ಟಿ.ಜಿ. ರಾಘವ

Home/Birthday/ಟಿ.ಜಿ. ರಾಘವ
Loading Events
This event has passed.

೨೮-೩-೧೯೩೫ ವಿಶಿಷ್ಟ ಕತೆಗಾರ, ಕಾದಂಬರಿಕಾರ, ನಾಟಕಕಾರರಾದ ಟಿ.ಜಿ. ರಾಘವರವರು ಹುಟ್ಟಿದ್ದು ಬೆಂಗಳೂರು. ತಂದೆ ಗೋವಿಂದಾಚಾರ್ ಆಂಧ್ರದ ಮೂಲದವರಾದರೆ ತಾಯಿ ತಂಗಮ್ಮ ತಮಿಳಿನವರು. ಎರಡು ಭಾಷೆಗಳ ಸಂಗಮ. ರಾಘವರ ಮಾತೃಭಾಷೆ ತಮಿಳು. ಕಲಿತದ್ದು ಕನ್ನಡ, ಬರೆದದ್ದು ಕನ್ನಡ. ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರು ಎನಿಸಿಕೊಂಡರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದುದು ಗುಬ್ಬಿ, ಶ್ರೀನಿವಾಸಪುರ, ಕೋಲಾರಗಳಲ್ಲಿ. ಅಜ್ಜಿ ಹೇಳುತ್ತಿದ್ದ ಕತೆಗಳಿಂದ, ತಾಯಿ ಗುನುಗುತ್ತಿದ್ದ ಹಾಡುಗಳಿಂದ ಆಕರ್ಷಿತರಾಗಿ ರಾಘವರ ಮನಸ್ಸಿನಲ್ಲಿ ಸಾಹಿತ್ಯದ ಬೇರು ಇಳಿಯತೊಡಗಿತು. ಇವರ ಮೊದಲ ಕಥೆ ಟಿಕ್, ಟಿಕ್…ಪ್ರಕಟವಾದುದು ಅಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ. ಹಲವಾರು ಓದುಗರ ಗಮನ ಸೆಳೆಯಿತು. ಮುಂದೆ ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿದಾಗ ಅಲ್ಲೇ ಪ್ರಾಧ್ಯಾಪಕರಾಗಿದ್ದ  ಕವಿ ಗೋಪಾಲಕೃಷ್ಣ ಅಡಿಗರ ಗಮನಕ್ಕೆ ಬಂದರು. ಅಚ್ಚುಮೆಚ್ಚಿನ ಶಿಷ್ಯರೆನಿಸಿದರು. ಬಿ.ಎಸ್ಸಿ ಮುಗಿಸಿದ ನಂತರ ಕೆಲಕಾಲ ಬೆಂಗಳೂರಿನ ಸೇಯಿಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ದುಡಿದು ನಂತರ ಅಡಿಗರ ಕರೆಯ ಮೇಲೆ ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಟ್ಯೂಟರ್ ಆದರು. ಓದಿನ ಹಂಬಲದಿಂದ ಧಾರವಾಡಕ್ಕೆ ಹೋಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಕೆಲಕಾಲ ಮೈಸೂರಿನ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ, ನಂತರ ಬೆಂಗಳರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿ ನಿವೃತ್ತರಾಗುವವರೆಗೂ ಸೇವೆ ಸಲ್ಲಿಸಿದರು. ಅಧ್ಯಾಪಕರ ಹಿತಕ್ಕಾಗಿ ನಿರಂತರ ಹೋರಾಟ ನಡೆಸಿ ಕೋರ್ಟು, ಕಚೇರಿ ಅಲೆದು ಬರೆದದ್ದು ಕಡಿಮೆ. ಬಲು ಸತ್ವಯುತ ಕೊಡುಗೆ. ಜ್ವಾಲೆ ಆರಿತು, ಸಂಬಂಧಗಳು, ಟಿ.ಜಿ.ರಾಘವರ ಕಥೆಗಳು (ಕಥಾಸಂಕಲನ). ಮನೆ, ವಿಕೃತಿ (ಕಾದಂಬರಿ). ಪ್ರೇತಗಳು (ನಾಟಕ ಪ್ರಕಟಿತ). ಮನೆ ಕಾದಂಬರಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ  ಕನ್ನಡ-ಹಿಂದಿ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯೂ ಲಭಿಸಿತು. ಮನೆ ಕಾದಂಬರಿ ಹಾಗೂ ಶ್ರಾದ್ಧ ಕಥೆ ಮರಾಠಿಗೂ, ಪ್ರೇತಗಳು ಮಲೆಯಾಳಂಗೂ ಅನುವಾದಗೊಂಡಿದೆ. ಮತ್ತೊಂದು ಕಥೆ ಉರ್ದುವಿಗೆ ಭಾಷಾಂತರವಾಗಿ ಪಾಕಿಸ್ತಾನ ಪತ್ರಿಕೆಯಲ್ಲಿ  ಪ್ರಕಟಗೊಂಡಿದೆ.   ಇದೇ ದಿನ ಹುಟ್ಟಿದ ಸಾಹಿತಿ : ಮಾಲತಿ ನಾಡಿಗ್ – ೧೯೪೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top