ಡಾ. ಕೆ.ಆರ್. ಸಂಧ್ಯಾರೆಡ್ಡಿ

Home/Birthday/ಡಾ. ಕೆ.ಆರ್. ಸಂಧ್ಯಾರೆಡ್ಡಿ
Loading Events
This event has passed.

೨೨.೦.೧೯೫೩ ಸ್ವಾತಂತ್ರ‍್ಯ ಹೋರಾಟಗಾರರ ಮನೆತನದ, ಆದರ್ಶಶಿಕ್ಷಕ ಕುಟುಂಬದ, ಕತೆಗಾರ್ತಿ, ಜಾನಪದ ಸಂಶೋಧಕಿ ಸಂಧ್ಯಾರೆಡ್ಡಿಯವರು ಹುಟ್ಟಿದ್ದು ಚಿತ್ರದುರ್ಗದಲ್ಲಿ ೧೯೫೩ ರ ಜೂನ್‌ ೨೨ ರಂದು. ತಂದೆ ಪ್ರೌಢಶಾಲಾ ಅಧ್ಯಾಪಕರು, ಮುಖ್ಯೋಪಾಧ್ಯಾಯರು, ಶಾಲಾ ಇನ್‌ಸ್ಪೆಕ್ಟರಾಗಿದ್ದ  ಕೆ.ರಾಮರೆಡ್ಡಿ, ತಾಯಿ ಹಿಂದಿ ಶಿಕ್ಷಕಿ, ಕತೆ-ಕಾದಂಬರಿಗಾರ್ತಿ ಅನಸೂಯಾರಾಮರೆಡ್ಡಿ. ಪ್ರಾರಂಭದಿಂದ ಹಿಡಿದು ಬಿ.ಎಸ್ಸಿ. ಪದವಿಯವರೆಗೆ ಚಿತ್ರದುರ್ಗದಲ್ಲಿ ವಿದ್ಯಾಭ್ಯಾಸ. ಮೈಸೂರು ವಿಶ್ವವಿದ್ಯಾಲಯದಿಂದ (ಮಂಗಳೂರು) ಎಂ.ಎ. ಪದವಿ (೧೯೭೩) ಹಾಗೂ ‘ಕನ್ನಡ ಜನಪದ ಕಥೆಗಳು’ ಪ್ರೌಢ ಪ್ರಬಂಧಕ್ಕೆ ಮೈಸೂರು ವಿ.ವಿ.ದಿಂದ ಡಾಕ್ಟರೇಟ್‌ ಪದವಿ (೧೯೮೦). ಉದ್ಯೋಗಕ್ಕಾಗಿ ಆಯ್ಕೆಮಾಡಿಕೊಂಡದ್ದು ಕರ್ನಾಟಕ ಸರಕಾರದ ಉದ್ದಿಮೆಯಾದ ಎನ್‌.ಜಿ.ಇ.ಎಫ್‌ ಕಾರ್ಖಾನೆಯಲ್ಲಿ ಭಾಷಾಂತರ ಮತ್ತು ಕಲ್ಯಾಣಾಧಿಕಾರಿಯಾಗಿ ಸೇರಿ (೧೯೮೧), ಇಪತ್ತು ವರ್ಷಗಳ ಸೇವೆಯ ನಂತರ ಸ್ವಯಂ ನಿವೃತ್ತಿ. ತಾಯಿ ಹಿಂದಿ ಶಿಕ್ಷಕಿಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವಿದ್ದು ೧೭ ಕಾದಂಬರಿಗಳು ಸೇರಿ ಒಟ್ಟು ೨೫ ಕ್ಕೂ ಹೆಚ್ಚು ಕೃತಿ ರಚಿಸಿದ್ದು, ಮನೆಯಲ್ಲಿನ ಸಾಹಿತ್ಯಿಕ ವಾತಾವರಣದಿಂದ ಪ್ರೇರಿತರಾದವರು. ಧಾರವಾಡದ ಮನೋಹರ ಗ್ರಂಥಮಾಲೆಯ ಸದಸ್ಯೆಯಾಗಿದ್ದ ತಾಯಿಯವರಿಗೆ ಬರುತ್ತಿದ್ದ ಹಲವಾರು ಪುಸ್ತಕಗಳು, ಕುವೆಂಪು, ಅ.ನ.ಕೃ, ತರಾಸು., ಭೈರಪ್ಪ, ತ್ರಿವೇಣಿ ಮುಂತಾದವರುಗಳ ಕತೆ, ಕವಿತೆ ಕಾದಂಬರಿಗಳ ಓದು. ತಾಯಿಗೆ ಬಂದಿದ್ದ ಬಹುಮಾನ ರೂಪದ ಬಿ.ಎಂ.ಶ್ರೀ.