ಡಾ. ಎಚ್.ಎಸ್. ವೆಂಕಟೇಶಮೂರ್ತಿ

Home/Birthday/ಡಾ. ಎಚ್.ಎಸ್. ವೆಂಕಟೇಶಮೂರ್ತಿ
Loading Events
This event has passed.

೨೩-೬-೧೯೪೪ ನಿರಂತರ ಕಾವ್ಯ ಪ್ರಯೋಗದಿಂದ ಮಹತ್ವದ ಕವಿ ಎನಿಸಿರುವ ಎಚ್.ಎಸ್.ವಿ.ಯವರು ಹುಟ್ಟಿದ್ದು ಚನ್ನಗಿರಿ ತಾಲ್ಲೂಕಿನ ಹೋದಿಗ್ಗೆರೆ ಗ್ರಾಮ. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ. ಪ್ರಾಥಮಿಕ ಶಿಕ್ಷಣ ಹೋದಿಗ್ಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರಾಗಿ ಉದ್ಯೋಗ ಪ್ರಾರಂಭ. ವ್ಯಾಸಂಗದ ಆಸಕ್ತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. “ಕನ್ನಡದಲ್ಲಿ ಕಥನ ಕವನಗಳು” ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಸುಮಾರು ಮೂವತ್ತು ವರ್ಷ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ. ತಾಯಿಯ ತೌರುಮನೆಯಲ್ಲಿ ನಡೆಯುತ್ತಿದ್ದ ಗಮಕವಾಚನ, ನಾಟಕ, ಸಾಂಸ್ಕೃತಿಕ ಕಾರ‍್ಯಕ್ರಮಗಳು ಮನಸ್ಸಿನ ಮೇಲೆ ಮಾಡಿದ ಪ್ರಭಾವದಿಂದ ಕವನ ಬರೆಯಲು ಪ್ರೇರಣೆ. ರಚಿಸಿದ ಮುಖ್ಯ ಕಾವ್ಯ ಕೃತಿಗಳು-ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ). ಹಲವಾರು ನಾಟಕಗಳ ರಚನೆ- ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ). ಮಕ್ಕಳ ಸಾಹಿತ್ಯಕ್ಕೂ ವಿಶೇಷ ಕೊಡುಗೆ-ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು). ಕಾದಂಬರಿ-ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು. ಬಿಡುವಿಲ್ಲದ ಬರವಣಿಗೆಯ ನಡುವೆ ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ. ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಕೊಟ್ಟ, ಮತದಾನ ಚಲನಚಿತ್ರಗಳಿಗೆ ರಚಿಸಿದ ಹಾಡುಗಳು, ಕೆಲವಕ್ಕೆ ಸಂಭಾಷಣೆ. ದೂರದರ್ಶನ ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ. ಬಣ್ಣದ ಹಕ್ಕಿ, ಮಕ್ಕಳ ಗೀತೆಗಳು, ಅನಂತ ನಮನ, ತೂಗುಮಂಚ, ಸುಳಿಮಿಂಚು, ಅಪೂರ್ವ ರತ್ನ, ಭಾವಭೃಂಗ-ಭಾವಗೀತೆಗಳ ಧ್ವನಿ ಸುರಳಿಗಳು. ಅರಸಿಬಂದ ಪ್ರಶಸ್ತಿಗಳು-ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿ, ಅಖಿಲ ಭಾರತ ಆಕಾಶವಾಣಿ ಪ್ರಶಸ್ತಿ-೨ ಬಾರಿ, ಅರವತ್ತು ತುಂಬಿದ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಅರ್ಪಿಸಿದ ಅಭಿನಂದನಗ್ರಂಥ ‘ಗಂಧವ್ರತ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಜಯದೇವಿತಾಯಿ ಲಿಗಾಡೆ – ೧೯೧೨-೨೫.೭.೮೬ ದೇವಕಿಮೂರ್ತಿ – ೧೯೩೧ ಎಂ.ಎಸ್. ವೆಂಕಟರಾಮಯ್ಯ – ೧೯೨೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top