ಡಾ. ಆರ್.ಸಿ. ಹಿರೇಮಠ

Home/Birthday/ಡಾ. ಆರ್.ಸಿ. ಹಿರೇಮಠ
Loading Events
This event has passed.

೧೫.೦೧.೧೯೨೦ ೦೩.೧೧.೧೯೯೮ ಪ್ರಾಧ್ಯಾಪಕ, ಕುಲಪತಿ, ಲೇಖಕ, ಸಂಶೋಧಕ, ಭಾಷಾವಿಜ್ಞಾನಿ, ಶರಣ ಸಂಸ್ಕೃತಿಯ ಚಿಂತಕರೆನಿಸಿದ್ದ ಹಿರೇಮಠ ರವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ರೋಣ ತಾಲ್ಲೂಕಿನ ಕುರುಡಗಿ ಎಂಬ ಸಣ್ಣ ಹಳ್ಳಿಯಲ್ಲಿ, ೧೯೨೦ ರ ಜನವರಿ ೧೫ ರಂದು. ತಂದೆ ಚಂದ್ರಯ್ಯ, ತಾಯಿ ವೀರಮ್ಮ. ಬಡತನದಲ್ಲಿ ಬೆಂದು ಅರಳಿದ ಬದುಕು. ಒಂದೊಂದು ಹೊತ್ತಿನ ತುತ್ತಿಗೂ ಪಡಬಾರದ ಕಷ್ಟಪಟ್ಟು ಬೆಳೆದವರು. ಶಾಲೆಗೆ ಸೇರಿದರೂ ತೊಡಲು ಬಟ್ಟೆ, ಓದಲು ಪುಸ್ತಕ, ಬರೆಯಲು ಕಾಗದಕ್ಕೆ ತಾಪತ್ರಯ, ತರಗತಿಯಲ್ಲಿ ಕೇಳಿದ್ದಷ್ಟೆ. ಗದಗ ಶಾಲೆಯಲ್ಲಿ ಓದಿ ೧೯೩೪ ರಲ್ಲಿ ಮುಲ್ಕಿ ಪರೀಕ್ಷೆ, ೧೯೩೯ ರಲ್ಲಿ ಮ್ಯಾಟ್ರಿಕ್‌ ನಲ್ಲಿ ತೇರ್ಗಡೆಯಾದ ಹಿರೇಮಠರು ಸಿ.ಚ. ನಂದೀಮಠ ರವರ ಸಲಹೆಯಂತೆ ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಸೇರಿ ೧೯೪೩ ರಲ್ಲಿ ಬಿ.ಎ. ಪದವಿ ಪಡೆದರು. ೧೯೪೫ ಎಂ.ಎ. ತೇರ್ಗಡೆಯಾದದ್ದು ಬಾಗಲ ಕೋಟೆ ಕಾಲೇಜಿನಿಂದ. ಎಂ.ಎ. ಪದವಿ ಪಡೆದ ನಂತರ ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಬೋಧನಾವೃತ್ತಿಯನ್ನಾರಂಭಿಸಿದರು. ಆರು ವರ್ಷಗಳ ತರುವಾಯ (೧೯೫೧) ಧಾರವಾಡದ ಕರ್ನಾಟಕ ಕಾಲೇಜಿಗೆ ಬಂದರು. ಆಗ ಎಂ.ಎ. ತರಗತಿಗಳ ಪ್ರಾರಂಭಾವಸ್ಥೆ . ತೀ.ನಂ. ಶ್ರೀಕಂಠಯ್ಯನವರು ಪ್ರಾಧ್ಯಾಪಕರಾಗಿದ್ದರು. ೧೯೫೫ ರಲ್ಲಿ ದ್ರಾವಿಡ – ಆರ್ಯಭಾಷೆಗಳ ಸಂಬಂಧವನ್ನು ಕುರಿತು ಇಂಗ್ಲಿಷ್‌ನಲ್ಲಿ ಬರೆದ ಅವರ ಮಹಾಪ್ರಬಂಧಕ್ಕೆ [Linguistic Investigations of some Problems on the Relationship of Indo-aryan and Dravidian Languages, the Structure of Kannada] ಡಾಕ್ಟರೇಟ್‌ ಪದವಿಯೂ ದೊರೆಯಿತು. ಆಧುನಿಕ ಭಾಷಾವಿಜ್ಞಾನದಲ್ಲಿ ಬರೆದ ಮೊಟ್ಟಮೊದಲ ಮಹಾಪ್ರಬಂಧ. ೧೯೫೭ ರಲ್ಲಿ ಆರ್.