
- This event has passed.
ಟಿ.ಕೆ. ರಾಮರಾವ್
October 7
೦೭.೧೦.೧೯೩೧ ೧೧.೧೧.೧೯೮೮ ರೋಚಕ ಶೈಲಿ, ತೀಕ್ಷ್ಣವಾದ ಲಯಬದ್ಧವಾದ ವಾಕ್ಯಸರಣಿ, ವಿಸ್ಮಯಕಾರಿ ತಿರುವುಗಳು, ರಹಸ್ಯವನ್ನು ಕೊನೆಯವರೆವಿಗೂ ಕಾಯ್ದಿಟ್ಟು ಓದುಗರನ್ನು ಬೆರಗಾಗುವಂತೆ ಮಾಡುವ ತಂತ್ರಗಾರಿಕೆಯ ಬರಹಗಳಿಂದ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದ ಪತ್ತೇದಾರಿ ಕಾದಂಬರಿ ಕರ್ತೃ ಟಿ.ಕೆ. ರಾಮರಾಯರು ಹುಟ್ಟಿದ್ದು ೧೯೩೧ ರ ಅಕ್ಟೋಬರ್ ೭ ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ. ತಂದೆ ಟಿ. ಕೃಷ್ಣಮೂರ್ತಿಯವರು ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಪ್ರಾರಂಭಿಕ ಶಿಕ್ಷಣ ಕಡೂರು, ಅರಸೀಕೆರೆ ಮುಂತಾದೆಡೆ, ಹೈಸ್ಕೂಲಿಗೆ ಸೇರಿದ್ದು ಕೋಲಾರದಲ್ಲಿ. ಹೈಸ್ಕೂಲಿನಲ್ಲಿದ್ದಾಗಲೇ ವಿಪರೀತ ಓದಿನ ಹುಚ್ಚು. ಆಗಲೇ ಬರೆದ ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ ಮುಂತಾದವರು ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವಿ ಪಡೆದ ನಂತರ ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರೂ ಎರಡು ತಿಂಗಳಲ್ಲೇ ಅದನ್ನು ಬಿಟ್ಟು ಮದರಾಸಿನಲ್ಲಿ ರೈಲ್ವೆಗಾರ್ಡ್ ಕೆಲಸಕ್ಕೆ ಸೇರಿದರು. ರೈಲ್ವೆಯಲ್ಲಿ ಸ್ಟೇಷನ್‌ಮಾಸ್ಟರಾಗಿದ್ದ ತಂದೆಯವರ ಅಕಾಲ ಮರಣದಿಂದ ಮಾನವೀಯ ದೃಷ್ಟಿಯಿಂದ ದೊರೆತ ಉದ್ಯೋಗವಾಗಿತ್ತು. ಆದರೆ ಇದಕ್ಕೆ ಹಿಂದೆಯೇ ಅಣ್ಣನೊಬ್ಬನ ಮರಣದಿಂದ ಸಂಸಾರದ ಹೊಣೆ ಇವರ ಮೇಲೆ ಬಿದ್ದು ತಮ್ಮ – ತಂಗಿ – ತಾಯಿ. ಇವರೆಲ್ಲರ ಜವಾಬ್ದಾರಿ ಹೊರಲು ಮದರಾಸಿನ ಕೆಲಸ ತೊರೆದು ಚನ್ನಪಟ್ಟಣದಲ್ಲಿ ನೆಲೆಸಿ ಟ್ಯೂಟೋರಿಯಲ್ಸ್ ತೆರೆದು ತರಗತಿಗಳನ್ನು ಪ್ರಾರಂಭಿಸಿದರು. ಎಸ್.ಎಸ್.ಎಲ್.ಸಿ., ಪಿ.ಯು., ಪಾಲಿಟೆಕ್ನಿಕ್ ತರಗತಿಯ ವಿದ್ಯಾರ್ಥಿಗಳಿಗೆ ೨೦ ವರ್ಷಗಳ ಕಾಲ ಪಾಠ ಹೇಳಿದರು. ನಂತರ ಪ್ರಾರಂಭಿಸಿದ್ದು ಔಷಧಿ ಅಂಗಡಿ. ಇವರು ಬರೆದ ಮೊಟ್ಟಮೊದಲ ಕಾದಂಬರಿ ‘ದೂರ ಗಗನ’ ಪ್ರಕಟವಾದುದು ೧೯೬೬ರಲ್ಲಿ. ಆಗ ಅವರಿಗೆ ೩೫ರ ಪ್ರಾಯ. ರಂಜನೀಯವಾಗಿ, ಸೊಗಸಾಗಿ ಬರೆದ ಕಾದಂಬರಿ ಓದುಗರ ಗಮನ ಸೆಳೆದ ನಂತರ ಹಲವಾರು ಕಾದಂಬರಿಗಳನ್ನು ಬರೆದರು. ಮೊದಲು ಪ್ರಕಟಿಸಲಾಗದೆಂದು