ಯವರ ‘ಇಂಗ್ಲಿಷ್‌ ಗೀತೆಗಳು’ ಪುಸ್ತಕದ ಪದ್ಯಗಳನ್ನೂ ಅದೆಷ್ಟೋ ಬಾರಿ ಓದಿದ್ದರು. “ಬೇಟಗಾರ ಮಾದ ಬಂದ, ಹಹ್ಹ ಏನು ಬೇಟವೋ | ಬೇಡಿ ಸತ್ತು ಸುಣ್ಣವಾದ, ಹಹ್ಹ ಏನು ಬೇಟವೋ | ಮುಂತಾದ ಪದ್ಯಗಳ ಛಂಧೋಬದ್ಧವಾದ, ತಾಳಲಯಬದ್ಧವಾದ ಪದ್ಯಗಳ ಸಾಲುಗಳಿಂದ ಆಕರ್ಷಿತರಾಗಿದ್ದರು. ಆರು ವರ್ಷದ ಹುಡುಗಿಯಾಗಿದ್ದಾಗಲೇ ಇವರ ಕಂಠ ಮಾಧುರ್ಯಕ್ಕೆ ಬೆರಗಾದ ಅಜ್ಜಿ, ಸಂಗೀತ ಕಲಿಯಲು ಏರ್ಪಾಡುಮಾಡಿ, ಚಿತ್ರದುರ್ಗದ ಗುಡ್ಡದ ಬಳಿ ಇದ್ದ ಏಕನಾಥೇಶ್ವರಿ ಕಲಾಮಂದಿರಕ್ಕೆ ಸೇರಿಸಿದರು. ಇವರಿಗೆ ಸಂಗೀತದ ಮೇಲೆ ಎಷ್ಟೊಂದು ಪ್ರೀತಿ ಇತ್ತಂದರೆ ಸೀನಿಯರ್ ವಿದ್ಯಾರ್ಥಿಗಳಿಗೆ ಕಲಿಸುವ ವರ್ಣ, ಕೀರ್ತನೆಗಳನ್ನು ಜ್ಯೂನಿಯರ್ ಪರೀಕ್ಷೆಗೆ ಮುಂಚೆಯೇ ಕಲಿತಿದ್ದರು. ಹೀಗೆ ದೊರೆತ ಸಂಗೀತಜ್ಞಾನ, ಸಾಹಿತ್ಯಾಭ್ಯಾಸಗಳ ಅನುಭವದಿಂದ ವಿಶ್ವವಿದ್ಯಾಲಯ, ಅಕಾಡಮಿಗಳ ಸೆಮಿನಾರುಗಳಲ್ಲಿ ಮಂಡಿಸುವ ಪ್ರಬಂಧಗಳಿಗೇ ಸೀಮಿತವಾಗಿದ್ದ ತಮ್ಮ ಆಸಕ್ತಿಯನ್ನೂ ಕಾವ್ಯಕೃಷಿಯ ಕಡೆಗೂ ಹರಿಸಿ ಬರೆದ ಮೊದಲ ಕವನ ‘ನೆನಪುಗಳು’ ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಪ್ರಕಟವಾಯಿತು. ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಒಂದು ಕವನ ಪ್ರಕಟವಾದರೆ A POET IS BORN  ಎನ್ನುವಷ್ಟು ಪ್ರಬುದ್ಧತೆಗೆ ಹೆಸರಾದ ಪತ್ರಿಕೆಯಲ್ಲಿ ಇವರ ಕವನ ಪ್ರಕಟಗೊಂಡಾಗ A POETESS IS BORN ಎನ್ನುವಷ್ಟು ಪ್ರಸಿದ್ಧಿ ಪಡೆದರು. ಮುಂದೆ ಬರೆದ ಹಲವಾರು ಕವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡು ‘ಮೂವತ್ತೈದರ ಹೊಸ್ತಿಲು’, ‘ಈ ಪ್ರೀತಿಯೊಳಗೆ’, ‘ಇದು ಇನ್ನೊಂದುಲೋಕ’ ಸಂಗ್ರಹಗಳಲ್ಲದೆ ‘ಇನ್ನೊಂದುದನಿ’ ಎಂಬ ಅನುವಾದಿತ ಸಂಕಲವೂ ಪ್ರಕಟವಾಯಿತು. ‘ಬೇರೊಂದು ದಾರಿ’ ಇವರ ಪ್ರಸಿದ್ಧ ಕಥಾ ಸಂಕಲನ. ಜಾನಪದ ಕ್ಷೇತ್ರದಲ್ಲಿ ದುಡಿದ ಇವರು ರಚಿಸಿದ, ಸಂಪಾದಿಸಿದ ಕೃತಿಗಳು ಮೂವತ್ತು ಜನಪದ ಕಥೆಗಳು, ಕನ್ನಡ ಜನಪದ ಕಥೆಗಳು (ಪಿಎಚ್‌.