Loading Events

« All Events

ಡಾ. ಎಸ್. ಪಿ. ಪದ್ಮಪ್ರಸಾದ್

December 9

೯.೧೨.೧೯೪೯ ಜಾನಪದ, ಕಾವ್ಯ, ನಾಟಕ, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪದ್ಮ ಪ್ರಸಾದವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ. ತಂದೆ ಎಸ್.ಪಿ. ಪಾಯಪ್ಪಶೆಟ್ಟಿ, ತಾಯಿ ಜಿನ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸನಗರದಲ್ಲಿ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್‌ನಿಂದ ಬಿ.ಇಡಿ. ಪದವಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಹಾಗೂ ‘‘ಜೈನ ಜನಪದ ಸಾಹಿತ್ಯ-ಸಂಪಾದನೆ ಹಾಗೂ ಅಧ್ಯಯನ’’ ಪ್ರಬಂದ ಮಂಡಿಸಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಹೈಸ್ಕೂಲು ಅಧ್ಯಾಪಕರಾಗಿ ಪಿಎಚ್.ಡಿ. ಪದವಿಗಳಿಸಿದ ರಾಜ್ಯದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ. ತಮಿಳುನಾಡಿನ ಅಣ್ಣಾಮಲೈ ವಿ.ವಿ.ದಿಂದ ಎಂ.ಇಡಿ ಹಾಗೂ ಮೈಸೂರು ಹಿಂದಿ ಪ್ರಚಾರ ಪರಿಷತ್‌ನಿಂದ ಹಿಂದಿ ರತ್ನ ಪದವಿಗಳು ಹಾಗೂ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್, ಹೈದರಾಬಾದ್ ಇವರಿಂದ ಇಂಗ್ಲಿಷ್ ಬೋಧನೆಯ ಸ್ನಾತಕೋತ್ತರ ಡಿಪ್ಲೊಮ. ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಬೋಧಕ ವೃತ್ತಿ. ಶಿವಮೊಗ್ಗದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ, ಕಾರವಾರದ ಶಿವಾಜಿ ಶಿಕ್ಷಣ ಕಾಲೇಜಿನಲ್ಲಿ ಬಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಇಳಕಲ್ ಕಾಲೇಜಿನ ಪ್ರಾಚಾರ್ಯಾರಾಗಿ ಸೇವೆಸಲ್ಲಿಸಿ ನಿವೃತ್ತಿ. ಸದ್ಯ ತುಮಕೂರು ವಿ.ವಿ.ದಲ್ಲಿ ಎಂ.ಇಡಿ ತರಗತಿಗಳಿಗೆ ಅತಿಥಿ ಪ್ರಾಧ್ಯಾಪಕರಾಗಿ ಸೇವೆ. ಹಲವಾರು ಶೈಕ್ಷಣಿಕ ಸಮಿತಿಗಳಲ್ಲಿ ಜವಾಬ್ದಾರಿಯುತ ಹುದ್ದೆಗಳು. ಬಿ.ಇಡಿ ಸಿಲಬಸ್ ಸಮಿತಿ ಅಧ್ಯಕ್ಷರಾಗಿ, ಬೆಂಗಳೂರು, ತುಮಕೂರು ವಿ.ವಿ.ದ ಬಿ.ಇಡಿ. ತರಗತಿಗಳ ಆಂತರಿಕ ವೌಲ್ಯಮಾಪನ ಸಮಿತಿ ಸದಸ್ಯರಾಗಿ, ಬೆಂಗಳೂರು ಮತ್ತು ತುಮಕೂರು ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ, ಕರ್ನಾಟಕ ಸರಕಾರದ ರಾಜ್ಯಾಭಾಷ ಸಮಿತಿ ಸದಸ್ಯರಾಗಿ ನಿರ್ವಹಿಸಿದ ಕಾರ್ಯಕ್ಷೇತ್ರಗಳು. ಜಾನಪದ, ಕಾವ್ಯ, ನಾಟಕ, ವಿಮರ್ಶೆ, ಕಥೆ, ಲಲಿತ ಪ್ರಬಂಧ, ಕಾದಂಬರಿ, ಜೀವನ ಚರಿತ್ರೆ, ಗ್ರಂಥಸಂಪಾದನೆ ಮುಂತಾದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳ ರಚನೆ. ಜಾನಪದ ಮತ್ತು ಜೈನಕಥಾ ಸಾಹಿತ್ಯ, ಹಾಡ್ಹೇಳೆ ತಂಗಿ ದನಿ ಎತ್ತಿ, ಜೈನ ಜನಪದಗೀತೆಗಳು ಮೊದಲಾದ ೮ ಜಾನಪದ ಸಾಹಿತ್ಯ ಕೃತಿಗಳು; ಕೆರೆಗೆ ಹಾರ, ನಗೆ ಚೆಲ್ಲಿದ ಹುಡುಗಿ, ಜಲಿಯನ್ ವಾಲಾ ಬಾಗ್, ಮೊದಲಾದ ೭ ನಾಟಕಗಳು; ಇದರಲ್ಲಿ ನನ್ನ ಜನ, ನನ್ನ ಕಿಟಕಿಯ ಆಚೆ, ಆರೋಹಣ, ದ್ರಾಕ್ಷಿ ಗೊಂಚಲು, ದೀಪಾವಳಿಯ ಬಳಿಕ ಮೊದಲಾದ ೫ ಕವಿತಾ ಸಂಕಲನಗಳು; ಬೃಂದಾವನ, ಮಗುವೆಂಬ ಮುದ್ದು ಕವಿತೆ ಮುಂತಾದ ಲಲಿತ ಪ್ರಬಂಧ ಸಂಕಲನಗಳು; ಶೈಕ್ಜಷಣಿಕ ಸಂಶೋಧನೆ, ಶಾಲಾ ನಿರ್ವಹಣೆ, ಭಾರತದಲ್ಲಿ ಪ್ರೌಢ ಶಿಕ್ಷಣ, ಉದಯೋನ್ಮುಖ ಭಾರತದಲ್ಲಿ ಶಿಕ್ಷಣ, ಶಿಕ್ಷಣ ಮತ್ತು ರಾಷ್ಟ್ರೀಯ ಕಾಳಜಿಗಳು ಮೊದಲಾದ ೧೦ ಶೈಕ್ಷಣಿಕ ಕೃತಿಗಳು; ಪಾಯಣ್ಣ ಕವಿಯ ಪ್ರಾಚೀನ ಜೈನ ನಾಟಕಗಳು, ಆಧುನಿಕ ಜೈನ ಪುಣ್ಯ ಪುರುಷರು ಮಾಲಿಕೆಯಲ್ಲಿ ಎಂಟು ಗ್ರಂಥಗಳೂ ಸೇರಿ ೧೦ ಸಂಪಾದಿತ ಕೃತಿಗಳು; ಸಿ.ಪಿ.ಕೆ. ಒಂದು ಕಾವ್ಯಾಭ್ಯಾಸ, ಕಮಲಾ ಹಂಪನಾ ಒಂದು ಸಾಂಸ್ಕೃತಿಕ ಅಧ್ಯಯನ, ಆಸ್ವಾದನೆ ನಿಕಷ ಮೊದಲಾದ ವಿಮರ್ಶಾ ಕೃತಿಗಳು; ಜೀವನ ಚರಿತ್ರೆ, ಪ್ರವಾಸ ಕಥನ ಹಾಗೂ ೫೦ ತುಂಬಿದ ಸಂದರ್ಭದಲ್ಲಿ ಅರ್ಪಿಸಿದ ಗ್ರ,ಥ ‘ಸುವರ್ಣ ಪದ್ಮ’ ಮತ್ತು ೬೦ರ ಸಂಭ್ರಮದಲ್ಲಿ ‘ಸತ್ವ’ ಕೃತಿಗಳು ಸೇರಿ ಒಟ್ಟು ೬೦ಕ್ಕೂ ಹೆಚ್ಚ ಕೃತಿಗಳು ಪ್ರಕಟಿತ. ಭಾರತದ ಪ್ರಮುಖ ಬ್ಲಾಗ್ ಲೇಖಕರಲ್ಲಿ ಒಬ್ಬರಾಗಿ ಪ್ರಸಾದ ಜೈನ್ ಎಂಬ ಹೆಸರಿನಿಂದ ಬರೆದ ನೂರಕ್ಕೂ ಮಿಕ್ಕ ಇಂಗ್ಲಿಷ್ ಲೇಖನಗಳನ್ನು  http://hubpages.comನಲ್ಲಿ  ನಾಲ್ಕು ವರ್ಷಗಳಲ್ಲಿ ಬ್ಲಾಗ್ ವೀಕ್ಷಿಸಿದವರು ಸುಮಾರು ೩ ಲಕ್ಷ ಮಂದಿ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಬಹುಮಾನ (೪ ಬಾರಿ) ಶ್ರವಣ ಬೆಳಗೊಳದ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ದ.ಕ. ಜಿಲ್ಲೆಯ ಬೇಲಾಡಿ ಗ್ರಾಮದ ಮಾರಣ್ಣಮಾಡ ಪ್ರಶಸ್ತಿ, ಹೊನ್ನಾವರದ ಜಾನಪದ ಪ್ರತಿಷ್ಠಾನದಿಂದ ‘ಕುವೆಂಪು ಜಾನಪದ ದೀಪ’ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯ ಡಾ. ಬಿ.ಎಸ್. ಗದ್ದಿಗಿಮಠ ಜಾನಪದ ತಜ್ಞ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು.

Details

Date:
December 9
Event Category: