೧೦-೧೧-೧೯೦೫ ೧೩-೧-೧೯೮೪ ಸಹೃದಯ, ಸುಸಂಸ್ಕೃತ ಹಾಸ್ಯದ ‘ರಾಶಿ’ ಎಂಬ ಕಾವ್ಯನಾಮದ ಶಿವರಾಂರವರು ಹುಟ್ಟಿದ್ದು ಬೆಂಗಳೂರು. ತಂದೆ ರಾಮಸ್ವಾಮಯ್ಯ, ತಾಯಿ ಸೀತಮ್ಮ. ಶಿಕ್ಷಣ ಬೆಂಗಳೂರಿನಲ್ಲಿ. ಎಂ.ಬಿ.ಬಿ.ಎಸ್. ಓದುತ್ತಿರುವಾಗಲೇ ತಂದೆ ತೀರಿಕೊಂಡಿದ್ದರಿಂದ ಹೊತ್ತ ಸಂಸಾರದ ಜವಾಬ್ದಾರಿ. ವೈದ್ಯರಾಗಿ ಸಮಾಜ ಸೇವೆ ಮಾಡಬೇಕೆಂದು ತಿಳಿಯ ಹೇಳಿದ್ದು ಕೈಲಾಸಂ. ಸಮಾಜ ಸೇವೆಗಾಗಿ ಸ್ಥಾಪಿಸಿದ್ದು ಬೆಂಗಳೂರು ಮೆಡಿಕಲ್ ಕಾಲೇಜು, ಕೈಗಾರಿಕೋದ್ಯಮದಲ್ಲೂ ಮಾಡಿದ ಸೇವೆ. ಅನೇಕ ಸಂಘ ಸಂಸ್ಥೆಗಳೊಡನಾಟ. ಇಂಡಸ್ಟ್ರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿಯ ನಿರ್ದೇಶಕರಾಗಿ, ಕಿರ್ಲೋಸ್ಕರ್ ಕಾರ್ಖಾನೆಯ ನಿರ್ದೇಶಕರಾಗಿ, ಮೈಸೂರು ಲ್ಯಾಂಪ್ಸ್, ಇಂಡಿಯನ್ ಆಕ್ಸಿಜನ್ ಕಂಪನಿಗಳ ಸಲಹೆಗಾರರಾಗಿ ಸಲ್ಲಿಸಿದ ಸೇವೆ. ಮೈಸೂರು ಕ್ಯಾನ್ಸರ್ ಸೊಸೈಟಿ ಸ್ಥಾಪಕ ಸದಸ್ಯರಲ್ಲೊಬ್ಬರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ರಾಜ್ಯ ಶಾಖೆಯ ಅಧ್ಯಕ್ಷರಾಗಿ ಹೊತ್ತ ಜವಾಬ್ದಾರಿ. ಕೊರವಂಜಿ ಪತ್ರಿಕೆಗೆ ಕುಮಾರ್, ಬಚ್ಚ, ಪ್ರಸಾದ್ ಎಂಬ ವಿವಿಧ ಹೆಸರುಗಳಿಂದ ಬರೆದ ಲೇಖನಗಳು, ವಿದೇಶ ಪ್ರವಾಸ ಮಾಡಿ ಬಂದ ರಾಶಿಯವರ ಲೇಖನಿಯಿಂದ ಮೂಡಿಬಂದ ಕೃತಿ ‘ಕೊರವಂಜಿಯ ಪಡುವಣ ಯಾತ್ರೆ.’ ರಾಶಿಯವರು ಬರೆದ ಲೇಖನಗಳು ಅಸಂಖ್ಯಾತ. ಮೊದಲ ಹಾಸ್ಯಲೇಖನ ಸಂಕಲನ ತುಟಿ ಮೀರಿದುದು, ಜೇಬುಗಳ್ಳರ ಜಿಮ್ಮಿ, ಒಂದಾನೊಂದು ಕಾಲದಲ್ಲಿ, ಕೊರವಂಜಿ ಕಂಡ ನಗು ದರ್ಬಾರಿಗರು, ನಗು ಸಂಸಾರಗಳು, ನಗು ಸರಸಿ ಅಪ್ಸರೆಯರು, ಕೊರವಂಜಿ ಕಂಡ ನಗು ವ್ಯಕ್ತಿಗಳು, ಕೊರವಂಜಿ ಕಂಡ ನಗು ಸಮಾಜ, ನಗು, ನವ್ಯ ಅಡುಗೋಲಜ್ಜಿ ಕತೆಗಳು. ಅಣಕು ಕವನಗಳು-ಕೆಣಕೋಣಬಾರ. ಹಾಸ್ಯಚಟಾಕಿ-ಥಳಕು-ಮಿಣಕು. ಕಾದಂಬರಿಗಳು-ಹರಿದ ಉಯಿಲು, ಕಾರ್ತಿಕ ಸೋಮವಾರ, ಪಂಪಾಪತಿಯ ಕೃಪೆ, ಮಧುವನದಲ್ಲಿ ಮೇಳ, ಮೃಗಶಿರ, ಅಂಚೆ ಪೇದೆ ಅಂತರ್ ಹೆಂಡತಿ, ಪೋಂತಿಯೇನೋ. ಕಥಾಸಂಕಲನಗಳು-ಜಗ್ಗೋಜಿಯ ಕಥೆಗಳು, ಬುದ್ದೋಜಿಯ ಕಥೆಗಳು, ಪಶ್ಯಾಮಿ ಕಥೆಗಳು. ಮನಃಶಾಸ್ತ್ರದ ಮೇಲೆ ರಚಿಸಿದ ಕೃತಿ-ಮನೋನಂದನ, ಮನಮಂಥನ. ಸಂದ ಪ್ರಶಸ್ತಿ ಗೌರವಗಳು-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡಮಿಯ ಅಧ್ಯಕ್ಷರ ಜವಾಬ್ದಾರಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಕ.ವೆಂ. ರಾಜಗೋಪಾಲ – ೧೯೨೪ ಆದ್ಯ ರಾಮಾಚಾರ್ಯ – ೧೯೨೬ ಬಿ.ಆರ್. ನಾಗೇಶ್ – ೧೯೩೧ ಕೆ.ಎಸ್. ಕರುಣಾಕರನ್ – ೧೯೩೩ ವೇಣುಗೋಪಾಲ್ ಕಾಸರಗೋಡು – ೧೯೪೮-೨೫.೫.೦೫

