ಡಾ.ಎಂ.ಎ. ಜಯಚಂದ್ರ

Home/Birthday/ಡಾ.ಎಂ.ಎ. ಜಯಚಂದ್ರ
Loading Events
This event has passed.

೩೦.೦೧.೧೯೪೪ ಜೈನಸಾಹಿತ್ಯದ ಜಾನಪದ ವಿದ್ವಾಂಸರಾದ ಜಯಚಂದ್ರರವರು ಹುಟ್ಟಿದ್ದು ಮಂಡ್ಯದಲ್ಲಿ ೧೯೪೪ ಜನವರಿ ೩೦ ರಂದು. ತಂದೆ ಎಂ.ಡಿ. ಆದಿರಾಜಯ್ಯ, ತಾಯಿ ಜಯಮ್ಮ. ಪ್ರಾರಂಭಿಕ ಶಿಕ್ಷಣ ಮಂಡ್ಯ. ಬೆಂಗಳೂರಿನ ವಿಜಯ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹಾಗೂ ‘ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು: ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ.ಪದವಿ. ಬೋಧಕರಾಗಿ ಸೇರಿದ್ದು ಸರಕಾರಿ ಮಂಡ್ಯ ಕಾಲೇಜಿನಲ್ಲಿ. ಶಿಕಾರಿಪುರ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿಜಯಾ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ಮಂಡ್ಯದ ಸರಕಾರಿ ಮಹಿಳಾ ಕಾಲೇಜು ಮುಂತಾದೆಡೆಗಳಲ್ಲಿ ಅಧ್ಯಾಪಕರಾಗಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಹಿರಿಯ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಪ್ರಸ್ತುತ ಶ್ರವಣ ಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲಿ ಧವಲೇತರ ಗ್ರಂಥಗಳ ಅನುವಾದನಾ ಯೋಜನೆಯ ಸಂಪಾದಕರಾಗಿ, ಜಯಧವಲ ಗ್ರಂಥ ಪ್ರಕಾಶನದ ಸಂಯೋಜಕರಾಗಿ, ಪ್ರಾಕೃತ ಪರೀಕ್ಷಾ ವಿಭಾಗದ ಮುಖ್ಯಸ್ಥರಾಗಿ ಹೊತ್ತಿರುವ ಜವಾಬ್ದಾರಿಗಳು. ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಲು ಕಾರಣರಾದವರು ಇವರ ಅಜ್ಜಿ (ತಾಯಿಯತಾಯಿ). ಅವರು ಹೇಳುತ್ತಿದ್ದ ಕಥೆಗಳನ್ನು ಕೇಳಲೆಂದೇ ರಜಾದಿನಗಳಲ್ಲಿ ದೊಡ್ಡಬೆಲೆಗೆ (ಅಜ್ಜಿಮನೆಗೆ) ಹೋಗುತ್ತಿದ್ದರು. ಕೇಳಿದ ಕಥೆಗಳನ್ನು ಸಂಗ್ರಹಿಸಿಕೊಂಡು ಬಂದು ವರದರಾಜರಾವ್‌ ಮೂಲಕ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡಾಗ, ಆ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸಮಾಡಲು ಆಸಕ್ತಿ ಬೆಳೆಯಿತು. ಹೀಗೆ ಸಂಗ್ರಹಿಸಿದ ಜಾನಪದ ಕಥೆಗಳು ‘ಧವಳ ಶ್ರೀ’ ಎಂಬ ಕಾವ್ಯನಾಮದಿಂದ ೧೯೬೭ ರಲ್ಲಿ ‘ಜಾನಪದ ಕಥಾಮೃತ – ಸಂಪುಟ – ೧’ ರಲ್ಲಿ ಪ್ರಕಟವಾಯಿತು. ನಂತರ ನಾಡಿನ ಉದ್ದಗಲಕ್ಕೂ ಸಂಚರಿಸಿ, ಸಂಗ್ರಹಿಸಿ ಪ್ರಕಟಿಸಿದ್ದು ‘ಜಾನಪದ ಕಥಾಮೃತ – ಸಂಪುಟ – ೨’. ಈ ಎರಡು ಕೃತಿಗಳಲ್ಲೂ ಕಥೆಗಳ ವಕ್ತಾರರ ಪರಿಚಯ, ಜಾನಪದ ಶಬ್ದಕೋಶ ಮುಂತಾದ ಉಪಯುಕ್ತ ಮಾಹಿತಿಗಳನ್ನೊಳಗೊಂಡಿದೆ. ಪ್ರಸಿದ್ಧ ಜಾನಪದ ತಜ್ಞರಾದ ಪ್ರೊ. ಎ.