ಡಾ.ಎಂ.ಅಕಬರ ಅಲಿ

Home/Birthday/ಡಾ.ಎಂ.ಅಕಬರ ಅಲಿ
Loading Events
This event has passed.

೦೩..೧೯೨೫ ಕನ್ನಡದಲ್ಲಿ ಪ್ರಥಮ ಬಾರಿಗೆ ಕಾವ್ಯ ಸಂಕಲನವನ್ನು ಪ್ರಕಟಿಸಿದ (೧೯೫೧), ಎಂಎ.ಪದವಿ ಹಾಗೂ ಪಿಎಚ್.ಡಿ ಪದವಿ ಪಡೆದ, ಚುಟುಕು ಕಾವ್ಯವನ್ನೇ ತನ್ನ ಕಾವ್ಯಕ್ಷೇತ್ರವನ್ನಾಗಿಸಿಕೊಂಡ ಮುಸ್ಲಿಂ ಕವಿ ಅಕಬರ ಅಲಿಯವರು ಹುಟ್ಟಿದ್ದು ಬೆಳಗಾವಿ ಖಾನಾಪುರ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಉಳ್ಳೇಗಡ್ಡಿ ಖಾನಾಪುರದಲ್ಲಿ ೧೯೨೫ರ ಮಾರ್ಚ್ ೩ರಂದು ತಂದೆ ಅಪ್ಪಾಸಾಹೇಬ, ತಾಯಿ ಅಮೀನಬಿ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲೇ ಉರ್ದು ಭಾಷೆಯಲ್ಲಿ. ಐದನೆಯ ತರಗತಿಯಿಂದ ಕಲಿಸಿದ್ದು ಕನ್ನಡ ಭಾಷೆ. ಹೈಸ್ಕೂಲಿಗೆ ಸೇರಿದ್ದು ಬೆಳಗಾವಿಯ ಜಿ.ಎ.ಹೈಸ್ಕೂಲು. ಹೈಸ್ಕೂಲಿನಲ್ಲಿ ಗುರುಗಳಾಗಿ ದೊರೆತವರು ಡಿ.ಎಸ್.ಕರ್ಕಿ ಹಾಗೂ ಎಸ್.ಡಿ.ಇಂಚಲರವರು. ಹತ್ತನೆಯ ತರಗತಿಯಲ್ಲಿದ್ದಾಗಲೇ ಬರೆದ ಕವಿತೆಯನ್ನು ಓದಿ ಪ್ರೋತ್ಸಾಹಿಸಿ ಇವರ ಸಂಪಾದಕತ್ವದಲ್ಲೇ ಕೈಬರಹದ ಪತ್ರಿಕೆ ಹೊರತರುವಲ್ಲಿ ನೆರವಾದರು. ಬಸವರಾಜ ಕಟ್ಟೀಮನಿಯವರು ಇವರು ಬರೆದ ಕವಿತೆಗಳನ್ನು ತಾವು ಪ್ರಕಟಿಸುತ್ತಿದ್ದ ‘ಉಷಾ’ ಮಾಸಪತ್ರಿಕೆಯಲ್ಲಿ ಪ್ರಕಟಿಸಿ ಆತ್ಮವಿಶ್ವಾಸ ಹುಟ್ಟುವಂತೆ ಮಾಡಿದರು. ಬೆಳಗಾವಿಯಲ್ಲಿದ್ದಾಗ, ಈಶ್ವರ ಸಣಕಲ್ಲರು, ಪಾಟೀಲಪುಟ್ಟಪ್ಪ, ಕೋ. ಚನ್ನಬಸಪ್ಪ, ಹಿರೇಮಲ್ಲೂರು ಈಶ್ವರನ್ ಇವರುಗಳು ಸೇರಿ ಪ್ರಾರಂಭಿಸಿದ್ದ ‘ಕಿರಿಯರ ಬಳಗ’ ಸಾಹಿತ್ಯ ಸಂಸ್ಥೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕನ್ನಡ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇವರು ಚುಟುಕು ಕಾವ್ಯ ಬರೆಯತೊಡಗಿದ್ದು ಆಕಸ್ಮಿಕವಾಗಿಯೇ. ೧೯೫೧ರಲ್ಲಿ ಮುಂಬಯಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿ.ಕೃ. ಗೋಕಾಕರು ಬೆಳಗಾವಿಗೆ ಬಂದಿದ್ದು, ಅವರ ಸನ್ಮಾನಾರ್ಥ ಟಿಳಕವಾಡಿಯಲ್ಲೊಂದು ಸಭೆ ಏರ್ಪಟ್ಟಿತ್ತು. ಆ ಸಭೆಯಲ್ಲಿ ಗೋಕಾಕರು ಮಾತನಾಡುತ್ತಾ ಇಂಗ್ಲಿಷ್‌ನ ಅಮೆರಿಕ ಮಾದರಿಯ ಚುಟುಕು ಸಾಹಿತ್ಯ ಸೃಷ್ಟಿಗೆ ಕರೆಕೊಟ್ಟಿದ್ದರಿಂದ ಪ್ರೇರಿತರಾಗಿ ಚುಟುಕು ಕವನಗಳನ್ನು ಮತ್ತು ಅಷ್ಟಪದಿಯನ್ನು ಬರೆಯಲು ಪ್ರಾರಂಭಿಸಿದರು. ಆಗ ಅಕಬರ ಅಲಿಯವರು ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಪದವಿ (೧೯೪೯) ಪಡೆದು ಇವರು ಓದಿದ್ದ ಹೈಸ್ಕೂಲಿನಲ್ಲೇ ಶಿಕ್ಷಕರಾಗಿದ್ದರು. ಹೀಗೆ ಬರೆದ ಅಷ್ಟಪದಿ ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡ ನಂತರ ೧೯೫೧ರಲ್ಲಿ ‘ವಿಷಸಿಂಧು’ ಎಂಬ ಸಂಕಲನವನ್ನು ಹೊರತಂದರು. ೧೯೫೨ರಲ್ಲಿ ಮಿತ್ರರಾದ ಶ್ರೀನಿವಾಸ ತೋಫ ಖಾನೆಯವರೊಡನೆ ಸೇರಿ ಪ್ರಕಟಿಸಿದ ಕೃತಿ ‘ಅನ್ನ’ ಎಂಬ ಚುಟುಕು ಕವನ ಸಂಕಲನ. ೧೯೬೦ರಲ್ಲಿ ಪುಣೆಯ ವಿಲ್ಲಿಂಗ್‌ಡನ್ ಕಾಲೇಜಿನಿಂದ ಎಂ.ಎ. ಪದವಿ ಪಡೆದ ನಂತರ ಕಾರವಾರದ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಸೇರಿ ವಿಭಾಗದ ಮುಖ್ಯಸ್ಥರಾಗಿಯೂ ದುಡಿದರು. ಈ ಹುದ್ದೆಯನ್ನು ಹದಿನಾಲ್ಕು ವರ್ಷಗಳ ಸೇವೆಯ ನಂತರ ೧೯೭೫ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿ ಅಲ್ಲೇ ನಿವೃತ್ತರಾದರು. ಹೀಗೆ ೩೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಪ್ರೌಢಶಾಲಾ ಮಟ್ಟದಿಂದ ಸ್ನಾತಕೋತ್ತರ ತರಗತಿಯವರೆಗೂ ಭೋದನ ವೃತ್ತಿಯಲ್ಲಿ ಕಾರ್ಯನಿರತರಾಗಿದ್ದರು. ಬೋಧನೆಯ ಜೊತೆಗೆ ಅದ್ಯಯನದ ಕೆಲಸವೂ ಸತತವಾಗಿ ನಡೆಯುತ್ತಾ ೧೯೮೩ರಲ್ಲಿ ‘ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ’ ಎಂಬ ಮಹಾ ಪ್ರಬಂಧಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ನವೋದಯ ಕಾವ್ಯ ರಚನಾ ರೀತಿಯ ಪ್ರಭಾವದ ಕಾಲದಲ್ಲಿಯೂ ಅಕಬರ ಅಲಿಯವರು ಕವಿತೆಯನ್ನು ರಚಿಸಲು ಪ್ರಾರಂಭಿಸಿದ್ದರೂ ಯಾವ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ಆದ ಶೈಲಿಯಲ್ಲಿ ಕಾವ್ಯರಚಿಸುತ್ತಾ ಬಂದವರು. ನಾಡಿನ ಪತ್ರಿಕೆಗಳಲ್ಲೆಲ್ಲಾ ಇವರ ಕವನ, ಚುಟುಕುಗಳು ಪ್ರಕಟಗೊಂಡಿವೆ. ಹೀಗೆ ಬರೆದ ಕವನಗಳು ನವಚೇತನ (೧೯೬೧), ಸುಮನ ಸೌರಭ (೧೯೬೫), ಗಂಧಕೇಶರ (೧೯೭೨), ಆಯ್ದ ಕವನ ಸಂಕಲನ-ತಮಸಾನದಿ ಎಡಬಲದಿ (೧೯೭೭), ಅಕಬರ ಅಲಿಯವರ ಚುಟುಕುಗಳು (೧೯೮೯), ಕಸಿಗುಲಾಬಿಕಥನ (೧೯೯೩), ಬೆಳಕಿನ ಆರಾಧನೆ (೨೦೦೫೬) ಮುಂತಾದವು ಪ್ರಕಟಗೊಂಡ ನಂತರ ಅಲಿಯವರ ಸಮಗ್ರ ಕವಿತೆಗಳು ೨೦೦೬ರಲ್ಲಿ ಪ್ರಕಟಗೊಂಡಿದೆ. ಅಕಬರ ಅಲಿಯವರ ನೂರಾರು ಕವಿತೆಗಳು ೫೦೦ ಕ್ಕೂ ಹೆಚ್ಚು ಚುಟುಕುಗಳು ಹಲವಾರು ಸಂಕಲನಗಳಲ್ಲಿ ಸೇರ್ಪಡೆಯಾಗಿವೆ. ಕಾವ್ಯದಷ್ಟೆ ಗದ್ಯ ಪ್ರಕಾರವನ್ನು ಪ್ರೀತಿಸುವ ಅಲಿಯವರು ರಚಿಸಿದ್ದು, ‘ಪ್ರಬಂಧ ಪರಿಚಯ’, ‘ನಿರೀಕ್ಷೆಯಲ್ಲಿ’-ಕಾದಂಬರಿ(೧೯೫೫) ಹಾಗೂ ಎರಡು ವಿಮರ್ಶಾ ಕೃತಿಗಳಾದ ‘ಸಾಹಿತ್ಯ ವಿವೇಚನೆ’ (೧೯೭೫) ಮತ್ತು ‘ಕನ್ನಡ ಕಾವ್ಯಾಧ್ಯಯನ’(೧೯೯೩) ಪ್ರಕಟಗೊಂಡಿವೆ. ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಪ್ರವರ್ತಕ ಸಹಕಾರಿ ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿ ಜಿಲ್ಲಾ ಸಾಹಿತ್ಯ ಸಂಘಟನೆ ಮುಂತಾದವುಗಳಲ್ಲಿ ಶ್ರದ್ಧೆಯಿಂದ ನಿರ್ವಹಿಸಿದ ಅಲಿಯವರು ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ ಕಿರಿಯರ ವಿಶ್ವಕೋಶವಾದ ಜ್ಞಾನಗಂಗೋತ್ರಿಯ ಎಂಟನೆಯ ಸಂಪುಟದ ಸಂಪಾದಕ ಮಂಡಲಿಯ ಸದಸ್ಯರಾಗಿ, ೧೯೭೫ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ರಾಷ್ಟ್ರೀಯ ಕವಿಸಮ್ಮೇಳನದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ, ೧೯೮೫ರಲ್ಲಿ ಬೀದರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ (೧೯೮೧-೮೩), ರಾಜ್ಯ ವಿಧಾನ ಪರಿಷತ್ತಿನ ನಾಮಕರಣ ಸದಸ್ಯರಾಗಿ (೧೯೮೬-೯೨) ಮಂಡ್ಯದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಉದ್ಘಾಟಕರಾಗಿ (೧೯೯೪), ಮೈಸೂರಿನಲ್ಲಿ ನಡೆದ ದಸರಾ ಕವಿಗೋಷ್ಠಿಯ ಅಧ್ಯಕ್ಷರಾಗಿ (೧೯೯೮) ಮೈಸೂರು ಜಿಲ್ಲಾ ೯ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ (೨೦೦೯), ಸಂಕೇಶ್ವರದಲ್ಲಿ ಜರುಗಿದ ತಾಲ್ಲೂಕು ಸಮ್ಮೇಳನದ ಅಧ್ಯಕ್ಷರಾಗಿ (೨೦೧೧)-ಹೀಗೆ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವ ಪಡೆದಿದ್ದಾರೆ. ಸುಮನ ಸೌರಭ ಕೃತಿಗೆ (೧೯೬೭) ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ‘ಗಂಧಕೇಶರ’ ಕೃತಿಗೆ ಕೇಂದ್ರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಮಂತ್ರಾಲಯದ ಗೌರವ, ಸರ್ವಜ್ಞನ ಸಮಾಜ ದರ್ಶನ ಮತ್ತು ಸಾಹಿತ್ಯಸತ್ವ (ಪಿಎಚ್.ಡಿ. ಪ್ರಬಂಧ) ಕೃತಿಗೆ (೧೯೮೪) ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರು ಸಾವಿರ ಮಠ ದಿಂದ ಬಹುಮಾನ, ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ(೧೯೮೪), ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (೧೯೮೪), ಪ್ರಕೃತಿ ಸಂಸ್ಥೆಯಿಂದ ಪ್ರಕೃತಿ ಪ್ರಶಸ್ತಿ (೨೦೦೦), ಡಿ.ವಿ.ಜಿ.ಮುಕ್ತರ ಪ್ರಶಸ್ತಿ (೨೦೦೯) ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top