ವಿಷಾದ ಪತ್ರ ಬರೆದ ಸಂಪಾದಕರೆ ಕ್ಯೂನಲ್ಲಿ ಕಾಯ್ದು ಕಾದಂಬರಿ ಬರೆಸಿ ತಮ್ಮ ಪತ್ರಿಕೆಯಲ್ಲಿ ಧಾರಾವಾಹಿಯ ಆಗಿ ಪ್ರಕಟವಾಗಬೇಕೆಂದು ಆಶಿಸಿದರು. ದೂರ ಗಗನದಿಂದ ಹಿಡಿದು ಕಡೆಯ ಕಾದಂಬರಿ ಪಯಣದ ಕೊನೆ (೧೯೮೮)ಯವರೆಗೆ ಬರೆದ ಕಾದಂಬರಿಗೆಲ್ಲವೂ ಒಂದಲ್ಲ ಒಂದು ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೇ ಪ್ರಕಟಗೊಂಡಿವೆ. ಪತ್ತೇದಾರಿ ಕಾದಂಬರಿಗಳ ರಚನೆಗೆ ಪ್ರಾರಂಭಿಸಿದ ನಂತರ ಅಪರಾಧಶಾಸ್ತ್ರ, ವಿಷವೈದ್ಯಶಾಸ್ತ್ರ, ನ್ಯಾಯಶಾಸ್ತ್ರ, ಮನೋವೈದ್ಯಕೀಯ ಶಾಸ್ತ್ರ ಮೊದಲಾದವುಗಳನ್ನು ಅಭ್ಯಸಿಸಿದರು. ದಿಬ್ಬದಮೇಲೆ ಕಾದಂಬರಿಯು ಸುಧಾವಾರ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ ಮತ್ತೊಂದು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಬಹುಮಾನವೂ ದೊರೆಯಿತು. ಆದರೆ ರಾಮರಾಯರ ಮೊಟ್ಟಮೊದಲ ಕಾದಂಬರಿ ದೂರಗಗನದಂತೆ ಸಾಹಿತ್ಯಿಕ ಆಸೆ ಆಕಾಂಕ್ಷೆಗಳು ದೂರ ಗಗನವಾಗಿಯೇ ಉಳಿದು ಬಿಟ್ಟವು. ೧೯೬೯ರಲ್ಲಿ ಗ್ರೀಸ್, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ಕೆನಡಾ, ಜಪಾನ್, ಹಾಂಕಾಂಗ್, ಥಾಯ್‌ಲ್ಯಾಂಡ್, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿಬಂದು ರಚಿಸಿದ ಪ್ರವಾಸಾನುಭವದ ಕೃತಿ ‘ಗೋಳದ ಮೇಲೊಂದು ಸುತ್ತು’, ನಾಲ್ಕು ಮುದ್ರಣಗಳನ್ನು ಕಂಡ ಕೃತಿ. ಮರಳು ಸರಪಳಿ, ಮೂರುಜನ್ಮ, ಸೇಡಿನ ಹಕ್ಕಿ, ಸೀಳು ನಕ್ಷತ್ರ, ಹಾವು ಏಣಿ ಆಟ ಮುಂತಾದ ಕಾದಂಬರಿಗಳು ಚಲನಚಿತ್ರವಾಗಿ ಅಪಾರ ಯಶಸ್ಸನ್ನು ತಂದುಕೊಟ್ಟಿದ್ದಲ್ಲದೆ ಬಂಗಾರದ ಮನುಷ್ಯ ಕಾದಂಬರಿಯು ಚಲನಚಿತ್ರವಾಗಿ (೧೯೭೨) ದಕ್ಷಿಣ ಭಾರತದ ಚಲನಚಿತ್ರರಂಗದಲ್ಲಿ ೨ ವರ್ಷಗಳ ಕಾಲ ಪ್ರದರ್ಶಿತಗೊಂಡು ಅಪೂರ್ವ ದಾಖಲೆ ನಿರ್ಮಿಸಿದ ಮಹೋನ್ನತ ಚಲನಚಿತ್ರವೆಂದು ಖ್ಯಾತಿ ಪಡೆಯಿತು. ಇದೇ ಕಾದಂಬರಿಯು ತೆಲುಗುಭಾಷೆಯಲ್ಲಿ ‘ದೇವುಡುಲಾಂಟಿ ಮನಿಷಿ’ ಹೆಸರಿನ ಚಲನಚಿತ್ರವಾಗಿ ಆಂಧ್ರದಾದ್ಯಂತ ಪ್ರದರ್ಶಿತವಾಗಿ ಶತದಿನೋತ್ಸವ ಕಂಡರೆ ಕಾದಂಬರಿ ರೂಪದಲ್ಲಿ ‘ಬಂಗಾರು ಮನಿಷಿ’ ಹೆಸರಿನಿಂದ ತೆಲುಗು ಭಾಷೆಗೂ ಅನುವಾದಗೊಂಡಿತು. ಹಿಂದಿ ಭಾಷೆಯಲ್ಲಿಯೂ ಚಲನಚಿತ್ರವಾಗಿ ತೆರೆಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿತು. ಇವರ ಐವತ್ತನೆಯ ಕಾದಂಬರಿ ಕೆಂಪುಮಣ್ಣು ಬರೆದಾಗ, ೧೯೮೩ರಲ್ಲಿ ತರಂಗ ವಾರಪತ್ರಿಕೆಯು ಪ್ರಾರಂಭವಾಗಿದ್ದು, ಧಾರಾವಾಹಿಯಾಗಿ ಇವರ ಕಾದಂಬರಿಯನ್ನು ಪ್ರಕಟಿಸಿದಾಗ ಸಹಜವಾಗಿಯೇ ಪ್ರಸಾರದ ಸಂಖ್ಯೆಯೂ ಜಾಸ್ತಿಯಾಯಿತು ಸುಮಾರು ೫೩ ಕಾದಂಬರಿಗಳು, ೧೪ ಕಥಾ ಸಂಕಲನಗಳು, ೫ ಕಿಶೋರ ಸಾಹಿತ್ಯ, (ಜೆ.ಎನ್.ಟಾಟಾ, ಲಾಲಾ ಲಜಪತರಾಯ್, ಟಿ.ವಿ. ಸುಂದರಂ ಐಯ್ಯಂಗಾರ್, ಶಾಮ ಪ್ರಸಾದ ಮುಖರ್ಜಿ, ಸ್ವಾಮಿ ಶಿವಾನಂದ) ಜಗದೇವರಾಯ ಎಂಬ ಐತಿಹಾಸಿಕ ಕಾದಂಬರಿ ಮತ್ತು ಒಂದು ವಿದೇಶಿ ಪ್ರವಾಸ ಕೃತಿಯೂ ಸೇರಿ ೭೪ ಕೃತಿಗಳನ್ನು ರಚಿಸಿದ್ದಾರೆ. ಬೆಂಗಳೂರು, ಮದ್ದೂರು, ವಿರಾಜಪೇಟೆ, ಧರ್ಮಸ್ಥಳ ಮುಂತಾದೆಡೆಗಳಲ್ಲಿ ಸನ್ಮಾನ ಕಾರ್ಯಕ್ರಮಗಳೂ ನಡೆದವು. ೧೯೮೧ರಲ್ಲಿ ಅಮೆರಿಕೆಯಲ್ಲಿ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಂತರ ಮತ್ತು ಕರುಳಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ ವಿಧಿಯಿಲ್ಲದೆ ಕೆಲವು ಕಾರ್ಯಕ್ರಮಗಳಿಗೆ ಮಾತ್ರ ಹೋಗಿ ಬರುತ್ತಿದ್ದರು. ೧೯೮೪ರಲ್ಲಿ ಕರ್ನಾಟಕ ಸರಕಾರವು ರಾಮರಾಯರನ್ನು ಸಾಹಿತ್ಯ ಅಕಾಡಮಿಯ ಸದಸ್ಯರನ್ನಾಗಿ ನೇಮಿಸಿತು. ೧೯೮೫ರಲ್ಲಿ ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆ.ನ.ಕೃ., ತ.ರಾ.ಸು., ಮ. ರಾಮಮೂರ್ತಿ ಮುಂತಾದವರುಗಳಂತೆ ಟಿ.ಕೆ. ರಾಮರಾಯರು ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನ ಬಿ.ಎಚ್.ಇ.ಎಲ್. ಕನ್ನಡ ಹಿತರಕ್ಷಣಾ ಸಮಿತಿಯವರು ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದ್ಭುತವಾಗಿ ಭಾಷಣ ಮಾಡಿದ ನಂತರ ಶಾಲು, ಗಂಧದ ಹಾರ, ಹಣ್ಣಿನ ಬುಟ್ಟಿ ಹಿಡಿದುಕೊಂಡು ಬಂದು ಕಾರಿನಲ್ಲಿ ಕುಳಿತವರು ಮೇಲೇಳಲೇ ಇಲ್ಲ. ಕೆಲವೊಂದು ಪತ್ತೇದಾರಿ ಕಾದಂಬರಿಗಳಲ್ಲಿ ಕಂಡುಬರುವಂತೆ ಸರ್ವಜ್ಞ, ಎಲ್ಲವನ್ನೂ ತಿಳಿದ, ವೀರಾಧಿವೀರನ ಗುಣಗಳ ಪತ್ತೇದಾರರನ್ನು ಸೃಷ್ಟಿಸದೆ ವಿಶಿಷ್ಟ ರೀತಿಯಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆದು, ಈ ಪ್ರಕಾರಕ್ಕೊಂದು ಘನತೆ, ಗೌರವಗಳನ್ನು ತಂದು ಕೊಟ್ಟ ರಾಮರಾಯರು ಪತ್ತೇದಾರಿ ಸಾಹಿತ್ಯ ಕ್ಷೇತ್ರದಿಂದ ದೂರವಾದದ್ದು ೧೯೮೮ ರ ನವಂಬರ್ ೧೧ ರಂದು.