ಸಿ. ಯವರು ಕನ್ನಡ ವಿಭಾಗದ ಪ್ರಾಧ್ಯಾಪಕರು ಮುಖ್ಯಸ್ಥರೂ ಆದರು. ೧೯೫೮ ರಲ್ಲಿ ರಾಕ್‌ಫೆಲರ್ ಪ್ರತಿಷ್ಠಾನದ ಸೀನಿಯರ್ ಫೆಲೊಷಿಪ್‌ ದೊರೆತು ಅಮೆರಿಕಕ್ಕೆ ತೆರಳಿ ಎರಡು ವರ್ಷಗಳ ಕಾಲ ಭಾಷಾಶಾಸ್ತ್ರವನ್ನು ಅಭ್ಯಸಿಸಿದರು. ಐದು ವರ್ಷಗಳ ನಂತರ ಮತ್ತೊಮ್ಮೆ ಭಾಷಾಶಾಸ್ತ್ರದ ಗೌರವ ಪ್ರಾಧ್ಯಾಪಕರಾಗಿ ವೀರಶೈವ ತತ್ತ್ವಜ್ಞಾನದ ಬೋಧಕರಾಗಿ ಇಂಗ್ಲೆಂಡ್‌, ಅಮೆರಿಕಾ ದೇಶಗಳಿಗೆ ಭೇಟಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮರಳಿ ಬಂದ ಆರ್.ಸಿ. ಯವರು ೧೯೬೬ ರಲ್ಲಿ ಹಿರಿಯ ಪ್ರಾಧ್ಯಾಪಕರೆನಸಿದರು. ೧೯೭೪ ರಲ್ಲಿ ಹಂಗಾಮಿ ಕುಲಪತಿಯಾಗಿ ೧೯೭೫ ರಲ್ಲಿ ಕುಲಪತಿಗಳಾಗಿ, ೧೯೭೮ ರಲ್ಲಿ ನಿವೃತ್ತರಾದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಿ ಎಂ.ಎ. ತರಗತಿಗಳಿಗೆ ಕನ್ನಡ ಸಾಹಿತ್ಯ ವಿಷಯವೊಂದೇ ಬೋಧನ ವಿಷಯವಾಗಿದ್ದು ಅದನ್ನು ವಿಸ್ತರಿಸಿ ಭಾಷಾಶಾಸ್ತ್ರ, ಸಂಪಾದನ ಶಾಸ್ತ್ರ, ಶಾಸನ ಶಾಸ್ತ್ರ, ಜನಪದ ಶಾಸ್ತ್ರ, ಜಾಗತಿಕ ಶಾಸ್ತ್ರ ಇವುಗಳೂ ಸೇರ್ಪಡೆಯಾದವು. ಅಧ್ಯಯನ ಪೀಠದಿಂದ ಪ್ರಕಟಣಾ ಕಾರ್ಯವನ್ನೂ ಕೈಗೊಂಡು ವಚನ ಸಾಹಿತ್ಯ, ದಾಸಸಾಹಿತ್ಯ, ಶಾಸ್ತ್ರಸಾಹಿತ್ಯ, ಜನಪದಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿನ ಹಲವಾರು ಗ್ರಂಥಗಳು ಪ್ರಕಟಣೆಗೊಂಡವು. ಇದಲ್ಲದೆ ಬಸವಣ್ಣ, ಸಿದ್ಧರಾಮೇಶ್ವರ ವಚನಗಳು, ಶಾಸನ ಸಂಪದ, ಶಾಸನ ವ್ಯಾಸಂಗ ಗ್ರಂಥಗಳು, ಪ್ರಾಚೀನ ಕಾವ್ಯಗಳಾದ ರಾಜಶೇಖರ ವಿಳಾಸ, ನೇಮಿನಾಥ ಪುರಾಣ, ಮಲ್ಲಿನಾಥ ಪುರಾಣ – ಹೀಗೆ ಹಲವಾರು ಗ್ರಂಥಗಳು ಅಧ್ಯಯನ ಪೀಠದಿಂದ ಓದುಗರಿಗೆ ಲಭ್ಯವಾದವು. ಕುಲಪತಿಗಳಾದ ನಂತರ ವಿಶ್ವವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಕಾರಣರಾದರು. ಬಿಜನೆಸ್‌ ಮ್ಯಾನೇಜ್‌ಮೆಂಟ್‌, ಸಂಗೀತ, ಯೋಗಾಧ್ಯಯನ, ಕಂಪ್ಯೂಟರ್ ಕೇಂದ್ರ, ಸೆಂಟ್ರಲ್‌ ಇನ್ಸ್ಟ್ರುಮೆಂಟೇಷನ್‌, ಪ್ರಯೋಗ ಶಾಲೆಗಳು ಮುಂತಾದ ವಿಭಾಗಗಳು ಅಸ್ತಿತ್ವಕ್ಕೆ ಬಂದವು. ಮಹಾನ್‌ ಸಂಶೋಧಕರಾಗಿದ್ದ ಆರ್.