ಕೆ. ರಾಮಾನುಜನ್‌ ರವರು ತಾವು ಸಂಗ್ರಹಿಸಿ, ಅನುವಾದಿಸುತ್ತಿದ್ದ ಜಾನಪದ ಕಥಾ ಸಂಗ್ರಹಕ್ಕಾಗಿ ಇವರ ಕೆಲ ಜಾನಪದ ಕಥೆಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ನಂತರ ಇವರು ಹೊರತಂದ ಜಾನಪದ ಕೃತಿಗಳು ‘೧೧೫ ಜಾನಪದ ಕಿರುಗತೆಗಳು’, ‘ಫೋಕ್‌-ಲೋಕ್‌-ಫೋಕ್‌ಲೋಕ್‌’, ‘ಸಂಸಾರಿ ಹೆಚ್ಚೋ ಸಂನ್ಯಾಸಿ ಹೆಚ್ಚೋ’ ‘ಪಡಸಾಲೆಯ ಪವಾಡಗಳು’, ‘ಜಾನಪದ ನೀಳ್ಗತೆಗಳು’, ‘ಬುದ್ಧಿವಂತಿಕೆಯ ಕಥೆಗಳು’ ಮುಂತಾದವು. ಇವರ ವಿಮರ್ಶಾಕೃತಿಗಳಾದ ‘ವಡ್ಡಾರಾಧನೆಯಲ್ಲಿ ಸ್ತ್ರೀ’, ‘ರಾಷ್ಟ್ರಕವಿ ಕಂಡ ಗೋಮಟೇಶ್ವರ’, ‘ಜೈನಧರ್ಮದಲ್ಲಿ ಮಾನವೀಯ ಮೌಲ್ಯಗಳು’, ‘ಹ್ಯೂಮನ್‌ ವ್ಯಾಲ್ಯೂಸ್‌ ಇನ್‌ ಜೈನಿಸಂ’, ‘ಗೋಮ್ಮಟ ಸಂದೇಶ’, ‘ಬಾನಿನಲ್ಲಿ ತೇಲಿದ ದಿವ್ಯಧ್ವನಿ’, ‘ಬಾಹುಬಲಿ ಚರಿತ ಸಾಹಿತ್ಯ’ ಮುಂತಾದ ಪ್ರಮುಖ ಕೃತಿಗಳು ಪ್ರಕಟಗೊಂಡಿವೆ. ಇವಲ್ಲದೆ ‘ಏಲಾಚಾರ್ಯ ಮುನಿಶ್ರೀ ವಿದ್ಯಾನಂದರು’, ‘ಆಚಾರ್ಯ ಶ್ರೀ ಕುಂದಕುಂದರು’, ‘ಆ.ನೇ. ಉಪಾಧ್ಯೆ’, ‘ಅತಿಮಬ್ಬೆ’, ‘ಭಗವಾನ್‌ ಮಹಾವೀರ’ ಮುಂತಾದವರ ಜೀವನ ಚರಿತ್ರೆಗಳು; ಕವಿತೆ-ವಚನ ಕೃತಿಗಳು; ದಾರ್ಶನಿಕ ಕಥಾಸಂಗ್ರಹಗಳು; ಹಲವಾರು ಸಂಪಾದಿತ ಕೃತಿಗಳು, ಪ್ರಾಕೃತ ಸಾಹಿತ್ಯ ಕೃತಿಗಳು ಮುಂತಾದ ೫೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಶ್ರಮಪೂರ್ಣ, ಶಿಸ್ತಿನ, ವೈಜ್ಞಾನಿಕ ಮಾದರಿಯ ಗ್ರಂಥ ಸಂಪಾದನೆಯಲ್ಲಿ ನಿರತರಾಗಿರುವ ಜಯಚಂದ್ರರವರಿಗೆ ಕರ್ನಾಟಕ ಜಾನಪದದ ಅಕಾಡಮಿಯ ‘ಜಾನಪದತಜ್ಞಪ್ರಶಸ್ತಿ’, ಶ್ರೀ ಗೋಮ್ಮಾಟೇಶ್ವರ ವಿದ್ಯಾಪೀಠ ಪ್ರಶಸ್ತಿ, ‘ರನ್ನ ಸಾಹಿತ್ಯ ಪ್ರಶಸ್ತಿ’, ಆಚಾರ್ಯಬಾಹುಬಲಿ ‘ಕನ್ನಡ ಸಾಹಿತ್ಯ ಪ್ರಶಸ್ತಿ’, ‘ಸ್ಯಾದ್ವಾದಿ ಸಾಹಿತ್ಯ ರತ್ನ ಪ್ರಶಸ್ತಿ’, ೧೧೫ ಜಾನಪದ ಕಿರು ಕಥೆಗಳು ಮತ್ತು ಸಂಸಾರಿ ಹೆಚ್ಚೋ ಸಂನ್ಯಾಸಿ ಹೆಚ್ಚೋ ಎಂಬ ಕೃತಿಗಳಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು, ಭಾವಪೂಜೆ ಎಂಬ ಗ್ರಂಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಪ್ರಶಸ್ತಿ’ ಹಾಗೂ ಕರ್ನಾಟಕ ಸರಕಾರದ ಜೈನಗ್ರಂಥ ಪ್ರಶಸ್ತಿಯು, ರಾಷ್ಟ್ರಕವಿ ಕಂಡ ಗೋಮ್ಮಟೇಶ್ವರ ಗ್ರಂಥಕ್ಕೆ ‘ದೇವರಾಜ ಬಹದ್ದೂರ್’ ಬಹುಮಾನವು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top