ಟಿ. ಚೌಡಯ್ಯ

Home/Birthday/ಟಿ. ಚೌಡಯ್ಯ
Loading Events
This event has passed.

೧-೧-೧೮೯೫ ೧೯-೧-೧೯೬೭ ಸಂಗೀತ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ. ಟಿ. ಚೌಡಯ್ಯನವರು ಹುಟ್ಟಿದ್ದು. ತಿರುಮಕೂಡಲು ನರಸೀಪುರದಲ್ಲಿ. ತಂದೆ ಅಗಸ್ತ್ಯಗೌಡರು, ತಾಯಿ ಸುಂದರಮ್ಮ. ತಂದೆ ಸಂಗೀತ ಪ್ರಿಯರು, ತಾಯಿ ಸಂಗೀತ, ಭರತನಾಟ್ಯ ಕಲಾವಿದೆ. ಚೌಡಯ್ಯನವರಿಗೂ ಸಂಗೀತವೆಂದರೆ ಪಂಚಪ್ರಾಣ. ಶಾಲೆಗೆ ಚಕ್ಕರ್. ಸಂಗೀತ ಕಲಿಯಲು ಮೈಸೂರಿಗೆ ಪ್ರಯಾಣ. ಬಿಡಾರಂ ಕೃಷ್ಣಪ್ಪನವರ ಬಳಿ ಶಿಷ್ಯತ್ವ. ಹದಿನೆಂಟು ವರ್ಷಗಳ ಸತತ ಅಭ್ಯಾಸ. ಅದ್ಭುತ ಸಾಧನೆಗಳನ್ನೆಲ್ಲ ಶಿಷ್ಯನಿಗೆ ಧಾರೆ. ಪಿಟೀಲು ನುಡಿಸುವ ಸಾಮರ್ಥ್ಯ, ಶೈಲಿಯನ್ನು ಏಕಾಗ್ರತೆಯಿಂದ ಸಾಧಿಸಿದ ಶಿಷ್ಯ. ದಿನಕ್ಕೆ ಹದಿನಾರು ಗಂಟೆಗಳ ಸತತ ಅಭ್ಯಾಸ. ಗುರುವಿಗೆ ಪಕ್ಕವಾದ್ಯ ನುಡಿಸುವುದರ ಮೂಲಕ ಮೊದಲ ಕಚೇರಿ. ಶಿವಗಂಗೆ ಮಠಾಧಿಪತಿಗಳ ಸಾನಿಧ್ಯ. ಚೌಡಯ್ಯನವರು ಸಾಧಿಸಿ ಮುಡಿಸಿದ ಪ್ರತಿಭೆಯ ಹೆಗ್ಗುರುತು. ನಂತರ ಹಲವಾರು ಕಡೆ ಗುರುಗಳಿಗೆ ಪಕ್ಕವಾದ್ಯ. ಚೌಡಯ್ಯನವರ ಖ್ಯಾತಿ ಪಕ್ಕದ ಚೆಟ್ಟಿನಾಡು, ಮದರಾಸು ವಲಯಗಳಿಗೂ ಹಬ್ಬಿತು. ನಾಲ್ಕುತಂತಿ ಪಿಟೀಲಿನ ಬದಲಿಗೆ ಏಳುತಂತಿ ಸೇರಿಸಿ ಪ್ರಸಿದ್ಧಿಗೆ ತಂದರು. ೧೯ ತಂತಿ ಜೋಡಿಸಿ ನಡೆಸಿಕೊಟ್ಟ ಸೊಗಸಾದ ಕಚೇರಿ. ಚೌಡಯ್ಯನವರದು ಸಂಶೋಧಕ ಮನಸ್ಸು. ಅನೇಕ ಕೀರ್ತನೆ, ತಿಲ್ಲಾನಗಳನ್ನು ‘ತ್ರಿಮುಕುಟ’ ಅಂಕಿತದಲ್ಲಿ ರಚನೆ. ಮೈಸೂರು, ಬೆಂಗಳೂರುಗಳಲ್ಲಿ ‘ಅಯ್ಯನಾರ್’ ಕಲಾಶಾಲೆ ಪ್ರಾರಂಭ. ಆರ್.ಕೆ. ವೆಂಕಟರಮಣಶಾಸ್ತ್ರಿ, ವಿ. ಸೇತೂರಾಮಯ್ಯ, ಸಿ.ಆರ್. ಮಣಿ, ಅಳಗಿರಿಸ್ವಾಮಿ, ವಿ. ರಾಮರತ್ನಂ ಚೌಡಯ್ಯನವರಿಗೆ ಹೆಸರು ತಂದ ಶಿಷ್ಯವರ್ಗ, ವಾಣಿ ಎಂಬ ಚಲನ ಚಿತ್ರವನ್ನು ನಿರ್ಮಿಸಿ ನಾಯಕನಟರಾಗಿ, ಅಭಿನಯ, ಸಂಗೀತದ ಪೂರ್ಣ ಹೊಣೆ. ಅಂದಿನ ಮಹಾರಾಜರು, ಜನತೆಯಿಂದ ಅಭಿಮಾನದ ಸನ್ಮಾನ. ಮೈಸೂರು ಸಂಸ್ಥಾನದ ವಿದ್ವತ್ ಪದವಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಂದ ಸಂಗೀತ ರತ್ನ ಬಿರುದು, ಕೇಂದ್ರ ಸಂಗೀತ ನಾಟಕ ಅಕಾಡಮಿ ಗೌರವ ಪ್ರಶಸ್ತಿ, ಮದರಾಸ್ ಮ್ಯೂಸಿಕ್ ಅಕಾಡಮಿಯ ಸಮ್ಮೇಳನದ ಅಧ್ಯಕ್ಷತೆ, ಸಂಗೀತ ಕಲಾನಿಧಿ ಬಿರುದು, ಮೈಸೂರು ಸೀತಾರಾಮ ಮಂದಿರದ ‘ಗಾನ ಕಲಾ ಸಿಂಧು’ ಬಿರುದು, ಸಂಗೀತ ರತ್ನಕರ ಬಿರುದು, ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಸಂಗೀತ ತಪಸ್ವಿಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪಿಟೀಲಿನಾಕಾರದಲ್ಲಿ ಸ್ಮಾರಕ ಭವನ ನಿರ್ಮಾಣ, ಸ್ಯಾಂಕಿ ರಸ್ತೆಗೆ ಟಿ. ಚೌಡಯ್ಯ ರಸ್ತೆ ಎಂದು ನಾಮಕರಣ ಮಾಡಿ ಚೌಡಯ್ಯನವರ ಜ್ಞಾಪಕಾರ್ಥ ಕಾರ್ಯಗಳು.   ಇದೇ ದಿನ ಹುಟ್ಟಿದ ಕಲಾವಿದರು : ವಿ. ವೆಂಕಟ ಸುಬ್ಬರಾವ್ – ೧೯೧೮ ಈಶ್ವರಪ್ಪ ಜಿ. ಮಿಣಜಿಗಿ – ೧೯೨೮ ಶಂಕರರಾವ್ ಗಾಯಕ್‌ವಾಡ್ – ೧೯೩೦ ಪದ್ಮ ವೆಂಕಟೇಶ್ – ೧೯೩೮ ರಾಮಸ್ವಾಮಿ ಐನೂಲಿ – ೧೯೪೦ ವಸಂತಲಕ್ಷ್ಮೀ – ೧೯೪೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top