Loading Events

« All Events

ಡಾ. ಕೆ. ಕೃಷ್ಣಮೂರ್ತಿ

July 30

೩೦-೭-೧೯೨೩ ೧೮-೭-೧೯೯೭ ಕನ್ನಡ ವಿದ್ವತ್ ಲೋಕದಲ್ಲಿ ಚಿರಪರಿಚಿತರಾಗಿದ್ದ ಕೃಷ್ಣಮೂರ್ತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಕೇರಳಾಪುರ. ತಂದೆ ಎನ್. ವೆಂಕಟಸುಬ್ಬಯ್ಯ, ತಾಯಿ ಗೌರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮೈಸೂರಿನಲ್ಲಿ ಪ್ರೌಢ ವಿದ್ಯಾಭ್ಯಾಸ. ೧೯೪೨ರಲ್ಲಿ ಬಿ.ಎ. ಪದವಿ, ೧೯೪೩ರಲ್ಲಿ ಎಂ.ಎ. ೧೯೪೪ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿ. ಉದ್ಯೋಗಕ್ಕಾಗಿ ಸುತ್ತಾಡಿದ್ದು ಬಾಗಲಕೋಟೆ, ಕುಮಟಾ, ಮೈಸೂರು ಮುಂತಾದೆಡೆ ಅಧ್ಯಾಪಕರಾಗಿದ್ದು, ಕಡೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಮಹಾರಾಣಿ ಸೇತೂ ಪಾರ್ವತಿಭಾಯಿ ಅವರ ಹೆಸರಿನಲ್ಲಿ ಕೇರಳ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಸಾಹಿತ್ಯ ಅಥವಾ ಹಿಂದು ತತ್ತ್ವಶಾಸ್ತ್ರದ ಯಾವುದೇ ವಿಭಾಗದಲ್ಲಿ ಪ್ರಕಟಗೊಂಡ ಅತ್ಯುತ್ತಮ ಗ್ರಂಥಕ್ಕೆ ಕೊಡಮಾಡುವ ಪ್ರಶಸ್ತಿಯನ್ನು ಕೃಷ್ಣಮೂರ್ತಿಯವರ “ಎಸ್ಸೇಸ್ ಇನ್ ಸಂಸ್ಕೃತ ಕ್ರಿಟಿಸಿಸಂ” ಕೃತಿ ಪಡೆದುಕೊಂಡಾಗಲೇ ಕೃಷ್ಣಮೂರ್ತಿಯವರತ್ತ ಎಲ್ಲರ ಗಮನ ಹರಿದದ್ದು. ಸಂಸ್ಕೃತ, ಕನ್ನಡ, ಇಂಗ್ಲಿಷ್ ಮೂರು ಭಾಷೆಗಳಲ್ಲೂ ಒಂದೇ ತೆರನಾದ ವಿದ್ವತ್ ಪಡೆದವರು. ಪ್ರಶಸ್ತಿ ವೈಯಕ್ತಿಕವಾಗಿ ಇವರಿಗಷ್ಟೇ ಅಲ್ಲದೆ ಪ್ರಕಾಶನ ಮಾಡಿದ ಕರ್ನಾಟಕ ವಿಶ್ವವಿದ್ಯಾಲಯಕ್ಕೂ ಸಂದ ಗೌರವವಾಗಿತ್ತು. ಇವರ ಗ್ರಂಥದಲ್ಲಿ ಆಧುನಿಕ ಹಿನ್ನೆಲೆಯಲ್ಲಿ ಪ್ರಾಚೀನತೆ, ಪೌರಾತ್ಯ ವಿಚಾರವನ್ನು ಪಾಶ್ಚಾತ್ಯ ದೃಷ್ಟಿಕೋನದಿಂದ ವಿಮರ್ಶಿಸಿರುವುದು. ವ್ಯಾಪಕವಾದ ಅಧ್ಯಯನ, ಪ್ರತಿಭಾ ಸ್ಪರ್ಶದ ವಿದ್ವತ್ತು, ನೇರವಾದ ನಿರೂಪಣೆಯ ಗ್ರಂಥ. ರಚಿಸಿದ ಕೃತಿಗಳು ಇಂಗ್ಲಿಷ್‌ನಲ್ಲಿ-ಧ್ವನ್ಯಾಲೋಕ ಅಂಡ್ ಇಟ್ಸ್ ಕ್ರಿಟಿಕ್ಸ್, ಸಮ್ ಥಾಟ್ಸ್ ಆನ್ ಇಂಡಿಯನ್ ಏಸ್ತಿಟಿಕ್ಸ್. ಕನ್ನಡದಲ್ಲಿ ರಚಿಸಿದ ಗ್ರಂಥಗಳು-ಆನಂದ ವರ್ಧನದ ಕಾವ್ಯ ಮೀಮಾಂಸೆ, ಕನ್ನಡ ಧ್ವನ್ಯಾಲೋಕ, ಮುಮ್ಮುಟನ ಕಾವ್ಯ ಪ್ರಕಾಶ, ಕ್ಷೇಮೇಂದ್ರನ ಔಚಿತ್ಯ ವಿಚಾರ ಚರ್ಚೆ, ದಂಡಿಯ ಕಾವ್ಯಾದರ್ಶ, ಬಾಮಹನ ಕಾವ್ಯಾಲಂಕಾರ, ವಾಮನನ ಕಾವ್ಯಾಲಂಕಾರ ಸೂತ್ರವೃತ್ತಿ, ರಾಜಶೇಖರನ ಕಾವ್ಯಮೀಮಾಂಸೆ. ಇವುಗಳ ಜೊತೆಗೆ ಭಾಸ, ಶೂದ್ರಕ, ಕಾಳಿದಾಸ, ಭವಭೂತಿ, ಶಕ್ತಿಭದ್ರ, ಭಾರವಿ ಮುಂತಾದವರ ಗ್ರಂಥಗಳನ್ನು ಕನ್ನಡಕ್ಕೆ ತಂದು, ಒಟ್ಟು ಪ್ರಕಟಿತ ಕೃತಿ ಸಂಖ್ಯೆ ೫೪. ಇಂಟರ್ ಮೀಡಿಯೆಟ, ಬಿ.ಎ., ಎಂ.ಎ., ಕನ್ನಡ ಪಂಡಿತ ಪರೀಕ್ಷೆಗಳಲ್ಲಿ ಗಳಿಸಿದ ಹಲವಾರು ಬಹುಮಾನಗಳು. ಮೈಸೂರು ವಿ.ವಿ.ದ ಸ್ವರ್ಣಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಉತ್ತರ ಪ್ರದೇಶದ ಸಂಸ್ಕೃತ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿ : ಅಲ್ಲಮಪ್ರಭು ಬೆಟ್ಟದೂರು – ೧೯೫೧

Details

Date:
July 30
Event Category: