
- This event has passed.
ಡಾ. ಕಮಲಾ ಹಂಪನಾ
October 28
೨೮-೧೦-೧೯೩೫ ವಿದ್ವಾಂಸರಾಗಿ, ಉತ್ತಮ ಪ್ರಾಧ್ಯಾಪಕಿಯಾಗಿ, ಲೇಖಕಿಯರಲ್ಲೇ ವಿಶಿಷ್ಟ ಸಾಧನೆ ಮಾಡಿರುವ ಕಮಲಾರವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ದೇವನಹಳ್ಳಿ. ತಂದೆ ರಂಗಧಾಮನಾಯಕ್, ತಾಯಿ ರಂಗಲಕ್ಷ್ಮಮ್ಮ. ಸುಸಂಸ್ಕೃತ ಶ್ರೀಮಂತ ಕುಟುಂಬ. ಪ್ರಾರಂಭಿಕ ಶಿಕ್ಷಣ ಚಳ್ಳೆಕೆರೆ, ತುಮಕೂರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್) ಮತ್ತು ಕನ್ನಡ ಎಂ.ಎ. ಪದವಿ. “ತುರಂಗಭಾರತ: ಒಂದು ಅಧ್ಯಯನ” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧನಾ ವೃತ್ತಿ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಪ್ರಾಧ್ಯಾಪಕಿಯಾಗಿ, ಬೆಂಗಳೂರಿನ ವಿಜಯನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಣೆ. ನಿವೃತ್ತಿಯ ನಂತರ ಮೈಸೂರು ವಿಶ್ವವಿದ್ಯಾಲಯದ ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ ನಿರ್ವಹಿಸಿದ ಕಾರ‍್ಯಗಳು. ವಿದ್ಯಾರ್ಥಿ ದೆಸೆಯಿಂದಲೇ ವಿದ್ವತ್‌ಬಗೆಗೆ ಮೂಡಿಸಿಕೊಂಡ ಒಲವು. ಸೃಜನಶೀಲ, ಸೃಜನೇತರ ಎರಡರಲ್ಲಿಯೂ ರಚಿಸಿದ ಕೃತಿಗಳು. ಕಾವ್ಯ-ಬಿಂದಲಿ, ಬುಗುಡಿ. ವ್ಯಕ್ತಿಚಿತ್ರ- ಮುಡಿಮಲ್ಲಿಗೆ, ಆಮುಖ. ವೈಚಾರಿಕ-ಬಾಸಿಂಗ, ಬಾಂದಳ, ಬಡಬಾಗ್ನಿ, ಬಿತ್ತರ, ಬಕುಳ. ನಾಟಕ-ಬೆಳ್ಳಕ್ಕಿ, ಬಾನಾಡಿ. ಕಥಾಸಂಕಲನ-ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನ, ಬಣವೆ. ಸಂಪಾದಿತ-ಸುಕುಮಾರ ಚರಿತ್ರೆ, ಶ್ರೀಪಚ್ಚೆ, ಡಿ.ಎಲ್.ಎನ್. ಆಯ್ದ ಬರಹಗಳು, ಧರಣೇಂದ್ರಯ್ಯ ಸ್ಮೃತಿ ಸಂಪುಟ. ವಿದ್ವತ್‌ಕೃತಿಗಳು-‘ಬದ್ದವಣ, ಬೊಗಸೆ’ಯನ್ನೊಳಗೊಂಡಂತೆ ಸುಮಾರು ಐವತ್ತಕ್ಕೂ ಹೆಚ್ಚು ಕೃತಿ ಪ್ರಕಟಿತ. ಹಲವಾರು ಸಮ್ಮೇಳನಗಳ ಅಧ್ಯಕ್ಷತೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ಬೆಂಗಳೂರಿನ ಸಮಕಾಲೀನ ಸಾಹಿತ್ಯ ಸಮ್ಮೇಳನ, ತುಮಕೂರು ಜಿಲ್ಲಾ ಲೇಖಕಿಯರ ಸಮ್ಮೇಳನ, ಕೋಲಾರ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ, ಅತ್ತಿಮಬ್ಬೆ ರಾಷ್ಟ್ರೀಯ ವಿಚಾರ ಸಂಕಿರಣ-ಮುಂಬೈ, ಹಲವಾರು ವಿಶ್ವವಿದ್ಯಾಲಯಗಳ ವಿಚಾರಗೋಷ್ಠಿ ಮುಂತಾದುವು. ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬಾಬಾ ಅಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ವಿಶಾರದೆ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ವರ್ಷದ ಲೇಖಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ಟೊರೆಂಟೋ, ವ್ಯಾಂಕೊವರ್, ಲಾಸ್ ಏಂಜಲಿಸ್, ಬ್ರಿಟನ್ ಮುಂತಾದ ವಿದೇಶಿ ಪುರಸ್ಕಾರ. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು. ಇವರ ಕುರಿತಾದ ಏಳು ಅಭಿನಂದನ/ಸಂಶೋಧನಾ ಕೃತಿಗಳು ಪ್ರಕಟಿತ. ಇದೇ ದಿನ ಹುಟ್ಟಿದ ಸಾಹಿತಿಗಳು : ರೆ. ಉತ್ತಂಗಿ ಚನ್ನಪ್ಪ – ೧೮೮೧-೨೮.೮.೬೨ ವೈ.ಎಂ.ಎನ್. ಮೂರ್ತಿ – ೧೯೨೬ ಕೆ. ಶಾಂತಾ – ೧೯೩೩