ಟಿ. ಸುನಂದಮ್ಮ

Home/Birthday/ಟಿ. ಸುನಂದಮ್ಮ
Loading Events

೮-೮-೧೯೧೭ ೨೭-೧-೨೦೦೬ ಹಾಸ್ಯ ಸಾಹಿತ್ಯದ ಹಿರಿಯಜ್ಜಿ ಎಂದೇ ಹೆಸರು ಗಳಿಸಿದ್ದ ಸುನಂದಮ್ಮನವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ರಾಮಯ್ಯ, ತಾಯಿ ನಾಗಮ್ಮ. ಮೈಸೂರು ಮಹಾರಾಜರ ಸರಕಾರದಲ್ಲಿ ಡೆಪ್ಯುಟಿ ಕಮೀಷನರ್ ಹುದ್ದೆಯಲ್ಲಿದ್ದ ತಂದೆಗೆ ಊರಿಂದೂರಿಗೆ ವರ್ಗ. ಸುನಂದಮ್ಮನವರ ಓದು ಹಲವಾರು ಕಡೆ. ಮಾಧ್ಯಮಿಕ ಶಾಲೆ ಓದಿದ್ದು ತರೀಕೆರೆ. ದಾವಣಗೆರೆಯಲ್ಲಿ ಪ್ರೌಢಶಾಲೆ. ಎರಡೂ ಕಡೆಯೂ ಗಂಡುಮಕ್ಕಳ ಶಾಲೆಯಲ್ಲಿ ಓದು, ಚೂಟಿ ಹುಡುಗಿ, ತರಗತಿಯಲ್ಲಿ ಕೇಳಿದ ತಕ್ಷಣ ಉತ್ತರಿಸುತ್ತಿದ್ದ ಹುಡುಗಿಯನ್ನು ನೋಡಿದ ಇತರ ಹುಡುಗರಿಗೆ ಹೊಟ್ಟೆಯುರಿ, ಹುಡುಗರೊಟ್ಟಿಗೆ ಸೇರಿಸಬಾರದೆಂದು ಪಾಲಕರ ದೂರು. ಕಡೆಗೆ ಸುನಂದಮ್ಮ ಮನೆಗೆ. ಬೆಂಗಳೂರಿಗೆ ಬಂದು ಸೇರಿದ್ದು ವಾಣಿವಿಲಾಸ ಹೈಸ್ಕೂಲು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ. ಇಂಟರ್‌ಮೀಡಿಯೆಟ್‌ನಲ್ಲೂ ಮುಂದು. ಹೆಣ್ಣು ಮಕ್ಕಳ ಕಾಲೇಜಿಲ್ಲದೆ ಓದು ಸ್ಥಗಿತ. ತಾತನ ವಿದ್ವತ್ ಮೊಮ್ಮಗಳಲ್ಲೂ. ಹೈಸ್ಕೂಲಿನಲ್ಲಿದ್ದಾಗಲೇ ಸ್ಕಾಟ್, ಡಿಕನ್ಸ್, ವೇಲ್ಸ್, ರೈಡರ್, ಹ್ಯಾಗರ್ಡ್, ಜೆನ್ ಆಸ್ಟಿನ್, ಎಡ್ಗರ್ ವ್ಯಾಲೇಸ್ ಓದಿದ ಚತುರೆ. ಒಂಬತ್ತರ ಹರೆಯದಲ್ಲೇ ಬರೆದ ಪದ್ಯ ‘ಹೂವು’. ಅಶ್ವತ್ಥನಾರಾಯಣರಾಯರ ಪತ್ರಿಕೆಯಲ್ಲಿ ಪ್ರಕಟಿತ. ಇಂಟರ್‌ಮೀಡಿಯೆಟ್ ಓದುತ್ತಿದ್ದಾಗಲೇ ಹಸೆಮಣೆ ಏರಿ ವೆಂಕಟನಾರಣಪ್ಪನೊಂದಿಗೆ ಮದುವೆ, ಸಂಸಾರ. ಬೆಂಗಳೂರು ವಾಸ. ಬರೆಯಬೇಕೆಂಬ ಅದಮ್ಯ ಆಸೆ. ಸಾಮಾಜಿಕ, ಕೌಟುಂಬಿಕ, ರಾಜಕೀಯ ವಸ್ತುಗಳನ್ನಾರಿಸಿ ಕೊಂಡು ಕಥಾವಳಿ, ಕಥೆಗಾರ ಮಾಸಪತ್ರಿಕೆಗಳಿಗೆ ಬರೆದ ಸಣ್ಣ ಸಣ್ಣ ಕಥೆಗಳು. ೧೯೪೨ರಲ್ಲಿ ಎಂ.