ಡಾ. ಆ.ನೇ. ಉಪಾಧ್ಯೆ

Home/Birthday/ಡಾ. ಆ.ನೇ. ಉಪಾಧ್ಯೆ
Loading Events
This event has passed.

೦೬..೧೯೦೬ ೦೯.೧೦.೧೯೭೫ ಪ್ರಾಚ್ಯವಿದ್ಯೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಕೃತ ಮತ್ತು ಜೈನಶಾಸ್ತ್ರ ಪೀಠದ ಪ್ರಥಮ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಉಪಾಧ್ಯೆಯವರು ಹುಟ್ಟಿದ್ದು ಬೆಳಗಾಂ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಎಂಬ ಹಳ್ಳಿಯಲ್ಲಿ ಫೆಬ್ರವರಿ ೬ರ ೧೯೦೬ರಲ್ಲಿ. ತಂದೆ ನೇಮಿನಾಥ ಉಪಾಧ್ಯೆ, ತಾಯಿ ಚಂದ್ರಾಬಾಯಿ.  ತಂದೆಯು ಪೌರೋಹಿತ್ಯ ಹಾಗೂ ಒಕ್ಕಲು ಮನೆತನದ ಕೆಲಸಗಳನ್ನು ರೂಢಿಸಿಕೊಂಡವರು. ಪ್ರಾರಂಭಿಕ ಶಿಕ್ಷಣ ಸದಲಗಾದಲ್ಲಿ. ಬೆಳಗಾವಿಯ ಜೈನ್‌ ವಸತಿ ಗೃಹದಲ್ಲಿದ್ದುಕೊಂಡು ಹೈಸ್ಕೂಲಿಗೆ ಸೇರಿದ್ದು ಜಿ.ಎ. ಹೈಸ್ಕೂಲಿಗೆ (ಗಿಲಗಂಜಿ ಅರಟಾಳ ಪ್ರೌಢಶಾಲೆ). ಎಳವೆಯಿಂದಲೇ ಅತಿ ಬುದ್ಧಿವಂತ ಹುಡುಗನೆನ್ನಿಸಿಕೊಂಡಿದ್ದರಿಂದ ಶಿಕ್ಷಣ ಶುಲ್ಕ ವಿಲ್ಲದೆ ಉಚಿತ ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿವೇತನವೂ ದೊರೆಯಿತು. ೧೯೨೩ರಲ್ಲಿ ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾದರು. ಮುಂದಿನ ವಿದ್ಯಾಭ್ಯಾಸಕ್ಕೆ ತೆರಳಿದ್ದು ಕೊಲ್ಲಾಪುರದ ರಾಜಾರಾಂ ಕಾಲೇಜಿಗೆ. ಆದರೆ ಸಾಂಗ್ಲಿಯ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿದ್ದ ಡಾ. ಪಿ.ಎಲ್‌. ವೈದ್ಯ ಅವರಿಂದ ಪ್ರಭಾವಿತರಾಗಿ ಸಂಸ್ಕೃತ ಆನರ್ಸ್‌, ಅರ್ಧಮಾಗಧಿ, ಪ್ರಾಕೃತಭಾಷೆಗಳನ್ನು ಕಲಿಯಲು ಸಾಂಗ್ಲಿ ಕಾಲೇಜಿಗೆ ಸೇರಿ ೧೯೨೮ರಲ್ಲಿ ಬಿ.ಎ. ಪದವಿಗಳಿಸಿದರು. ಎಂ.