನಾಟಕ ಲೇಖಕಿಯರ ಸಂಘ, ಹನುಮಂತನಗರದ ಸ್ಪೂರ್ತಿ ಮಹಿಳಾ ಸಮಾಜ, ಕರ್ನಾಟಕ ಕೋ-ಆಪರೇಟಿವ್ ಫೆಡರೇಷನ್‌, ಸುಮಂಗಲಿ ಸೇವಾಶ್ರಮ, ಹೈದರಾಬಾದಚಿನ ಲೇಖಕಿಯರ ಸಂಘದಿಂದ ಸಕ್ಯೋ ಸಾಹಿತಿ ಪ್ರಶಸ್ತಿ ಮತ್ತು ಲೆಕ್ಲಿನಿ ಪ್ರಶಸ್ತಿ, ಬೆಂಗಳೂರಿನ ಆಂಧ್ರ ಲೇಖಕಿಯರ ಸಂಘ, ಕೃಷ್ಣದೇವರಾಯ ಸಂಸ್ಥೆಗಳಿಂದ ಸನ್ಮಾನಗಳ ಜೊತೆಗೆ ಕರ್ನಾಟಕ ಸರಕಾರವು ಇವರ ಸಾಹಿತ್ಯ ಮತ್ತು ಸಾಮಾಜಿಕ ಸೇವಾ ಕಾರ್ಯಕ್ಕಾಗಿ ೧೯೯೬ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಸಂಸಾರದ ಜಂಜಡಗಳಿಗೆ ಸಿಕ್ಕಿಕೊಳ್ಳದೆ, ಸಾಹಿತ್ಯ, ಸಮಾಜಸೇವೆಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿಕೊಂಡ ರುಕ್ಮಾಯಿಯವರು ತಮ್ಮ ಕಾರ್ಯ ಚಟುವಟಿಕೆಗಳಿಂದ ವಿರಮಿಸಿದ್ದು ೨೦೧೦ ರ ಜನವರಿ ಗಣರಾಜ್ಯೋತ್ಸವ ದಿನದಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top