ಡಾ. ಎ.ಎನ್‌. ನರಸಿಂಹಯ್ಯ

Home/Birthday/ಡಾ. ಎ.ಎನ್‌. ನರಸಿಂಹಯ್ಯ
Loading Events

೨೩..೧೮೯೦ ೨೦..೧೯೮೦ ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಮೊದಲನೆಯ ಅಧ್ಯಾಪಕರಾಗಿದ್ದ ಎ.ಎನ್‌. ನರಸಿಂಹಯ್ಯನವರು ಹುಟ್ಟಿದ್ದು ಈಗಿನ ಚಾಮರಾಜ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮದಲ್ಲಿ, ಅನೇಕ ತಲೆಮಾರುಗಳಿಂದ ಆಯುರ್ವೇದ ವಿದ್ಯೆಗೆ ಹೆಸರುವಾಸಿಯಾಗಿದ್ದ ನರಸಿಂಹ ಪಂಡಿತರ ಮೂವರು ಗಂಡುಮಕ್ಕಳಲ್ಲಿ ಮೊದಲನೆಯವರಾಗಿ (ಒಬ್ಬ ತಮ್ಮ ಪ್ರಸಿದ್ಧ ಚಾರಿತ್ರಿಕ ನಾಟಕಕಾರರಾಗಿದ್ದು, ಪರ್ಸಿಕ್ಯೂಷನ್‌ ಕಾಂಪ್ಲೆಕ್ಸ್‌ಗೆ ಒಳಗಾಗಿ-ಯಾರೋ ಹಿಂಬಾಲಿಸುತ್ತಿದ್ದಾರೆಂಬ ಭ್ರಮೆಗೆ ಬಿದ್ದು, ಆತ್ಮಹತ್ಯೆ ಮಾಡಿಕೊಂಡ ‘ಸಂಸ’ರು) ೧೮೯೦ ರ ಮೇ ೨೩ ರಂದು. ಶಿಕ್ಷಣವೆಲ್ಲ ಬಹುಶಃ ಮೈಸೂರಿನಲ್ಲಿ. ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ಉಪಾಧ್ಯಾಯರಾಗಿ ಟ್ರೈನಿಂಗ್‌ ಕಾಲೇಜಿನ ಉಪನ್ಯಾಸಕರಾಗಿ ಸಂಸ್ಕೃತ ಮಹಾಪಾಠಶಾಲೆಯ ಪ್ರಿನ್ಸಿಪಾಲರಾಗಿ ಮೈಸೂರು ರಾಜ್ಯದ ಶಿಕ್ಷಣ ಇಲಾಖೆಯ ಕಾರ್ಯದಶಿಯಾಗಿ ಮೈಸೂರು  ವಿಶ್ವವಿದ್ಯಾಲಯದ ಪುಸ್ತಕ ಭಂಡಾರ ಮತ್ತು ಮೈಸೂರು ವಿ.ವಿ.ದಲ್ಲಿ ಅಸಿಸ್ಟೆಂಟ್‌ ರಿಜಿಸ್ಟ್ರಾರ್ – ಹೀಗೆ ಇವರ ಕಾರ್ಯಕ್ಷೇತ್ರಗಳು ಹಲವಾರು. ಇವರ ತಮ್ಮ ಸಂಸರು ಮರಿಮಲ್ಲಪ್ಪ ಹೈಸ್ಕೂಲಿಗೆ ಸೇರಲು ಬಂದಾಗ ಇವರು ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ನರಸಿಂಹಯ್ಯನವರು ಲಂಡನ್‌ ವಿಶ್ವವಿದ್ಯಾಲಯದ ‘ಸ್ಕೂಲ್‌ ಆಫ್‌ ಓರಿಯಂಟಲ್‌ ಸ್ಟಡೀಸ್‌’ನಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದ ಆರ್.ಎಲ್‌. ಟರ್ನರ್ ರವರ ಮಾರ್ಗದರ್ಶನದಲ್ಲಿ ‘ಎ ಗ್ರಾಮರ್ ಆಫ್‌ ದಿ ಓಲ್ಡೆಸ್ಟ್‌ ಕ್ಯಾನರೀಸ್‌ ಇನ್‌ಸ್ಕ್ರಿಪ್ಷನ್ಸ್‌’ (೧೯೩೩) ಎಂಬ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದರು. ಇದರಲ್ಲಿ ಆರು ಮತ್ತು ಏಳನೆಯ ಶತಮಾನಗಳ ಕನ್ನಡ ವ್ಯಾಕರಣ ವಿಶ್ಲೇಷಣೇ ಇದೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯ ಅಧ್ಯಯನ ಮಾಡಿ, ಸಂಶೋಧನೆ ನಡೆಸಿದವರಲ್ಲಿ ಮೊದಲಿಗರು. ಬಹುಶಃ ಕನ್ನಡದ ವಿಷಯದ ಮೇಲೆ ಪಿಹೆಚ್‌.