
ಡಾ. ಎಸ್.ವಿ. ಪ್ರಭಾವತಿ
July 25, 2024
೨೫-೭-೧೯೫೦ ಪ್ರಖ್ಯಾತ ಸ್ತ್ರೀವಾದಿ, ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ತಂದೆ ವೆಂಕಟಸುಬ್ಬಯ್ಯ, ತಾಯಿ ರತ್ನಮ್ಮ. ಪ್ರಾರಂಭಿಕ ಶಿಕ್ಷಣ ಹೊಸಹೊಳಲು, ಹೈಸ್ಕೂಲಿಗೆ ಸೇರಿದ್ದು ಮಂಡ್ಯದಲ್ಲಿ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಬಿ.ಎ. ಮತ್ತು ಮಾನಸ ಗಂಗೋತ್ರಿಯಲ್ಲಿ ಗಳಿಸಿದ ಎಂ.ಎ. ಪದವಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭ. ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ಬಹುಜನ ಕನ್ನಡಿಗರು, ಕನ್ನಡದ ಮನೆಯಿಂದ ಹಾಗೂ ಉಷಾಕಿರಣ ಪತ್ರಿಕೆಗಳಿಗೆ ಸ್ತ್ರೀವಾದಿ ಲೇಖನಗಳ ಅಂಕಣಗಾರ್ತಿ. ಹಲವಾರು ಕಾದಂಬರಿ, ಕವನ ಸಂಕಲನ, ಸಂಶೋಧನಾ ಕೃತಿಗಳು ಪ್ರಕಟಿತ. ಪ್ರಕಟಿತ ಕೃತಿಗಳು. ಕವನ ಸಂಕಲನಗಳು-ಮಳೆ ನಿಂತ ಮೇಲಿನ ಮರ, ಉಳಿದದ್ದು ಆಕಾಶ, ಭೂಮಿ. ಕಾದಂಬರಿಗಳು-ದ್ರೌಪದಿ, ಕುಂತಿ, ಅಹಲ್ಯಾ, ಯಶೋಧರಾ, ಸೀತಾ, ಶಕುಂತಲಾ. ಸಂಶೋಧನೆ/ಪ್ರಬಂಧ-ಕನ್ನಡ ಸಾಹಿತ್ಯದಲ್ಲಿ ದ್ರೌಪದಿ, ದ್ರೌಪದಿ ಒಂದು ಅಧ್ಯಯನ, ಸ್ತ್ರೀವಾದದ ಪ್ರಸ್ತುತತೆ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು, ಕನ್ನಡ ರಾಮಾಯಣಗಳು, ಹೊರಳುನೋಟ, ಜಾಗತೀಕರಣ ಮತ್ತು ಮಹಿಳೆ, ಸಮನ್ವಯ, ಚಿತ್ತ-ಭಿತ್ತಿ. ಸುಮಾರು ೨೦ಕ್ಕೂ ಹೆಚ್ಚು ಕೃತಿ ಪ್ರಕಟ. ಸಂದ ಗೌರವ ಪ್ರಶಸ್ತಿಗಳು-‘ಭೂಮಿ’ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ, ‘ದ್ರೌಪದಿ’ ಕಾದಂಬರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ‘ಯಶೋಧರಾ’ ಕಾದಂಬರಿಗೆ ಗೀತಾದೇಸಾಯಿ ದತ್ತಿನಿ ಪ್ರಶಸ್ತಿ, ‘ಸ್ತ್ರೀವಾದದ ಪ್ರಸ್ತುತತೆ’ ಪ್ರಬಂಧ ಸಂಕಲನಕ್ಕೆ ಕಾವ್ಯನಂದ ಪುರಸ್ಕಾರ, ‘ಸಮನ್ವಯ’ ವಿಮರ್ಶಾ ಕೃತಿಗೆ ಗೋಕಾಕ್ ವಿಮರ್ಶಾ ಪ್ರಶಸ್ತಿ ಮುಂತಾದುವುಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ವಿರೂಪಾಕ್ಷಯ್ಯ. ಎನ್. – ೧೯೩೧ ನಾಗರಾಜ ಆರ್.ಜಿ. ಹಳ್ಳಿ – ೧೯೫೭ ಮೋಹನ ಕುಂಟಾರ್ – ೧೯೬೩