ಸಿ. ಹಿರೇಮಠರವರು ಸಂಶೋಧಕರಿಗೆ ಸಿಗಬೇಕಾದ ವೈಜ್ಞಾನಿಕ ಮನೋಭಾವ, ಸತ್ಯನಿಷ್ಠೆ, ಮುಕ್ತಪೂರ್ವಾಗ್ರಹ, ಮುಂತಾದ ಗುಣಗಳನ್ನು ಅಳವಡಿಸಿಕೊಂಡಿದ್ದರು. ಇವರ ಅಗಾಧ ಸಂಶೋಧನೆ, ಸಂಪಾದನೆಯ ಫಲವಾಗಿ ಹಲವಾರು ಗ್ರಂಥಗಳು ಹೊರಬಂಧವು. ಷಟ್‌ಸ್ಥಲ ಜ್ಞಾನ ಸಾರಾಮೃತ, ಅಖಂಡೇಶ್ವರ ವಚನಗಳು, ಚನ್ನಬಸವಣ್ಣನವರ ವಚನಗಳು, ಸಿದ್ಧರಾಮೇಶ್ವರ ವಚನಗಳು, ಬಸವಣ್ಣನವರ ವಚನಗಳು, ಶಿವಶರಣೆಯರ ವಚನಗಳು, ೨೭ ಶಿವಶರಣೆಯರ ವಚನಗಳು, ಸಕಲ ಪುರಾತನ ವಚನಗಳು ಮಹತ್ವದ ಸಂಪಾದಿತ ಕೃತಿಗಳಾದರೆ – ಪದ್ಮರಾಜಪುರಾಣ, ಬಸವಪುರಾಣ, ಶಾಸನ ಸಂಪದ, ಮಹಲಿಂಗಲೀಲೆ, ರಾಜಶೇಖರ ವಿಳಾಸ, ರಾಮಚಂದ್ರಚರಿತ, ಬಸವರಾಜ ವಿಜಯಂ-ಇವುಗಳು ಕಾವ್ಯ ಸಂಪಾದನೆಗಳು. ಷಟ್‌ಸ್ಥಳ ಪ್ರಭೆ ಮತ್ತು ಮಹಾಕವಿ ರಾಘವಾಂಕ ಇವರ ಎರಡು ಪ್ರಮುಖ ವಿಮರ್ಶಾಕೃತಿಗಳು. ಇವರ ಮತ್ತೊಂದು ಅಪರೂಪದ ಕೃತಿ ಎಂದರೆ `BUDDISM IN KARNATAKA’, ನಶಿಸಿ ಹೋಗುತ್ತಿರುವ ಬೌದ್ಧಮತದ ಇತಿಹಾಸವನ್ನು ತೆರೆದುತೋರಿಸುವ ಕೃತಿ. ಹೀಗೆ ಹಿರೇಮಠರವರು ಸಂಪಾದನೆ, ಅನುವಾದ, ಸಂಶೋಧಿತ, ಸೃಜನಾತ್ಮಕ ಕೃತಿಗಳ ಒಟ್ಟು ಸಂಖ್ಯೆಯೇ ಸುಮಾರು ೭೦ ಕ್ಕೂ ಹೆಚ್ಚು. ಇವರ ಆತ್ಮಕಥೆ ‘ಉರಿಬರಲಿ-ಸಿರಿಬರಲಿ’ ಕನ್ನಡದ ಅತ್ಯುತ್ತಮ ಆತ್ಮಕಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಗ್ರಂಥ. ಇಂತಹ ನಿಗರ್ವಿ, ತತ್ತ್ವನಿಷ್ಠ, ಸತ್ಯನಿಷ್ಠ ಸಂಶೋಧಕರಾದ ಹಿರೇಮಠರವರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ೧೯೯೦ ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೫೯ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ೧೯೭೬ ರಲ್ಲಿ ವಾಲ್ಟೇರ್ ನಲ್ಲಿ ನಡೆದ ಅಖಿಲ ಭಾರತ ದ್ರಾವಿಡ ಭಾಷಾ ಸಮ್ಮೇಳನದ ಅಧ್ಯಕ್ಷತೆ, ೧೯೮೫ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೭೦ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೯೫ ರಲ್ಲಿ ಚಿದಾನಂದ ಪ್ರಶಸ್ತಿ ಮುಂತಾದವುಗಳು. ಇವರಿಗೆ ಅರವತ್ತು ತುಂಬಿದ ಸಂದರ್ಭದಲ್ಲಿ (೧೯೮೧) ಅರ್ಪಿಸಿದ ಗೌರವ ಗ್ರಂಥ ‘ಬೆಳ್ವೊಲ’. ಹೀಗೆ ಹಲವಾರು ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಹಿರೇಮಠರವರು ತೀರಿಕೊಂಡದ್ದು ೧೯೯೮ ರ ನವಂಬರ್ ೩ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top