ಎ. ಪದವಿ ಗಳಿಸಿದ್ದು ೧೯೩೦ರಲ್ಲಿ ಪುಣೆಯ ಭಂಡಾರ್ ಕರ್ ಪ್ರಾಚ್ಯವಿದ್ಯಾ ಸಂಶೋಧನ ಸಂಸ್ಥೆಯಿಂದ. ಸ್ನಾತಕೋತ್ತರ ಪದವಿಯ ನಂತರ ಬೋಧಕವೃತ್ತಿಯ ಆಕಾಂಕ್ಷೆಯಿಂದ ಸೇರಿದ್ದು ಕೊಲ್ಲಾಪುರದ ರಾಜಾರಾಮ್‌ ಕಾಲೇಜಿನಲ್ಲಿ ಅರ್ಧಮಾಗಧಿ ಉಪನ್ಯಾಸಕರಾಗಿ, ೧೯೩೩ರಲ್ಲಿ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿ ಮೂವತ್ತು ವರ್ಷಕಾಲ ಅದೇ ಕಾಲೇಜಿನಲ್ಲಿ ದುಡಿದು ೧೯೬೨ರಲ್ಲಿ ನಿವೃತ್ತರಾದರು. ಶಿವಾಜಿ ವಿಶ್ವವಿದ್ಯಾಲಯ ಪ್ರಾರಂಭವಾದಾಗ ಕಲಾ ನಿಕಾಯದ ಡೀನ್‌ ಆಗಿ, ಸಿಂಡಿಕೇಟ್‌ ಸದಸ್ಯರಾಗಿ, ಪ್ರಕಟಣಾ ವಿಭಾಗದ ಪ್ರಮುಖ ಜವಾಬ್ದಾರಿ ಹೊತ್ತು ಕಾರ್ಯ ನಿರ್ವಹಿಸಿದರು. ಬಾಲಕನಾಗಿದ್ದಾಗಿನಿಂದಲೂ ತಮ್ಮ ದೊಡ್ಡಪ್ಪನ ಗ್ರಂಥಾಲಯದಲ್ಲಿದ್ದ ಗ್ರಂಥಗಳನ್ನು ಅವರ ಕಣ್ಣು ತಪ್ಪಿಸಿ ಓದತೊಡಗಿದ್ದರು. ಇದರಿಂದ ಒಂದು ರೀತಿಯ ಚಿಕಿತ್ಸಕ, ಸಂಶೋಧಕ ಪ್ರವೃತ್ತಿ ಬೆಳೆಯತೊಡಗಿತು. ‘ದೋಹಾಪಾಹುಡ’ ಎಂಬ ಅಪಭ್ರಂಶ ಕಾವ್ಯವನ್ನು ‘ಜೊಇಂದು ಅಂಡ್‌ ಹಿಸ್‌ ಅಪಭ್ರಂಶ್‌ ವರ್ಕ್ಸ್‌’ ಎಂಬ ದೀರ್ಘ ಸಂಶೋಧನ ಪ್ರಬಂಧವನ್ನೂ ಬರೆದು ಭಂಡಾರಕರ ಸಂಸ್ಥೆಗೆ ಕಳುಹಿಸಿದರು. ಅಲ್ಲಿ ಡಾ. ಬೆಳ್ವಲ್ಕರರು ವಾರ್ಷಿಕ ಪತ್ರಿಕೆಯಲ್ಲಿ ಪ್ರಕಟಿಸಿದಾಗ ಇದು ಲಾಹೋರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವಿದ್ವಾಂಸ ಊಲ್ನರ್ ರವರ ಗಮನಕ್ಕೆ ಬಂದು ‘ಪ್ರೌಢಪ್ರಬಂಧ, ಮಹತ್ವದ ಸಾಧನೆ’ ಎಂದು ಪ್ರಶಂಸಿ ಪತ್ರ ಬರೆದಾಗ ಉತ್ತೇಜಿತರಾಗಿ ಇದೇ ರೀತಿ ಸಂಶೋಧನೆಯಲ್ಲಿ ಮುಂದುವರೆಯಲು ನಿರ್ಧರಿಸಿದರು. ನಂತರ ಸಂಶೋಧಿಸಿದ ‘ಪ್ರವಚನಸಾರ’, ‘ಪರಮಾತ್ಮ ಪ್ರಕಾಶ’ ಮತ್ತು ‘ವರಾಂಗ ಚರಿತೆ’ ಇವು ಮೂರನ್ನೂ ಸೇರಿಸಿ ಮುಂಬೈ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ೧೯೩೯ರಲ್ಲಿ ಡಿ .ಲಿಟ್‌ ಪದವಿ ಗಳಿಸಿದರು. ಡಿ.