ಡಿ. ಪ್ರಬಂಧ), ಹಳ್ಳಿಯ ಹಾಡುಗಳು, ರಿಚರ್ಡ್ ಎಂ. ಡಾರ್ಸನ್‌, ಜನಪದ ಸಾಹಿತ್ಯದಲ್ಲಿ ಮಹಿಳೆ, ಜನಪದವರ್ಷ, ಜಾನಪದ ಪರಿಶೀಲನೆ ಮುಂತಾದ ೧೦ ಕೃತಿಗಳು. ಫಿನ್‌ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಲೇವಲ’ ವನ್ನು ಕನ್ನಡಕ್ಕೆ ತಂದಿದ್ದಾರೆ. ಇದಲ್ಲದೆ ಹಲವಾರು ಜಾನಪದ ಕೃತಿಗಳನ್ನೂ ಇತರರೊಡನೆ ಸೇರಿ ಸಂಪಾದಿಸಿದ್ದಾರೆ. ಹಲವಾರು ಕೃತಿಗಳ ಭಾಷಾಂತರ, ಜೀವನಚರಿತ್ರೆಗಳಾದ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕ್ಯಾಸಂಬಳ್ಳಿ ಚಂಗಲರಾಯರೆಡ್ಡಿ, ಮುಲ್ಕಾ ಗೋವಿಂದ ರೆಡ್ಡಿಯವರ ಜೀವನಚರಿತ್ರೆ ‘ಪ್ರಿಯಬಂಧು’, ಅನಸೂಯರಾಮರೆಡ್ಡಿಯವರ ಜೀವನ ಚರಿತ್ರೆ ಮುಂತಾದವುಗಳು ಪ್ರಕಟಗೊಂಡಿವೆ. ಕರ್ನಾಟಕ ಲೇಖಕಿಯರ ಸಂಘದ ಗೌರವ ಕಾರ್ಯದರ್ಶಿಯಾಗಿ, ಉಪಾಧ್ಯಾಕ್ಷೆಯಾಗಿ, ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಮಹಿಳೆಯರ ಸಾಹಿತ್ಯ ಕೃತಿಗಳ ಪ್ರಕಟಣೆಗಳ ಜೊತೆಗೆ ಲೇಖಕಿಯರ ಆತ್ಮಚರಿತಗಳೂ ಪ್ರಕಟಗೊಳ್ಳಬೇಕೆಂಬ ಉದ್ದೇಶದಿಂದ ಮಹಿಳೆ-ಪರಿಸರ-ಸಾಹಿತ್ಯ ಎಂಬ ಯೋಜನೆಯಡಿ ಲೇಖ-ಲೋಕ ಆತ್ಮಕಥನ ರೂಪಕಗಳಾದ ಲೇಖ-ಲೋಕ-೩, ಎಪ್ಪತ್ತರ ವಯಸ್ಸು ಇಪ್ಪತ್ತರ ಮನಸು, ನಮ್ಮ ಬದುಕಿನ ಪುಟಗಳು, ಲೇಖಕಿಯರ ಮಾಹಿತಿಕೋಶ, ನಮ್ಮ ಬದುಕು ನಮ್ಮ ಬರಹ ಇದಲ್ಲದೆ ಕವಯಿತ್ರಿಯರ ಕವನ ಸಂಕಲನಗಳು, ಬೆಳ್ಳಿಹಬ್ಬದ ಸಂಚಿಕೆ, ಲೇಖಕಿಯರ ಸಣ್ಣ ಕಥೆಗಳು, ನಿರುಪಮ ಲೋಕ (ಡಾ. ನಿರುಪಮಾರವರ ಅಭಿನಂದನ ಗ್ರಂಥ), ಮಹಿಳಾ ಕಾವ್ಯ ಮುಂತಾದವುಗಳನ್ನೂ ಸಂಪಾದಿಸಿದ್ದಾರೆ. ಅಮೆರಿಕಾ, ರಷ್ಯಾದ ಕವಿತೆಗಳು ಮತ್ತು ಸಣ್ಣಕತೆಗಳು, ಲಂಕೇಶ್‌ ಪತ್ರಿಕಾ ಬಳಗದ ಆಲ್‌ರೌಂಡರ್ ಕ್ರೀಡಾ ಪತ್ರಿಕೆಗೆ, ಕೇಂದ್ರಸಾಹಿತ್ಯ ಅಕಾಡಮಿಗಾಗಿ ಸಣ್ಣಕತೆಗಳು, ಭಾರತ ಮಹಿಳೆ ಮತ್ತು ಸಂವಿಧಾನಾತ್ಮಕ ಹಕ್ಕುಗಳು, ಎಂ.ಎ. ತರಗತಿಗಳ ಚರಿತ್ರೆ ಮತ್ತು ಸಮಾಜಶಾಸ್ತ್ರದ ಪಠ್ಯಗಳು, ರಷ್ಯಾದ ಕಲಾವಿದ ಇಲ್ಯಾಪಿರೆನ್‌ ಬದುಕು-ಬರೆಹ, ಹಾಗೂ ರಾಜ್ಯ ಸರಕಾರಿ ಉದ್ಯಮವಾದ ಎನ್‌.ಜಿ.ಇ.ಎಫ್‌ ಸಂಸ್ಥೆಯಲ್ಲಿ ಭಾಷಾಂತರ ಅಧಿಕಾರಿಯಾಗಿ ಆಡಳಿತ, ತಾಂತ್ರಿಕ, ವಾಣಿಜ್ಯ, ಹಣಕಾಸು ವಿಷಯಗಳ ಕನ್ನಡ ಅನುಷ್ಠಾನ, ಭಾಷಾಂತರಗಳ ಕಾರ್ಯ ನಿರ್ವಹಿಸಿದ್ದಾರೆ. ಅಧ್ಯಾಪಕಿಯಾಗಿಯೂ ವಿ.ವಿ. ಪುರಂ ಕಾಲೇಜು, ಬಿ.ಎಂ.ಎಸ್‌. ಎಂಜಿನಿಯರಿಂಗ್‌ ಕಾಲೇಜು, ಬೆಂಗಳೂರು, ಮೈಸೂರು, ಮಂಗಳೂರು ವಿ.ವಿ.ಗಳಲ್ಲಿ ಜಾನಪದ, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿ.ವಿ.ದ ಅಂಚೆ ತೆರಪಿನ ಶಿಕ್ಷಣದ ಕನ್ನಡ ಎಂ.ಎ. ತರಗತಿಗಳು ಮುಂತಾದವುಗಳಲ್ಲಿ ಬೋಧಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆಕಾಶವಾಣಿ, ದೂರದರ್ಶನ, ಅನೇಕ ಕನ್ನಡ ಸಂಘ ಸಂಸ್ಥೆಗಳು, ಇಂದೋರ್, ದೆಹಲಿ, ಮುಂಬಯಿಗಳಲ್ಲಿ ನಡೆದ ಕವನ ವಾಚನ ಕಾರ್ಯಕ್ರಮಗಳು; ವಿಶ್ವವಿದ್ಯಾಲಯ, ಅಕಾಡಮಿಗಳ ವಿಚಾರ ಸಂಕಿರಣ ಮುಂತಾದವುಗಳಲ್ಲದೆ ಜಾನಪದಕ್ಕೆ ಸಂಬಂಧಿಸಿದಂತೆ ಮದರಾಸಿನಿಂದ ಪ್ರಕಟವಾಗಿರುವ ಕನ್ನಡ ಜಾನಪದ ವಿಶ್ವಕೋಶಕ್ಕಾಗಿ ಲೇಖನಗಳು, ಕರ್ನಾಟಕ ಜಾನಪದ ಅಕಾಡಮಿ ಪ್ರಕಟಿಸಿರುವ ‘ಜಾನಪದ ನಿಘಂಟು’ ಪ್ರಾದೇಶಿಕ, ಸ್ಥಾನಿಕ ಸಂಪಾದಕರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಚಂದ್ರಶೇಖರ ಕಂಬಾರರ ನೇತೃತ್ವದಲ್ಲಿ ಸಂಪಾದಿಸಿರುವ ‘ಜಾನಪದ ವಿಶ್ವಕೋಶದ’ ಗೌರವ ಸಂಪಾದಕರಾಗಿಯೂ ದುಡಿದಿದ್ದಾರೆ. ಇವರ ಸಾಹಿತ್ಯ ಹಾಗೂ ಜಾನಪದ ಕ್ಷೇತ್ರದ ಸಾಧನೆಗಾಗಿ ಸಂದಿರುವ ಪ್ರಶಸ್ತಿಗಳು ಹಲವಾರು, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾದತ್ತಿನಿಧಿ ಪ್ರಶಸ್ತಿ, ಶಾರದಾ ರಾಮಲಿಂಗಪ್ಪ ದತ್ತಿ ನಿಧಿ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಜಾನಪದಲೋಕ ಪ್ರಶಸ್ತಿ, ಜಾನಪದ ತಜ್ಞೆ ಪ್ರಶಸ್ತಿ, ಬಿ.ಎಸ್‌. ಚಂದ್ರಕಲಾರವರ ಲಿಪಿಪ್ರಾಜ್ಞೆ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡಮಿಯಿಂದ ಜೀಶಂಪ ಜಾನಪದ ತಜ್ಞೆ ಪ್ರಶಸ್ತಿ ಹಾಗೂ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top