ಡಿ. ಪಡೆದವರಲ್ಲಿಯೂ ಮೊದಲಿಗರು. ಇದು ಪ್ರಕಟವಾದುದು ೧೯೪೧ರಲ್ಲಿ. ಬಂಗಾಳಿ ಭಾಷೆಯನ್ನು ಅಧ್ಯಯನ ಮಾಡಿ ಕನ್ನಡಕ್ಕೆ ತಂದವರಲ್ಲಿಯೂ ಮೊದಲಿಗರು. ರವೀಂದ್ರನಾಥ ಠಾಕೂರರ ಸಾಹಿತ್ಯ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡ ನಂತರ ‘ಸಾಹಿತ್ಯ’ ಎಂಬ ಹೆಸರಿನಿಂದ ಪುಸ್ತಕ ರೂಪದಲ್ಲಿ ಪ್ರಕಟಿಸಿದರು (೧೯೪೦). ಶಿಕ್ಷಣ ಇಲಾಖೆಯ ಕೋರಿಕೆಯಂತೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆಗಳ ಉಪಯೋಗಕ್ಕಾಗಿ ಪ್ರತ್ಯೇಕ ಕನ್ನಡ ವ್ಯಾಕರಣ ಪುಸ್ತಕಗಳನ್ನೂ ಸಿದ್ಧಗೊಳಿಸಿದರು. ‘ಕನ್ನಡ ಪ್ರಥಮ ವ್ಯಾಕರಣ’ ಎಂಬ ಹೆಸರಿನಿಂದ ಹಲವಾರು ಮುದ್ರಣ ಕಂಡ ಪುಸ್ತಕ. ಪುರಾಣ ಪರಿಚಯ (೧೯೩೫) ಎಂಬುದು ಮತ್ತೊಂದು ಕಿರು ಪುಸ್ತಕ. ಇದಲ್ಲದೆ ಸಂಸ್ಕೃತದಲ್ಲಿ ‘ಸಂಗೀತ ಗಂಗಾಧರಂ’ ಮತ್ತು ‘ಶಿವಪಾದರೇಣುಕಾಸಹಸ್ರಂ’ ಎಂಬ ಎರಡು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ನರಸಿಂಹಯ್ಯನವರ ಮತ್ತೊಂದು ಕೃತಿ ‘ಕಾಶಕೃತ್ಸ್ನ ಶಬ್ದ ಕಲಾಪ ಧಾತುಪಾಟ’ ಎಂಬ ನಿಘಂಟನ್ನು ಪುಣೆಯ ಡೆಕ್ಕನ್‌ ಕಾಲೇಜಿನ ಸ್ನಾತಕೋತ್ತರ ಹಾಗೂ ಸಂಶೋಧನ ವಿಭಾಗದವರು ಪ್ರಕಟಿಸಿದ್ದಾರೆ (೧೯೫೨). ಈ ಗ್ರಂಥದ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಧಾತುಪಾಠ, ಅದರ ಕರ್ನಾಟಕ ಟೀಕಾ, ಕವಿಯ ಕಾಲ ಈ ಮೂರು ವಿಷಯಗಳು ಎರಡನೆಯ ಸಂಪುಟದಲ್ಲಿ ಪ್ರಕಟವಾಗಲಿದೆ ಎಂದು ತಿಳಿಸಿರುವಂತೆ ಪ್ರಕಟವಾಗಿದ್ದರೆ ವಿದ್ವಾತ್‌ ಪ್ರಪಂಚಕ್ಕೆ ಉಪಕಾರವಾಗುತ್ತಿತ್ತು  (ಹಾ.ಮಾ. ನಾ ರವರ ಅನಿಸಿಕೆ). ಪ್ರೌಢಶಾಲೆಗಳಲ್ಲಿ ಕನ್ನಡ ಮಾಧ್ಯಮವು ಪ್ರಾರಂಭವಾದಾಗ ಪಠ್ಯ ಪುಸ್ತಕಗಳ ಸಿದ್ಧತೆಗಾಗಿ ಮೈಸೂರು ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ (೧೯೩೭-೪೨) ಎನ್‌.ಎಸ್‌. ಸುಬ್ಬರಾಯರ ಯೋಜನೆಗಳ ಅನುಷ್ಠಾನಕ್ಕಾಗಿ ಬಹುವಾಗಿ ಶ್ರಮಿಸಿದರು. ಪಾಳಿ ವ್ಯಾಕರಣ, ಸಂಸ್ಕೃತ ಶಾಸನಗಳಲ್ಲಿ ವ್ಯಾಕರಣ. ಮುಂತಾದವುಗಳು ಹಸ್ತಪ್ರತಿ ರೂಪದಲ್ಲಿದ್ದು ಅಚ್ಚಾಗದೆ ಹೋದದ್ದು ದುರ್ದೈವ. ನಾಡು-ನುಡಿಗಾಗಿ ಶ್ರಮಿಸಿ, ವಿದ್ವತ್‌ ಪ್ರಪಂಚದಲ್ಲಿ ಹೆಸರಾಗಿದ್ದ ನರಸಿಂಹಯ್ಯನವರು ತೀರಿಕೊಂಡದ್ದು ೧೯೮೦ ರ ಮೆ ೨೦ ರಂದು, ೯೦ ವರ್ಷ ತುಂಬುವ ಮೂರು ದಿವಸಗಳ ಮುಂಚೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top