ಶಿವರಾಂ (ರಾಶಿ)ರವರು ಪಂಚ್ ಮಾದರಿಯ ಹಾಸ್ಯಪತ್ರಿಕೆ ಕೊರವಂಜಿ ಪ್ರಾರಂಭಿಸಿದಾಗ ಬರೆದ ಮೊದಲ ಹಾಸ್ಯ ಲೇಖನ ‘ನಾನ್ಕಾರಿಟ್ಟಿದ್ದು’ ಪ್ರಕಟವಾದಾಗ ಅತೀವ ಸಂತಸ. ೨೫ ವರ್ಷ, ಕೊರವಂಜಿ ಕಾಡಿಗೆ ಹೋಗುವವರೆವಿಗೂ ಬರೆದ ಹಾಸ್ಯ ಲೇಖನಗಳು. ಏಳು ಹಾಸ್ಯ ಸಂಕಲನಗಳು ಪ್ರಕಟಿತ-ಜಂಭದ ಚೀಲ, ಬಣ್ಣದ ಚಿಟ್ಟೆ, ಪೆಪ್ಪರ್‌ಮೆಂಟ್, ವೃಕ್ಷವಾಹನ, ಮುತ್ತಿನ ಚೆಂಡು, ರೂಢಿ-ಗಾಡಿ, ೧೨೦೦ ಪುಟಗಳ ಸಮಗ್ರ ಹಾಸ್ಯ, ಸಮಯ ಸಿಂಧು ಕೃತಿಗಳು. ಕಿರುನಾಟಕಗಳು-ಆದರ್ಶದ ಆಡಂಬರ, ಗೃಹಲಕ್ಷ್ಮಿ, ಚಿಕ್ಕಪ್ಪನ ಉಯಿಲು, ಕೂಸು ಹುಟ್ಟುವುದಕ್ಕೆ ಮುಂಚೆ, ಚಕ್ರಚುಕ್ಕೆ, ಬಾದರಾಯಣಿ, ಬರೆದ ಕೈ ಪ್ರಕಟಿತ ಕೃತಿಗಳು. ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿರುವ ೧೯ ನಾಟಕಗಳೂ ಸೇರಿ ಒಟ್ಟು ೨೭ ಕಿರುನಾಟಕಗಳ ರಚನೆ. ಹಾಸ್ಯಸಾಹಿತಿಗೆ ಸಂದದ್ದು-ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಲಿಪಿಪ್ರಾಜ್ಞೆ, ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಅನುಪಮಾ ಪ್ರಶಸ್ತಿ, ಮದರಾಸು ಕನ್ನಡ ಸಂಘದಿಂದ ಸಾಹಿತ್ಯ ಸರಸ್ವತಿ ಗೌರವ, ಚಿತ್ರದುರ್ಗದ ಬೃಹನ್ಮಠ ಪ್ರಶಸ್ತಿ, ಆಜೀವ ಸಾಧನೆಗೆ ಈ ಟಿ.ವಿ. ತೋರಿದ ಗೌರವ ೧೯೭೯ರಲ್ಲಿ ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ‘ಸುನಂದಾಭಿನಂದನ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಶೀನಪ್ಪ ಹೆಗಡೆ – ೧೮೯೦ ಕೆ.ವಿ. ರತ್ನಮ್ಮ – ೧೯೨೧ ಎಚ್.ಕೆ. ರಂಗನಾಥ್ – ೧೯೨೪-೨೬.೩.೦೩ ಕಮಲ ಸಂಪಳ್ಳಿ  – ೧೯೩೪ ಮತ್ತೂರು ಕೃಷ್ಣಮೂರ್ತಿ – ೧೯೨೯ ಕುರುಡಿನಾರಾಯಣ ವೆಂಕಟೇಶ – ೧೮೮೮-೧೨.೧೨.೧೯೭೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top