ಲಿಟ್‌ ಪದವಿ ಗಳಿಸಿದ ನಂತರ ಇವರ ವಿದ್ವತ್ತಿಗೆ ಮನ್ನಣೆ ಎನ್ನುವಂತೆ ವಿದ್ವಾಂಸರ ವಲಯದಿಂದ ಮೆಚ್ಚುಗೆಗಳು ಹರಿದು ಬಂದುವು. ಜರ್ಮನಿಯಿಂದ ಬಂದ ವಿಶೇಷ ಆಹ್ವಾನವನ್ನು, ತಾಯಿಯನ್ನು ಬಿಟ್ಟು ದೇಶದಿಂದ ಹೊರಗೆ ತೆರಳಲಾರದೆ, ಆಹ್ವಾನವನ್ನು ತಿರಸ್ಕರಿಸಿದರು. ಇದು ಅವರು ತಮ್ಮ ತಾಯಿಯಲ್ಲಿಟ್ಟಿದ್ದ ಮಾತೃಭಕ್ತಿಯ ದ್ಯೋತಕ. ವಿದ್ವಾಂಸರಾಗಿದ್ದರೂ ತಾಯಿ ಮಾತನ್ನು ಮೀರಿ ನಡೆಯದ, ಎಂದೂ ಅವರ ಮನಸ್ಸಿಗೆ ನೋವಾಗದಂತೆ ನಡೆಯುವ ಗುಣಗಳನ್ನು ರೂಢಿಸಿಕೊಂಡಿದ್ದರು. ಆ.ನೇ. ಉಪಾಧ್ಯೆಯವರೆಂದರೆ ಜ್ಞಾನಪೀಠದ ಸಂಸ್ಥಾಪಕರಾದ ಶ್ರೀ ಸಾಹು ಶಾಂತಿ ಪ್ರಸಾದ್‌ ಜೈನ ಮತ್ತು ಅವರ ಶ್ರೀಮತಿ ರಮಾರಾಣಿ ಜೈನ್‌ ರವರು ಅತ್ಯುನ್ನತ ಗೌರವವನ್ನೂ ತೋರುತ್ತಿದ್ದರು. ಕನ್ನಡದ ಹಲವಾರು ಪ್ರಾಚೀನ ಗ್ರಂಥಗಳು ಜ್ಞಾನಪೀಠದ ಪ್ರಕಟಣಾ ವಿಭಾಗದಿಂದ ಪ್ರಕಟಗೊಂಡವು. ಹೀಗೆ ಜ್ಞಾನಪೀಠ ಸಂಸ್ಥೆಯೊಡನೆ ಮಧುರ ಬಾಂಧವ್ಯವನ್ನು ಹೊಂದಿದ್ದರು. ಅವರ ತಾಯಿಯ ನಿಧನದ ನಂತರವಷ್ಟೇ ಮೈಸೂರು ವಿ.ವಿ.ಕ್ಕೆ ಪ್ರಾಕೃತ ಮತ್ತು ಜೈನಾಲಜಿ ವಿಭಾಗದ ಪ್ರಪ್ರಥಮ ಪ್ರಾಧ್ಯಾಪಕರಾಗಿ ಆಗಮಿಸಿದರು. ಮೈಸೂರಿನಲ್ಲಿದ್ದಾಗಲೇ ಮೂರು ಬಾರಿ ವಿದೇಶ ಪ್ರವಾಸ ಕೈಗೊಂಡರು. ೧೯೭೧ರಲ್ಲಿ ಆಸ್ಟ್ರೇಲಿಯದ ಕ್ಯಾನ್‌ಬೆರಾದಲ್ಲಿ ನಡೆದ ೨೮ ನೆಯ ಅಂತಾರಾಷ್ಟ್ರೀಯ ಪ್ರಾಚ್ಯವಿದ್ಯಾಪರಿಷತ್ತಿನ ಭಾರತ ಸರಕಾರದ ಪ್ರತಿನಿಧಿಯಾಗಿ, ೧೯೭೩ರಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಾಚ್ಯವಿದ್ಯಾ ಪರಿಷತ್ತಿನ ಭಾರತ ಸರಕಾರದ ಪ್ರತಿನಿಧಿಯಾಗಿ, ೧೯೭೪ರಲ್ಲಿ ಬೆಲ್ಜಿಯಂನಲ್ಲಿ ನಡೆದ ಜಾಗತಿಕ ಧರ್ಮ ಮತ್ತು ಶಾಂತಿ ಸಮ್ಮೇಳನಕ್ಕೆ ಭಾರತ ಸರಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ನಿರಂತರ ಓದು, ಗ್ರಂಥ ರಚನೆಯಲ್ಲೇ ತೊಡಗಿದ್ದು ಸಖ್ಯ ಬೆಳೆಸಿದ ಸಂಘ-ಸಂಸ್ಥೆಗಳು, ಅಧ್ಯಕ್ಷತೆ ವಹಿಸಿದ ಸಮ್ಮೇಳನಗಳು ಹಲವಾರು. ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಪ್ರಾಕೃತ, ಪಾಲಿ, ಬೌದ್ಧ ಮತ್ತು ಜೈನಧರ್ಮ ವಿಭಾಗದ ಅಧ್ಯಕ್ಷತೆ, ಅಲಿಘರ್ ನಲ್ಲಿ ನಡೆದ ಅಖಿಲಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ ಪ್ರಧಾನ ಅಧ್ಯಕ್ಷತೆ, ಬೆಳಗಾಂನಲ್ಲಿ ನಡೆದ ಭಾರತದ ಜೈನ ಮಹಾ ಸಭೆಯ ೬೨ನೆಯ ಅಧಿವೇಶನದ ಅಧ್ಯಕ್ಷತೆ ಮುಂತಾದ ಹಲವಾರು ಸಮ್ಮೇಳನಗಳಲ್ಲಿ ಅಧ್ಯಕ್ಷತೆಯ ಗೌರವ. ಇವರು ಸಂಶೋಧಿಸಿ ವ್ಯಾಖ್ಯಾನಗಳೊಡನೆ ಪ್ರಕಟಿಸಿದ ಕೃತಿಗಳು ಹಲವಾರು. ‘ಸ್ವರೂಪ ಸಂಶೋಧನ ಪಂಚ ವಿಂಶತಿ’, ‘ಧರ್ಮ ಪರೀಕ್ಷೆ ಮತ್ತು ಧೂರ್ತಾಖ್ಯಾನ’ ಮುಂತಾದ ಸ್ವತಂತ್ರ ಕೃತಿಗಳು; ಪಂಚಸುತ್ತಂ, ಕುಂದಕುಂದಾಚಾರ್ಯರ ಪ್ರವಚನ ಸಾರ, ವರಾಂಗ ಚರಿತೆ, ಕಂಸವಹೋ, ಉಷಾಣಿ ರುದ್ದಮ, ಬೃಹತ್‌ ಕಥಾ ಕೋಶ, ದಿ ಧೂರ್ತಾಖ್ಯಾನ: ಎ ಕ್ರಿಟಿಕಲ್‌ ಸ್ಟಡಿ, ಚಂದ್ರಲೇಖಾ, ಲೀಲಾವತಿ, ಆನಂದಸುಂದರಿ, ಜ್ಞಾನಪೀಠ ಪೂಜಾಂಜಲಿ, ಮೊದಲಾದವುಗಳ ಜೊತೆಗೆ- ಚಿನ್ಮಯ ಚಿಂತಾಮಣಿ, ಜ್ಞಾನ ಭಾಸ್ಕರ ಚರಿತೆ, ಷಟ್‌ ಖಂಡಾಗಮ-ಧವಳಾ ಸಮೇತ, ತಿಲೋಯ ಪಣ್ಣತ್ತಿ (ಭಾಗ ೧-೨). ಜಂಬೂದ್ವೀಪ ಪಣ್ಣತ್ತಿ ಸಂಗ್ರಹ ಮುಂತಾದವುಗಳನ್ನೂ ಇತರರೊಡನೆ ಸಂಪಾದಿಸಿ ಪ್ರಕಟಿಸಿದ ಕೃತಿಗಳ ಸಂಖ್ಯೆಯೇ ಸುಮರು ೪೦ ಕ್ಕೂ ಹೆಚ್ಚು. ಇನ್ನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳು, ೭೦ ಕ್ಕೂ ಹೆಚ್ಚು ಕೃತಿಗಳನ್ನು ವಿಮರ್ಶಿಸಿದ್ದಾರೆ. ೧೯೭೩ರಲ್ಲಿ ದೆಹಲಿಯ ಶ್ರವಣ ಭಜನ ಪ್ರಸಾರಕ್ಕೆ ಮಂಡಲದಿಂದ ಸ್ವರ್ಣಪದಕ, ೧೯೭೫ರಲ್ಲಿ ಮೈಸೂರು ವಿ.ವಿ.ದ ಸುವರ್ಣಪಾರಿತೋಷಕ, ೧೯೬೨ರಲ್ಲಿ ಬಿಹಾರದ ರಾಜ್ಯಪಾಲರಿಂದ ಸಿದ್ಧಾಂತಾಚಾರ್ಯ ಬಿರುದು, ೧೯೬೭ರಲ್ಲಿ ಶ್ರವಣ ಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಆ.ನೇ. ಉಪಾಧ್ಯೆರವರು ಕೊಲ್ಲಾಪುರದಲ್ಲಿ ನಿಧನರಾದಾಗ (೯.೧೦.೧೯೭೫) ಭಾರತೀಯ ಜ್ಞಾನಪೀಠದ ಎಲ್ಲ ಕಚೇರಿಗಳನ್ನು ಮುಚ್ಚಿ ಗೌರವ ತೋರಿಸಿದರು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top