೧೫-೩-೧೯೪೪ ಡಾ. ಎಚ್.ಎಸ್. ಸುಜಾತರವರು ಹುಟ್ಟಿದ್ದು ಬೆಂಗಳೂರು. ತಂದೆ ಎಚ್.ಕೆ. ಸೂರಶೆಟ್ಟಿ, ತಾಯಿ ಸೀತಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಭದ್ರಾವತಿಯಲ್ಲಿ. ಹೈಸ್ಕೂಲು ಓದಿದ್ದು ಬೆಂಗಳೂರು. ಕಾಲೇಜು ಓದಿದ್ದು ಮೂರು ವಿಶ್ವ ವಿದ್ಯಾಲಯಗಳಲ್ಲಿ. ಬಿ.ಎಸ್ಸಿ. ಬೆಂಗಳೂರು. ಕನ್ನಡ ಎಂ.ಎ. ಪದವಿ ಮಂಗಳೂರು. ಪಿಎಚ್.ಡಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ. ಮೈಸೂರು ವಿಶ್ವವಿದ್ಯಾಲಯದ ಡಿ. ಬನುಮಯ್ಯ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ವೃತ್ತಿ ಆರಂಭಿಸಿ ೩೧ ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ವೃತ್ತಿಯ ಜೊತೆಗೆ ಹಲವಾರು ಜವಾಬ್ದಾರಿಗಳು. ಮೈಸೂರು ವಿಶ್ವವಿದ್ಯಾಲಯದ ಪದವಿ ಶಿಕ್ಷಣದ ಅಧ್ಯಯನ ಮಂಡಲಿಯ ಸದಸ್ಯೆಯಾಗಿ, ಪದವಿ ತರಗತಿಗಳ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯೆಯಾಗಿ, ನ್ಯಾಷನಲ್ ಬುಕ್ಟ್ರಸ್ಟ್ ಆಫ್ ಇಂಡಿಯಾ ಕನ್ನಡ ಭಾಷಾ ಸಲಹಾ ಮಂಡಲಿಯ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ನೇಪಾಳ, ಥಾಯ್ಲ್ಯಾಂಡ್, ಹಾಂಗ್ಕಾಂಗ್, ಫ್ರಾನ್ಸ್, ಸ್ವಿಟ್ಸರ್ಲ್ಯಾಂಡ್, ಇಟಲಿ, ಜರ್ಮನಿ, ಬೆಲ್ಜಿಯಂ, ಹಾಲೆಂಡ್, ಇಂಗ್ಲೆಂಡ್ ಮುಂತಾದೆಡೆ ವ್ಯಾಪಕವಾದ ಪ್ರವಾಸ, ಅನುಭವ. ಎಂ.ಎಸ್. ಪುಟ್ಟಣ್ಣ-ಒಂದು ಅಧ್ಯಯನ ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸಿ ಪಿಎಚ್.ಡಿ ಪದವಿ ಗಳಿಸಿದ್ದಲ್ಲದೆ ಕೃತಿಯೂ ಪ್ರಕಟಣೆಗೊಂಡಿದೆ. ಸಂಪಾದಿತ ಕೃತಿಗಳು-ಹಕ್ಕಿಯಬುದ್ಧಿ ಮತ್ತು ಇತರ ಐದು ಕಥೆಗಳು, ಹಸು ಮತ್ತು ಹೆಗ್ಗಣ ಮತ್ತು ಇತರ ಕಥೆಗಳು, ನ್ಯಾಯಾಪತಿಯ ಯುಕ್ತಿ ಮತ್ತು ಇತರ ಕಥೆಗಳು, ಹಾತಿಂತಾಯ್ನ ಸಾಹಸಗಳು, ಛತ್ರಪತಿ ಶಿವಾಜಿ ಮುಂತಾದುವು. ಮಕ್ಕಳ ಸಾಹಿತ್ಯ-ಗುಮ್ಮನಾಯ್ಕನ ಪಾಳ್ಯದ ಪಾಳೆಗಾರರು, ಹಾಗಲವಾಡಿ ಪಾಳೇಗಾರರು ಮೊದಲಾದುವು. ಮಜಲುಗಳು (ಕವನ ಸಂಕಲನ) ಅಶ್ವತ್ಥರ ಬದುಕು ; ಒಂದು ನೋಟ ಪ್ರಮುಖವಾದುವು. ಇವರದೇ ಸುಹಾಸ ಪ್ರಕಾಶನ ಸಂಸ್ಥೆಯಿಂದ ಹಲವಾರು ಮೌಲಿಕ ಕೃತಿ ಪ್ರಕಟಣೆ. ಕಳೆದ ಆರು ವರ್ಷಗಳಿಂದಲೂ ಕಸ್ತೂರಿ ಮಾಸಪತ್ರಿಕೆಗಾಗಿ ‘ಬಿಂದು’ ಅಂಕಣ ಬರೆಯುತ್ತಿರುವ ಖ್ಯಾತಿ. ಸಂದ ಪ್ರಶಸ್ತಿಗಳು-ಕ.ಸಾ.ಪದ ಮಲ್ಲಿಕಾ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೋಪಾಲಕೃಷ್ಣ ಅಡಿಗ ಸ್ಮಾರಕ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಗುರುನಾಥ ಮಹಾದೇವ ಜೋಶಿ – ೧೯೦೮ ಮ.ಗು. ಬಿರಾದಾರ – ೧೯೩೩ ಕೆ.ಕೆ. ನಾಯರ್ – ೧೯೩೫ ಗುರುರಾಜ ಕುಲಕರ್ಣಿ – ೧೯೫೧ ರವಿ ಬೆಳಗೆರೆ – ೧೯೫೮ ಜೆ.ಎಂ. ರಾಜಶೇಖರ – ೧೯೬೫

