ಡಾ. ಅನುಪಮಾ ನಿರಂಜನ

Home/Birthday/ಡಾ. ಅನುಪಮಾ ನಿರಂಜನ
Loading Events

೧೭-೫-೧೯೩೪ ೧೫-೨-೧೯೯೧ ಸೃಜನಶೀಲ, ವೈದ್ಯಕೀಯ ಸಾಹಿತ್ಯ ಎರಡು ಕ್ಷೇತ್ರಗಳಲ್ಲೂ ವಿಪುಲವಾದ ಸಾಧನೆ ಮಾಡಿದ ಅನುಪಮರವರು ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ. ಮೊದಲ ಹೆಸರು ವೆಂಕಟಲಕ್ಷ್ಮಿ. ತಂದೆ ಶಿವರಾಮಯ್ಯ, ತಾಯಿ ಲಕ್ಷ್ಮೀದೇವಮ್ಮ. ಏಳು ಮಕ್ಕಳಲ್ಲಿ ವೆಂಕಟಲಕ್ಷ್ಮಿ ಹಿರಿಯಳು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಒಲವು. ತಂದೆ ವಿದ್ಯಾ ಇಲಾಖೆಯಲ್ಲಿ ಇನ್‌ಸ್ಪೆಕ್ಟರಾಗಿದ್ದರಿಂದ ಊರೂರು ಸುತ್ತುವುದು. ವೆಂಕಟಲಕ್ಷ್ಮಿಗೂ ಬೇರೆ ಬೇರೆ ಊರುಗಳಲ್ಲಿ ವಿದ್ಯಾಭ್ಯಾಸ. ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಮತ್ತು ವೈದ್ಯಕೀಯ. ಈ ಸಮಯದಲ್ಲೇ ಕ್ರಾಂತಿಕಾರಿ ಮನೋಭಾವದ ನಿರಂಜನರ ಪರಿಚಯ. ಸಾಹಿತ್ಯಾಭಿರುಚಿ ಇಬ್ಬರನ್ನೂ ಹತ್ತಿರ ತಂದಿತು. ನಿರಂಜನರ ಸೂಚನೆಯಂತೆ ‘ಅನುಪಮ’ ಆದರು. ಮೊದಲ ಕಥಾ ಸಂಕಲನ ‘ಕಣ್ಮಣಿ’ ಪ್ರಕಟಿಸಿದ್ದು ನಿರಂಜನರೇ. ಹಿರಿಯರ ವಿರೋಧದ ನಡುವೆ ಆರು ವರ್ಷದ ಪ್ರೀತಿಯ ದೀರ್ಘ ಹೋರಾಟಕ್ಕೆ ಸಿಕ್ಕ ಪ್ರತಿಫಲ ‘ಮದುವೆ.’ ಧಾರವಾಡದಲ್ಲಿ ವೈದ್ಯಕೀಯ ವೃತ್ತಿ ಆರಂಭ. ಮೂರು ವರ್ಷಗಳ ಬಳಿಕ ಬೆಂಗಳೂರಿಗೆ. ಅನುಪಮರ ಪ್ರಥಮ ಕಾದಂಬರಿ ‘ಸಂಕೋಲೆಯೊಳಗಿನಿಂದ’ ಪ್ರಕಟ. ಅನಂತಗೀತೆ, ಶ್ವೇತಾಂಬರಿ. ನೂಲುನೇಯ್ದ ಚಿತ್ರ. ಹಿಮದ ಹೂ, ಸ್ನೇಹಪಲ್ಲವಿ ಮೊದಲಾಧ ೨೨ ಕಾದಂಬರಿಗಳು. ಕಣ್ಮಣಿ, ರೂವಾರಿಯ ಲಕ್ಷ್ಮಿ, ಏಳು ಸುತ್ತಿನ ಮಲ್ಲಿಗೆ ಮುಂತಾದ ೯ ಕಥಾಸಂಕಲನಗಳು. ನಾಟಕ-ಕಲ್ಲೋಲ. ಶಿಶು ಸಾಹಿತ್ಯ-ಮಕ್ಕಳಿಗಾಗಿ ಸೃಷ್ಟಿಸಿದ ೩೬೫ ಕಥೆಗಳ ಹನ್ನೆರಡು ಸಂಕಲನಗಳನ್ನೊಳಗೊಂಡ ‘ದಿನಕ್ಕೊಂದು ಕಥೆ.’ ಪ್ರವಾಸ ಕಥನ-ಸ್ನೇಹಯಾತ್ರೆ, ಅಂಗೈಯಲ್ಲಿ ಯೂರೋ ಅಮೆರಿಕಾ. ಲೇಖನ ಸಂಗ್ರಹ-ಅಧ್ಯಯನ, ಸಾಹಿತ್ಯ-ಪ್ರಗತಿ. ಮಹಿಳೆಯರಿಗಾಗಿ-ಶುಭ ಕಾಮನೆ, ಮಾನಿನಿ, ನಾರೀಲೋಕ, ದಾಂಪತ್ಯ ವಿಜ್ಞಾನ, ವಧುವಿಗೆ ಕಿವಿಮಾತು, ದಾಂಪತ್ಯ ದೀಪಿಕೆ, SUPER MARRIAGE SUPER SEX 1980. ವೈದ್ಯಕೀಯ ಕೃತಿಗಳು-ಕೇಳು ಕಿಶೋರಿ, ಕೆಂಪಮ್ಮನ ಮಗು, ತಾಯಿ-ಮಗು, ಶಿಶು ವೈದ್ಯ ದೀಪಿಕೆ, ಆರೋಗ್ಯ ಭಾಗ್ಯಕ್ಕೆ ವ್ಯಾಯಾಮ ಮುಂತಾದ ೯ ಕೃತಿಗಳು. ಸೃಜನಶೀಲ ಸಾಹಿತ್ಯಕ್ಕಿಂತ ವೈದ್ಯಕೀಯ ಸಾಹಿತ್ಯ ಕೃತಿಗಳಿಗೆ ಬೇಡಿಕೆ, ಹಲವಾರು ಮುದ್ರಣ. ಬರ್ಲಿನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಕಾಂಗ್ರೆಸ ಪ್ರತಿನಿ, ಸ್ತ್ರೀಯರ ಶೋಷಣೆ, ಹಕ್ಕುಗಳಿಗಾಗಿ ನಿರಂತರ ಹೋರಾಟ, ಸ್ತ್ರೀ ಚಳವಳಿಯೊಂದಿಗೆ ಸಂಪರ್ಕ. ಸೃಜನಶೀಲ ಮತ್ತು ವೈದ್ಯ ಸಾಹಿತ್ಯಕ್ಕಾಗಿ ಬಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ, ಕಾಸರಗೋಡು ಮಹಿಳಾ ಸಮ್ಮೇಳನದ ಅಧ್ಯಕ್ಷತೆ, ಮುಂಬೈ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ಕ್ಯಾನ್ಸರಿಗೆ ಬಲಿಯಾದ್ದು ತಿಳಿದೂ ಸಾಹಿತ್ಯ ಮತ್ತು ಬದುಕಿನೊಡನೆ ಹೋರಾಡುತ್ತಾ ಆತ್ಮಕಥನ ನೆನಪು ಸಿಹಿಕಹಿ, ಬರಹಗಾರ್ತಿಯ ಬದುಕು ಕೃತಿ ರಚನೆ. ಇವರ ಹೆಸರಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಪ್ರತಿವರ್ಷ ‘ಅನುಪಮ’ ಪ್ರಶಸ್ತಿ ನೀಡುತ್ತಾ ಬಂದಿದೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಂ.ಗು. ಬಿರಾದಾರ – ೧೯೨೬ ಎಚ್.ಎನ್. ರಾಜಶ್ರೀ – ೧೯೬೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top