ಡಾ. ಎಸ್.ಎಲ್. ಭೈರಪ್ಪ

Home/ಡಾ. ಎಸ್.ಎಲ್. ಭೈರಪ್ಪ
Loading Events

೨೬-೭-೧೯೩೪ ಮಹತ್ವದ ಕಾದಂಬರಿಕಾರರಲ್ಲೊಬ್ಬರಾದ ಭೈರಪ್ಪನವರು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆ ಶಿವರ ಗ್ರಾಮದಲ್ಲಿ. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ. ಹುಟ್ಟೂರಿನ ಸುತ್ತಮುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಸೇರಿದ್ದು ಪ್ರೌಢಶಾಲೆಗೆ. ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಬಿ.ಎ. (ಆನರ್ಸ್‌), ಎಂ.ಎ. ಪದವಿ. ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆ, ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ, ಎರಡು ಸ್ವರ್ಣಪದಕ. ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯಕ್ಕೆ ಸತ್ಯ ಮತ್ತು ಸೌಂದರ್ಯ (TRUTH AND BEAUTY) ಮಹಾಪ್ರಬಂಧ ಮಂಡಿಸಿ ೧೯೬೨ರಲ್ಲಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹುಬ್ಬಳ್ಳಿಯ ಕಾಡುಸಿದ್ದೇಶ್ವರ ಕಾಲೇಜಿನಲ್ಲಿ ತರ್ಕ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ. ನಂತರ ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಆರು ವರ್ಷ ತತ್ತ್ವಶಾಸ್ತ್ರದ ಉಪನ್ಯಾಸಕರ ಹುದ್ದೆ. ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಾಲ್ಕು ವರ್ಷ ಶಿಕ್ಷಣ ಮೀಮಾಂಸೆಯ ರೀಡರಾಗಿ, ಪ್ರಾಧ್ಯಾಪಕರಾಗಿ ೧೯೯೧ರಲ್ಲಿ ನಿವೃತ್ತಿ. ಪ್ರಪಂಚ ಪರ‍್ಯಟನೆ ಮಾಡಿ ಗಳಿಸಿದ ವ್ಯಾಪಕ ಅನುಭವ. ಜಪಾನ್, ಇಂಗ್ಲೆಂಡ್, ಈಜಿಪ್ಟ್, ಅಮೆರಿಕಾ, ಜರ್ಮನಿ, ಇಟಲಿ, ಫ್ರಾನ್ಸ್ ಮುಂತಾದ ದೇಶಗಳಿಗೆ ಭೇಟಿ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಪ್ರಾರಂಭಿಸಿದ ಬರವಣಿಗೆಯ ಹವ್ಯಾಸ. ಜ್ಯೂನಿಯರ್ ಇಂಟರ್‌ನಲ್ಲಿದ್ದಾಗ ಬರೆದ ಕಾದಂಬರಿ ‘ಜಟ್ಟಿ ಮತ್ತು ಮಟ್ಟಿ.’ ಮೌಲ್ಯಗಳ ಸಂಘರ್ಷ ಹಳತು-ಹೊಸತು, ಹಳಬರು-ಆಧುನಿಕರು ಭಿನ್ನಭಿನ್ನ ನಿಲುವುಗಳ ಮೂಲಕ ತೆರೆದುಕೊಂಡ ಸನ್ನಿವೇಶಗಳು ರೂಪಗೊಳ್ಳುತ್ತಾ ಹೋಗುವುದೇ ಇವರ ಕಾದಂಬರಿಗಳ ವೈಶಿಷ್ಟ್ಯ. ಹಲವಾರು ಕಾದಂಬರಿಗಳು ಭಾರತೀಯ ಭಾಷೆಗಳಿಗೆ ಭಾಷಾಂತರ. ಹಲವಾರು ಕಾದಂಬರಿಗಳ ಪುನರ್‌ಮುದ್ರಣ. ಕಾದಂಬರಿಗಳು-ಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿನೆರಳು, ತಬ್ಬಲಿಯ ನೀನಾದೆ ಮಗನೆ…..ಯಿಂದ ಹಿಡಿದು ಇತ್ತೀಚಿನ ‘ಕವಲು’ವರೆಗೆ ೨೩ ಕಾದಂಬರಿಗಳು ಪ್ರಕಟಿತ. ನೀಳ್ಗತೆ-ಗತ ಜನ್ಮ. ವಿಮರ್ಶಾ ಕೃತಿಗಳು-ಸಾಹಿತ್ಯ ಮತ್ತು ಪ್ರತೀಕ, ಸತ್ಯ ಮತ್ತು ಸೌಂದರ್ಯ, ಕಥೆ ಮತ್ತು ಕಥಾವಸ್ತು, ನಾನೇಕೆ ಬರೆಯುತ್ತೇನೆ. ಆತ್ಮವೃತ್ತಾಂತ-‘ಭಿತ್ತಿ.’ ಸಂದ ಗೌರವ ಪ್ರಶಸ್ತಿಗಳು ಹಲವಾರು. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗ್ರಂಥಲೋಕ ಮತ್ತು ಗೊರೂರು ಪ್ರತಿಷ್ಠಾನದ ವರ್ಷದ ವ್ಯಕ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ ಪ್ರತಿಷ್ಠಾನ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಗುರೂಜಿ ಸಾಹಿತ್ಯ ಪುರಸ್ಕಾರ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (೧೯೯೯-ಕನಕಪುರ) ಅಧ್ಯಕ್ಷತೆ ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ವಾಗೀಶ್ವರಿ ಶಾಸ್ತ್ರಿ – ೧೯೨೬ ಶೈಲಜಾ ಉಡುಚಣ – ೧೯೩೫ ಜಿ.ಜೆ. ಹರಿಜಿತ್ – ೧೯೩೮ ತೇಜಸ್ವಿನಿ ನಿರಂಜನ – ೧೯೫೮ ರಾಧಾಕೃಷ್ಣ ಕಲ್ಯಾಣಪುರ್ – ೧೯೩೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top